ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ…
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆ- ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಎದೆಗುಂದದೇ ಮುನ್ನುಗ್ಗುತ್ತಿದ್ದಾಳೆ. ನಿಜಕ್ಕೂ ಇದು ನಮ್ಮ ಆಧುನಿಕ ಸಮಾಜದ ಅಭಿವೃದ್ಧಿಯ ಸಂಕೇತ. ಸಾಧನೆಗೆ ಹೆಣ್ಣು ಗಂಡು, ಬಡವರು ಶ್ರೀಮಂತರು, ದೀನರು ದಲಿತರು ಎಂಬ ಭೇದವಿಲ್ಲ. ಮನಸ್ಸಿದ್ದರೆ ಮಾರ್ಗ ನೂರಾರು. ಶ್ರದ್ಧೆ, ಆಸಕ್ತಿ ಇದ್ದಲ್ಲಿ ಯಾರೂ ಸಾಧನೆಯ ಶಿಖರವನ್ನು ಏರಬಲ್ಲರು ಎಂಬುದಕ್ಕೆ ನಮ್ಮ ಹಾಸನ ಜಿಲ್ಲೆಯ ಏಕೈಕ ಸೈನಿಕ ಮಹಿಳೆ ಎಂ.ಬಿ.ಪ್ರೀತಿ. ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.
ಇಂದು ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಡಾಕ್ಟರ್, ಇಂಜಿನಿಯರ್ ಆಗಬೇಕು ಎಂಬುದಕ್ಕೇ ಜೋತು ಬೀಳುವುದು. ಅದಿಲ್ಲವೆಂದರೆ ಶಿಕ್ಷಕಿಯಾಗಿಯೋ ಅಥವಾ ಇನ್ನಾವುದೋ ಇಲಾಖೆಯಲ್ಲಿ ಅಧಿಕಾರಿಯಾಗಿಯೋ, ಮತ್ತೊಂದೊ ಆಗುವುದು ಸರ್ವೇ ಸಾಮಾನ್ಯ. ಆದರೆ ತನ್ನ ಕುಟುಂಬವನ್ನೇ ತೊರೆದು ದೇಶ ಸೇವಾ ಕಾರ್ಯಕ್ಕೆ, ಅದರಲ್ಲಿಯೂ ಅತಿ ಚಿಕ್ಕ ವಯಸ್ಸಿನಲ್ಲಿಯೇ ಗಂಡ, ಮಕ್ಕಳನ್ನು ಊರಿನಲ್ಲಿ ಬಿಟ್ಟು, ತಾನು ದೂರದ ಊರಿನಲ್ಲಿ ಕರ್ತವ್ಯ ನಿರ್ವಹಿಸುವ ನಿರ್ಧಾರ ಅತ್ಯಂತ ಶ್ಲಾಘನೀಯ, ಅನುಕರಣೀಯ. ಸಂಪಾದನೆಗಾಗಿ ಎಲ್ಲಿಯಾದರೂ ಹೋಗಿ ಏನನ್ನಾದರೂ ಮಾಡಬಹುದು. ಆದರೆ ಈ ರೀತಿಯ ಸವಾಲಿನ, ಶ್ರಮದಾಯಕ ಕೆಲಸದ ನಿರ್ಧಾರ ತೆಗೆದುಕೊಳ್ಳುವ ಮಧ್ಯಮ ವರ್ಗದ ಒಬ್ಬ ಮಹಿಳೆಯ ಛಲ, ದಿಟ್ಟ ನಿಲುವು, ದೇಶಪ್ರೇಮಕ್ಕೆ ಎಲ್ಲರೂ ಒಮ್ಮೆ ಸಲಾಂ ಹೇಳಲೇಬೇಕು.
ಈ ನಿಟ್ಟಿನಲ್ಲಿ ನಮ್ಮ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಾದಾಪುರದ ಪ್ರೀತಿ ಎಂಬ ಯುವತಿ, ವಿಶ್ವಸಂಸ್ಥೆಯ ಕರ್ತವ್ಯಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಮಹಿಳೆಯಾಗಿ ವಿಶಿಷ್ಟ ಸಾಧನೆಯತ್ತ ದಿಟ್ಟ ಹೆಜ್ಜೆಯನ್ನಿರಿಸುವ ಮೂಲಕ ನಮ್ಮೆಲ್ಲಾ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ. ನಮ್ಮ ಜಿಲ್ಲೆಯ, ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಕುಟುಂಬವನ್ನು ಇದ್ದೂರಲ್ಲಿ ಬಿಟ್ಟು, ಕರ್ತವ್ಯವೇ ಮುಖ್ಯವೆಂದು ಪ್ರೀತಿ, ಮುಂದಡಿ ಇಟ್ಟಿರುವುದು ಜಿಲ್ಲೆಗೇ ಹೆಮ್ಮೆಯ ಸಂಗತಿ. ಪುಟ್ಟ ಮಕ್ಕಳನ್ನು ಬಿಟ್ಟು ಕರ್ತವ್ಯಕ್ಕೆ ಹೋಗದಂತೆ ಅಳುತ್ತಾ ಗೋಗರೆದರೂ, ಎದೆಗುಂದದೆ ಭಾವುಕಳಾಗಿ ಕರಗದೇ ಕೊರಗದೇ ದೇಶ ಸೇವೆಗಾಗಿ ಅರ್ಪಿಸಿಕೊಂಡ ವೀರ ವನಿತೆ ಹಾಸನದ ಹೆಮ್ಮೆಯ ಪುತ್ರಿ ಪ್ರೀತಿ!
ಇದನ್ನು ಓದಿದ್ದೀರಾ?: ಜಿಲ್ಲೆಯ ಕಲಾವಿದೆಯರಿಂದ ಹಸನಾದ ರಂಗಭೂಮಿ
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಮಾದಾಪುರ ಗ್ರಾಮದ ದಿವಂಗತ ಬಸಪ್ಪ ಮತ್ತು ಜಯಮ್ಮ ದಂಪತಿಗಳ ಮೂರು ಮಕ್ಕಳಲ್ಲಿ ಕೊನೆಯವರಾದ ಪ್ರೀತಿ, 26 ಡಿಸೆಂಬರ್ 1992ರಂದು ಜನಿಸಿದರು. ಅವರು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಪದವಿ ಓದುವಾಗಲೇ ಮದುವೆ ಮಾಡಲು ಮನೆಯವರು ನಿರ್ಧರಿಸಿದ್ದರು. ಆದರೆ ಪ್ರೀತಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸರ್ಕಾರಿ ನೌಕರಿಗೆ ಸೇರಬೇಕೆಂಬ ಮಹದಾಸೆ ಹೊಂದಿದ್ದರು. ಆದರೆ ಪೋಷಕರ ನಿರ್ಧಾರ ಅವರ ಆಸೆಗೆ ಅಡ್ಡಿಯಾಗಿ, 2014ರ ಮಾರ್ಚ್ 27ರಂದು ಹೊಳೆನರಸೀಪುರ ತಾಲೂಕಿನ ಬೆಟ್ಟದ ಸಾತೇನಹಳ್ಳಿ ಗ್ರಾಮದ ಷಣ್ಮುಖ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.
ಮದುವೆಯ ನಂತರ ಬಿಎಡ್ ಪದವಿಗೆ ಸೇರಿದ್ದರೂ ಓದಿನ್ನೂ ಆರು ತಿಂಗಳಲ್ಲಿ ಮುಗಿಯುವ ಮೊದಲೇ ಭಾರತೀಯ ಸೇನೆಗೆ ಆಯ್ಕೆಯಾಗುತ್ತಾರೆ. ಕುಟುಂಬಸ್ಥರ ಒಪ್ಪಿಗೆ ಪಡೆದು ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್ ಬೆಟಾಲಿಯನ್-9ಕ್ಕೆ ಸೇರ್ಪಡೆಗೊಂಡರು. ಇವರು ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದಾಗ ನಾಗಾಲ್ಯಾಂಡ್ನಲ್ಲಿ ವಾಸವಿದ್ದರು. ಎಂಟು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಪ್ರೀತಿ ಅವರು, ವಿಶ್ವ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಲು ನಡೆಸುವ ರೈಫಲ್ ಶೂಟಿಂಗ್ ಆಯ್ಕೆ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನು ಓದಿದ್ದೀರಾ?: ಜಿಲ್ಲೆಯ ಗಮಕ ಲೋಕದ ತಾರೆಯರು
ಎಂ.ಬಿ.ಪ್ರೀತಿಯವರು ಅರ್ಹತಾ ಪರೀಕ್ಷೆ ಎದುರಿಸಿ, ವಿಶ್ವ ಸಂಸ್ಥೆಯ ಶಾಂತಿ ಸೇನಾ ಪಡೆಗೆ 2020ರಲ್ಲಿ ಆಯ್ಕೆಯಾದರು. ಪ್ರೀತಿ ಅವರ ಪತಿ ಷಣ್ಮುಖ ಕೃಷಿಕರು. ಪತ್ನಿ ಸೇನೆಗೆ ಸೇರಲು ಬಯಸಿದಾಗ ಆತಂಕಪಟ್ಟರು. ಜೊತೆಗೆ ಸಂಬಂಧಿಕರು, ಗ್ರಾಮಸ್ಥರು ನಕಾರಾತ್ಮಕ ಮಾತುಗಳಿಂದ ಕುಟುಕುತ್ತಿದ್ದರೂ ಯಾರ ಮಾತಿಗೂ ಕಿವಿಗೊಡದೇ ಎಲ್ಲರ ಅನಿಸಿಕೆ ಅಭಿಪ್ರಾಯಗಳನ್ನು ಬದಿಗೊತ್ತಿ ಪತ್ನಿಯ ಮನದಾಶೆಯ ಬೆಂಬಲಕ್ಕೆ ನಿಂತರು. ಜೊತೆಗೆ ಮಕ್ಕಳಿಬ್ಬರನ್ನೂ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಹೊತ್ತುಕೊಂಡರು. ಇದೀಗ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಲು ಪತ್ನಿಗೆ ಅವಕಾಶ ಸಿಕ್ಕಿರುವುದಕ್ಕೆ, ಪತಿಯೂ ಹೆಮ್ಮೆಯಿಂದ ಸಂತೃಪ್ತರಾಗಿದ್ದಾರೆ. ಕುಟುಕಿ ಅಡ್ಡಿಯಾದವರೂ ಹೆಮ್ಮೆ ಪಡುತ್ತಿದ್ದಾರೆ. ಜೀವದ ಹಂಗು ತೊರೆದು, ಕುಟುಂಬದಿಂದ ದೂರವಿದ್ದು ಹೆಣ್ಣುಮಕ್ಕಳು ದೂರದಲ್ಲೆಲ್ಲೋ ವೃತ್ತಿ ಮಾಡಲು ಒತ್ತಾಸೆಯಾಗಿ ನಿಲ್ಲುವ ಪುರುಷರು ಬೆರಳೆಣಿಕೆಯಷ್ಟು. ತಮ್ಮ ಪತ್ನಿ ಪ್ರೀತಿಯ ಸಾಧನೆಗೂ ಸಹಕರಿಸಿ ಒತ್ತಾಸೆಯಾಗಿ ನಿಲ್ಲುವ ಮೂಲಕ ಪತ್ನಿಯ ಸಾಧನೆಯ ಒಂದು ಭಾಗವೇ ಆಗಿದ್ದಾರೆ. ದೇಶ ಸೇವೆಗೆ ಪತ್ನಿಯನ್ನು ಸಂತೋಷದಿಂದ ಕೊಡುಗೆಯಾಗಿಸಿ ಪುರುಷರಿಗೂ ಮಾದರಿಯಾಗಿದ್ದಾರೆ!
ಸದ್ಯ ಎಂ.ಬಿ.ಪ್ರೀತಿಯವರು ವಿಶ್ವಸಂಸ್ಥೆಯ ಶಾಂತಿ ಸೇನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಟುಂಬದ ಹೊಣೆಗಾರಿಕೆಯ ನಡುವೆಯೂ ಅವರ ಈ ಸೇವೆಯು ಮಾದರಿಯಾಗಿದೆ. ಮದುವೆ, ಮಕ್ಕಳು ನಂತರ ದಾಂಪತ್ಯ ಜೀವನಕ್ಕೆ ಸೀಮಿತವಾಗುವ ಹೆಣ್ಣುಮಕ್ಕಳ ನಡುವೆ ಪ್ರೀತಿ ಅವರ ನಿಲುವುಗಳು ಯುವಜನರಿಗೆ ಸ್ಪೂರ್ತಿಯಾಗಿದೆ. ಸೇನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಲು ದೈಹಿಕ ಕ್ಷಮತೆ, ಇಚ್ಛಾಶಕ್ತಿ ಅಗತ್ಯವಾಗಿದೆ. ಕರ್ತವ್ಯದ ಸಂದರ್ಭದಲ್ಲಿ ಅನೇಕ ಪ್ರತಿಕೂಲ ಸನ್ನಿವೇಶಗಳನ್ನು ಅವರು ಎದುರಿಸಬೇಕಾಗುತ್ತದೆ. ಈ ಎಲ್ಲಾ ಅಡ್ಡಿ ಆತಂಕಗಳನ್ನು ಎದುರಿಸಿ ಸಶಕ್ತ ಯೋಧರಾಗಿ ಭಾರತೀಯ ಸೇನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೀತಿ ಅಭಿನಂದನಾರ್ಹರು.
-ಜಿ.ಎಸ್.ಕಲಾವತಿ ಮಧುಸೂದನ




