ನರಸಿಂಹರಾಜಪುರ ತಾಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಕಾಡಾನೆ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ವಾಹನ ಸವಾರರಿಗೆ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.
ಮಳಲಿ ಹಾಗೂ ಬಡಗಬೈಲು ಗ್ರಾಮದ ಸುತ್ತಮುತ್ತ ಕಾಡಾನೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೋಟೆಬೈಲು, ಕಣಗೇರಿ, ದ್ವಾರಮಕ್ಕಿ, ಬಣಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಎಚ್ಚರಿಕೆಯಿಂದ ಓಡಾಡಲು ಸೂಚಿಸಲಾಗಿದೆ. ವಿಶೇಷವಾಗಿ ಮಳಲಿ-ದ್ವಾರಮಕ್ಕಿ ರಸ್ತೆಯಲ್ಲಿ ರಾತ್ರಿ ವೇಳೆ ಸಂಚಾರ ಮಾಡದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು
ರಾತ್ರಿ ವೇಳೆ ಹೊರಗೆ ಓಡಾಡದೆ ಮುನ್ನೆಚ್ಚರಿಕೆ ವಹಿಸುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ. ಇದೇ ಒಂಟಿ ಸಲಗ ಎರಡು ದಿನಗಳ ಹಿಂದೆ ಬಡಗಬೈಲು ಗ್ರಾಮದ ಕನ್ನಗೆರೆ ಕೆ.ಕೆ. ಜಾರ್ಜ್ ಅವರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದ ಭತ್ತದ ಬೆಳೆಯನ್ನು ನಾಶಪಡಿಸಿತ್ತು ಎನ್ನಲಾಗಿದೆ. ಸಾರ್ವಜನಿಕರು ಕಾಡಾನೆಯನ್ನು ಕಂಡಲ್ಲಿ ಅದರ ಸಮೀಪಕ್ಕೆ ಹೋಗದೆ, ಯಾವುದೇ ರೀತಿಯಲ್ಲಿ ಕೆಣಕದೆ ತಕ್ಷಣ ಆನೆ ಕಾರ್ಯಪಡೆಯ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಆನೆ ಕಾರ್ಯಪಡೆ ಕಂಟ್ರೋಲ್ ರೂಂ: 7204004261 ಕರೆ ಮಾಡಲು ಇಲಾಖೆ ತಿಳಿಸಿದೆ.



