ಚುನಾವಣಾ ಅಕ್ರಮಗಳ ಆರೋಪಗಳ ನಡುವೆಯೂ ಕಾಂಗ್ರೆಸ್ ಪಕ್ಷವು ಚುನಾವಣೆಗಳನ್ನು ಬಹಿಷ್ಕರಿಸುವುದಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ‘‘ನಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ಕ್ಷಣವೇ ಭಾರತದ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿದಂತಾಗುತ್ತದೆ’’ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿಯುವುದು ಭಾರತದ ಪ್ರಜಾಪ್ರಭುತ್ವವನ್ನು ಕೈಬಿಟ್ಟಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
‘‘ವ್ಯವಸ್ಥೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಬಯಲಿಗೆಳೆಯುವುದು ನಮ್ಮ ಕಾರ್ಯತಂತ್ರವಾಗಿದೆ. ಇಡೀ ವ್ಯವಸ್ಥೆಯು ಸಂಪೂರ್ಣವಾಗಿ ನಾಶವಾಗಿದೆ ಎಂಬುದು ಭಾರತದ ಜನರಿಗೆ ಮನವರಿಕೆಯಾಗುವವರೆಗೂ ನಾವು ರಾಜಕೀಯ ಹಿನ್ನಡೆಗಳನ್ನು (ಪೆಟ್ಟುಗಳನ್ನು) ಸಹಿಸಿಕೊಂಡಾದರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ಚುನಾವಣಾ ವ್ಯವಸ್ಥೆ ಅಥವಾ ಪ್ರಜಾಪ್ರಭುತ್ವದ ಚೌಕಟ್ಟನ್ನು ಒಡೆಯಲು ನಾವು ಬಯಸುವುದಿಲ್ಲ’’ ಎಂದು ವಿವರಿಸಿದರು.
ವಿರೋಧ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರೆ, ಇಡೀ ಚುನಾವಣಾ ಪ್ರಕ್ರಿಯೆಯೇ ಜನರ ದೃಷ್ಟಿಯಲ್ಲಿ ವಿಶ್ವಾಸಾರ್ಹತೆ (ಕಾನೂನುಬದ್ಧತೆ) ಕಳೆದುಕೊಳ್ಳುತ್ತದೆ; ಅಂತಹ ಪರಿಸ್ಥಿತಿ ನಿರ್ಮಾಣವಾಗುವುದು ನಮಗೆ ಇಷ್ಟವಿಲ್ಲ ಎಂದರು. ಮತದಾರರ ಪಟ್ಟಿ ಮತ್ತು ಚುನಾವಣಾ ನಿರ್ವಹಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಡೆಸುತ್ತಿರುವ ‘ಮತ ಕಳ್ಳತನ’ (ವೋಟ್ ಚೋರಿ) ಅಭಿಯಾನದ ನಡುವೆಯೇ ರಾಹುಲ್ ಈ ಹೇಳಿಕೆ ನೀಡಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತಮ್ಮ ಬಳಿ ಪುರಾವೆಗಳಿದ್ದರೂ, ಆ ಕುರಿತು ಬಹಿರಂಗವಾಗಿ ಮಾತನಾಡದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು ತಮಗೆ ಸಲಹೆ ನೀಡಿದ್ದರು ಎಂದು ರಾಹುಲ್ ಗಾಂಧಿ ಬಹಿರಂಗಪಡಿಸಿದರು.
‘‘2014ರ ಚುನಾವಣೆಯಲ್ಲಿ ಕಂಡುಬಂದ ಅಸಾಧಾರಣ ಮತ್ತು ವಿವರಿಸಲಾಗದ ಗೆಲುವಿನ ಅಂತರವನ್ನು ನೋಡಿದಾಗಲೇ ಏನೋ ತಪ್ಪು ನಡೆದಿದೆ ಎಂದು ನಮಗೆ ಅನಿಸಿತ್ತು. ಆದರೆ, ಆಗ ನಮ್ಮ ಬಳಿ ಸಾಕ್ಷ್ಯವಿರಲಿಲ್ಲ. ನಂತರ ನನಗೆ ಪುರಾವೆಗಳು ಲಭ್ಯವಾಗಿ, ಅದನ್ನು ಪಕ್ಷದ ಹಿರಿಯ ನಾಯಕರ ಮುಂದಿಟ್ಟಾಗ, ‘ದಯವಿಟ್ಟು ಇದನ್ನು ಬಹಿರಂಗವಾಗಿ ಹೇಳಬೇಡಿ’ ಎಂದು ಅವರು ತಡೆದಿದ್ದರು’’ ಎಂದು ಸ್ಮರಿಸಿದರು.
ಚುನಾವಣಾ ಪ್ರಕ್ರಿಯೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸಲು ಹಿಂದೇಟು ಹಾಕಿದ್ದಕ್ಕೆ ಕಾರಣ ನೀಡಿದ ಅವರು, ‘‘ಕಾಂಗ್ರೆಸ್ ಪಕ್ಷವು ಭಾರತದ ಪ್ರಜಾಪ್ರಭುತ್ವವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತದೆ. ಹೀಗಾಗಿ, ನೂರಕ್ಕೆ ನೂರು, ಇನ್ನೂರು, ಮುನ್ನೂರು ಪ್ರತಿಶತದಷ್ಟು ಖಚಿತ ಪುರಾವೆಗಳಿಲ್ಲದೆ ಭಾರತದ ಪ್ರಜಾಪ್ರಭುತ್ವದಲ್ಲಿ ಸಮಸ್ಯೆಯಿದೆ ಎಂದು ಹೇಳುವುದು ನನಗೆ ಕಷ್ಟಕರವಾಗಿತ್ತು’’ ಎಂದರು.
ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್, ಆಯೋಗದ ಒಳಗಿನಿಂದಲೇ ವಿರೋಧ ಪಕ್ಷಗಳಿಗೆ ಮಾಹಿತಿ ಲಭ್ಯವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
‘‘ಚುನಾವಣಾ ಆಯೋಗವೇ ಈಗ ನಮಗೆ ಒಳಗಿನಿಂದ ಮಾಹಿತಿ ನೀಡುತ್ತಿದೆ. ಆಯೋಗದ ಹಿರಿಯ ಅಧಿಕಾರಿಗಳೇ ಈಗಿನ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದು, ‘ನೋಡಿ, ಇನ್ನು ಮುಂದೆ ಹೀಗೆ ಮುಂದುವರಿಯಲು ಸಾಧ್ಯವಿಲ್ಲ’ ಎನ್ನುತ್ತಿದ್ದಾರೆ. ಈ ವ್ಯವಸ್ಥೆ ಕುಸಿದು ಬೀಳುವುದು ಕೇವಲ ಸಮಯದ ಪ್ರಶ್ನೆಯಷ್ಟೇ’’ ಎಂದು ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲೂ ಮತದಾರರ ಪಟ್ಟಿಯಲ್ಲಿ ತಿರುಚುವಿಕೆ ನಡೆದಿದೆ ಎಂಬ ಆರೋಪವನ್ನು ಪುನರುಚ್ಚರಿಸಿದ ಅವರು, ನಕಲಿ ಮತ್ತು ಅನರ್ಹ ಮತದಾರರನ್ನು ಪಟ್ಟಿಗೆ ಸೇರಿಸಿದರೆ ಚುನಾವಣೆಯ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗುತ್ತದೆ ಎಂದರು.
ಇದಕ್ಕೆ ಉದಾಹರಣೆ ನೀಡಿದ ಅವರು, ‘‘ಭಾರತಕ್ಕೆ ಒಮ್ಮೆಯೂ ಭೇಟಿ ನೀಡದ ಬ್ರೆಜಿಲ್ ದೇಶದ ಮಹಿಳೆಯೊಬ್ಬರು ಭಾರತದ ರಾಜ್ಯವೊಂದರ ಚುನಾವಣೆಯಲ್ಲಿ 23 ಬಾರಿ ಮತ ಚಲಾಯಿಸಿದ್ದಾರೆ. ಇಂತಹ ನಿದರ್ಶನಗಳು ಚುನಾವಣಾ ಪ್ರಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ’’ ಎಂದು ತಿಳಿಸಿದರು.
ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುವ ಮೂಲಕ ‘ಪ್ರಜಾಪ್ರಭುತ್ವ ರಹಿತ ಭಾರತ’ವನ್ನು ನಿರ್ಮಿಸಲು ಮುಂದಾದರೆ, ಅದನ್ನು ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ದೇಶದ ಬಹುಸಂಖ್ಯಾತ ಜನರೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಚುನಾವಣಾ ಅಕ್ರಮಗಳ ವಿರುದ್ಧದ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.



