ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಶ್ರೀನಿವಾಸಗುಡಿ ವೃತ್ತದಲ್ಲಿ ಬುಧವಾರ ಸಂಜೆ ನಡೆದಿದೆ.
ಮೃತರನ್ನು ಪಿಲಕಮ್ಮ ದೇವಿ ಏರಿಯಾ ನಿವಾಸಿ ಮಹ್ಮದ್ ಯಾಸೀನ್ (22) ಎಂದು ಗುರುತಿಸಲಾಗಿದೆ.
ಯಾದಗಿರಿಯಿಂದ ಕಲಬುರಗಿಯತ್ತ ತೆರಳುತ್ತಿದ್ದ ಬಸ್ ಶ್ರೀನಿವಾಸಗುಡಿ ವೃತ್ತದಲ್ಲಿ ತಿರುವು ಪಡೆಯುವಾಗ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಹಿಂಬದಿ ಕುಳಿತಿದ್ದ ಯಾಸೀನ್ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಗಾಂಜಾ ಮಾರಾಟ; ಮೂವರು ಬಂಧನ, ₹7,500 ಮೌಲ್ಯದ ವಸ್ತು ವಶ
ಬೈಕ್ ಸವಾರ ಮಹ್ಮದ್ ಶಾಹೀದ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿತ್ತಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





