ನುಡಿ ನಮನ | ಚೆರುವಯಲ್ ರಾಮನ್ – ಭತ್ತದ ದೇಸೀ ತಳಿಗಳನ್ನು ಉಳಿಸಲು ಬದುಕನ್ನೇ ಮುಡಿಪಿಟ್ಟ ‘ಬೀಜಗಳ ಕಾವಲುಗಾರ’!

Date:

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ ದೇಸೀ ತಳಿಗಳ ಸಂರಕ್ಷಣೆಗೆ ಮುಡಿಪಿಟ್ಟಿದ್ದರು.

ಚೆರುವಯಲ್ ರಾಮನ್ – ಕೃಷಿ ವಿಶ್ವವಿದ್ಯಾಲಯದಲ್ಲಿ ಓದಿದವರಲ್ಲ. ಕೃಷಿವಿಜ್ಞಾನದಲ್ಲಿ ಪದವಿ ಪಡೆದವರಲ್ಲ. ದೊಡ್ಡ ಪ್ರಯೋಗಾಲಯವಾಗಲಿ, ಆಧುನಿಕ ಸಂಶೋಧನಾ ಕೇಂದ್ರವಾಗಲಿ ಅವರ ಬಳಿ ಇರಲಿಲ್ಲ. ಆದರೂ ಭಾರತದ ಕೃಷಿ ವಿಜ್ಞಾನಿಗಳಿಗೆ ಸ್ಫೂರ್ತಿಯಾಗುವಂತಹ ಮಹತ್ವದ ಕೆಲಸ ಮಾಡಿದ್ದರು. ಕಣ್ಮರೆಯಾಗುತ್ತಿದ್ದ 50ಕ್ಕೂ ಹೆಚ್ಚು ದೇಸೀ ಭತ್ತದ ತಳಿಗಳನ್ನು ಸಂರಕ್ಷಿಸಿ, ಮುಂದಿನ ತಲೆಮಾರಿಗೆ ತಲುಪಿಸಲು ಜೀವನವನ್ನೇ ಅರ್ಪಿಸಿದ್ದರು. ತಮ್ಮ ಹೊಲವನ್ನೇ ಜೀವಂತ ಬೀಜಬ್ಯಾಂಕ್ ಆಗಿ ಪರಿವರ್ತಿಸಿದ್ದರು. ಕೇರಳದ ವಯನಾಡಿನ ಈ ಆದಿವಾಸಿ ಕೃಷಿಕ, ಪದ್ಮಶ್ರೀ ಪುರಸ್ಕೃತ ಚೆರುವಯಲ್ ರಾಮನ್ ಅವರ ನಿಧನವು ಭಾರತದ ಪಾರಂಪರಿಕ ಕೃಷಿ ಜ್ಞಾನ ಮತ್ತು ಜೀವವೈವಿಧ್ಯ ಸಂರಕ್ಷಣೆಯ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟುಮಾಡಿದೆ.

- Advertisement -

ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿ ಸಮೀಪದ ಕಮ್ಮನ ಗ್ರಾಮದ ಪ್ರಸಿದ್ಧ ದೇಸೀ ಭತ್ತ ಸಂರಕ್ಷಕ ಚೆರುವಯಲ್ ರಾಮನ್ ಅವರು ಅಕ್ಟೋಬರ್ 14ರಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಕೋಯಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ಕೊನೆಯುಸಿರೆಳೆದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ ಜನರಿಗೆ ಮರಳಿ ಕೊಡಿಸುವುದಕ್ಕಾಗಿ, ಗಾಂಧೀಜಿಯವರ ಮಾತುಗಳು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ನಿಜವಾದ ಹೋರಾಟಗಾರರು. ಸರ್ಕಾರದ...

ಸಿಲಿಕಾನ್ ಸಿಟಿಗಳಲ್ಲಿ ಹಸಿದ ಹಲವು ಬದುಕುಗಳ ಕಥೆ–ವ್ಯಥೆ

ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಮತ್ತೊಬ್ಬರ ಹಸಿವು ನಮ್ಮ ಮನಸ್ಸಿನಲ್ಲಿ ಸಂವೇದನೆ ಮೂಡಿಸದಿದ್ದರೆ, ನಮ್ಮ ಮಾನವೀಯತೆಯ ಸ್ವರೂಪವನ್ನೇ ಪರಿಶೀಲಿಸಬೇಕಾಗುತ್ತದೆ. ಆಧುನಿಕ ನಗರಗಳೆಂದರೆ ನೆನಪಾಗುವುದು ಸಿಲಿಕಾನ್...

ಕೇರಳದಲ್ಲಿ ಅವರನ್ನು ಪ್ರೀತಿಯಿಂದ ‘ರಾಮೆಟ್ಟನ್’ ಎಂದು ಕರೆಯಲಾಗುತ್ತಿತ್ತು. ಅವರ ಮತ್ತೊಂದು ಜನಪ್ರಿಯ ಹೆಸರು ‘ನೆಲ್ಲಚ್ಚನ್’ ಅಂದರೆ, ಭತ್ತದ ಪಿತ. ಮಾತ್ರವಲ್ಲ, ಅವರು ಭಾರತದ ಕೃಷಿ ಕ್ಷೇತ್ರದಲ್ಲಿ ‘ಜೀವಂತ ಭತ್ತದ ವಂಶವಾಹಿ ಬ್ಯಾಂಕ್’ ಎಂಬ ವಿಶಿಷ್ಟ ಗುರುತನ್ನೂ ಪಡೆದಿದ್ದರು.

ಅಂದಹಾಗೆ, ಚೆರುವಯಲ್ ರಾಮನ್ ಅವರ ಪೂರ್ಣ ಹೆಸರು ತಲಕ್ಕರ ಚೆರಿಯ ರಾಮನ್. ಪಾರಂಪರಿಕ ಭತ್ತದ ಕೃಷಿ ಮತ್ತು ಸ್ಥಳೀಯ ಪರಿಸರದ ಜ್ಞಾನಕ್ಕೆ ಹೆಸರಾಗಿರುವ ಕುರಿಚ್ಯ ಆದಿವಾಸಿ ಸಮುದಾಯಕ್ಕೆ ಸೇರಿದವರು.

ರಾಮನ್ ಅವರ ಬಾಲ್ಯದಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಸ್ಥಿರವಾಗಿರಲಿಲ್ಲ. ಅವರು ಕಮ್ಮನದ ನವೋದಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ಓದಿದರು. ನಂತರ ಕುಟುಂಬದ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡರು. ಕೇವಲ ಹತ್ತು ವರ್ಷದವರಿದ್ದಾಗಲೇ ಕೃಷಿಯೊಂದಿಗಿನ ಅವರ ನಂಟು ಗಾಢವಾಯಿತು. ಹದಿಹರೆಯಕ್ಕೆ ಬಂದಾಗ ಕೃಷಿಭೂಮಿ, ಬೀಜಗಳ ಸಂರಕ್ಷಣೆ ಹಾಗೂ ಕುಟುಂಬದ ಕೃಷಿ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ಅವರ ಹೆಗಲೇರಿತು.

1969ರಲ್ಲಿ ಕಣ್ಣೂರಿನ ಸರ್ಕಾರಿ ಕಚೇರಿಯಲ್ಲಿ ಉದ್ಯೋಗ ಮಾಡುವ ಅವಕಾಶ ದೊರೆತರೂ ಅವರು ಅದನ್ನು ನಿರಾಕರಿಸಿ ಕೃಷಿಯಲ್ಲಿಯೇ ಉಳಿಯಲು ನಿರ್ಧರಿಸಿದ್ದರು. ತಮ್ಮ ಸೋದರಮಾವನಿಂದ ಬಳುವಳಿಯಾಗಿ ಬಂದ ದೇಸೀ ಭತ್ತದ ಬೀಜಗಳನ್ನು ಕೇವಲ ತಮ್ಮ ಬಳಕೆಗಾಗಿ ಆತ್ರವಲ್ಲದೆ, ಮುಂದಿನ ಪೀಳಿಗೆಗೆ ಉಳಿಸಬೇಕಾದ ಅಮೂಲ್ಯ ಸಂಪತ್ತಾಗಿ ಕಂಡಿದ್ದರು. ಅದರಂತೆಯೇ, ಬೀಜಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದರು.

ಒಂದು ಕಾಲದಲ್ಲಿ ವಯನಾಡು ಅಪಾರ ಭತ್ತದ ವೈವಿಧ್ಯಕ್ಕೆ ಹೆಸರಾಗಿತ್ತು. ಸ್ಥಳೀಯ ಹವಾಮಾನ, ನೀರಿನ ಲಭ್ಯತೆ, ಮಣ್ಣಿನ ಗುಣ, ಆಹಾರ ಪದ್ಧತಿಗೆ ಹೊಂದಿಕೊಂಡ ನೂರಾರು ದೇಸೀ ತಳಿಗಳು ಇಲ್ಲಿ ಬೆಳೆಯುತ್ತಿದ್ದವು. ಆದರೆ, ಕಾಲಕ್ರಮೇಣ ಕೃಷಿ ಪದ್ಧತಿಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಿದವು.

ಅಧಿಕ ಇಳುವರಿಯ ತಳಿಗಳಿಗೆ ಆದ್ಯತೆ ಹೆಚ್ಚಾಯಿತು. ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು, ಶುಂಠಿ ಮತ್ತು ಅಡಿಕೆಗೆ ರೈತರು ಮುಖಮಾಡಿದರು. ಭತ್ತದ ಕೃಷಿಗೆ ಅಗತ್ಯವಾದ ಕಾರ್ಮಿಕ ವೆಚ್ಚವೂ ಹೆಚ್ಚಾಯಿತು. ಕೃಷಿಭೂಮಿಯ ಬಳಕೆಯಲ್ಲಿ ಬದಲಾವಣೆಗಳು ಕಾಣಿಸಿಕೊಂಡವು.

ಇದರ ಪರಿಣಾಮವಾಗಿ ಹಲವು ದೇಸೀ ಭತ್ತದ ತಳಿಗಳ ಕೃಷಿ ಕ್ರಮೇಣ ಕಡಿಮೆಯಾಯಿತು. ಕೆಲವು ತಳಿಗಳು ರೈತರ ಹೊಲಗಳಿಂದ ಸಂಪೂರ್ಣ ಕಣ್ಮರೆಯಾಗುವ ಹಂತ ತಲುಪಿದವು.

ಈ ಬದಲಾವಣೆಯನ್ನು ಕಂಡ ರಾಮನ್, ‘ಯಾವುದೇ ಒಂದು ತಳಿಯ ಭತ್ತವನ್ನು ಬೆಳೆಯುವುದನ್ನು ರೈತರು ನಿಲ್ಲಿಸಿದರೆ, ಆ ತಳಿಯ ಬೀಜ ಮುಂದಿನ ಋತುವಿಗೆ ಉಳಿಯದೇ ಹೋಗಬಹುದು. ಬೀಜ ಕಣ್ಮರೆಯಾದರೆ ಅದರೊಂದಿಗೆ ಆ ತಳಿಗೆ ಸಂಬಂಧಿಸಿದ ಪಾರಂಪರಿಕ ಜ್ಞಾನವೂ ಕಳೆದುಹೋಗುತ್ತದೆ’ ಎಂದು ಚಿಂತಿಸಿದರು.

ಈ ಕಾರಣದಿಂದಲೇ, ತಮ್ಮ ಪೂರ್ವಜರಿಂದ ಬಂದಿದ್ದ ಬೀಜಗಳನ್ನು ಸಂರಕ್ಷಿಸುವುದರ ಜೊತೆಗೆ, ವಯನಾಡಿನ ವಿವಿಧ ಪ್ರದೇಶಗಳಲ್ಲಿ ಬೆಳೆದಿದ್ದ ಅಪರೂಪದ ದೇಸೀ ತಳಿಗಳನ್ನು ಸಂಗ್ರಹಿಸಲು ಆರಂಭಿಸಿದರು. ವಿವಿಧ ರೈತರನ್ನು ಭೇಟಿಯಾಗಿ ಕಣ್ಮರೆಯಾಗುತ್ತಿದ್ದ ಬೀಜಗಳನ್ನು ಸಂಗ್ರಹಿಸಿದರು. ಪ್ರತಿಯೊಂದು ತಳಿಯನ್ನೂ ಪ್ರತ್ಯೇಕವಾಗಿ ಬೆಳೆಸಿ, ಅದರ ಬೀಜಗಳನ್ನು ಮುಂದಿನ ಋತುವಿಗೆ ಉಳಿಸುವ ಕೆಲಸ ನಡೆಸಿದರು. ಈ ಕಾರ್ಯದೊಂದಿಗೆ ಅವರು ಸುಮಾರು 55ಕ್ಕೂ ಹೆಚ್ಚು ತಳಿಗಳನ್ನು ಸಂಗ್ರಹಿಸಿ, ಸಂರಕ್ಷಿಸಿದ್ದರು ಎಂದು ವರದಿಗಳು ಹೇಳುತ್ತವೆ.

ಅವರ ಸಂಗ್ರಹದಲ್ಲಿದ್ದ ಚೆನ್ನೆಲ್ಲು, ತೊಂಡಿ, ಚೆಂಬಕಂ, ವೇಳಿಯನ್, ಗಂಧಕಶಾಲ ಹಾಗೂ ಕಾಯಮ ಮೊದಲಾದ ದೇಸೀ ತಳಿಗಳು ವಯನಾಡಿನ ಕೃಷಿ ವೈವಿಧ್ಯವನ್ನು ಪ್ರತಿನಿಧಿಸುತ್ತಿದ್ದವು. ಗಂಧಕಶಾಲ ಮತ್ತು ಕಾಯಮ ತಮ್ಮ ಪರಿಮಳದಿಂದ ಪ್ರಸಿದ್ಧವಾಗಿದ್ದರೆ, ಕೆಲವು ತಳಿಗಳು ಸ್ಥಳೀಯ ಆಹಾರ ಪದ್ಧತಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದವು. ಇನ್ನೂ ಕೆಲವು ವಿಭಿನ್ನ ನೀರಿನ ಪರಿಸ್ಥಿತಿ ಮತ್ತು ಮಣ್ಣಿನ ಗುಣಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದ್ದವು.

ವಿಶೇಷವಾಗಿ, ರಾಮನ್ ಸಂರಕ್ಷಿಸಿದ್ದ ಪಾಲ್ತೊಂಡಿ ಮತ್ತು ಕಾಯಮ ತಳಿಗಳ ವಂಶವಾಹಿ ಲಕ್ಷಣಗಳನ್ನು ಕೇರಳ ಕೃಷಿ ವಿಶ್ವವಿದ್ಯಾಲಯದ ಭತ್ತದ ತಳಿ ಅಭಿವೃದ್ಧಿ ಕಾರ್ಯಗಳಲ್ಲಿ ಬಳಸಿಕೊಳ್ಳಲಾಗಿದೆ ಎಂಬುದನ್ನು ಕೇಂದ್ರ ಸರ್ಕಾರದ ಅಧಿಕೃತ ಪದ್ಮಶ್ರೀ ಪರಿಚಯ ದಾಖಲಿಸಿದೆ

ರಾಮನ್ ಅವರ ಕೃಷಿ ಬದುಕಿನ ಅತ್ಯಂತ ವಿಶಿಷ್ಟ ಅಂಶವೆಂದರೆ, ಬೀಜಗಳನ್ನು ಅವರು ಹಂಚುತ್ತಿದ್ದ ವಿಧಾನ; ಅವರು ತಮ್ಮಲ್ಲಿದ್ದ ಅಪರೂಪ ದೇಶಿ ತಳಿಯ ಬೀಜಗಳನ್ನು ಎಂದಿಗೂ ಮಾರಾಟ ಮಾಡಿದವರಲ್ಲ. ಬದಲಾಗಿ, ರೈತರಿಗೆ ಉಚಿತವಾಗಿ ಹಂಚುತ್ತಿದ್ದರು. ಆದರೆ, ಷರತ್ತೊಂದನ್ನು ವಿಧಿಸುತ್ತಿದ್ದರು: ‘ಆ ಬೀಜಗಳನ್ನು ಬೆಳೆದು ಕೊಯ್ಲು ಮಾಡಿದ ನಂತರ ಪಡೆದಷ್ಟೇ ಪ್ರಮಾಣದ ಬೀಜಗಳನ್ನು ಮರಳಿ ನೀಡಬೇಕು’.

ಇದರಿಂದಾಗಿ, ರಾಮನ್ ಅವರ ಬೀಜ ಸಂಗ್ರಹ ಎಂದಿಗೂ ಖಾಲಿಯಾಗುತ್ತಿರಲಿಲ್ಲ. ಅದೇ ಸಮಯದಲ್ಲಿ ಹೊಸಹೊಸ ರೈತರಿಗೆ ದೇಸೀ ತಳಿಗಳನ್ನು ಬೆಳೆಯುವ ಅವಕಾಶ ದೊರೆಯುತ್ತಿತ್ತು.

ಮತ್ತೊಂದು ವಿಶೇಷವೆಂದರೆ, ರಾಮನ್ ವಾಸಿಸುತ್ತಿದ್ದ ಮಣ್ಣಿನ ಮನೆಯೇ ಭತ್ತದ ಬೀಜಗಳ ಸಂಗ್ರಹಾಗಾರವೂ ಆಗಿತ್ತು. ಅವರ ಬಳಿ, ಆಧುನಿಕ ಶೈತ್ಯಾಗಾರಗಳು ಅಥವಾ ಅತ್ಯಾಧುನಿಕ ಬೀಜ ಸಂಗ್ರಹಣಾ ವ್ಯವಸ್ಥೆ ಇರಲಿಲ್ಲ. ಆದರೂ, ಭತ್ತ ಹಾಳಾಗದಂತೆ ಅವರು ರಕ್ಷಿಸುತ್ತಿದ್ದರು. ಅದಕ್ಕಾಗಿ; ಕೊಯ್ಲು ಮಾಡಿದ ಭತ್ತವನ್ನು ಒಂದು ವಾರದವರೆಗೆ ಸೂರ್ಯನ ಬಿಸಿಲು ಮತ್ತು ರಾತ್ರಿಯ ಮಂಜಿಗೆ ಒಡ್ಡಿ, ನಂತರ ವಿಶೇಷವಾಗಿ ಸಿದ್ಧಪಡಿಸಿದ ಬಿದಿರಿನ ತಡಿಕೆ ಮತ್ತು ಹುಲ್ಲಿನಿಂದ ಹೆಣೆದ ಬುಟ್ಟಿಗಳಲ್ಲಿ ಸಂಗ್ರಹಿಸುತ್ತಿದ್ದರು. ಈ ವಿಧಾನದಲ್ಲಿ ಬೀಜಗಳು ಸುಮಾರು 2 ವರ್ಷಗಳವರೆಗೆ ಹಾನಿಯಾಗದಂತೆ ಉಳಿಯುತ್ತಿದ್ದವು.

“ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ” ಎಂಬುದು ಅವರ ನಿಲುವಾಗಿತ್ತು.

ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ವ್ಯಾಪಕವಾಗುತ್ತಿದ್ದ ಕಾಲದಲ್ಲಿ ರಾಮನ್, ರಾಸಾಯನಿಕಗಳಿಗೆ ವಿಮುಖರಾಗಿ, ನೈಸರ್ಗಿಕ ಮತ್ತು ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡಿದ್ದರು. ಮಣ್ಣಿನಲ್ಲಿರುವ ಎರೆಹುಳುಗಳು ಮತ್ತು ಇತರ ಜೀವಿಗಳ ಮಹತ್ವವನ್ನು ಅವರು ವಿಶೇಷವಾಗಿ ಗುರುತಿಸಿದ್ದರು. ಮಣ್ಣಿನ ಜೀವವೈವಿಧ್ಯ ಸಂರಕ್ಷಣೆಯೇ ಉತ್ತಮ ಕೃಷಿಯ ಮೂಲಾಧಾರ ಎಂದು ನಂಬಿದ್ದರು.

ಈ ಲೇಖನ ಓದಿದ್ದೀರಾ?: ಸಿಲಿಕಾನ್ ಸಿಟಿಗಳಲ್ಲಿ ಹಸಿದ ಹಲವು ಬದುಕುಗಳ ಕಥೆ–ವ್ಯಥೆ

ಅವರ ಕೃಷಿಭೂಮಿ ಕೇವಲ ಭತ್ತದ ತಳಿಗಳ ಸಂಗ್ರಹಾಲಯವಾಗಿರದೆ, ಸ್ಥಳೀಯ ಕೃಷಿ ಜೀವವೈವಿಧ್ಯದ ಜೀವಂತ ಕೇಂದ್ರವಾಗಿತ್ತು. ಭತ್ತದ ಜೊತೆಗೆ ಬಾಳೆ, ಮೆಣಸು, ಸ್ಥಳೀಯ ತರಕಾರಿಗಳು, ಔಷಧೀಯ ಸಸ್ಯಗಳು ಹಾಗೂ ವಿವಿಧ ಮರಗಳ ತಳಿಗಳನ್ನೂ ಅವರು ಸಂರಕ್ಷಿಸಿದ್ದರು.

ದಶಕಗಳ ಕಾಲ ಕೃಷಿಯಲ್ಲಿಯೇ ತೊಡಗಿಸಿಕೊಂಡಿದ್ದ ರಾಮನ್ ಅವರ ಕೆಲಸ ಕ್ರಮೇಣ ಕೃಷಿ ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಸಂಸ್ಥೆಗಳು ಹಾಗೂ ಸರ್ಕಾರಗಳ ಗಮನ ಸೆಳೆಯಿತು. 2012ರಲ್ಲಿ ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿಯು ರಾಮನ್‌ ಅವರಿಗೆ ‘ಹಸಿರು ಪ್ರಶಸ್ತಿ’ ನೀಡಿ ಗೌರವಿಸಿತು. ಭಾರತೀಯ ಭತ್ತ ಸಂಶೋಧನಾ ಸಂಸ್ಥೆ ಮತ್ತು ವಿವಿಧ ಕೃಷಿ ವಿಶ್ವವಿದ್ಯಾಲಯಗಳು ಅವರ ಕೊಡುಗೆಯನ್ನು ಗುರುತಿಸಿದ್ದವು. 2018ರಲ್ಲಿ ಬ್ರೆಜಿಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಕಾರ್ಯಕ್ರಮಕ್ಕೂ ಆಹ್ವಾನಿತರಾಗಿದ್ದರು. 2023ರ ಮಾರ್ಚ್ 22ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಮನ್ ಅವರಿಗೆ ಕೃಷಿ ಕ್ಷೇತ್ರದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದರು. ಕೇರಳ ಕೃಷಿ ವಿಶ್ವವಿದ್ಯಾಲಯವು ಅವರನ್ನು ‘ಪ್ರೊಫೆಸರ್ ಆಫ್ ಪ್ರಾಕ್ಟೀಸ್’ಆಗಿ ಗುರುತಿಸಿದ್ದೂ ಅವರ ಅನುಭವ ಮತ್ತು ಜ್ಞಾನಕ್ಕೆ ಸಂದ ಗೌರವ.

ರಾಮನ್ ಅವರ ಬದುಕಿನಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ದೇಶವೇ ಗೌರವಿಸಿದ ಕೃಷಿಕನೊಬ್ಬ ತನ್ನ ಸಂರಕ್ಷಣಾ ಕೆಲಸವನ್ನು ಮುಂದುವರಿಸಲು ಎದುರಿಸಿದ ಆರ್ಥಿಕ ತೊಂದರೆಗಳು. ಅವರ ಪ್ರಕಾರ, ಬಿತ್ತನೆ, ನೀರಾವರಿ, ಗದ್ದೆಗಳ ನಿರ್ವಹಣೆ, ಕೊಯ್ಲು, ಬೀಜಗಳ ಪ್ರತ್ಯೇಕ ಸಂಗ್ರಹಣೆ ಮತ್ತು ಮುಂದಿನ ಋತುವಿಗೆ ಅವುಗಳನ್ನು ಸಿದ್ಧಪಡಿಸುವ ಕೆಲಸಕ್ಕಾಗಿ ವರ್ಷಕ್ಕೆ ಸುಮಾರು 70,000 ರೂ. ವೆಚ್ಚವಾಗುತ್ತಿತ್ತು. ಆದರೆ, ಈ ಕೃಷಿಯಿಂದ ಅವರಿಗೆ ದೊಡ್ಡ ಪ್ರಮಾಣದ ಆದಾಯ ಬರುತ್ತಿರಲಿಲ್ಲ. ಕೆಲವು ಸಂದರ್ಭಗಳಲ್ಲಿ ಕುಟುಂಬದ ಆಹಾರಕ್ಕಾಗಿ ಸಾರ್ವಜನಿಕ ಪಡಿತರ ವ್ಯವಸ್ಥೆಯ ಅಕ್ಕಿಯನ್ನೇ ಅವಲಂಬಿಸಬೇಕಾಗುತ್ತಿತ್ತು.

ಸ್ಥಳೀಯ ಬೀಜಗಳ ಸಂರಕ್ಷಣೆಯೇ ತಮ್ಮ ಮಹತ್ವದ ಕೆಲಸವೆಂದು ಹೇಳಿಕೊಳ್ಳುವ ಸರ್ಕಾರಗಳು ಮತ್ತು ಸಂಶೋಧನಾ ಸಂಸ್ಥೆಗಳು ಕೂಡ, ರಾಮನ್ ಅವರಿಗೆ ಬೀಜ ಸಂರಕ್ಷಣೆಗೆ ಅಗತ್ಯ ಆರ್ಥಿಕ ಭದ್ರತೆ, ಮೂಲಸೌಕರ್ಯ ಹಾಗೂ ನೆರವು ನೀಡಲಿಲ್ಲ.

ರಾಮನ್ ಅವರ ಸಾಧನೆ ಒಬ್ಬ ವ್ಯಕ್ತಿಯ ವೈಯಕ್ತಿಕ ಪರಿಶ್ರಮದ ಫಲವಾಗಿದ್ದರೂ ಅದರ ಹಿಂದೆ ಕುರಿಚ್ಯ ಸಮುದಾಯದ ಹಲವು ತಲೆಮಾರುಗಳ ಕೃಷಿ ಅನುಭವ ಅಡಕವಾಗಿತ್ತು. ಆದ್ದರಿಂದ, ಅವರ ಕೊಡುಗೆಯನ್ನು ಗೌರವಿಸುವುದು ಎಂದರೆ ಅವರ ಸಮುದಾಯದ ಜ್ಞಾನ ಪರಂಪರೆಯನ್ನೂ ಗೌರವಿಸುವುದು ಎಂದೇ ಅರ್ಥ.

ಈಗ, ರಾಮನ್ ಅವರು ತಮ್ಮ ಭತ್ತದ ತಳಿಗಳನ್ನೂ, ಕೃಷಿಯನ್ನೂ, ನಮ್ಮೆಲ್ಲರನ್ನೂ ಅಗಲಿದ್ದಾರೆ. ಈಗ, ಅವರು ಸಂರಕ್ಷಿಸಿದ ದೇಸೀ ಭತ್ತದ ತಳಿಗಳ ಭವಿಷ್ಯದ ಬಗ್ಗೆ ಕಳವಳವಿದೆ. ಯಾಕೆಂದರೆ, ಬೀಜಗಳನ್ನು ಒಮ್ಮೆ ಸಂಗ್ರಹಿಸಿ ಇಟ್ಟರೆ ಮಾತ್ರ ಅವು ಶಾಶ್ವತವಾಗಿ ಉಳಿಯುವುದಿಲ್ಲ. ನಿಯಮಿತವಾಗಿ ಅವುಗಳನ್ನು ಮತ್ತೆ ಬಿತ್ತಿ ಹೊಸ ಬೀಜಗಳನ್ನು ಸಂಗ್ರಹಿಸಬೇಕು.

ಮಾತ್ರವಲ್ಲ, ಅವರ ಬೀಜಗಳ ಸಂಗ್ರಹದ ಜೊತೆಗೆ ಪ್ರತಿಯೊಂದು ತಳಿಯ ಸ್ಥಳೀಯ ಹೆಸರು, ಬೆಳೆಯುವ ಅವಧಿ, ಮಣ್ಣಿನ ಹೊಂದಾಣಿಕೆ, ನೀರಿನ ಅವಶ್ಯಕತೆ, ಆಹಾರ ಬಳಕೆ ಮತ್ತು ಇತರ ಲಕ್ಷಣಗಳನ್ನು ದಾಖಲಿಸುವ ಅಗತ್ಯವಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಸ್ಟಿಂಗ್ ಆಪರೇಷನ್’ ವಿವಾದ- ನನ್ನಿಂದಲೇ ತನಿಖೆ ಆರಂಭಿಸಿ: ಎಚ್.ಡಿ. ಕುಮಾರಸ್ವಾಮಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ವೀಡಿಯೊ ಬಿಡುಗಡೆ ಮಾಡಲು ಯತ್ನಿಸಲಾಗಿದೆ...

ಬೀದರ್ ದಕ್ಷಿಣ ಕ್ಷೇತ್ರದಲ್ಲಿ 1 ಜಿ.ಪಂ. ಕ್ಷೇತ್ರವನ್ನಾದರೂ ಎಸ್‌ಸಿಗೆ ಮೀಸಲಿಡಿ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ಜಿಲ್ಲಾ ಪಂಚಾಯಿತಿ...

ಸಮಯೋಚಿತ ಕ್ರಮದಿಂದ ದೊಡ್ಡ ಮಟ್ಟದ ಅಶಾಂತಿ ತಪ್ಪಿತು: ಸುಪ್ರೀಂಗೆ ದೆಹಲಿ ಪೊಲೀಸ್ ಆಯುಕ್ತರ ಹೇಳಿಕೆ

ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ಕೈಗೊಂಡ ಸಮಯೋಚಿತ,...

2018ರ ಪ್ರಕರಣ: ಸಿಜೆಪಿ ಪ್ರತಿಭಟನೆ ಹೊತ್ತಿನಲೇ ಧೃವ್ ರಾಠಿಗೆ ಹೊಸ ಸಮನ್ಸ್ ಜಾರಿ ಮಾಡಿದ ದೆಹಲಿ ಕೋರ್ಟ್

ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ 2018ರ...