ಬಿಡದಿಯಲ್ಲಿ ಪ್ರಸ್ತಾಪಿತ ಟೌನ್ಶಿಪ್ ಯೋಜನೆಗಾಗಿ ಸರ್ಕಾರ ರೈತರ ವಿರೋಧದ ನಡುವೆಯೂ ಪೊಲೀಸ್ ಬಲದೊಂದಿಗೆ ಭೂ ಸಮೀಕ್ಷೆ (JMC) ನಡೆಸಲು ಮುಂದಾಗಿರುವುದನ್ನು ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯು ತೀವ್ರವಾಗಿ ಖಂಡಿಸಿದೆ.
ಕಳೆದ ಒಂದೂವರೆ ವರ್ಷದಿಂದ ಈ ಯೋಜನೆಗೆ ತಮ್ಮ ಸಮ್ಮತಿ ಇಲ್ಲ ಎಂದು ಬಿಡದಿ ರೈತರು ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಇತ್ತೀಚೆಗೆ ಸ್ಥಳೀಯ ಶಾಸಕರು ಸಭೆ ಕರೆದಾಗಲೂ, ರೈತರು “ನಾವು ಭೂಮಿ ಮಾರಾಟ ಮಾಡಲು ಸಿದ್ಧರಿಲ್ಲ, ಭೂ ಸ್ವಾಧೀನವನ್ನೇ ಕೈಬಿಡಬೇಕು” ಎಂದು ಸ್ಪಷ್ಟಪಡಿಸಿದ್ದರು. ಇದಕ್ಕೆ ಅಧಿಕಾರಿಗಳು ಮುಖ್ಯಮಂತ್ರಿಗಳ ಜೊತೆ ಸಭೆ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಭರವಸೆಯನ್ನು ಮೀರಿ ಇದೀಗ ಪೊಲೀಸ್ ಬಲದೊಂದಿಗೆ ಜಂಟಿ ಸಮೀಕ್ಷೆಗೆ ಮುಂದಾಗಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದು ಸಂಘಟನೆ (ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ)ಗಳು ಕಿಡಿಕಾರಿವೆ.
ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಕೂಡಲೇ ರೈತರೊಂದಿಗೆ ಸಭೆ ನಡೆಸಿ ಸಮಸ್ಯೆಯನ್ನು ಇತ್ಯಾರ್ಥಗೊಳಿಸಬೇಕು. ಅತ್ಯಂತ ಫಲವತ್ತಾದ, ನೀರಾವರಿ ಸಮೃದ್ಧ ಹಾಗೂ ಬಹುವಾರ್ಷಿಕ ಬೆಳೆಗಳನ್ನು ಬೆಳೆಯುವ ಭೂಮಿಯಲ್ಲಿ ಕಾಂಕ್ರೀಟ್ ಟೌನ್ಶಿಪ್ ನಿರ್ಮಿಸುವ ವಿನಾಶಕಾರಿ ಯೋಜನೆಯನ್ನು ಸರ್ಕಾರ ಕೈಬಿಡಲೇಬೇಕು ಹಾಗೂ ಸರ್ಕಾರ ಯಾವುದೇ ಕಾರಣಕ್ಕೂ ಬಲವಂತದ ಭೂಸ್ವಾಧೀನಕ್ಕೆ ಮುಂದಾಗಬಾರದು. ಒಂದು ವೇಳೆ ಇಂತಹ ದುಸ್ಸಾಹಸ ಮುಂದುವರಿದರೆ, ಇದು ಕೇವಲ ಬಿಡದಿ ರೈತರ ಹೋರಾಟವಾಗಿ ಉಳಿಯುವುದಿಲ್ಲ; ಇಡೀ ರಾಜ್ಯದ ರೈತಕುಲ ಬೀದಿಗಿಳಿದು ಹೋರಾಟ ಮಾಡುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಬಿಡದಿ-ಗ್ರೇಟರ್ ಬೆಂಗಳೂರು ಟೌನ್ಶಿಪ್ ರಣರಂಗ!
ನಿನ್ನೆ ಅಧಿಕಾರಿಗಳ ವರ್ತನೆಯಿಂದ ಆತಂಕಗೊಂಡ ರೈತ ಮಹಿಳೆಯರು ಹಾಗೂ ರೈತರು ಪೊರಕೆಗಳೊಂದಿಗೆ ಪ್ರತಿಭಟಿಸಿ, ಅಧಿಕಾರಿಗಳೊಂದಿಗೆ ತಳ್ಳಾಟ ನಡೆಸಿದ ಘಟನೆಯ ಬಗ್ಗೆ ಸಂಘಟನೆಯು ವಿಷಾದ ವ್ಯಕ್ತಪಡಿಸಿದೆ. “ಘಟನೆ ನಡೆಯಲು ಸರ್ಕಾರದ ಧೋರಣೆಯೇ ಕಾರಣವಾದರೂ, ರೈತರು ಸಂಯಮ ಕಳೆದುಕೊಳ್ಳಬಾರದು. ದಿಟ್ಟವಾಗಿ ಆದರೆ ಶಾಂತಿಯುತವಾಗಿ ಹೋರಾಟ ಮುಂದುವರೆಸಿ, ನಮ್ಮ ಭೂಮಿಯನ್ನು ಉಳಿಸಿಕೊಳ್ಳೋಣ” ಎಂದು ಸಂಯುಕ್ತ ಹೋರಾಟದ ನಾಯಕರು ರೈತ ಬಂಧುಗಳಲ್ಲಿ ಮನವಿ ಮಾಡಿದ್ದಾರೆ.
ಈ ಹೇಳಿಕೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷೀಯ ಮಂಡಳಿ ಸದಸ್ಯ ಚುಕ್ಕಿ ನಂಜುಂಡಸ್ವಾಮಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಯಶ್ವಂತ್ ಸೇರಿದಂತೆ ಪ್ರಮುಖ ರೈತ ಮುಖಂಡರು ಬಿಡುಗಡೆಗೊಳಿಸಿದ್ದಾರೆ.




