ಉತ್ತರ ಕನ್ನಡ: ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಸಂಸ್ಥೆ (GSI) ವತಿಯಿಂದ ಜಿಲ್ಲೆಯಾದ್ಯಂತ ವೈಜ್ಞಾನಿಕ ಸಮೀಕ್ಷೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಮಾನಗಳು ಕೆಳಮಟ್ಟದಲ್ಲಿ ಹಾರಾಟ ನಡೆಸಲಿವೆ. ಈ ಬಗ್ಗೆ ಸಾರ್ವಜನಿಕರು ಯಾವುದೇ ರೀತಿಯ ಆತಂಕ ಅಥವಾ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಏನಿದು ಸಮೀಕ್ಷೆ? ರಾಷ್ಟ್ರೀಯ ವೈಮಾನಿಕ ಭೂಭೌತ ಮ್ಯಾಪಿಂಗ್ ಕಾರ್ಯಕ್ರಮದ (NAGMP) ಭಾಗವಾಗಿ ಈ ಸರ್ವೇ ನಡೆಯುತ್ತಿದೆ. ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಕೆಲವು ಭಾಗಗಳನ್ನು ಒಳಗೊಂಡಿರುವ ‘ಬ್ಲಾಕ್-7’ ಹಂತದ ಅಡಿಯಲ್ಲಿ ಜಿಲ್ಲೆಯಲ್ಲೂ ಈ ಕಾರ್ಯ ಕೈಗೊಳ್ಳಲಾಗಿದೆ. ಭೂಮಿಯ ಆಳದಲ್ಲಿ ಅಡಗಿರುವ ಖನಿಜ ಸಂಪತ್ತನ್ನು ಪತ್ತೆಹಚ್ಚುವುದು ಈ ಸಮೀಕ್ಷೆಯ ಮುಖ್ಯ ಉದ್ದೇಶವಾಗಿದೆ.
ವಿಮಾನಗಳ ಹಾರಾಟ ಏಕೆ? ಈ ಸರ್ವೇಕ್ಷಣೆಗಾಗಿ ವಿಶೇಷ ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿರುವ ವಿಮಾನಗಳನ್ನು ಬಳಸಲಾಗುತ್ತಿದೆ. ಭೂಮಿಯ ಮೇಲ್ಮೈಯ ನಿಖರ ಮಾಹಿತಿ ಪಡೆಯಲು ಈ ವಿಮಾನಗಳು ಸಾಮಾನ್ಯಕ್ಕಿಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಬೇಕಾಗುತ್ತದೆ.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಮೀಟರ್ ಬಡ್ಡಿ ದಂಧೆಗೆ ಬ್ರೇಕ್: ಕಿಂಗ್‌ಪಿನ್ ಜಮೀರ್ ಅಹ್ಮದ್ ಕೊಲೆ ಬಳಿಕ ಖಾಕಿ ಕಾರ್ಯಾಚರಣೆ ಚುರುಕು
ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ‘ರಾಷ್ಟ್ರೀಯ ಭೂವಿಜ್ಞಾನ ದತ್ತಾಂಶ ಭಂಡಾರ’ದಲ್ಲಿ (NGDR) ಸಂಗ್ರಹಿಸಲಾಗುತ್ತದೆ. ಇದು ಮುಂದೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಖನಿಜಾನ್ವೇಷಣೆ ಮಾಡಲು ಸಹಕಾರಿಯಾಗಲಿದೆ.
ಜಿಲ್ಲಾಡಳಿತದ ಮನವಿ: ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿಮಾನಗಳು ತೀರಾ ಕೆಳಮಟ್ಟದಲ್ಲಿ ಹಾರಾಡುವುದನ್ನು ಕಂಡು ಜನರು ಗಾಬರಿಗೊಳ್ಳಬಾರದು. ಇದು ಕೇವಲ ಸರ್ಕಾರದ ವೈಜ್ಞಾನಿಕ ಸಂಶೋಧನೆಯ ಒಂದು ಭಾಗವಾಗಿದ್ದು, ಸಾರ್ವಜನಿಕರು ಈ ಕಾರ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.




