ರ‍್ಯಾಂಕ್ ಸಾಮರ್ಥ್ಯದ ಮಾನದಂಡವಲ್ಲ: ಮಕ್ಕಳ ವಿಕಾಸಕ್ಕೆ ಒತ್ತಡ ರಹಿತ ಕಲಿಕೆಯ ವಾತಾವರಣ ಅಗತ್ಯ

Date:

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು, ರ‍್ಯಾಂಕ್ ಪಡೆಯುವುದು ಅಥವಾ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸುವುದಷ್ಟೇ ಅಲ್ಲ. ಶಿಕ್ಷಣದ ನಿಜವಾದ ಉದ್ದೇಶ ಮಗುವಿನ ಜ್ಞಾನ, ಚಿಂತನಾ ಶಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ, ಸಾಮಾಜಿಕ ಪ್ರಜ್ಞೆ ಹಾಗೂ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯುವ ಸಾಮರ್ಥ್ಯವನ್ನು ಬೆಳೆಸುವುದು. ಆದರೆ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕ, ರ‍್ಯಾಂಕ್ ಮತ್ತು ಶೇ.100ರ ಫಲಿತಾಂಶದ ಸುತ್ತ ಮಕ್ಕಳ ಬದುಕು ಸುತ್ತುವರಿಯುತ್ತಿರುವುದು ಆತಂಕಕಾರಿ ಬೆಳವಣಿಗೆ.

- Advertisement -

ಶಾಲೆಯ ಹೆಸರಿನಲ್ಲಿ ಉತ್ತಮ ಫಲಿತಾಂಶ ತರುವ ಒತ್ತಡ, ಪೋಷಕರ ನಿರೀಕ್ಷೆ, ಶಿಕ್ಷಕರ ಗುರಿ, ಸಹಪಾಠಿಗಳೊಂದಿಗೆ ಹೋಲಿಕೆ-ಇವೆಲ್ಲವೂ ಸೇರಿ ಮಗುವಿನ ಮೇಲೆ ನಿರಂತರ ಒತ್ತಡವನ್ನು ಸೃಷ್ಟಿಸುತ್ತವೆ. ಓದುವಿಕೆ ಆನಂದವಾಗಬೇಕಾದ ಜಾಗದಲ್ಲಿ ಅದು ಭಯದ ವಿಷಯವಾಗಬಾರದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನದಲ್ಲಿ ಇಂಪೀಚ್‌ಮೆಂಟ್‌ ಮೂಲಕ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು...

ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಅವರಿಗೆ 2023ರ ಕಾಯ್ದೆಯ ಮೂಲಕ ಸರ್ಕಾರ ಕಾನೂನು ರಕ್ಷಣೆ ಕೊಟ್ಟಿರಬಹುದು, ಆದರೆ ಅವರಿಗೆ ಯಾವುದೇ ರೀತಿಯ ಸಾಂವಿಧಾನಿಕ ರಕ್ಷಣೆ ಇಲ್ಲ. ಹಾಗಾಗಿ ಅವರು ತಾವಾಗಿಯೇ ರಾಜೀನಾಮೆ...

ದಿಕ್ಕು ತೋಚದೆ ತಬ್ಬಿಬ್ಬಾಗಿರುವ ಚುನಾವಣಾ ಆಯೋಗ: ದಿನೇ ದಿನೆ...

ಸೆಪ್ಟೆಂಬರ್ 23ರ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯ ವರದಿಯ ನಂತರ ಆಯೋಗ ಹಲವು ಸ್ಪಷ್ಟನೆಗಳನ್ನು ನೀಡಿದ್ದರೂ, ಒಂದು ಮುಖ್ಯ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ: ಕಾನೂನುಬದ್ಧವಾಗಿ ಮತದಾರರ ಪಟ್ಟಿಯಲ್ಲಿದ್ದ 16 ಲಕ್ಷಕ್ಕೂ ಹೆಚ್ಚು ಜನರ...

ಸ್ಟಿಂಗ್ ಆಪರೇಷನ್ | ಭ್ರಷ್ಟಾಚಾರ ಬಯಲಿಗೆಳೆಯುವ ಸಾಧನವಾಗಬೇಕೇ ವಿನಾ...

ಆಡಳಿತ ಪಕ್ಷವನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲಭೂತ ಕರ್ತವ್ಯ. ಆದರೆ, ವಿರೋಧ ಪಕ್ಷಗಳಿಗೂ ತಮ್ಮ ಆರೋಪಗಳನ್ನು ಸಮರ್ಥಿಸುವ ಹೊಣೆಗಾರಿಕೆ ಇದೆ. ರಾಜಕೀಯ ಲಾಭಕ್ಕಾಗಿ ಗಂಭೀರ ಆರೋಪಗಳನ್ನು ಮುಂದಿಡುವುದು ಮತ್ತು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು...

ರ‍್ಯಾಂಕ್ ವಿದ್ಯಾರ್ಥಿಯ ಸಾಮರ್ಥ್ಯದ ಮಾನದಂಡವಲ್ಲ

ಒಬ್ಬ ವಿದ್ಯಾರ್ಥಿ ಹೆಚ್ಚು ಅಂಕ ಗಳಿಸಿದ್ದಾನೆ ಎಂದರೆ ಆತನಿಗೆ ಶೈಕ್ಷಣಿಕವಾಗಿ ಉತ್ತಮ ಸಾಮರ್ಥ್ಯವಿದೆ ಎಂಬುದನ್ನು ಹೇಳಬಹುದು. ಆದರೆ, ಅದೊಂದೇ ಆತನ ಸಂಪೂರ್ಣ ಪ್ರತಿಭೆಯ ಅಳತೆಯಾಗಲು ಸಾಧ್ಯವಿಲ್ಲ. ಒಬ್ಬ ಮಗು ಗಣಿತದಲ್ಲಿ ಉತ್ತಮವಾಗಿರಬಹುದು. ಮತ್ತೊಬ್ಬ ಭಾಷೆಯಲ್ಲಿ, ಇನ್ನೊಬ್ಬ ಕ್ರೀಡೆಯಲ್ಲಿ, ಮತ್ತೊಬ್ಬ ಸಂಗೀತ ಅಥವಾ ಚಿತ್ರಕಲೆಯಲ್ಲಿ, ಇನ್ನೊಬ್ಬ ನಾಯಕತ್ವದಲ್ಲಿ, ಮತ್ತೊಬ್ಬ ಹೊಸ ವಿಚಾರಗಳನ್ನು ಯೋಚಿಸುವಲ್ಲಿ ಪ್ರತಿಭಾವಂತನಾಗಿರಬಹುದು.

ಆದ್ದರಿಂದ, ಮಕ್ಕಳನ್ನು ಕೇವಲ ಅಂಕಗಳ ಆಧಾರದ ಮೇಲೆ ಅಳೆಯುವ ಬದಲು ‘ಈ ಮಗುವಿನ ವಿಶೇಷ ಸಾಮರ್ಥ್ಯ ಏನು?’ ಎಂಬ ಪ್ರಶ್ನೆಯನ್ನು ಕೇಳುವ ಶಿಕ್ಷಣ ವ್ಯವಸ್ಥೆ ಅಗತ್ಯ. ರಾಂಕ್ ಪಡೆಯುವ ಮಕ್ಕಳು ಮಾತ್ರ ಮಾದರಿ, ಉಳಿದವರು ಕಡಿಮೆ ಎಂಬ ಮನೋಭಾವನೆ ಮಕ್ಕಳಲ್ಲಿ ಶ್ರೇಣೀಕರಣದ ಭಾವನೆ ಮೂಡಿಸುತ್ತದೆ. ಇದು ಕಲಿಕೆಯಲ್ಲಿ ಆಸಕ್ತಿ ಕಡಿಮೆ ಇರುವ ಮಕ್ಕಳ ಆತ್ಮವಿಶ್ವಾಸಕ್ಕೆ ಧಕ್ಕೆಯಾಗಬಹುದು.

ಓದುವುದು ಎಂದರೆ ಕಷ್ಟಪಡುವುದಲ್ಲ, ಇಷ್ಟಪಡುವುದು

‘ಓದು, ಓದು, ಓದು’ ಎಂದು ನಿರಂತರವಾಗಿ ಹೇಳುವುದರಿಂದ ಮಾತ್ರ ಮಗುವಿನಲ್ಲಿ ಓದುವ ಆಸಕ್ತಿ ಮೂಡುವುದಿಲ್ಲ. ಓದಿನ ಮಹತ್ವವನ್ನು ಮಗುವಿಗೆ ಅರ್ಥವಾಗುವಂತೆ ಮಾಡಬೇಕು. ಪುಸ್ತಕ ಓದುವುದರಿಂದ ಏನು ಸಿಗುತ್ತದೆ? ಜ್ಞಾನ ಹೇಗೆ ವಿಸ್ತರಿಸುತ್ತದೆ? ಕಥೆ, ವಿಜ್ಞಾನ, ಇತಿಹಾಸ, ಸಾಹಿತ್ಯ, ಕ್ರೀಡೆ, ಪ್ರಕೃತಿ-ಇವುಗಳೊಂದಿಗೆ ಪುಸ್ತಕದ ಮೂಲಕ ಹೇಗೆ ಪರಿಚಯವಾಗಬಹುದು? ಎಂಬುದನ್ನು ಮಗುವಿಗೆ ಅನುಭವದ ಮೂಲಕ ತಿಳಿಸಬೇಕು. ಮಕ್ಕಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವ ವಾತಾವರಣ ನಿರ್ಮಿಸುವುದು ಮುಖ್ಯ. ಮನೆಯಲ್ಲೂ ಶಾಲೆಯಲ್ಲೂ ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕು. ಗ್ರಂಥಾಲಯವನ್ನು ಪರೀಕ್ಷೆಗೆ ಮುನ್ನ ಬಳಸುವ ಸ್ಥಳವನ್ನಾಗಿ ನೋಡದೆ, ಪ್ರತಿದಿನ ಹೊಸ ಜಗತ್ತನ್ನು ಪರಿಚಯಿಸುವ ಸ್ಥಳವನ್ನಾಗಿ ಮಾಡಬೇಕು.

ಎಲ್ಲ ಮಕ್ಕಳು ಒಂದೇ ರೀತಿ ಇರುವುದಿಲ್ಲ

ತರಗತಿಯಲ್ಲಿ ಕುಳಿತಿರುವ ಎಲ್ಲ ಮಕ್ಕಳು ಒಂದೇ ರೀತಿಯವರಲ್ಲ. ಒಬ್ಬ ಮಗು ಹೆಚ್ಚು ಮಾತನಾಡಬಹುದು. ಇನ್ನೊಬ್ಬ ಮಗು ಮೌನವಾಗಿರಬಹುದು. ಒಬ್ಬ ಆಟದಲ್ಲಿ ಚುರುಕಾಗಿರಬಹುದು. ಇನ್ನೊಬ್ಬ ಚಿತ್ರಕಲೆಯಲ್ಲಿ ತಲ್ಲೀನನಾಗಿರಬಹುದು. ಮತ್ತೊಬ್ಬ ನಾಯಕತ್ವ ವಹಿಸಬಹುದು. ಇನ್ನೊಬ್ಬ ಪ್ರಶ್ನೆಗಳನ್ನು ಕೇಳುವುದರಲ್ಲಿ ಆಸಕ್ತಿ ಹೊಂದಿರಬಹುದು. ಇನ್ನೊಬ್ಬ ಮಗು ತರಗತಿಯಲ್ಲಿ ಗಮನ ಕೊಡದಂತೆ ಕಾಣಬಹುದು. ಆದರೆ, ಅದರ ಹಿಂದೆ ಬೇರೆ ಆಸಕ್ತಿ, ಕಲಿಕೆಯ ವಿಭಿನ್ನ ವಿಧಾನ, ಕುಟುಂಬದ ಪರಿಸ್ಥಿತಿ ಅಥವಾ ಇತರ ಕಾರಣಗಳಿರಬಹುದು. ಹೀಗಾಗಿ, ‘ಓದುವುದಿಲ್ಲ’ ಎಂಬ ಒಂದೇ ಪದದಿಂದ ಮಗುವನ್ನು ಗುರುತಿಸುವುದು ಸೂಕ್ತವಲ್ಲ. ‘ಏಕೆ ಓದುತ್ತಿಲ್ಲ?’ ಎಂಬ ಪ್ರಶ್ನೆಯ ಜೊತೆಗೆ ‘ಯಾವುದರಲ್ಲಿ ಆಸಕ್ತಿ ಇದೆ?’ ಎಂಬ ಪ್ರಶ್ನೆಯನ್ನೂ ಕೇಳಬೇಕು.

ಶಿಕ್ಷಕರ ಪಾತ್ರ ಕೇವಲ ಪಾಠ ಹೇಳುವುದಕ್ಕೆ ಸೀಮಿತವಲ್ಲ

ಮಕ್ಕಳು ತಮ್ಮ ಜಾಗೃತಿಯ ಬಹುಮುಖ್ಯ ಸಮಯವನ್ನು ಶಾಲೆಯಲ್ಲಿ ಕಳೆಯುತ್ತಾರೆ. ಬೆಳಿಗ್ಗೆ ಶಾಲೆಗೆ ಬರುವುದರಿಂದ ಸಂಜೆ ಮನೆಗೆ ತೆರಳುವವರೆಗೂ ಅವರ ಕಲಿಕೆ, ಆಟ, ಸ್ನೇಹ, ಸಂವಹನ ಮತ್ತು ವರ್ತನೆಯ ಹಲವು ಆಯಾಮಗಳನ್ನು ಶಿಕ್ಷಕರು ಗಮನಿಸುತ್ತಾರೆ.

ಪೋಷಕರಿಗೆ ಕಾಣದ ಕೆಲವು ಬದಲಾವಣೆಗಳು ಶಿಕ್ಷಕರ ಗಮನಕ್ಕೆ ಬರಬಹುದು. ಯಾವ ಮಗು ಏಕಾಏಕಿ ಮೌನವಾಗಿದೆ? ಯಾರು ಸ್ನೇಹಿತರಿಂದ ದೂರವಾಗುತ್ತಿದ್ದಾರೆ? ಯಾರು ಸದಾ ಭಯದಿಂದಿರುತ್ತಾರೆ? ಯಾರು ಪ್ರಶ್ನೆ ಕೇಳಲು ಹಿಂಜರಿಯುತ್ತಾರೆ? ಯಾರು ಓದಿನಲ್ಲಿ ಮಾತ್ರವಲ್ಲದೆ ಬೇರೆ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ತೋರಿಸುತ್ತಿದ್ದಾರೆ? ಇಂತಹ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸುವುದು ಶಿಕ್ಷಕರ ಪ್ರಮುಖ ಜವಾಬ್ದಾರಿ. ಆದ್ದರಿಂದ, ಶಿಕ್ಷಕನು ಕೇವಲ ಪಾಠ ಬೋಧಕನಲ್ಲ; ಮಗುವಿನ ಕಲಿಕೆಯ ಸಹಯಾತ್ರಿ, ಮಾರ್ಗದರ್ಶಕ ಮತ್ತು ಅಗತ್ಯವಿದ್ದಾಗ ಆಲಿಸುವ ವ್ಯಕ್ತಿಯೂ ಆಗಬೇಕು.

‘ಓದುವುದಿಲ್ಲ’ ಎನ್ನುವ ಮಗುವಿನ ಹಿಂದೆ ಏನಿದೆ?

ಒಬ್ಬ ಮಗು ಓದಿನಲ್ಲಿ ಹಿಂದುಳಿದರೆ ತಕ್ಷಣವೇ ಸೋಮಾರಿ, ಅಲಕ್ಷ್ಯ ಅಥವಾ ಬುದ್ಧಿ ಕಡಿಮೆ ಎಂದು ತೀರ್ಮಾನಿಸಬಾರದು. ಅವನಿಗೆ ವಿಷಯ ಅರ್ಥವಾಗುತ್ತಿಲ್ಲವೇ? ಕಲಿಕೆಯ ವಿಧಾನ ಅವನಿಗೆ ಹೊಂದಿಕೆಯಾಗುತ್ತಿಲ್ಲವೇ? ಆತನಿಗೆ ಬೇರೆ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯಿದೆಯೇ? ಸಹಪಾಠಿಗಳ ಮುಂದೆ ಆತ್ಮವಿಶ್ವಾಸ ಕಡಿಮೆಯಾಗಿದೆಯೇ? ಮನೆಯಲ್ಲಿ ಯಾವುದಾದರೂ ಒತ್ತಡವಿದೆಯೇ? ಶಿಕ್ಷಕರನ್ನು ಅಥವಾ ಪರೀಕ್ಷೆಯನ್ನು ಆತ ಭಯಪಡುತ್ತಿದ್ದಾನೆಯೇ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಮುಖ್ಯ. ಓದಿನಲ್ಲಿ ಹಿಂದುಳಿದ ಮಗುವಿಗೆ ಹೆಚ್ಚಿನ ಸಮಯ, ಹೆಚ್ಚುವರಿ ಮಾರ್ಗದರ್ಶನ ಮತ್ತು ಮುಖ್ಯವಾಗಿ ಆತ್ಮಸ್ಥೈರ್ಯ ಬೇಕಾಗುತ್ತದೆ. ಎಲ್ಲರ ಮುಂದೆ ಅವಮಾನಿಸುವುದು ಅಥವಾ ಉತ್ತಮ ಅಂಕ ಪಡೆದವರೊಂದಿಗೆ ಹೋಲಿಸುವುದು ಪರಿಹಾರವಲ್ಲ.

ಪೋಷಕರು ಮಕ್ಕಳನ್ನು ಹೋಲಿಸಬಾರದು

‘ನೋಡು, ಅವನು ಎಷ್ಟು ಅಂಕ ಪಡೆದಿದ್ದಾನೆ.’ ‘ಅವಳು ಯಾವಾಗಲೂ ಮೊದಲ ರಾಂಕ್.’ ‘ನೀನು ಯಾಕೆ ಹಾಗೆ ಓದುವುದಿಲ್ಲ?’. ಇಂತಹ ಮಾತುಗಳು ದೊಡ್ಡವರ ದೃಷ್ಟಿಯಲ್ಲಿ ಪ್ರೋತ್ಸಾಹದ ಮಾತಾಗಿರಬಹುದು. ಆದರೆ, ಮಗುವಿನ ಮನಸ್ಸಿನಲ್ಲಿ ಅವು ‘ನಾನು ಸಾಕಷ್ಟು ಉತ್ತಮವಲ್ಲ’ ಎಂಬ ಭಾವನೆಯನ್ನು ಹುಟ್ಟಿಸಬಹುದು. ಪೋಷಕರಿಗೆ ಮಕ್ಕಳಿಂದ ನಿರೀಕ್ಷೆ ಇರುವುದು ಸಹಜ. ಆದರೆ, ನಿರೀಕ್ಷೆ ಮತ್ತು ಒತ್ತಡದ ನಡುವೆ ವ್ಯತ್ಯಾಸವಿದೆ. ಮಗುವಿನೊಂದಿಗೆ ಹೋಲಿಕೆ ಮಾಡುವ ಬದಲು ‘ನಿನ್ನೆಗಿಂತ ಇಂದು ಏನು ಕಲಿತೆ?’ ಎಂದು ಕೇಳುವುದು ಹೆಚ್ಚು ಆರೋಗ್ಯಕರ. ಇತರರೊಂದಿಗೆ ಸ್ಪರ್ಧೆಗಿಂತ ತನ್ನದೇ ಪ್ರಗತಿಯನ್ನು ಗಮನಿಸುವಂತೆ ಮಾಡಬೇಕು.

ಶಾಲಾ ಶುಲ್ಕ ಕಟ್ಟಿದ್ದೇವೆ ಎನ್ನುವುದು ಓದಿನ ಮೇಲೆ ಹಕ್ಕು ಕೊಡುವುದಿಲ್ಲ

ಕೆಲವೊಮ್ಮೆ ಪೋಷಕರು ಶಾಲಾ ಶುಲ್ಕ, ಪುಸ್ತಕ, ಸಮವಸ್ತ್ರ, ತರಬೇತಿ, ಹೆಚ್ಚುವರಿ ತರಗತಿಗಳಿಗೆ ಖರ್ಚು ಮಾಡಿರುವುದನ್ನು ಮಗುವಿನ ಮುಂದೆ ಪದೇಪದೇ ಹೇಳುತ್ತಾರೆ. ‘ಇಷ್ಟೆಲ್ಲಾ ಹಣ ಖರ್ಚು ಮಾಡುತ್ತಿದ್ದೇವೆ, ನೀನು ಓದುವುದಿಲ್ಲ.’ ಈ ರೀತಿಯ ಮಾತುಗಳು ಮಗುವಿನಲ್ಲಿ ಶಿಕ್ಷಣದ ಬಗ್ಗೆ ಪ್ರೀತಿ ಬೆಳೆಸುವುದಿಲ್ಲ. ಬದಲಾಗಿ, ಓದು ಎಂದರೆ ಪೋಷಕರ ಹಣಕ್ಕೆ ಪ್ರತಿಯಾಗಿ ಕೊಡಬೇಕಾದ ಫಲಿತಾಂಶ ಎಂಬ ತಪ್ಪು ಕಲ್ಪನೆ ಮೂಡಬಹುದು. ಶಿಕ್ಷಣವು ಹಣ ಅಥವಾ ಕುಟುಂಬದ ಪ್ರತಿಷ್ಠೆಯ ಪ್ರದರ್ಶನವಲ್ಲ. ಅದು ಮಗುವಿನ ವ್ಯಕ್ತಿತ್ವ ಮತ್ತು ಭವಿಷ್ಯ ರೂಪಿಸುವ ಪ್ರಕ್ರಿಯೆ.

ಮನೆಗೆ ಬಂದ ತಕ್ಷಣ ಹೋಂವರ್ಕ್‌ಗಿಂತ ಮೊದಲು ಮಾತುಕತೆ ಬೇಕು

ಬೆಳಿಗ್ಗೆಯಿಂದ ಸಂಜೆವರೆಗೆ ಶಾಲೆಯಲ್ಲಿದ್ದ ಮಗು ಮನೆಗೆ ಬರುವಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸಗೊಂಡಿರಬಹುದು. ಮನೆಗೆ ಬಂದ ತಕ್ಷಣ-ಹೋಂವರ್ಕ್ ಮಾಡು. ನಾಳೆಗೆ ಓದಿಕೊಂಡೆಯಾ?. ಪರೀಕ್ಷೆ ಯಾವಾಗ?. ಎಷ್ಟು ಅಧ್ಯಾಯ ಮುಗಿಸಿದೆ?. ಎಂದು ಪ್ರಶ್ನಿಸುವುದಕ್ಕಿಂತ ಮೊದಲು, ಇವತ್ತು ಶಾಲೆಯಲ್ಲಿ ಹೇಗಿತ್ತು?. ಯಾರ ಜೊತೆ ಆಟ ಆಡಿದೆ?. ಏನಾದರೂ ತೊಂದರೆ ಆಯಿತೇ?. ಹೊಸದಾಗಿ ಏನು ಕಲಿತೆ?. ಎಂದು ಕೇಳುವ ಅಭ್ಯಾಸ ಬೆಳೆಸಬಹುದು. ಮಗುವಿನ ದಿನವನ್ನು ಕೇಳಿಸಿಕೊಳ್ಳುವ ಪೋಷಕರಾಗುವುದು, ಕೇವಲ ಓದಿನ ಮೇಲ್ವಿಚಾರಣೆ ಮಾಡುವ ಪೋಷಕರಾಗುವುದಕ್ಕಿಂತ ಮುಖ್ಯ.

ಮನೆ ಮಗುವಿಗೆ ಎರಡನೇ ಶಾಲೆಯಾಗಬಾರದು

ಶಾಲೆಯ ನಂತರವೂ ಮನೆ ಮತ್ತೊಂದು ತರಗತಿಯಾಗಿ ಬದಲಾಗಬಾರದು. ಮನೆಯಲ್ಲಿ ಪ್ರೀತಿ, ವಿಶ್ರಾಂತಿ, ಸಂಭಾಷಣೆ ಮತ್ತು ಆಟಕ್ಕೂ ಜಾಗ ಇರಬೇಕು. ಮಕ್ಕಳಿಗೆ ವಯಸ್ಸಿಗೆ ತಕ್ಕ ವಿಶ್ರಾಂತಿ, ನಿದ್ರೆ, ದೈಹಿಕ ಚಟುವಟಿಕೆ, ಕುಟುಂಬದೊಂದಿಗೆ ಸಮಯ ಮತ್ತು ಸ್ನೇಹಿತರೊಂದಿಗೆ ಆರೋಗ್ಯಕರ ಸಂವಹನ ಅಗತ್ಯ. ಮನೆಗೆ ಬಂದ ಕೂಡಲೇ ನಿರಂತರವಾಗಿ ಓದುವಂತೆ ಮಾಡುವುದರಿಂದ ಕಲಿಕೆ ಉತ್ತಮವಾಗುತ್ತದೆ ಎಂಬುದು ಅನಿವಾರ್ಯವಲ್ಲ. ಸಮತೋಲಿತ ದಿನಚರಿಯೇ ದೀರ್ಘಕಾಲೀನ ಕಲಿಕೆಗೆ ಸಹಾಯಕ.

ಆಟವೂ ಶಿಕ್ಷಣದ ಒಂದು ಭಾಗ

‘ಆಟ ಆಡಬೇಡ, ಓದು’ ಎಂಬ ಮನೋಭಾವದಿಂದ ಮಕ್ಕಳ ಸಹಜ ಬೆಳವಣಿಗೆಯನ್ನು ಸೀಮಿತಗೊಳಿಸಬಾರದು. ಆಟದಿಂದ ದೈಹಿಕ ಚಟುವಟಿಕೆಯಷ್ಟೇ ಅಲ್ಲದೆ ತಂಡದ ಕೆಲಸ, ನಿಯಮ ಪಾಲನೆ, ಸೋಲು-ಗೆಲುವನ್ನು ಸ್ವೀಕರಿಸುವ ಗುಣ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸಾಮಾಜಿಕ ಸಂವಹನದಂತಹ ಹಲವು ಕೌಶಲ್ಯಗಳು ಬೆಳೆಯುತ್ತವೆ. ಆದ್ದರಿಂದ, ಶಿಕ್ಷಣದ ಹಕ್ಕಿನಷ್ಟೇ ಆಟವೂ ಮಗುವಿನ ಬೆಳವಣಿಗೆಯ ಪ್ರಮುಖ ಭಾಗ ಎಂಬ ಅರಿವು ಅಗತ್ಯ.

ಫಲಿತಾಂಶ ಬಂದಾಗ ಸೋಲು-ಗೆಲುವಿನ ಭಾಷೆ ಬೇಡ

ಪರೀಕ್ಷೆಯ ಫಲಿತಾಂಶ ಪ್ರಕಟವಾಗುವ ಸಮಯದಲ್ಲಿ ಕೆಲವು ಮಕ್ಕಳು ಸಂತೋಷಪಡುತ್ತಾರೆ. ಕೆಲವರು ನಿರಾಶರಾಗುತ್ತಾರೆ. ಇನ್ನೂ ಕೆಲವರು ಭಯಪಡಬಹುದು. ಫೇಲಾದ ಅಥವಾ ನಿರೀಕ್ಷಿತ ಅಂಕ ಪಡೆಯದ ಮಗುವಿಗೆ ‘ಎಲ್ಲವೂ ಮುಗಿದುಹೋಯಿತು’ ಎಂಬ ಭಾವನೆ ಮೂಡದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಅಂಕ ಕಡಿಮೆಯಾಗಿದೆ ಎಂದರೆ ಮಗುವಿನ ಜೀವನದ ಅವಕಾಶಗಳು ಮುಗಿದವು ಎಂದಲ್ಲ. ಲಭ್ಯವಿರುವ ನಿಯಮಾನುಸಾರ ಮರುಪರೀಕ್ಷೆ, ಮುಂದಿನ ಶಿಕ್ಷಣದ ಆಯ್ಕೆಗಳು, ವೃತ್ತಿಪರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಮಾರ್ಗಗಳಿವೆ. ಅಂತಹ ಸಂದರ್ಭದಲ್ಲಿ ಮೊದಲು ಮಗುವನ್ನು ಕೇಳಬೇಕು; ನಂತರ ಪರಿಹಾರ ಹುಡುಕಬೇಕು. ಅಗತ್ಯವಿದ್ದರೆ ಶಾಲಾ ಕೌನ್ಸೆಲರ್, ಮನೋವೈಜ್ಞಾನಿಕ ತಜ್ಞರು ಅಥವಾ ಸಂಬಂಧಿತ ವೃತ್ತಿಪರರ ನೆರವು ಪಡೆಯುವುದು ಸೂಕ್ತ.

ಫಲಿತಾಂಶದ ದಿನಗಳಲ್ಲಿ ವಿಶೇಷ ಕಾಳಜಿ ಅಗತ್ಯ

ಫಲಿತಾಂಶ ಪ್ರಕಟವಾಗುವ ದಿನಗಳಲ್ಲಿ ಶಾಲೆ ಮತ್ತು ಮನೆ ಎರಡೂ ಸುರಕ್ಷಿತ ಸಂಭಾಷಣೆಯ ವಾತಾವರಣ ಹೊಂದಿರಬೇಕು. ಮಗುವಿನ ಅಂಕವನ್ನು ಎಲ್ಲರ ಮುಂದೆ ಚರ್ಚಿಸುವುದು, ಹಾಸ್ಯ ಮಾಡುವುದು, ಅವಮಾನಿಸುವುದು ಅಥವಾ ಇತರರೊಂದಿಗೆ ಹೋಲಿಸುವುದನ್ನು ತಪ್ಪಿಸಬೇಕು. ‘ಈ ಫಲಿತಾಂಶದಿಂದ ಏನು ಕಲಿತೆವು?’, ಮುಂದಿನ ಬಾರಿ ಏನು?, ಹೇಗೆ ಬದಲಾಯಿಸಬಹುದು?, ನಿನಗೆ ಯಾವ ಸಹಾಯ ಬೇಕು? ಎಂಬ ಪ್ರಶ್ನೆಗಳು ಮಗುವನ್ನು ಮುಂದಕ್ಕೆ ಕರೆದೊಯ್ಯುತ್ತವೆ.

ಓದಿನಲ್ಲಿ ‘ಅಸ್ಪೃಶ್ಯತೆ’ ಇರಬಾರದು

ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಒಂದು ಕಡೆ, ಓದಿನಲ್ಲಿ ಹಿಂದುಳಿದ ಮಕ್ಕಳು ಇನ್ನೊಂದು ಕಡೆ ಎಂಬಂತೆ ಮನಸ್ಸಿನ ಗೋಡೆ ನಿರ್ಮಾಣವಾಗಬಾರದು. ಹೆಚ್ಚು ಅಂಕ ಪಡೆದ ಮಗು ಗೌರವಕ್ಕೆ ಅರ್ಹವಾದಂತೆ, ಕಡಿಮೆ ಅಂಕ ಪಡೆದ ಮಗು ಕೂಡ ಗೌರವಕ್ಕೆ ಅರ್ಹ. ತರಗತಿಯಲ್ಲಿ ಉತ್ತರ ಹೇಳುವಾಗ ತಲೆ ಎತ್ತಿ ಮಾತನಾಡುವ ಮಗುವಿನಷ್ಟೇ, ಉತ್ತರ ತಿಳಿದಿದ್ದರೂ ಕೈ ಎತ್ತಲು ಹಿಂಜರಿಯುವ ಮಗುವಿಗೂ ಅವಕಾಶ ನೀಡಬೇಕು. ಅಂಕಗಳ ಆಧಾರದ ಮೇಲೆ ಮಕ್ಕಳ ಗೌರವವನ್ನು ಅಳೆಯುವುದು ಶಿಕ್ಷಣದ ಉದ್ದೇಶವಲ್ಲ. ಪ್ರತಿಯೊಂದು ಮಗುವಿನ ಆಸಕ್ತಿಯನ್ನು ಗುರುತಿಸಬೇಕು.

ಮಗು ಓದಿನಲ್ಲಿ ಸರಾಸರಿಯಾಗಿರಬಹುದು. ಆದರೆ ಕ್ರೀಡೆಯಲ್ಲಿ ಅತ್ಯುತ್ತಮವಾಗಿರಬಹುದು. ಮತ್ತೊಬ್ಬನಿಗೆ ಸಾಹಿತ್ಯದಲ್ಲಿ ಆಸಕ್ತಿ ಇರಬಹುದು. ಇನ್ನೊಬ್ಬನಿಗೆ ನೃತ್ಯ, ಸಂಗೀತ, ಚಿತ್ರಕಲೆ, ತಂತ್ರಜ್ಞಾನ, ಕೃಷಿ, ಪ್ರಕೃತಿ ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಇರಬಹುದು. ಆ ಆಸಕ್ತಿಯನ್ನು ಗುರುತಿಸಿ ಸರಿಯಾದ ದಿಕ್ಕಿನಲ್ಲಿ ಬೆಳೆಸುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿ. ಆದರೆ, ಮಗುವಿನ ಆಸಕ್ತಿಯನ್ನು ಗುರುತಿಸುವುದು ಎಂದರೆ ಓದನ್ನು ಸಂಪೂರ್ಣ ನಿರ್ಲಕ್ಷಿಸುವುದಲ್ಲ. ಮೂಲಭೂತ ಶಿಕ್ಷಣದ ಜೊತೆಗೆ ಅದರ ವಿಶೇಷ ಪ್ರತಿಭೆಯನ್ನು ಬೆಳೆಸುವ ಸಮತೋಲನದ ಮಾರ್ಗ ಅಗತ್ಯ.

ಮಕ್ಕಳಿಗೆ ಆಯ್ಕೆಯ ಹಕ್ಕಿನ ಅರಿವು ಬೇಕು

ಮಕ್ಕಳ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಅವರ ಆಸಕ್ತಿ ಮತ್ತು ಸಾಮರ್ಥ್ಯವನ್ನು ಕೇಳಿಸಿಕೊಳ್ಳುವುದು ಮುಖ್ಯ. ಪೋಷಕರ ಅಪೂರ್ಣ ಕನಸುಗಳನ್ನು ಮಕ್ಕಳ ಮೇಲೆ ಹೇರಬಾರದು. ‘ನಾನು ಆಗಲಿಲ್ಲ, ನೀನು ಆಗಬೇಕು’ ಎಂಬ ಮನೋಭಾವನೆಯ ಬದಲು ‘ನಿನಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ?’ ಎಂಬ ಪ್ರಶ್ನೆ ಕೇಳಬೇಕು. ತಪ್ಪು ಆಯ್ಕೆ ಮಾಡಿದರೆ ತಿಳಿಹೇಳಬೇಕು. ಗೊಂದಲದಲ್ಲಿದ್ದರೆ ಮಾರ್ಗದರ್ಶನ ನೀಡಬೇಕು. ಆದರೆ, ಪ್ರತಿಯೊಂದು ನಿರ್ಧಾರವನ್ನೂ ಮಗುವಿನ ಪರವಾಗಿ ದೊಡ್ಡವರು ತೆಗೆದುಕೊಳ್ಳುವಂತಾಗಬಾರದು.

ಶಿಕ್ಷಕ-ಪೋಷಕರ ನಡುವೆ ನಿರಂತರ ಸಂವಹನ ಇರಲಿ

ಮಗು ಶಾಲೆಯಲ್ಲಿ ಹೇಗಿದೆ ಎಂಬುದನ್ನು ಶಿಕ್ಷಕರು ಹೇಳಬೇಕು. ಮನೆಯಲ್ಲಿ ಮಗುವಿನ ವರ್ತನೆ ಹೇಗಿದೆ ಎಂಬುದನ್ನು ಪೋಷಕರು ಶಿಕ್ಷಕರೊಂದಿಗೆ ಹಂಚಿಕೊಳ್ಳಬೇಕು. ಇದು ಕೇವಲ ಅಂಕಗಳ ಚರ್ಚೆಯಾಗಬಾರದು. ಮಗುವಿನ ಆಸಕ್ತಿ, ಸ್ನೇಹ, ವರ್ತನೆ, ಕಲಿಕೆಯ ವಿಧಾನ, ಆತ್ಮವಿಶ್ವಾಸ, ಹಾಜರಾತಿ, ತರಗತಿಯಲ್ಲಿನ ಭಾಗವಹಿಸುವಿಕೆ ಮತ್ತು ಅಗತ್ಯವಿರುವ ಬೆಂಬಲದ ಕುರಿತು ಪೋಷಕರು-ಶಿಕ್ಷಕರು ಪರಸ್ಪರ ಸಂವಹನ ನಡೆಸಬೇಕು. ಮಗುವಿನ ಬಗ್ಗೆ ಶಿಕ್ಷಕ ಮತ್ತು ಪೋಷಕರ ನಡುವೆ ಸಾಮಾನ್ಯ ಅರಿವು ಮೂಡಿದಾಗ ಮಗುವಿಗೆ ಸಮಗ್ರ ಬೆಂಬಲ ದೊರೆಯುತ್ತದೆ.

ಮಕ್ಕಳಿಗೆ ‘ಸುರಕ್ಷಿತ ವ್ಯಕ್ತಿ’ ಬೇಕು

ಪ್ರತಿಯೊಬ್ಬ ಮಗುವಿಗೂ ತನ್ನ ಮಾತನ್ನು ಭಯವಿಲ್ಲದೆ ಹೇಳಿಕೊಳ್ಳಬಹುದಾದ ಕನಿಷ್ಠ ಒಬ್ಬ ದೊಡ್ಡವರು ಇರಬೇಕು-ಅದು ಪೋಷಕರಾಗಿರಬಹುದು, ಶಿಕ್ಷಕರಾಗಿರಬಹುದು ಅಥವಾ ಕುಟುಂಬದ ವಿಶ್ವಾಸಾರ್ಹ ವ್ಯಕ್ತಿಯಾಗಿರಬಹುದು. ನಾನು ತಪ್ಪು ಮಾಡಿದ್ದರೂ ಹೇಳಬಹುದು. ನನ್ನ ಅಂಕ ಕಡಿಮೆಯಾದರೂ ನನ್ನ ಮಾತು ಕೇಳುತ್ತಾರೆ. ನನ್ನ ಸಮಸ್ಯೆಯನ್ನು ಮೊದಲು ಅರ್ಥಮಾಡಿಕೊಳ್ಳುತ್ತಾರೆ. ಎಂಬ ಭಾವನೆ ಮಗುವಿನಲ್ಲಿ ಬೆಳೆದರೆ ಅದು ಸಮಸ್ಯೆಗಳನ್ನು ಮುಚ್ಚಿಡುವ ಬದಲು ಹಂಚಿಕೊಳ್ಳಲು ಕಲಿಯುತ್ತದೆ.

ಮೊಬೈಲ್‌ಗಿಂತ ಮೊದಲು ಸಂಬಂಧ ಬೇಕು

ಶಾಲೆಯಿಂದ ಮನೆಗೆ ಬಂದ ನಂತರ ಮಗು ಏಕಾಂತಕ್ಕೆ ಸರಿದು ಮೊಬೈಲ್ ಅಥವಾ ಟಿವಿಯ ಮುಂದೆ ಹೆಚ್ಚು ಸಮಯ ಕಳೆಯುವ ಪರಿಸ್ಥಿತಿ ಉಂಟಾಗಬಹುದು. ಇದಕ್ಕೆ ಮೊಬೈಲ್ ಮಾತ್ರ ಕಾರಣ ಎಂದು ಹೇಳಲಾಗದು. ಕುಟುಂಬದಲ್ಲಿ ಸಂಭಾಷಣೆಗೆ ಸಮಯವಿಲ್ಲದಿರುವುದು ಕೂಡ ಒಂದು ಕಾರಣವಾಗಬಹುದು. ಆದ್ದರಿಂದ, ಪೋಷಕರು ಪ್ರತಿದಿನ ಸ್ವಲ್ಪ ಸಮಯವಾದರೂ ಮಕ್ಕಳೊಂದಿಗೆ ಮೊಬೈಲ್ ಬದಿಗಿಟ್ಟು ಮಾತನಾಡಬೇಕು. ಒಟ್ಟಿಗೆ ಊಟ ಮಾಡುವುದು, ನಡೆದು ಬರುವುದು, ಆಟ ಆಡುವುದು, ಪುಸ್ತಕ ಓದುವುದು ಅಥವಾ ದಿನದ ಅನುಭವ ಹಂಚಿಕೊಳ್ಳುವುದು-ಇಂತಹ ಸರಳ ಚಟುವಟಿಕೆಗಳು ಸಂಬಂಧವನ್ನು ಗಟ್ಟಿಗೊಳಿಸುತ್ತವೆ.

ಶೇ.100ರ ಫಲಿತಾಂಶಕ್ಕಾಗಿ ಮಕ್ಕಳ ಮೇಲೆ ಒತ್ತಡ ಬೇಡ

ಶಾಲೆಯ ಉತ್ತಮ ಫಲಿತಾಂಶ ಹೆಮ್ಮೆಪಡುವ ಸಂಗತಿಯಾಗಬಹುದು. ಆದರೆ ಶೇ.100 ಫಲಿತಾಂಶದ ಗುರಿ ಸಾಧಿಸುವುದಕ್ಕಾಗಿ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುವುದು ಶಿಕ್ಷಣದ ಗುಣಮಟ್ಟದ ಏಕೈಕ ಮಾನದಂಡವಾಗಬಾರದು. ಒಬ್ಬ ವಿದ್ಯಾರ್ಥಿಯ ಅಂಕ ಹೆಚ್ಚಾಗಿರುವುದಕ್ಕಿಂತ, ಆತ ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದಾನೆಯೇ? ಪ್ರಶ್ನೆ ಕೇಳುತ್ತಾನೆಯೇ? ತಪ್ಪಿನಿಂದ ಕಲಿಯುತ್ತಾನೆಯೇ? ಇತರರನ್ನು ಗೌರವಿಸುತ್ತಾನೆಯೇ? ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳುತ್ತಿದ್ದಾನೆಯೇ? ಎಂಬುದೂ ಮುಖ್ಯ. ಫಲಿತಾಂಶ ಶಾಲೆಯ ಸಾಧನೆಯ ಒಂದು ಅಂಶ; ಮಗುವಿನ ಸಂಪೂರ್ಣ ವ್ಯಕ್ತಿತ್ವವೇ ಶಿಕ್ಷಣದ ದೊಡ್ಡ ಫಲ.

ಶಿಕ್ಷಣ ಹಣದ ಅಥವಾ ಪ್ರತಿಷ್ಠೆಯ ಭಾಗವಲ್ಲ

ಶಿಕ್ಷಣವನ್ನು ಕುಟುಂಬದ ಪ್ರತಿಷ್ಠೆ, ಶಾಲೆಯ ಜಾಹೀರಾತು ಅಥವಾ ಸಾಮಾಜಿಕ ಸ್ಪರ್ಧೆಯ ಸಾಧನವಾಗಿ ನೋಡುವುದು ಅಪಾಯಕಾರಿ. ಶಿಕ್ಷಣವು ಮಗುವಿನ ಜೀವನದ ಭಾಗ. ಅದು ಮಗುವನ್ನು ತನ್ನನ್ನು ತಾನು ಅರ್ಥಮಾಡಿಕೊಳ್ಳಲು, ಸಮಾಜವನ್ನು ಅರ್ಥಮಾಡಿಕೊಳ್ಳಲು ಮತ್ತು ಜವಾಬ್ದಾರಿಯುತ ನಾಗರಿಕನಾಗಿ ಬೆಳೆಯಲು ಸಹಾಯ ಮಾಡಬೇಕು. ಅಂಕಗಳು ಅಗತ್ಯ. ಪರೀಕ್ಷೆಗಳೂ ಅಗತ್ಯ. ಶೈಕ್ಷಣಿಕ ಶಿಸ್ತು ಕೂಡ ಅಗತ್ಯ. ಆದರೆ, ಇವೆಲ್ಲವೂ ಮಗುವಿನ ಸಹಜ ಬೆಳವಣಿಗೆಗೆ ಪೂರಕವಾಗಿರಬೇಕು; ಅದರ ಮೇಲೆ ಭಾರವಾಗಬಾರದು.

ಮಗು ಮೊದಲು, ರ‍್ಯಾಂಕ್ ನಂತರ

ಮಕ್ಕಳನ್ನು ಓದಿಸಬೇಕು. ಆದರೆ, ಓದಿನ ಹೆಸರಿನಲ್ಲಿ ಅವರ ಬಾಲ್ಯವನ್ನು ಕಸಿದುಕೊಳ್ಳಬಾರದು. ಶಿಸ್ತು ಕಲಿಸಬೇಕು. ಆದರೆ, ಭಯ ಹುಟ್ಟಿಸಬಾರದು. ಅಂಕ ಕೇಳಬೇಕು. ಆದರೆ, ಮಗುವಿನ ಮೌಲ್ಯವನ್ನು ಅಂಕಕ್ಕೆ ಕಟ್ಟಿಹಾಕಬಾರದು. ತಪ್ಪುಗಳನ್ನು ತಿದ್ದಬೇಕು. ಆದರೆ, ಅವಮಾನಿಸಬಾರದು. ಆಸಕ್ತಿಯನ್ನು ಗುರುತಿಸಬೇಕು. ಆದರೆ, ಮೂಲಭೂತ ಶಿಕ್ಷಣದಿಂದ ದೂರ ಮಾಡಬಾರದು. ಸ್ಪರ್ಧೆಗೆ ಸಿದ್ಧಪಡಿಸಬೇಕು. ಆದರೆ, ಪ್ರತಿಯೊಂದು ಮಗುವನ್ನೂ ಮತ್ತೊಂದು ಮಗುವಿನ ವಿರುದ್ಧ ನಿಲ್ಲಿಸಬಾರದು. ಮಕ್ಕಳು ಎಲ್ಲದರಲ್ಲೂ ಒಂದೇ ರೀತಿಯವರಲ್ಲ. ಅವರ ಸಾಮರ್ಥ್ಯ, ವೇಗ, ಆಸಕ್ತಿ ಮತ್ತು ಕಲಿಕೆಯ ವಿಧಾನ ವಿಭಿನ್ನ. ಆ ವೈವಿಧ್ಯತೆಯನ್ನು ಗೌರವಿಸುವ ಶಿಕ್ಷಣವೇ ನಿಜವಾದ ಗುಣಮಟ್ಟದ ಶಿಕ್ಷಣ.

ಮಕ್ಕಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವಂತಾಗಬೇಕು. ರ‍್ಯಾಂಕ್ ಗಾಗಿ ಓದುವುದಕ್ಕಿಂತ ಜ್ಞಾನಕ್ಕಾಗಿ ಓದುವಂತಾಗಬೇಕು. ಭಯದಿಂದ ಶಾಲೆಗೆ ಹೋಗುವುದಕ್ಕಿಂತ ಕಲಿಕೆಯ ಸಂತೋಷದಿಂದ ಶಾಲೆಗೆ ಹೋಗುವಂತಾಗಬೇಕು. ಮಗುವಿನ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಪೋಷಕರ ಕರ್ತವ್ಯ. ಅದರ ಸಾಮರ್ಥ್ಯವನ್ನು ಗುರುತಿಸುವುದು ಶಿಕ್ಷಕರ ಜವಾಬ್ದಾರಿ. ಅದರ ಆಸಕ್ತಿಗೆ ದಾರಿ ತೋರಿಸುವುದು ಸಮಾಜದ ಹೊಣೆ.

ಈ ವಿಶೇಷ ವರದಿ ಓದಿದ್ದೀರಾ? ಮೈಸೂರು | ಬರದ ನಾಡಿನಲ್ಲಿ ದಸರಾ ಸಂಭ್ರಮ! ಕಂಬಳ ಮುಖ್ಯವೋ, ಅನ್ನದಾತನ ಬದುಕೋ?

ಕೊನೆಗೂ ಶಿಕ್ಷಣದ ಗುರಿ ಕೇವಲ ‘ಎಷ್ಟು ಅಂಕ?’ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಲ್ಲ. ‘ಎಂತಹ ಮನುಷ್ಯನಾಗಿ ಬೆಳೆಯುತ್ತಿದ್ದಾನೆ?’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದೇ ಶಿಕ್ಷಣದ ನಿಜವಾದ ಅರ್ಥ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲ್ಲಾವುದ್ದೀನನ ಅದ್ಭುತ ದೀಪದಂತೆ ಜಿಎಸ್‌ಎಸ್;‌ ʼಹಣತೆಯಿಂದ ಹಣತೆಗೆʼ ಸಂವಾದದಲ್ಲಿ ಮೇಷ್ಟ್ರು ನೆನಪು

ಒಂದು ಹಣತೆಯಿಂದ ಮತ್ತೊಂದು ಹಣತೆಯನ್ನು ಹಚ್ಚಿದಾಗ ಮೊದಲ ಹಣತೆಯ ಬೆಳಕು ಕಡಿಮೆಯಾಗುವುದಿಲ್ಲ,...

ಹಿಂಗಾರು ಆರ್ಭಟ; ಮುಂದಿನ 4 ದಿನ ರಾಜ್ಯದ 11 ಜಿಲ್ಲೆಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ರಾಜ್ಯದಲ್ಲಿ ಮುಂಗಾರು ಕ್ಷೀಣಿಸಿ, ಹಿಂಗಾರು ಮಾರುತಗಳ ಚಟುವಟಿಕೆ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ...

ಬೇಡ್ತಿ ನದಿ ತಿರುವು ಯೋಜನೆಯೂ, ಬೊಮ್ಮಾಯಿ-ಕಾಗೇರಿ ಪೀಕಲಾಟವೂ

ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದ್ದಕ್ಕಿದ್ದಂತೆಯೇ ಬೇಡ್ತಿ-ವರದಾ ಮತ್ತು...

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿ ಹೆಸರಿಗಷ್ಟೇ; ಇಂದಿಗೂ ಅಧಿಕಾರ ಪುರುಷರ ವಶ!

ಗ್ರಾಮೀಣ ರಾಜಕಾರಣದಲ್ಲಿ ಮಹಿಳಾ ಮೀಸಲಾತಿಯ ಮೂಲಕ ಅನೇಕ ಮಹಿಳೆಯರು ಜನಪ್ರತಿನಿಧಿಗಳಾಗಿದ್ದಾರೆ. ಆದರೂ...