“ಕನ್ನಡ ನಾಡು-ನುಡಿ, ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿಯ ಮೇಲೆ ನಡೆಯುತ್ತಿರುವ ದಾಳಿ ಹಾಗೂ ದೌರ್ಜನ್ಯಗಳನ್ನು ತಡೆಯಲು ಸಾಹಿತಿಗಳು ಕಾರ್ಯಪ್ರವೃತ್ತರಾಗಬೇಕು. ಸಾತ್ವಿಕ ಬದುಕು, ಸ್ವಸ್ಥ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸಾಹಿತ್ಯ ಕ್ಷೇತ್ರ ತನ್ನ ಕೊಡುಗೆ ನೀಡಬೇಕು” ಎಂದು ಧಾರವಾಡ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ವೀರಣ್ಣ ರಾಜೂರ ಹೇಳಿದರು.
ಧಾರವಾಡ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಬುಧವಾರ ನಡೆದ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “9ನೇ ಶತಮಾನದಿಂದ ವೈವಿಧ್ಯಮಯ ವಸ್ತು, ರೂಪ ಹಾಗೂ ಧೋರಣೆಗಳೊಂದಿಗೆ ಬೆಳೆದು ಬಂದ ಕನ್ನಡ ಸಾಹಿತ್ಯ ಪ್ರಸ್ತುತ ಚರ್ವಿತ ಚರ್ವಣ ಸ್ಥಿತಿಯಲ್ಲಿದೆ. ಸಾಹಿತ್ಯದಲ್ಲಿ ಹೊಸ ಹೊಳಹುಗಳು, ಎದ್ದುಕಾಣುವ ಹೊಸತನ ಕಾಣುತ್ತಿಲ್ಲ. ಕಾಲಮಾನದ ಅಗತ್ಯಕ್ಕೆ ಅನುಗುಣವಾಗಿ ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳಬೇಕು” ಎಂದರು.
“ಇತ್ತೀಚಿನ ಜೆನ್‌ಜಿ ಚಳವಳಿಗಳು ಸಾಮಾಜಿಕ ಆಂದೋಲನ ಮತ್ತು ಪರಿವರ್ತನೆಯ ಹೊಸ ಸಾಧ್ಯತೆಗಳನ್ನು ತೋರಿಸಿವೆ. ಯುವಜನತೆಗೆ ಸ್ಪಷ್ಟ ಗುರಿ ಹಾಗೂ ಸೂಕ್ತ ಮಾರ್ಗದರ್ಶನ ಅಗತ್ಯವಿದೆ. ಧಾರವಾಡದಲ್ಲಿ ಸ್ವತಂತ್ರ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬರಬೇಕು. ಕಲಾಭವನವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು. ಕಟಪಾ ಮೈದಾನವನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಮುಕ್ತಗೊಳಿಸಬೇಕು. ಟ್ಯೂಷನ್ ಮಾಫಿಯಾದಿಂದ ಧಾರವಾಡದ ಶೈಕ್ಷಣಿಕ ಘನತೆಗೆ ಧಕ್ಕೆಯಾಗದಂತೆ ಮೊದಲಿನ ಗೌರವ ಮರಳಿ ಸ್ಥಾಪಿಸಬೇಕು” ಎಂದು ಸಲಹೆ ನೀಡಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಡಾ. ಹೇಮಾ ಪಟ್ಟಣಶೆಟ್ಟಿ ಮಾತನಾಡಿ, “ಸಾಹಿತ್ಯ ಬದುಕಿನ ನೋವು ನಿವಾರಿಸಿ ಪ್ರೀತಿ, ಸ್ನೇಹ ಬೆಳೆಸುತ್ತದೆ. ಕನ್ನಡ ಉಳಿಸಿ ಬೆಳೆಸಲು ಮಕ್ಕಳು ಕನ್ನಡ ಪುಸ್ತಕ ಹಾಗೂ ಪತ್ರಿಕೆಗಳನ್ನು ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು” ಎಂದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್.ಬಿ. ಪ್ರಕಾಶ ಅಧ್ಯಕ್ಷತೆ ವಹಿಸಿದ್ದರು. ಅನಾರೋಗ್ಯದ ಕಾರಣ ಸಮ್ಮೇಳನ ಉದ್ಘಾಟಿಸಬೇಕಿದ್ದ ನಾಡೋಜ ಗೊ.ರು. ಚೆನ್ನಬಸಪ್ಪ ಗೈರಾಗಿದ್ದರು. ಮಹಾಂತೇಶ ನರೇಗಲ್ಲ ರಚನೆಯ ಕನ್ನಡದ ಕಣ್ಮಣಿಗಳು ಹಾಗೂ ಲಕ್ಷ್ಮಿ ದೊಡಮನಿ ರಚನೆಯ ನಾವ್ ರೀ ಉತ್ತರ ಕರ್ನಾಟಕದ ಮಂದಿ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಕಸಾಪ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಪದಾಧಿಕಾರಿ ಡಾ. ಎಸ್.ಎಸ್. ದೊಡಮನಿ, ಪ್ರೊ. ಕೆ.ಎಸ್. ಕೌಜಲಗಿ, ಡಾ. ಜಿನದತ್ತ ಹಡಗಲಿ ಹಾಗೂ ನಾರಾಯಣ ಭಜಂತ್ರಿ ಇದ್ದರು.



