ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಖಾಸಗಿ ಶಾಲಾ-ಕಾಲೇಜಿಗಳಲ್ಲಿ ಡೊನೇಷನ್ ಹಾವಳಿ ಜೋರಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಕಲಬುರಗಿಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಪರಿಷತ್ತಿನ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ ಮಾತನಾಡಿ,ʼ 2026-27ನೇ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು, ಪಿಯುಸಿ ಪ್ರವೇಶ ಬಯಸಿ ವಿದ್ಯಾರ್ಥಿ ಮತ್ತು ಪೋಷಕರು ದಾಖಲಾತಿ ಬಯಸಿ ಕಾಲೇಜುಗಳಿಗೆ ಪ್ರವೇಶ ಬಯಸಿ ಹೋಗುತ್ತಿದ್ದಾರೆ. ಕಾಲೇಜುಗಳಲ್ಲಿ ಡೊನೇಷನ್ ಅಧಿಕಗೊಂಡ ಹಿನ್ನೆಲೆ ವಿದ್ಯಾರ್ಥಿ, ಪೋಷಕರಿಗೆ ನಿರಾಶೆ ಉಂಟಾಗುತ್ತಿದೆʼ ಎಂದರು.
ʼಅಧಿಕ ಶುಲ್ಕ ಹಾಗೂ ಡೊನೇಷನ್ ಹಾವಳಿ ನೋಡಿದರೆ ಶಿಕ್ಷಣ ಕಾಯ್ದೆಗಳು ಕಾಗದಕ್ಕಷ್ಟೇ ಸೀಮಿತವಾಗಿದ್ದು, ವಾಸ್ತವದಲ್ಲಿ ಪೋಷಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಖಾಸಗಿ ಶಾಲಾ-ಕಾಲೇಜುಗಳು ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳನ ಅಕ್ರಮ ವಂತಿಗೆಯಿಂದ ವಸೂಲಿ ಮಾಡುವುದು. ಮಕ್ಕಳಿಗೆ ನೋಟ್‌ಬುಕ್. ಸಮವಸ್ತ್ರ, ಶೂಗಳನ್ನು ಶಾಲಾ ಕಾಲೇಜಿನಲ್ಲೇ ಹೆಚ್ಚಿನ ದರಕ್ಕೆ ಖರೀದಿಸುವಂತೆ ಒತ್ತಾಯಿಸುವುದರಿಂದ ಪೋಷಕರಿಗೆ ಆರ್ಥಿಕ ಹೊರೆಯಾಗುತ್ತಿದೆʼ ಎಂದು ದೂರಿದರು.
ʼಕಾಲೇಜುಗಳಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ಮಾಡಿಕೊಂಡು ಜೆಇಇ, ಎನ್‌ಇಇಟಿ ಹೆಸರಿನಲ್ಲಿ ನಿಯಮಬಾಹಿರವಾಗಿ ನಡೆಯುತ್ತಿರುವ ಪಿಯು ಕಾಲೇಜುಗಳ ಸಂಖ್ಯೆ ಅಧಿಕವಾಗಿದೆ. ಶಿಕ್ಷಣದಲ್ಲಿ ಪಾರದರ್ಶಕತೆಯ ಕೊರತೆಯಿಂದ ಶಾಲಾ ಕಾಲೇಜು ಶುಲ್ಕ ಮತ್ತು ಶಿಕ್ಷಕರ ವಿವರಗಳನ್ನು ವೆಬ್‌ಸೈಟ್ ಅಥವಾ ಪ್ಲೆಕ್ಸ್ ಮೂಲಕ ಪ್ರಕಟಿಸುವ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಖಾಸಗಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು ಖಂಡನೀಯವಾಗಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಈ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗಣನೀಯವಾಗಿ ಹೆಚ್ಚಿದೆ, ವಿದ್ಯಾರ್ಥಿಗಳು ಪಿಯುಸಿ ದಾಖಲಾತಿಗೆ ಕಾಲೇಜಿಗಳತ್ತ ಮುಖ ಮಾಡಿದ್ದಾರೆ. ಆದರೆ, ಶಿಕ್ಷಣ ಇಲಾಖೆ ನಿಗದಿಪಡಿಸಿದ ಶುಲ್ಕದ ವಿವರ ಪಟ್ಟಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಕದೇ ಇರುವುದರಿಂದ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ, ವಾರ್ಷಿಕ ಶುಲ್ಕದ ಜೊತೆ ಇತರೆ ಶುಲ್ಕದ ಮಾಹಿತಿಯನ್ನು ಸಿಗುತ್ತಿಲ್ಲ. ನಿಯಮ ಪ್ರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಇಲಾಖೆ ನಿಗದಿಪಡಿಸಿದ ಶುಲ್ಕದ ವಿವರಗಳನ್ನು ಪ್ರದರ್ಶಿಸಬೇಕು. ಇದನ್ನು ಯಾರೂ ಪಾಲನೆ ಮಾಡುತ್ತಿಲ್ಲʼ ಎಂದರು.
ʼಡೊನೇಷನ್ ತಡೆಗಟ್ಟಲು ‘ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ’ ರಚಿಸಲು ದಲಿತ ವಿದ್ಯಾರ್ಥಿ ಪರಿಷತ್ ಹಲವು ವರ್ಷಗಳಿಂದ ಒತ್ತಾಯಿಸುತ್ತಿದೆ. ಇದರಲ್ಲಿ ಕೇವಲ ಅಧಿಕಾರಿಗಳಲ್ಲದೆ, ಪೋಷಕರು, ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳೂ ಇರಬೇಕು. ಕೂಡಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಂಟಿ ಸಭೆ ಕರೆದು ಡೊನೇಷನ್ ಹಾವಳಿ ತಡೆಗೆ ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಿಸಿದಂತೆ ಎಲ್ಲಾ ಕಾಲೇಜುಗಳಿಗೆ ಆದೇಶವನ್ನು ಹೊರಡಿಸುವ ಮೂಲಕ ನಿಯಮಗಳ ಪಾಲನೆಗೆ ಸೂಕ್ತ ನಿರ್ದೇಶನ ನೀಡಬೇಕುʼ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಸಮಾನತೆಯ ಹರಿಕಾರ ಬಸವಣ್ಣ : ಪ್ರೊ.ಬಿ.ಎಸ್.ಬಿರಾದಾರ
ಈ ವೇಳೆ ಹಿರಿಯ ನ್ಯಾಯವಾದಿಗಳಾದ ಶ್ರೀಮಂತ ಶಿಲ್ಡ್, ಭವಾನಿ ಪ್ರಸಾದ್, ಪರಿಷತ್ತಿನ ಮುಖಂಡ ವೈ. ಎಸ್. ಸಿಂದಗೇರಿ, ವಿದ್ಯಾರ್ಥಿಗಳಾದ ನಾಗಪ್ಪ, ಮಹಮದ್ ಅಸ್ಲಮ್, ಸಿದ್ಧಾರ್ಥ್ ಉಪಸ್ಥಿತರಿದ್ದರು.





