ಕೊಡಗು ಜಿಲ್ಲೆ, ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಜಿ ಸೈನಿಕರು ಹಾಗೂ ಕುಟುಂಬದವರ ಕುಂದುಕೊರತೆಗಳನ್ನು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಆಲಿಸಿ, ಮನವಿ ಸ್ವೀಕರಿಸಿದರು.
ಮಡಿಕೇರಿ, ಪೊನ್ನಂಪೇಟೆಯಲ್ಲಿ ಮಾಜಿ ಸೈನಿಕರಿಗಾಗಿ ಕ್ಯಾಂಟಿನ್, ಸಮುದಾಯ ಭವನ, ಆಸ್ಪತ್ರೆ ಸೇರಿದಂತೆ ಹಲವು ಮೂಲ ಸೌಕರ್ಯ ಕಲ್ಪಿಸುವ ಆದ್ಯತೆ ಮೇಲೆ ಜಾಗ ಕಾಯ್ದಿರಿಸಲಾಗುವುದು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಜನ್ಮದಿನ ಕಾರ್ಯಕ್ರಮಕ್ಕೆ ಎಲ್ಲಾ ಮಾಜಿ ಸೈನಿಕರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ತಾಲ್ಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಮಾಜಿ ಸೈನಿಕರು ಹಾಗೂ ಕುಟುಂಬದವರ ಕುಂದುಕೊರತೆ ಆಲಿಸಲಾಗುವುದು. ಅದರಂತೆ, ಪ್ರತಿ ಎರಡು ತಿಂಗಳಿಗೊಮ್ಮೆ ಮಾಜಿ ಸೈನಿಕರ ಅದಾಲತ್ ನಡೆಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು. ಮಾಜಿ ಸೈನಿಕರು ಪೈಸಾರಿ ಜಾಗದಲ್ಲಿ ಒಂದೆರಡು ಎಕರೆ ಅನುಭವಿಸುತ್ತಿರುವ ಭೂಮಿಯನ್ನು ಅವರ ಹೆಸರಿಗೆ ಪಹಣಿ ಕಲ್ಪಿಸುವ ಕುರಿತಾಗಿ ಪರಿಶೀಲಿಸಲಾಗುವುದು. ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಿವೇಶನ ಹಾಗೂ ಮನೆ ಇಲ್ಲದ ಮಾಜಿ ಸೈನಿಕರಿಗೆ ನಿವೇಶನ ಹಾಗೂ ಮನೆ ಕಲ್ಪಿಸುವ ಸಂಬಂಧ ಪರಿಶೀಲಿಸಲಾಗುವುದು. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಜಿಲ್ಲೆಯ ವಿವಿಧ ಕಡೆಗಳಲ್ಲಿ ಖಾಸಗಿ ಬಡಾವಣೆ ನಿರ್ಮಾಣ ಸಂದರ್ಭದಲ್ಲಿ ಮಾಜಿ ಸೈನಿಕರಿಗೆ ನಿವೇಶನ ಮೀಸಲಿಡಲು ಸಂಬಂಧಪಟ್ಟವರ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರಿ ಕಚೇರಿಗೆ ಬರುವ ಮಾಜಿ ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳುವಂತಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಮಾಜಿ ಸೈನಿಕರ ಜಿಲ್ಲಾ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಮಾತನಾಡಿ, ಮಾಜಿ ಸೈನಿಕರು ಜಮ್ಮು ಮತ್ತು ಕಾಶ್ಮೀರದಂತಹ ಎತ್ತರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿ ಬಂದಿದ್ದಾರೆ. ಇಂತಹ ಮಾಜಿ ಸೈನಿಕರಿಗೆ ಕನಿಷ್ಠ ಮೂಲ ಸೌಲಭ್ಯ ಕಲ್ಪಿಸುವಂತಾಗಬೇಕು. ಮಾಜಿ ಸೈನಿಕರಿಗಾಗಿ ಜಿಲ್ಲಾ ಕೇಂದ್ರ ಮಡಿಕೇರಿ ಮತ್ತು ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಬೇಕು. ಆಸ್ಪತ್ರೆ, ಕ್ಯಾಂಟಿನ್ ಮತ್ತಿತರ ಸೌಲಭ್ಯಕ್ಕೆ ಕನಿಷ್ಠ 20 ಸೆಂಟ್ ಜಾಗವನ್ನಾದರೂ ನೀಡುವಂತಾಗಬೇಕು ಎಂದು ಕೋರಿದರು.
ನಿವೃತ್ತ ಮೇಜರ್ ಚಿಂಗಪ್ಪ ಮಾತನಾಡಿ, ಮಾಜಿ ಸೈನಿಕರು ಊರಿನ ಬಳಿ ಒಂದೆರಡು ಎಕರೆಯಲ್ಲಿ ತೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಂತವರಿಗೆ ಆದ್ಯತೆ ಮೇಲೆ ಪಹಣಿ ಮಾಡಿಕೊಡುವಂತಾಗಬೇಕು. ಶೇ.50%ರಷ್ಟು ಮಾಜಿ ಸೈನಿಕರಿಗೆ ಮತ್ತು ಕುಟುಂಬದವರಿಗೆ ಮನೆ ಇಲ್ಲ. ಹಾಗಾಗಿ, ಅಂತವರನ್ನು ಗುರುತಿಸಿ ಕನಿಷ್ಠ ಮೂಲ ಸೌಲಭ್ಯ ನಿವೇಶನ, ಮನೆ ನಿರ್ಮಿಸಿಕೊಡುಬೇಕು ಎಂದರು.
ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಮಾತನಾಡಿ, ಭಾರತ ಸರ್ಕಾರದಿಂದ ಏಪ್ರಿಲ್,15ರವರೆಗೆ ಮನೆ ಮನೆ ಸಮೀಕ್ಷೆ ಕಾರ್ಯ ನಡೆಯಲಿದ್ದು, ಈ ಕಾರ್ಯದಲ್ಲಿ ಸ್ವಯಂ ಗಣತಿ ಮಾಡುವಂತಾಗಬೇಕು ಏಪ್ರಿಲ್.16 ರಿಂದ ಮನೆ ಮನೆ ಸಮೀಕ್ಷೆ ನಡೆಯಲಿದೆ. ಜಿಲ್ಲೆಯ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಪಾಸ್‍ಪೋರ್ಟ್ ಮೇಳಕ್ಕೆ ಚಾಲನೆ ನೀಡಿದ ಸಂಸದ ಯದುವೀರ್
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ.ಆರ್. ಶೆಟ್ಟಿ, ತಹಶೀಲ್ದಾರ್ ಪ್ರವೀಣ್ ಕುಮಾರ್, ಕೃಷ್ಣಮೂರ್ತಿ, ಸಂಜನಾ ಸೇರಿದಂತೆ ಮಾಜಿ ಸೈನಿಕರು ಇದ್ದರು.




