ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ ಪತ್ನಿಯ ಕಂಪನಿಗೇ 56.8 ಕೋಟಿಯ ಭರ್ಜರಿ ಟೆಂಡರ್!

Date:

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ ‘ತುರ್ತು’ ನೆಪವೊಡ್ಡಿ 56.8 ಕೋಟಿ ರೂಪಾಯಿ ಮೊತ್ತದ ‘ಒಂಟಿ ಟೆಂಡರ್’ (ಸಿಂಗಲ್ ಟೆಂಡರ್) ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ಪತ್ರಕರ್ತ ಪ್ರತ್ಯುಷ್ ದೀಪ್ ತಮ್ಮ ವಿಶೇಷ ತನಿಖಾ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

- Advertisement -

​ಕಳೆದ ಮೂರು ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ರಕ್ಷಣಾ ಸಂಸ್ಥೆಯಾದ ಬಿಡಿಎಲ್, ಕ್ಷಿಪಣಿಯ ಬಿಡಿಭಾಗಗಳ ಪೂರೈಕೆಗಾಗಿ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯನ್ನು ಕೈಬಿಟ್ಟು, ‘ಐಂದ್ರಿ ಡಿಫೆನ್ಸ್ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್’ ಎಂಬ ಏಕೈಕ ಕಂಪನಿಗೆ ಟೆಂಡರ್ ನೀಡಿದೆ. ಈ ಕಂಪನಿಯನ್ನು ಬಿಡಿಎಲ್‌ನ ಮಾಜಿ ಸಿಎಂಡಿ ಸಿದ್ಧಾರ್ಥ್ ಮಿಶ್ರಾ ಮತ್ತು ಅವರ ಪತ್ನಿ ಶಾಂಭವಿ ಮಿಶ್ರಾ ಅವರು ಸ್ಥಾಪಿಸಿದ್ದರು. ಸದ್ಯ ಈ ಕಂಪನಿಯಲ್ಲಿ ಶಾಂಭವಿ ಮಿಶ್ರಾ ಶೇಕಡಾ 95ರಷ್ಟು ಪಾಲು ಹೊಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ ಜನರಿಗೆ ಮರಳಿ ಕೊಡಿಸುವುದಕ್ಕಾಗಿ, ಗಾಂಧೀಜಿಯವರ ಮಾತುಗಳು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ನಿಜವಾದ ಹೋರಾಟಗಾರರು. ಸರ್ಕಾರದ...

​ಮೇ ತಿಂಗಳಲ್ಲಿ 300 ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ‘ಐಂದ್ರಿ ಡಿಫೆನ್ಸ್ ಅಡ್ವೈಸರಿ’ಗೆ ಈ ಟೆಂಡರ್ ನೀಡಲಾಗಿದೆ. ಕಂಪನಿಯು ಪೂರೈಸಿದ್ದ ಐದು ಮಾದರಿ ಘಟಕಗಳ ತಪಾಸಣೆ ಮತ್ತು ಮೌಲ್ಯಮಾಪನ ಪರೀಕ್ಷೆಗಳು ಪೂರ್ಣಗೊಂಡ ಬೆನ್ನಲ್ಲೇ ಈ ಆದೇಶ ನೀಡಲಾಗಿದೆ. ಟೆಂಡರ್ ಪಡೆದ ಏಳು ತಿಂಗಳೊಳಗೆ ಈ 300 ಘಟಕಗಳನ್ನು ಪೂರೈಸಬೇಕಿದೆ. ವಿಶೇಷವೆಂದರೆ, ಗವರ್ನಮೆಂಟ್ ಇ-ಮಾರ್ಕೆಟ್‌ಪ್ಲೇಸ್ (GeM) ಪೋರ್ಟಲ್‌ನ ಮಾಹಿತಿ ಪ್ರಕಾರ, ಈ ಕಂಪನಿಯು ತಾಂತ್ರಿಕ ಮೌಲ್ಯಮಾಪನ ಹಂತವನ್ನು ಈಗಾಗಲೇ ಪೂರ್ಣಗೊಳಿಸಿದ್ದು, 56.8 ಕೋಟಿ ರೂ.ಗಳ ಬಿಡ್ ಸಲ್ಲಿಸಿದೆ. ಸದ್ಯ ಹಣಕಾಸು ಮೌಲ್ಯಮಾಪನ ಪ್ರಕ್ರಿಯೆ ಪ್ರಗತಿಯಲ್ಲಿದೆ.

​ಸಾಮಾನ್ಯವಾಗಿ ಕೇವಲ ಒಬ್ಬರೇ ಪೂರೈಕೆದಾರರು ಲಭ್ಯವಿದ್ದಾಗ ಅಥವಾ ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಾತ್ರ ‘ಒಂಟಿ ಟೆಂಡರ್’ ಕರೆಯಲು ನಿಯಮಗಳು ಅವಕಾಶ ನೀಡುತ್ತವೆ. ಇಲ್ಲಿ ಬಿಡಿಎಲ್ “ತುರ್ತು ಅಗತ್ಯ” ಎಂಬ ಕಾರಣವನ್ನು ಮುಂದಿಟ್ಟುಕೊಂಡು, ಯಾವುದೇ ಸ್ಪರ್ಧಾತ್ಮಕ ಬಿಡ್ಡಿಂಗ್ ಇಲ್ಲದೆ ನೇರವಾಗಿ ಐಂದ್ರಿ ಕಂಪನಿಗೆ ಮಣೆ ಹಾಕಿದೆ. ಜೊತೆಗೆ, ಪೂರೈಕೆಯಾದ ಆಪ್ಟಿಕಲ್ ಸೈಟ್‌ಗಳ ನಿರ್ವಹಣೆ, ದುರಸ್ತಿ ಮತ್ತು ಮೇಲ್ದರ್ಜೆಗೇರಿಸುವಿಕೆಗಾಗಿ 15 ವರ್ಷಗಳ ಕಾಲ ತಾಂತ್ರಿಕ ಬೆಂಬಲವನ್ನು ಒದಗಿಸುವ ಷರತ್ತನ್ನೂ ಈ ಟೆಂಡರ್ ಒಳಗೊಂಡಿದೆ.

​ಕಂಪನಿಯ ಹಿನ್ನೆಲೆ ಮತ್ತು ಹಿತಾಸಕ್ತಿ ಸಂಘರ್ಷ:

ಕಂಪನಿ ವ್ಯವಹಾರಗಳ ದಾಖಲೆಗಳ ಪ್ರಕಾರ, ಐಂದ್ರಿ ಡಿಫೆನ್ಸ್ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್ ಅನ್ನು 2024ರ ಮೇ ತಿಂಗಳಲ್ಲಿ ಸಿದ್ಧಾರ್ಥ್ ಮಿಶ್ರಾ ಮತ್ತು ಅವರ ಪತ್ನಿ ಶಾಂಭವಿ ತಲಾ ಶೇ. 50ರಷ್ಟು ಪಾಲುದಾರಿಕೆಯೊಂದಿಗೆ ಸ್ಥಾಪಿಸಿದ್ದರು. ಸಿದ್ಧಾರ್ಥ್ ಮಿಶ್ರಾ ಅವರು 2019ರಿಂದ 2023ರ ಮಾರ್ಚ್‌ವರೆಗೆ ಬಿಡಿಎಲ್ ಸಿಎಂಡಿ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. 2025ರ ಜನವರಿಯಲ್ಲಿ ಕೋಲ್ಕತ್ತಾದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (NCLT) ತಾಂತ್ರಿಕ ಸದಸ್ಯರಾಗಿ ನೇಮಕಗೊಂಡ ನಂತರ, ಅವರು ಐಂದ್ರಿ ಕಂಪನಿಯ ನಿರ್ದೇಶಕ ಮತ್ತು ಷೇರುದಾರ ಹುದ್ದೆಗಳಿಂದ ಕೆಳಗಿಳಿದರು. ಆ ಬಳಿಕ ಶಾಂಭವಿ ಮಿಶ್ರಾ ಕಂಪನಿಯ ಶೇ. 95ರಷ್ಟು ಪಾಲನ್ನು ಹೊಂದಿದ್ದು, ನಿರ್ದೇಶಕರಾಗಿಯೂ ಮುಂದುವರಿದಿದ್ದಾರೆ. ಉಳಿದ ಶೇ. 5ರಷ್ಟು ಪಾಲನ್ನು ಮತ್ತೊಬ್ಬ ನಿರ್ದೇಶಕ ಕೌಶಿಕಿ ನಂದನ್ ವಾತ್ಸ್ಯಾಯನ ಹೊಂದಿದ್ದಾರೆ.

​ನಿಯಮಗಳಲ್ಲಿ ದಿಢೀರ್ ಬದಲಾವಣೆ:

ಬಿಡಿಎಲ್ 2024 ಮತ್ತು 2025ರಲ್ಲೂ ಇದೇ ಮಾದರಿಯ ಆಪ್ಟಿಕಲ್ ಸೈಟ್‌ಗಳನ್ನು ಖರೀದಿಸಿತ್ತು. ಆದರೆ ಆಗ ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು (CPSE) ಮತ್ತು ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ (DPSU) ಮಾತ್ರ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಆ ಎರಡೂ ಟೆಂಡರ್‌ಗಳನ್ನು ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ‘ಮಿನಿ ರತ್ನ’ ಸಂಸ್ಥೆಯಾದ ಇಂಡಿಯಾ ಆಪ್ಟೆಲ್ ಲಿಮಿಟೆಡ್ ಪಡೆದುಕೊಂಡಿತ್ತು. ಆದರೆ, 2026ರ ಟೆಂಡರ್‌ನಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೇ ನೀಡಬೇಕೆಂಬ ನಿರ್ಬಂಧವನ್ನು ಸಡಿಲಗೊಳಿಸಿ, ಯಾವುದೇ ಸ್ಪರ್ಧೆಯಿಲ್ಲದೆ ಖಾಸಗಿ ಕಂಪನಿಗೆ ಮಣೆಹಾಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

​ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಿದ್ಧಾರ್ಥ್ ಮಿಶ್ರಾ ಮತ್ತು ಶಾಂಭವಿ ಮಿಶ್ರಾ ಅವರನ್ನು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಸಂಪರ್ಕಿಸಲು ಯತ್ನಿಸಿದರೂ ಅವರು ಕರೆ ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಿಲ್ಲ. ಕಂಪನಿಯ ಇ-ಮೇಲ್‌ಗೂ ಯಾವುದೇ ಉತ್ತರ ಬಂದಿಲ್ಲ. ಇನ್ನೋರ್ವ ನಿರ್ದೇಶಕ ವಾತ್ಸ್ಯಾಯನ ಅವರು, ಟೆಂಡರ್ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಇತ್ತ ಬಿಡಿಎಲ್ ಕೂಡ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

​ಏನಿದು ಆಪ್ಟಿಕಲ್ ಸೈಟ್ಸ್?

ಆಪ್ಟಿಕಲ್ ಸೈಟ್‌ಗಳು ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿಗಳ (ATGM) ಗುರಿಯನ್ನು ನಿಖರವಾಗಿ ಪತ್ತೆಹಚ್ಚುವ ಅತ್ಯಗತ್ಯ ಸಾಧನಗಳಾಗಿವೆ. ಇವುಗಳಲ್ಲಿ ಲೆನ್ಸ್, ಐಪೀಸ್ ಮತ್ತು ಸಂರಕ್ಷಣಾ ಕವಚಗಳು ಸೇರಿರುತ್ತವೆ. ಕ್ಷಿಪಣಿಯಿಂದ ಹೊರಹೊಮ್ಮುವ ಇನ್‌ಫ್ರಾರೆಡ್ ವಿಕಿರಣವನ್ನು ಗ್ರಹಿಸಿ, ಅದನ್ನು ವಿದ್ಯುತ್ ಸಂಕೇತಗಳಾಗಿ ಪರಿವರ್ತಿಸಿ ಭೂಮಿಯ ಮೇಲಿರುವ ನಿಯಂತ್ರಣ ಘಟಕಗಳಿಗೆ ರವಾನಿಸುವ ಮೂಲಕ ಕ್ಷಿಪಣಿಯನ್ನು ನಿಖರ ಗುರಿಯತ್ತ ಕೊಂಡೊಯ್ಯಲು ಇವು ನೆರವಾಗುತ್ತವೆ. ಬಿಡಿಎಲ್ ಪ್ರಸ್ತುತ ರಷ್ಯಾದ ತಂತ್ರಜ್ಞಾನವನ್ನು ಆಧರಿಸಿ ‘ಕೊಂಕರ್ಸ್-ಎಂ’ (Konkurs-M) ಎಂಬ ಟ್ಯಾಂಕ್ ವಿರೋಧಿ ಕ್ಷಿಪಣಿಯನ್ನು ದೇಶೀಯವಾಗಿ ಉತ್ಪಾದಿಸುತ್ತಿದೆ. 2022ರಲ್ಲಿ ಭಾರತೀಯ ಸೇನೆಗಾಗಿ ಈ ಕ್ಷಿಪಣಿಗಳ ತಯಾರಿಕೆ ಹಾಗೂ ಪೂರೈಕೆಗೆ ಸಂಬಂಧಿಸಿದಂತೆ ಬಿಡಿಎಲ್ 3,131.82 ಕೋಟಿ ರೂ.ಗಳ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ...

ಸಮಯೋಚಿತ ಕ್ರಮದಿಂದ ದೊಡ್ಡ ಮಟ್ಟದ ಅಶಾಂತಿ ತಪ್ಪಿತು: ಸುಪ್ರೀಂಗೆ ದೆಹಲಿ ಪೊಲೀಸ್ ಆಯುಕ್ತರ ಹೇಳಿಕೆ

ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ಕೈಗೊಂಡ ಸಮಯೋಚಿತ,...