ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ರೈತರು ಮತ್ತು ಕೂಲಿಕಾರ್ಮಿಕರ ಹಿತದೃಷ್ಟಿಯಿಂದ ರಾಜ್ಯದ ಚುನಾಯಿತ ಜನಪ್ರತಿನಿಧಿಗಳು ಆರು ತಿಂಗಳ ಕಾಲ ಸಂಬಳ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಪಡೆಯದೆ, ಆ ಮೊತ್ತವನ್ನು ಬರ ನಿರ್ವಹಣೆಗೆ ಬಳಸಲು ಸರ್ಕಾರಕ್ಕೆ ನೀಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಗ್ರಹಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜನರು ನೀಡಿರುವ ಅಧಿಕಾರದಿಂದ ಜನಪ್ರತಿನಿಧಿಗಳಾಗಿರುವ ಸಂದರ್ಭದಲ್ಲಿ ರಾಜ್ಯದ ರೈತ–ಕೂಲಿಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲ, ಬಂಡವಾಳ ಹಾಕಿ ಬೆಳೆದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಮತ್ತೊಂದೆಡೆ ಸರ್ಕಾರದಿಂದ ಸಮರ್ಪಕ ಬರ ಪರಿಹಾರವೂ ದೊರೆಯದಿರುವುದು ರೈತರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಸಂಕಷ್ಟದ ಸಂದರ್ಭದಲ್ಲಿ ಒಂದಿಷ್ಟಾದರೂ ತ್ಯಾಗದ ಮನೋಭಾವ ಪ್ರದರ್ಶಿಸಬೇಕು. ರಾಜ್ಯದ ಹಾಲಿ ಹಾಗೂ ಮಾಜಿ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಹಕಾರ ಸಂಘಗಳ ನಿರ್ದೇಶಕರು ಸೇರಿದಂತೆ ಎಲ್ಲರೂ ಆರು ತಿಂಗಳ ಕಾಲ ಸರ್ಕಾರದಿಂದ ಪಡೆಯುವ ಸಂಬಳ, ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಿ ಸರ್ಕಾರದ ಖಜಾನೆಗೆ ನೀಡಿದರೆ ಬರ ಪರಿಸ್ಥಿತಿಯನ್ನು ಸ್ವಲ್ಪಮಟ್ಟಿಗಾದರೂ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ದುಂದುವೆಚ್ಚಕ್ಕೆ ಕಡಿವಾಣ ಹಾಕಲಿ
ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿ, ಪ್ರಕೃತಿ ವಿಕೋಪ, ಬರ, ಬೆಲೆ ಕುಸಿತ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಂತಹ ಸಮಸ್ಯೆಗಳು ಎದುರಾದಾಗ ನಷ್ಟವನ್ನು ತುಂಬಿಸುವುದೇ ಸಾಮಾನ್ಯವಾಗಿರುವ ಹಳೆಯ ವ್ಯವಸ್ಥೆಯಾಗಿದೆ. ಇದಕ್ಕೆ ಬದಲಾಗಿ ಸರ್ಕಾರದ ದುಂದುವೆಚ್ಚ ಹಾಗೂ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ಮೂಲಕ ನಷ್ಟವನ್ನು ನಿಯಂತ್ರಿಸುವ ಕುರಿತು ಗಂಭೀರವಾಗಿ ಯೋಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಹಲವು ಇಲಾಖೆಗಳಲ್ಲಿರುವ ಉಪಕರಣಗಳು ಬಳಕೆಗೆ ಬಾರದೆ ಮೂಲೆಗುಂಪಾಗಿವೆ. ಅವುಗಳ ಕುರಿತು ಸಂಬಂಧಪಟ್ಟ ಇಲಾಖೆಯಿಂದ ಸಮಗ್ರ ವರದಿ ಪಡೆದು, ಬಳಕೆಗೆ ಬಾರದ ಉಪಕರಣಗಳನ್ನು ಹರಾಜು ಹಾಕಿದರೆ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ಬರಬಹುದು. ಇದರಿಂದ ಬರ ನಿರ್ವಹಣೆಗೆ ಹೆಚ್ಚುವರಿ ಸಂಪನ್ಮೂಲ ಒದಗಿಸಬಹುದು ಎಂದರು.
ಸರ್ಕಾರಗಳು ಅದ್ದೂರಿ ಕಾರ್ಯಕ್ರಮಗಳಿಗೆ ಮಾಡುವ ಅನಗತ್ಯ ವೆಚ್ಚವನ್ನು ನಿಲ್ಲಿಸಬೇಕು. ವಿವಿಧ ಇಲಾಖೆಗಳಲ್ಲಿನ ಕಾಮಗಾರಿಗಳು ಹದಗೆಟ್ಟಿವೆ ಎಂದು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪದೇಪದೆ ರಿಪೇರಿ ಮಾಡುವ ಪದ್ಧತಿಗೂ ಕಡಿವಾಣ ಹಾಕಬೇಕು. ಜನಪ್ರತಿನಿಧಿಗಳ ಆರೋಗ್ಯ, ವಿದೇಶಿ ಪ್ರವಾಸ, ವಾಹನಗಳು ಹಾಗೂ ಇತರೆ ಸೌಲಭ್ಯಗಳಿಗೆ ಮಾಡುವ ವೆಚ್ಚವನ್ನು ಕಡಿಮೆ ಮಾಡಿ, ಕನಿಷ್ಠ ಆರು ತಿಂಗಳ ಕಾಲ ಯಾವುದೇ ವೇತನ ಪಡೆಯದೆ ಆ ಮೊತ್ತವನ್ನು ಸರ್ಕಾರದ ಖಜಾನೆಗೆ ನೀಡುವ ಮೂಲಕ ರೈತರೊಂದಿಗೆ ನಾವಿದ್ದೇವೆ ಎಂಬುದನ್ನು ತೋರಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
ಪತ್ರಿಕಾ ಹೇಳಿಕೆ ನೀಡುವ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಗಿರೀಶ್, ರಾಜು, ತೆರಹಳ್ಳಿ ಆಂಜಿನಪ್ಪ, ವಾನರಾಶಿ ವೀರಭದ್ರಪ್ಪ, ಚಂದ್ರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




