ಅಪತ್ಬಾಂಧವರೆಂದೇ ಕರೆಯಲಾಗುವ 108 ಆಂಬ್ಯುಲೆನ್ಸ್ ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಜನಸಾಮಾನ್ಯರಿಗೆ ತುರ್ತು ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವರು ಆರೋಗ್ಯ ಸಚಿವರನ್ನು ಒತ್ತಾಯಿಸಿದ್ದಾರೆ.
108 ಆಂಬ್ಯುಲೆನ್ಸ್ ನೌಕರರು ವೇತನ ಪರಿಷ್ಕರಣೆ, ಕರ್ತವ್ಯದ ವೇಳಾಪಟ್ಟಿ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾಮೂಹಿಕ ರಾಜೀನಾಮೆ ನೀಡುವ ಹಾಗೂ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿರುವುದು ಸರ್ಕಾರಕ್ಕೆ ಗಂಭೀರ ಸವಾಲಾಗಿದೆ. ಒಂದು ವೇಳೆ ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾದರೆ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಜೀವ ರಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಬರಗಾಲ ಹಾಗೂ ಬೆಲೆ ಕುಸಿತದ ಹೊಡೆತಕ್ಕೆ ಸಿಲುಕಿರುವ ಗ್ರಾಮೀಣ ಭಾಗದ ರೈತರು ಮತ್ತು ಕೂಲಿಕಾರ್ಮಿಕರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಬಿಸಿಲಿನ ತಾಪದ ನಡುವೆ ವೈರಲ್ ಜ್ವರದಂತಹ ಕಾಯಿಲೆಗಳು ಜನರನ್ನು ಕಾಡುತ್ತಿವೆ. ಇಂತಹ ಸಂದರ್ಭದಲ್ಲಿ ಹೃದಯಾಘಾತ, ರಸ್ತೆ ಅಪಘಾತ ಹಾಗೂ ಹೆರಿಗೆ ಸೇರಿದಂತೆ ತುರ್ತು ಪರಿಸ್ಥಿತಿಗಳಲ್ಲಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸಲು ಗೋಲ್ಡನ್ ಅವರ್ ಅತ್ಯಂತ ನಿರ್ಣಾಯಕವಾಗಿದೆ. ಈ ಅಮೂಲ್ಯ ಸಮಯದಲ್ಲಿ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಜೀವಹಾನಿ ಸಂಭವಿಸಿದರೆ ಅದು ಇಡೀ ವ್ಯವಸ್ಥೆಯ ವೈಫಲ್ಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆಂಬ್ಯುಲೆನ್ಸ್ ಸಿಬ್ಬಂದಿಯ ಕರ್ತವ್ಯ ಕೇವಲ ಗಡಿಯಾರದ ಮುಳ್ಳಿಗೆ ಸೀಮಿತವಾಗಿಲ್ಲ. ತಮ್ಮ ಕುಟುಂಬದ ಹಿತಾಸಕ್ತಿಯನ್ನು ಬದಿಗಿಟ್ಟು ಸಮಾಜದ ಸೇವೆಯಲ್ಲಿ ತೊಡಗಿರುವ ಜೀವ ರಕ್ಷಕರಿಗೆ ಸೂಕ್ತ ವೇತನ ಮತ್ತು ಉತ್ತಮ ಕೆಲಸದ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ತುರ್ತು ಸಂದರ್ಭದಲ್ಲಿ ರೋಗಿಯ ಪ್ರಾಣ ಉಳಿಸುವ ಕಾಳಜಿಯೊಂದಿಗೆ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕಡಿಮೆ ವೇತನದ ಸಮಸ್ಯೆ ಕಾಡಬಾರದು. ಹೀಗಾಗಿ ಸರ್ಕಾರ ಅವರ ನ್ಯಾಯಯುತ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯುವ ರೈತ ಮುಖಂಡ ಯಾರಂಘಟ್ಟ ಗಿರೀಶ್ ಮಾತನಾಡಿ, ಬರಗಾಲದ ಸಂದರ್ಭದಲ್ಲಿ ಬಡವರು, ಕೆಳಮಧ್ಯಮ ವರ್ಗದವರು ಹಾಗೂ ಗ್ರಾಮೀಣ ಜನರಿಗೆ 108 ಆಂಬ್ಯುಲೆನ್ಸ್ಗಳೇ ಪ್ರಮುಖ ಜೀವನಾಡಿಯಾಗಿವೆ. ಈ ಸೇವೆ ಸ್ಥಗಿತಗೊಂಡರೆ ಹೆಚ್ಚಿನ ತೊಂದರೆ ಅನುಭವಿಸುವವರು ಬಡವರೇ ಆಗಿರುತ್ತಾರೆ. ಮುಷ್ಕರದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಖಾಸಗಿ ಆಂಬ್ಯುಲೆನ್ಸ್ಗಳು ದುಬಾರಿ ಬಾಡಿಗೆ ವಸೂಲಿ ಮಾಡುವ ಸಾಧ್ಯತೆಯಿದ್ದು, ಇದರಿಂದ ಬಡ ರೋಗಿಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಈ ಬಗ್ಗೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಆಂಬ್ಯುಲೆನ್ಸ್ ನೌಕರರ ಪ್ರಮುಖ ಬೇಡಿಕೆಗಳಾದ ಕಾರ್ಮಿಕ ನಿಯಮಗಳ ಪ್ರಕಾರ ವೇತನ ಪಾವತಿ, ಮೂರು ಪಾಳಿಗಳ ಕರ್ತವ್ಯ ನಿರ್ವಹಣೆಗೆ ಅನುಗುಣವಾಗಿ ಅಗತ್ಯ ವಾಹನಗಳ ವ್ಯವಸ್ಥೆ, ವಿಶ್ರಾಂತಿ ಕೊಠಡಿಗಳ ನಿರ್ಮಾಣ ಹಾಗೂ ಕರ್ತವ್ಯದ ವೇಳೆ ಅಪಘಾತದಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವ ಬೇಡಿಕೆಗಳನ್ನು ಆರೋಗ್ಯ ಸಚಿವರು ಕೂಡಲೇ ಈಡೇರಿಸಬೇಕು. ಯಾವುದೇ ಕಾರಣಕ್ಕೂ ಜೀವ ರಕ್ಷಕ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳ್ಳದಂತೆ ಕ್ರಮ ಕೈಗೊಳ್ಳಬೇಕು. ಖಾಸಗಿ ಆಂಬ್ಯುಲೆನ್ಸ್ಗಳ ದುಬಾರಿ ಬಾಡಿಗೆ ವಸೂಲಿಗೆ ಕಡಿವಾಣ ಹಾಕಿ ಬಡವರ ಬದುಕು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ದೆಹಲಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಪಿಐಎಂ ಬೆಂಬಲ
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಪುತ್ತೇರಿ ರಾಜು, ಕಮದಟ್ಟಿ ಚಲಪತಿ, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




