ಗಿಣಿಗೇರಿಯ ಕಲ್ಯಾಣಿ ಸ್ಟೀಲ್ಸ್ ಕಾರ್ಖಾನೆಯನ್ನು ಬಂದ್ ಮಾಡಿದ ಸಿಪಿಸಿಬಿ ಕ್ರಮವನ್ನು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯಿಂದ ಸ್ವಾಗತಿಸುತ್ತೇವೆ ಎಂದು ಜಂಟಿ ಕ್ರಿಯಾ ವೇದಿಕೆಯ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ ಹೇಳಿದರು.
258ನೇ ದಿನದ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಗೋನಾಳ ಕಲ್ಯಾಣಿ, ಕಿರ್ಲೋಸ್ಕರ್, ಅಲ್ಟ್ರಾಟೆಕ್ ಸಿಮೆಂಟ್, ಎಚ್.ಆರ್.ಜಿ ಅಲಾಯ್ಸ್, ಎಕ್ಸಿಂಡಿಯಾ, ಎಂ.ಎಸ್.ಪಿ.ಎಲ್, ಐ.ಎಲ್.ಸಿ, ಕೆ.ಪಿ.ಆರ್, ದೃವದೇಶ ಮುಂತಾದ 28 ಮಾಲಿನ್ಯಕಾರಕ ಬೃಹತ್ ಕಾರ್ಖಾನೆಗಳು ಉತ್ತರ ಮತ್ತು ಈಶಾನ್ಯ ಭಾರತದ ಚೀಫ್ ಲೇಬರ್ಗಳನ್ನು ಬಳಸಿಕೊಂಡು ಅತ್ಯಂತ ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸುತ್ತಿವೆ. ಕಲ್ಯಾಣಿ ಸ್ಟೀಲ್ಸ್ ಕಳೆದ 28 ವರ್ಷಗಳಿಂದ ಅಪರಿಮಿತ ಮಾಲಿನ್ಯ ಮಾಡುತ್ತಿದೆ. ಈಗಿನ ಕ್ರಮವು ತಾತ್ಕಾಲಿಕವಾಗಿರದೆ ಶಾಶ್ವತ ಕಾರ್ಯರೂಪಕ್ಕೆ ಬಂದರೆ ಮಾತ್ರ ಕೊಪ್ಪಳ-ಭಾಗ್ಯನಗರವನ್ನು ಆವರಿಸುವ ಕಪ್ಪು ಧೂಳು ಮತ್ತು ಕರಿಬೂದಿ ತಗ್ಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಒಂದು ಚಿಮಣಿಯಿಂದ ಆರಂಭವಾದ ಕಲ್ಯಾಣಿ ಮುಕುಂದ್ ಸ್ಟೀಲ್ಸ್ ಮತ್ತು ಹೊಸಪೇಟೆ ಸ್ಟೀಲ್ಸ್ ಇಂದು 30 ಮಾಲಿನ್ಯಕಾರಕ ಚಿಮಣಿಗಳನ್ನು ಸೃಷ್ಟಿಸಿವೆ. ಇದೇ ರೀತಿ ಕಿರ್ಲೋಸ್ಕರ್ ಕಾರ್ಖಾನೆ 23 ಚಿಮಣಿಗಳನ್ನು ನಿರ್ಮಿಸಿದೆ. ಈ ಕಾರ್ಖಾನೆಗಳ ಚಿಮಣಿ ಒಂದಿದ್ದಾಗಲೇ ಬೆಳೆ ಹಾನಿ, ಅಂತರ್ಜಲ ಹಾನಿ ಉಂಟಾಗಿದ್ದರ ಬಗ್ಗೆ ದೂರುಗಳು ದಾಖಲಾಗಿದ್ದವು.
“ತುಂಗಭದ್ರಾ ತಟದಲ್ಲಿನ ಕಾರ್ಖಾನೆಗಳು ಜಲಾಶಯ ಮತ್ತು 22 ಹಳ್ಳಿಗಳ 50 ಸಾವಿರ ಜನರಿಗೆ ಜೀವಕಂಠಕವಾಗಿವೆ. ಇಲ್ಲಿನ ಕೃಷಿಯನ್ನು ಸಂಪೂರ್ಣವಾಗಿ ಕಸಿದುಕೊಂಡಿವೆ. ಜನರ ಆರೋಗ್ಯವನ್ನು ಕಿತ್ತುಕೊಂಡಿವೆ. ಅಂತರ್ಜಲವನ್ನು ವಿಷಗೊಳಿಸಿವೆ. ದೂರು ಸಲ್ಲಿಸುವವರ ಮೇಲೆ ಬೆದರಿಕೆ ಒಡ್ಡುವ ಕನಿಷ್ಠ ಮಟ್ಟಕ್ಕೆ ಇಳಿದಿರುವ ಕಂಪನಿಗಳ ವಿರುದ್ಧ ಜನರು ವರ್ಷಾನುಗಟ್ಟಲೆ ಬೀದಿಗಿಳಿದು ಹೋರಾಡಿದ್ದಾರೆ. ಈಗಾಗಲೇ ಎರಡು ಕಾರ್ಖಾನೆಗಳಿಗೆ ಬೀಗ ಹಾಕಲಾಗಿರುವುದು ಸರಿಯಾದ ಕ್ರಮವಷ್ಟೇ. ಇನ್ನು ಮೂರು ಕಾರ್ಖಾನೆಗಳನ್ನು ಮುಚ್ಚುವ ಆದೇಶ ಬಾಕಿ ಉಳಿದಿದೆ. 9 ಕಾರ್ಖಾನೆಗಳಿಗೆ ಕೊಟ್ಟ ಎನ್.ಪಿ.ಡಿ. ಸುಳಿವೇ ಇಲ್ಲದಂತಾಗಿದೆ” ಎಂದು ಹೇಳಿದರು.
“ಸುಧೀರ್ಘ 30 ವರ್ಷಗಳಿಂದ ಜನರನ್ನು ಮತ್ತು ಇಲ್ಲಿನ ಪರಿಸರವನ್ನು ಸತಾಯಿಸಿದ ಕಂಪನಿಗಳು ತಮ್ಮ ಯಾವುದೇ ಉನ್ನತ ತಂತ್ರಜ್ಞಾನದಿಂದಲೂ ಮಾಲಿನ್ಯ ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಈಗ ಅವುಗಳಿಗೆ ಉಳಿದಿರುವ ದಾರಿ ಬಂದ್ ಆಗುವುದು. ಅದಾಗದಿದ್ದರೆ ಜನರ ಆರೋಗ್ಯ ಮತ್ತು ಜೀವ ಉಳಿಯುವುದಿಲ್ಲ. ಈ ಸಂದರ್ಭದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಗಂಭೀರ ಕ್ರಮ ತೆಗೆದುಕೊಳ್ಳುವುದು ಸೂಕ್ತ. ಈ ನಡುವೆ ಬಲ್ಡೋಟ್ ಕಂಪನಿ 54,000 ಕೋಟಿ ಹೂಡಿಕೆಗೆ ಮುಂದಾದರೆ ಕೊಪ್ಪಳ-ಭಾಗ್ಯನಗರದ 1.5 ಲಕ್ಷ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಎಚ್ಚರಿಕೆ ಅಗತ್ಯ” ಎಂದರು.
ಧರಣಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ ಕಲಕೇರಿ, ಬಳ್ಳಾರಿ ಜಿಲ್ಲಾಧ್ಯಕ್ಷ ಎಂ.ಎಲ್.ಕೆ ನಾಯ್ಡು, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಶಂಭುಲಿಂಗಪ್ಪ ಏಳುಭಾವಿ, ರಾಜಶೇಖರ ಏಳುಭಾವಿ, ಪರಮೇಶಪ್ಪ, ಮೂಕಪ್ಪ ಮೇಸ್ತ್ರಿ ಬಸಾಪುರ, ಅಮರೇಶ ಕರಡಿ, ಬಸವರಾಜ ಹೂಗಾರ, ಯಮನೂರಪ್ಪ ಹಾಲಳ್ಳಿ ಬಸಾಪುರ, ಶೇಖಪ್ಪ ಮೈನಳ್ಳಿ, ಮಂಜುನಾಥ ದಿನ್ನಿ, ಮಲ್ಲಮ್ಮ ಚೆಲ್ಲಾರ, ಶಿವಮ್ಮ ಸಂಗಳದ, ಗವಿಸಿದ್ದಪ್ಪ ಮಾಲಿಪಾಟೀಲ್, ಶಿವಪ್ಪ ಜಲ್ಲಿ, ರಾಜಕುಮಾರ ತಂಬ್ರಹಳ್ಳಿ ಮುಂತಾದವರು ಉಪಸ್ಥಿತರಿದ್ದರು.




