ನಗರದಲ್ಲಿ ಕಳೆದ ಒಂದು ವಾರದಿಂದ ಗ್ಯಾಸ್ ಪಂಪ್‌ಗಳಲ್ಲಿ ಎಲ್‌ಪಿಜಿ ಸರಬರಾಜು ಸ್ಥಗಿತಗೊಂಡಿದ್ದ ಹಿನ್ನೆಲೆ, ಇಂದು ಗ್ಯಾಸ್ ವಿತರಣೆಯು ಆರಂಭವಾಗುತ್ತಿದ್ದಂತೆ ಟಿಪ್ಪು ಸುಲ್ತಾನ್ ಉದ್ಯಾನದ ಬಳಿಯ ಪಂಪ್ ಮುಂದೆ ನೂರಾರು ಆಟೋಗಳು ಉದ್ದವಾದ ಸರತಿಯಲ್ಲಿ ನಿಂತಿರುವ ದೃಶ್ಯ ಕಂಡುಬಂತು.
ಎಲ್‌ಪಿಜಿ ಗ್ಯಾಸ್ ಮೇಲೆ ಅವಲಂಬಿತವಾಗಿರುವ ಆಟೋ ಚಾಲಕರು ರಾತ್ರಿ ಪೂರ್ತಿ ಸಾಲಿನಲ್ಲಿ ನಿಂತಿದ್ದು, ಬೇಡಿಕೆಗೆ ತಕ್ಕಷ್ಟು ಗ್ಯಾಸ್ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಬಂಕ್ ಮುಂದೆ ಉಂಟಾದ ದೀರ್ಘ ಸರತಿಯಿಂದ ಚಾಲಕರ ದಿನನಿತ್ಯದ ದುಡಿಮೆಗೆ ತೀವ್ರ ಅಡಚಣೆ ಉಂಟಾಗಿದೆ.
ಸುಮಾರು 10 ದಿನಗಳಿಂದ ಆಟೋ ಸಂಚಾರ ಸರಿಯಾಗಿ ನಡೆಯದ ಕಾರಣ ಅನೇಕ ಚಾಲಕರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ಇತ್ತ ಗ್ಯಾಸ್ ಬೆಲೆಯೂ ಏರಿಕೆಯಾಗಿದ್ದು, ಚಾಲಕರ ಮೇಲಿನ ಆರ್ಥಿಕ ಒತ್ತಡ ಹೆಚ್ಚಿಸಿದೆ. ಪ್ರತಿ ಆಟೋಗೆ ಕೇವಲ 500 ರೂ. ಮೌಲ್ಯದ ಗ್ಯಾಸ್ ಮಾತ್ರ ವಿತರಿಸಲಾಗುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಬಂಕ್ ಮುಂದೆ ನಿಂತ ಆಟೋಗಳ ಸರತಿ ಹಳೆಯ ಡಿಸಿ ಕಚೇರಿವರೆಗೆ ವಿಸ್ತರಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.
ಈ ನಡುವೆ ಅಡುಗೆ ಅನಿಲದ ಸಮಸ್ಯೆ ಮುಂದುವರಿದಿರುವಾಗಲೇ ಸಿಎನ್‌ಜಿ ಪಡೆಯಲು ಕೂಡ ಚಾಲಕರು ಪರದಾಡುತ್ತಿದ್ದಾರೆ. ಕಳೆದ 15 ದಿನಗಳಿಂದ ಗ್ಯಾಸ್ ಕೊರತೆ ಎದುರಾಗುತ್ತಿದ್ದು, ಕೆಲವೆಡೆ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಅಝಾದ್ ಆಟೋ ಚಾಲಕರ ಸಂಘದ ಸೈಯದ್ ಭಾಷಾ ಖಾದ್ರಿ ಆಗ್ರಹಿಸಿದ್ದಾರೆ.




