ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅಕ್ವಾನ್’ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಬಿರುಸು ಪಡೆದುಕೊಳ್ಳಲಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಂಗಾಳ ಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಲ್ಲಿ ನೆಲೆಗೊಂಡಿರುವ ‘ಅಕ್ವಾನ್’ ಚಂಡಮಾರುತವು ಸದ್ಯ ನಿಧಾನಗತಿಯಲ್ಲಿ ಉತ್ತರ-ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಶುಕ್ರವಾರದ ವೇಳೆಗೆ ಚಂಡಮಾರುತವು ಮತ್ತಷ್ಟು ಬಲಗೊಂಡು ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ. ಪರಿಣಾಮ, ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಗದಗ, ಕೊಪ್ಪಳ, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ ಎಂದು ಇಲಾಖೆ ತಿಳಿಸಿದೆ.
ಇನ್ನು, ಕರ್ನಾಟಕದ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಒಡಿಶಾ, ಪಶ್ಚಿಮ ಬಂಗಾಳಗಳಲ್ಲಿಯೂ ಮಳೆ ಅಬ್ಬರಿಸಲಿದೆ ಎಂದು ಇಲಾಖೆ ವಿವರಿಸಿದೆ.
ಹಲವೆಡೆ ಗಾಳಿಯ ವೇಗ ಗಂಟೆಗೆ 120ರಿಂದ 130 ಕಿಲೋಮೀಟರ್‌ವರೆಗೆ ತಲುಪಬಹುದು, ಕೆಲವೊಮ್ಮೆ ಗಂಟೆಗೆ 145 ಕಿಲೋಮೀಟರ್ ವೇಗದಲ್ಲೂ ಬಿರುಗಾಳಿ ಬೀಸಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.
ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ. ಇದರ ಜೊತೆಗೆ ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ 13 ಎನ್‌ಡಿಆರ್‌ಎಫ್ ತಂಡಗಳು, 11 ಎಸ್‌ಡಿಆರ್‌ಎಫ್ ತಂಡಗಳು ಹಾಗೂ ಸ್ಥಳೀಯ ಅಗ್ನಿಶಾಮಕ ದಳಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ


