ರಸ್ತೆ ಪಕ್ಕದಲ್ಲಿ ಬಹಿರ್ದೆಸೆಗೆ ಕುಳಿತಿದ್ದ 6 ವರ್ಷದ ಬಾಲಕನಿಗೆ ನಿಯಂತ್ರಣ ತಪ್ಪಿದ ಆಟೋ ಡಿಕ್ಕಿ ಹೊಡೆದ ಪರಿಣಾಮ, ಬಾಲಕ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೊಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಮೃತ ಬಾಲಕನನ್ನು ಐನೊಳಿ ಗ್ರಾಮದ ಸಂಜೀವಕುಮಾರ ಸುರೇಶ್(6) ಎಂದು ಗುರುತಿಸಲಾಗಿದೆ.
ಬೆಳಿಗ್ಗೆ ಸುಮಾರು 8ರ ವೇಳೆಗೆ ಸಂಜೀವಕುಮಾರ ರಸ್ತೆ ಪಕ್ಕದಲ್ಲಿ ಬಹಿರ್ದೆಸೆಗೆ ಕುಳಿತಿದ್ದಾಗ, ವೀರಪ್ಪ ಎಂಬಾತ ಚಾಲನೆ ಮಾಡುತ್ತಿದ್ದ ಆಟೋ ನಿಯಂತ್ರಣ ತಪ್ಪಿ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಬಳಿಕ ಆಟೋ ಚಾಲಕ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ನಂತರ ಚಿಂಚೋಳಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಇದನ್ನು ಓದಿದ್ದೀರಾ? ಕಲಬುರಗಿ | ಮಳೆ ಕೈಕೊಟ್ಟು ರೈತರು ಕಂಗಾಲು; ಎತ್ತಿನಬಂಡಿ, ಟ್ರ್ಯಾಕ್ಟರ್ಗಳೊಂದಿಗೆ ಬೃಹತ್ ಪ್ರತಿಭಟನೆ
ಘಟನೆ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





