ಕಾಫಿ ಬೆಳೆಗಾರರು ಕೊಡಗು ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಕಾಫಿ ಕೃಷಿ ಮತ್ತು ಕಾಫಿ ಉತ್ಪನ್ನಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು.
ಮಡಿಕೇರಿ ನಗರದ ಗಾಂಧಿ ಮೈದಾನದ ದೊಡ್ಡಮನೆ ಸಾಕಮ್ಮ ವೇದಿಕೆಯಲ್ಲಿ ನಡೆದ ಮೂರನೇ ಕಾಫಿ ದಸರಾ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಫಿ ಬೆಳೆಗಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಕಾಫಿ ದಸರಾ ಆಯೋಜಿಸಲಾಗಿದೆ. ಕಾಫಿಯಿಂದ ಕೇಕ್, ಚಾಕೊಲೇಟ್ ಸೇರಿದಂತೆ ಹಲವು ಬಗೆಯ ತಿನಿಸುಗಳನ್ನು ತಯಾರಿಸಬಹುದು. ಕಾಫಿಯ ಮೌಲ್ಯವರ್ಧನೆಗೆ ಒತ್ತು ನೀಡುವ ಮೂಲಕ ಅದನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.
ಹಿರಿಯರು ಕಷ್ಟಪಟ್ಟು ಉಳಿಸಿಕೊಂಡು ಬಂದಿರುವ ಭೂಮಿಯ ಆಸ್ತಿಯನ್ನು ಸಂರಕ್ಷಿಸುವುದು ಇಂದಿನ ಪೀಳಿಗೆಯ ಜವಾಬ್ದಾರಿಯಾಗಿದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡರೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಕಷ್ಟದ ಸಂದರ್ಭಗಳಲ್ಲಿ ಕಾಫಿ ಕೃಷಿ ಮತ್ತು ಕಾಫಿ ಕಾರ್ಮಿಕರು ಪರಸ್ಪರ ನೆರವಾಗಿರುವುದನ್ನು ಮರೆಯಬಾರದು. ಕಾಫಿ ಬೆಳೆಗಾರರು ಉತ್ತಮ ಗುಣಮಟ್ಟದ ಕಾಫಿ ಉತ್ಪಾದಿಸಿ ದೇಶ-ವಿದೇಶಗಳಲ್ಲಿ ಕೊಡಗಿನ ಕಾಫಿಗೆ ಹೆಚ್ಚಿನ ಮನ್ನಣೆ ದೊರೆಯುವಂತೆ ಮಾಡಬೇಕು. ಕಾಫಿ ಕೃಷಿಯ ಅಭಿವೃದ್ಧಿ, ಬೆಳೆಗಾರರ ನಡುವಿನ ಒಗ್ಗಟ್ಟು ಹಾಗೂ ಕಾಫಿ ಉತ್ಪನ್ನಗಳ ಉತ್ತೇಜನಕ್ಕೆ ಕಾಫಿ ದಸರಾ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಮಾತನಾಡಿ, ಕಾಫಿ ಬೆಳೆಗೆ ವಿಮೆ ಒದಗಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಒದಗಿಸುತ್ತಿದ್ದು, ಇದೇ ರೀತಿಯಲ್ಲಿ ಕಾಫಿ ಬೆಳೆಗಾರರಿಗೂ ಬೆಳೆ ವಿಮೆ ಸೌಲಭ್ಯ ಕಲ್ಪಿಸಬೇಕು. ಕೂರ್ಗ್ ಎಂಬುದು ಕೇವಲ ಭೌಗೋಳಿಕ ಗುರುತಲ್ಲ; ಕಾಫಿ, ಜೇನು, ಕಿತ್ತಳೆ, ಏಲಕ್ಕಿ, ಕಾಳುಮೆಣಸು, ಕ್ರೀಡೆ, ಸೇನೆ ಹಾಗೂ ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿದೆ. ಪೂರ್ವಿಕರು ನಿರ್ಮಿಸಿ ಬೆಳೆಸಿದ ಈ ಬ್ರ್ಯಾಂಡ್ ಅನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕೂರ್ಗ್ ಬ್ರ್ಯಾಂಡ್ನ ಪ್ರಭಾವ ಕಡಿಮೆಯಾಗುತ್ತಿರುವ ಭಾವನೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ವಿಶಿಷ್ಟ ಉತ್ಪನ್ನಗಳು ಮತ್ತು ಸಾಧನೆಗಳಿಗೆ ಮತ್ತಷ್ಟು ಪ್ರಚಾರ ನೀಡುವ ಮೂಲಕ ಅದರ ಹೆಸರನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ. ಕಾಫಿ ದರ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಆದ್ದರಿಂದ, ಮಾರುಕಟ್ಟೆಯ ಏರಿಳಿತಗಳನ್ನು ಎದುರಿಸಲು ಗುಣಮಟ್ಟದ ಕಾಫಿ ಉತ್ಪಾದನೆಯ ಜೊತೆಗೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೂ ಒತ್ತು ನೀಡಬೇಕು. 2047ರ ವೇಳೆಗೆ ದೇಶದಲ್ಲಿ ಏಳು ಲಕ್ಷ ಟನ್ ಕಾಫಿ ಉತ್ಪಾದಿಸುವ ಗುರಿ ಹೊಂದಿ ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ಬ್ರೆಜಿಲ್ ಮತ್ತು ವಿಯೆಟ್ನಾಂ ದೇಶಗಳಲ್ಲಿ ಕಾಫಿ ಉತ್ಪಾದನೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಕಾಫಿ ಬೆಳೆಗಾರರು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉತ್ತಮ ಗುಣಮಟ್ಟದ ಕಾಫಿ ಉತ್ಪಾದನೆಯಿಂದ ಹೆಚ್ಚಿನ ದರ ಪಡೆಯಲು ಸಾಧ್ಯವಾಗಲಿದೆ. ಕಾಫಿ ಮಂಡಳಿಯು ಕಾಫಿ ಕೃಷಿಯ ಉತ್ತೇಜನಕ್ಕಾಗಿ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ಅಮೂಲ್ ಸೇರಿದಂತೆ ವಿವಿಧ ಬ್ರ್ಯಾಂಡ್ಗಳು ದೇಶಾದ್ಯಂತ ಗುರುತಿಸಿಕೊಂಡಿರುವಂತೆಯೇ ಭಾರತೀಯ ಕಾಫಿಯೂ ತನ್ನದೇ ಆದ ವಿಶಿಷ್ಟ ಬ್ರ್ಯಾಂಡ್ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಕಾಫಿ ಉತ್ಪಾದನೆಯ ಜೊತೆಗೆ ಮಾರುಕಟ್ಟೆ ಸೌಲಭ್ಯಗಳನ್ನು ಹೆಚ್ಚಿಸುವುದು ಅತ್ಯಗತ್ಯ. ಕಾಫಿ ಗಿಡಗಳಿಗೆ ಗೊಬ್ಬರ ಹಾಕುವುದು, ಕಳೆ ತೆಗೆಯುವುದು ಹಾಗೂ ತೋಟಗಳ ನಿರ್ವಹಣೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ತಗಲುವ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ, ಉತ್ಪಾದಿಸಿದ ಕಾಫಿಗೆ ಸೂಕ್ತ ಬೆಲೆ ದೊರೆಯುವಂತೆ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಕ್ರೀಡಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಅರುಣ್ ಮಾಚಯ್ಯ ಮಾತನಾಡಿ, ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಸ್ಪಂದಿಸಿ ಅಗತ್ಯ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಈ ವಿಶೇಷ ವರದಿ ಓದಿದ್ದೀರಾ? ರ್ಯಾಂಕ್ ಸಾಮರ್ಥ್ಯದ ಮಾನದಂಡವಲ್ಲ: ಮಕ್ಕಳ ವಿಕಾಸಕ್ಕೆ ಒತ್ತಡ ರಹಿತ ಕಲಿಕೆಯ ವಾತಾವರಣ ಅಗತ್ಯ
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಕಾಫಿ ಮಂಡಳಿ ನಿರ್ದೇಶಕ ತಳೂರು ಕಿಶೋರ್ ಕುಮಾರ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ನ ಪವನ್ ಮೊಣ್ಣಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕಾಫಿ ಬೆಳೆಗಾರ ವಿನೋದ್ ಶಿವಪ್ಪ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಉಪಾಧ್ಯಕ್ಷ ಮಹೇಶ್ ಜೈನಿ, ಅರುಣ್ ಶೆಟ್ಟಿ, ಸಬಿತಾ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆ.ಪಿ. ಚಂದ್ರಕಲಾ, ದಿವ್ಯ ಮಂತರ್ ಗೌಡ, ಕಾಫಿ ಮಂಡಳಿಯ ಉಪ ನಿರ್ದೇಶಕ ವೆಂಕಟ್ ರೆಡ್ಡಿ, ಚಂದ್ರಶೇಖರ್ ಸೇರಿದಂತೆ ಹಲವರು ಇದ್ದರು.




