ತಾಲ್ಲೂಕು ಆಡಳಿತದಲ್ಲಿನ ಅವ್ಯವಸ್ಥೆ, ದಲ್ಲಾಳಿಗಳ ಹಾವಳಿ ಹಾಗೂ ಲಂಚದ ಆರೋಪಗಳನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ತಹಸಿಲ್ದಾರ್ ಕಛೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಸುಬ್ರಹ್ಮಣ್ಯ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಸರ್ಕಾರದ ಕೆಲಸ ದೇವರ ಕೆಲಸ ಎಂಬ ಘೋಷವಾಕ್ಯ ಬರೆದಿರುವ ತಾಲ್ಲೂಕು ಆಡಳಿತ ಸೌಧವನ್ನು ದಲ್ಲಾಳಿಗಳ ಹಾಗೂ ಲಂಚಬಾಕ ಅಧಿಕಾರಿಗಳ ಸೌಧ ಎಂದು ಮರುನಾಮಕರಣ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಕಚೇರಿಯಲ್ಲಿ ಸಾಮಾನ್ಯ ರೈತರು ಮತ್ತು ಕೂಲಿ ಕಾರ್ಮಿಕರ ಕೆಲಸಗಳು ಸುಗಮವಾಗಿ ನಡೆಯುತ್ತಿಲ್ಲ. ಅಧಿಕಾರಿಗಳನ್ನು ಭೇಟಿ ಮಾಡಬೇಕಾದರೂ ಹಣ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಚೇರಿಯ ಎಲ್ಲೆಡೆ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದರು.
ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಹಾಗೂ ಇತರ ಕಂದಾಯ ಅಧಿಕಾರಿಗಳು ಗ್ರಾಮೀಣ ಸೇವೆಯನ್ನು ನಿರ್ಲಕ್ಷಿಸಿ ಜನರಿಗೆ ಸಕಾಲದಲ್ಲಿ ಜಾತಿ, ಆದಾಯ ಮತ್ತು ಭೂ ದಾಖಲೆಗಳನ್ನು ನೀಡುತ್ತಿಲ್ಲ. ಅರ್ಜಿಗಳನ್ನು ಸಲ್ಲಿಸಿದರೂ ತಿಂಗಳುಗಟ್ಟಲೆ, ವರ್ಷಗಳಾದರೂ ವಿಲೇವಾರಿಯಾಗುತ್ತಿಲ್ಲ ಎಂದು ದೂರಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ, ಬಡ ರೈತರು ಮತ್ತು ಕೂಲಿ ಕಾರ್ಮಿಕರ ಪಿ.ನಂಬರ್ ದುರಸ್ತಿಗೆ ಸರ್ಕಾರ ಆದೇಶ ನೀಡಿದ್ದರೂ, ಅದರ ಪ್ರಯೋಜನ ಸಾಮಾನ್ಯರಿಗೆ ಸಿಗುತ್ತಿಲ್ಲ. ಶ್ರೀಮಂತರ ಕಡತಗಳಿಗೆ ಆದ್ಯತೆ ನೀಡಿ, ಬಡವರ ಕಡತಗಳನ್ನು ವಿವಿಧ ಕಾರಣಗಳನ್ನು ಹೇಳಿ ವಿಳಂಬ ಮಾಡಲಾಗುತ್ತಿದ ಕೆರೆ, ರಾಜಕಾಲುವೆ, ಬಂಡಿದಾರಿ, ಕಾಲುದಾರಿ ಹಾಗೂ ಸ್ಮಶಾನ ಸೇರಿದಂತೆ ಸರ್ಕಾರಿ ಆಸ್ತಿಗಳ ಒತ್ತುವರಿಯನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಂದು ವಾರದೊಳಗೆ ತಾಲ್ಲೂಕು ಆಡಳಿತದಲ್ಲಿನ ಅವ್ಯವಸ್ಥೆ ಸರಿಪಡಿಸಿ, ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಪಿ.ನಂಬರ್ ದುರಸ್ತಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಸಿ, ಸರ್ಕಾರಿ ಆಸ್ತಿಗಳ ಒತ್ತುವರಿಯನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುವುದಾಗಿ ರೈತ ಸಂಘ ಎಚ್ಚರಿಕೆ ನೀಡಿತು.
ಮನವಿ ಸ್ವೀಕರಿಸಿದ ಉಪತಹಸೀಲ್ದಾರ್ ಸುಬ್ರಹ್ಮಣ್ಯ ಮಾತನಾಡಿ, ತಾಲ್ಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹಾಗೂ ಇತರ ಸಮಸ್ಯೆಗಳ ಕುರಿತು ದೂರುಗಳು ಬಂದಿವೆ. ಪಿ.ನಂಬರ್ ದುರಸ್ತಿ ಸೇರಿದಂತೆ ಕಂದಾಯ ಇಲಾಖೆಯ ಕಾರ್ಯವೈಖರಿಯನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಂಡು ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದರು.
ಇದನ್ನು ಓದಿದ್ದೀರಾ..?ಚೇಳೂರು | ನಾರೇಮದ್ದೇಪಲ್ಲಿ ಗ್ರಾಮದ ಮುಸ್ಲಿಮರು ಬತ್ತಿದ ಕೆರೆಯಲ್ಲಿ ಕುಳಿತು ಮಳೆಗಾಗಿ ನಮಾಜ್
ಪ್ರತಿಭಟನೆಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷ ಎ ನಳಿನಿಗೌಡ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಪುತ್ತೇರಿ ರಾಜು, ಗಿರೀಶ್, ಚಂದ್ರಪ್ಪ, ತೆರಹಳ್ಳಿ ಆಂಜಿನಪ್ಪ, ವಾನರಾಶಿ ವೀರಭದ್ರಪ್ಪ, ಹನುಮನಹಳ್ಳಿ ನಾಗರಾಜ, ಸುಪ್ರಿಂ ಚಲ, ಶೈಲಜ, ರತ್ನಮ್ಮ, ವಿಶ್ವ, ಜನಾರ್ಧನ, ನಟರಾಜ್, ರಾಜಣ್ಣ, ಕುವಣ್ಣ, ರಾಮಕೃಷ್ಣಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.




