ಪ್ರಪಂಚದ ಎಲ್ಲಾ ಜ್ಞಾನವನ್ನು ಒಂದೇ ಸೂರಿನಡಿ ತರುವ ತವಕ ನನ್ನದು. ಅರ್ಧ ಶತಮಾನದ ಪರಿಶ್ರಮದಿಂದ ಜ್ಞಾನ ಹಂಚುವ ಪುಸ್ತಕ ಮನೆ ಸ್ಥಾಪನೆಗಾಗಿ 2026ರ ʼಅನ್ಸಂಗ್ ಹೀರೋಸ್ʼ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ನನಗೆ ದೊರಕಿದೆ. ನಳಂದ ವಿಶ್ವವಿದ್ಯಾಲಯದಲ್ಲಿದ್ದ ಮೂರು ಅಂತಸ್ತಿನ ಧರ್ಮಗಂಜ್ ಅಂತಹದ್ದೇ ಗ್ರಂಥಾಲಯ ಸ್ಥಾಪಿಸುವ ಬಯಕೆಯಿದೆ ಎಂದು ಎಂ ಅಂಕೇಗೌಡ ಆಶಯ ವ್ಯಕ್ತ ಪಡಿಸಿದ್ದಾರೆ.
ಶ್ರೀರಂಗಪಟ್ಟಣದ ಸಂಜಯ ಪ್ರಕಾಶನ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, “ಧರ್ಮಗಂಜ್ ಗ್ರಂಥಾಲಯದಲ್ಲಿ ಜಗತ್ತಿನ ಮೂಲೆ ಮೂಲೆಯಿಂದ ಸಂಗ್ರಹಿಸಿದ ಹಸ್ತಪ್ರತಿಗಳು ಸುಟ್ಟು ಬೂದಿಯಾಯಿತು. ಅಂತಹದ್ದೇ ಗ್ರಂಥಾಲಯ ನಮ್ಮಲ್ಲೂ ನಿರ್ಮಿಸಬೇಕು. ಹರಳಹಳ್ಳಿ ಗ್ರಾಮದ ಪುಸ್ತಕದ ಮನೆಯನ್ನು ಪ್ರತಿರೂಪವಾಗಿ ಬೆಳೆಸಬೇಕು. ಇಟ್ಟಿಗೆ ಸಿಮೆಂಟ್ ಕಟ್ಟಡವಲ್ಲ, ಜ್ಞಾನ ವಿಶ್ವವಿದ್ಯಾನಿಲಯವಾಗಲು ಸಾರ್ವಜನಿಕರ ಸಹಕಾರ ಅಗತ್ಯವಿರುತ್ತದೆ” ಎಂದು ಅಭಿಪ್ರಾಯಿಸಿದರು.
ಶ್ರೀರಂಗಪಟ್ಟಣದ ಹಿರಿಯ ಗಾಂಧಿವಾದಿ ಡಾ ಬಿ ಸುಜಯ್ ಕುಮಾರ್ ಮಾತನಾಡಿ, “ಸಾಮಾನ್ಯ ರೈತ ಕುಟುಂಬದ ವ್ಯಕ್ತಿ 20ಲಕ್ಷಕ್ಕೂ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿದ್ದು ಸಾಮಾನ್ಯ ಸಾಧನೆಯಲ್ಲ, ಪ್ರಶಸ್ತಿಗಿಂತಲೂ ಮುಖ್ಯವಾದದ್ದು ಅವರು ನಿರ್ಮಾಣ ಮಾಡಿದ ಪುಸ್ತಕದ ಮನೆ. ಮಹಾತ್ಮ ಗಾಂಧಿ ಹೇಳಿದ್ದು ಹೀಗೆ ನಿಜವಾದ ಶಿಕ್ಷಣ ಎಂದರೆ ಹೃದಯ ಮತ್ತು ಮನಸ್ಸನ್ನು ಒಟ್ಟಿಗೆ ಕಟ್ಟುವುದು, ಇಂತಹ ಹೇಳಿಕೆಯ ಮಾತಿಗೆ ಜೀವಂತ ರೂಪವನ್ನು ಕೊಟ್ಟ ವ್ಯಕ್ತಿಯನ್ನು ನಾವು ಸನ್ಮಾನಿಸುತ್ತಿರುವುದು ನಮ್ಮ ಮಂಡ್ಯ ಜಿಲ್ಲೆಯ ಹಿರಿಮೆ ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಜಯ ಪ್ರಕಾಶನದ ಸಂಸ್ಥಾಪಕ ಎಸ್ ಎಂ ಶಿವಕುಮಾರ್ , ಯುವ ಬರಹಗಾರ ಬಳಗದ ಸಂಸ್ಥಾಪಕರಾದ ಸತೀಶ್ ಜವರೇಗೌಡ,ಮಹಿಳಾ ಸಾಂತ್ವನದ ಸಂಸ್ಥಾಪಕಿ ಶೀಲಾ ನಂಜುಂಡಯ್ಯ, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಮುಸ್ಲಿಂ ಸೌಹಾರ್ದ ವೇದಿಕೆ ಖಜಾಂಚಿ ಆಯುಬ್, ಶ್ರೀರಂಗನಾಯಕಿ ಸ್ತ್ರೀ ಸಮಾಜದ ಸದಸ್ಯರಾದ ಸುಮಂಗಲ, ಸುಧಾ, ಶಿಕ್ಷಕಿ ಎಚ್ ಜೆ ಶೀಲಾ, ಕನ್ನಡ ಪ್ರಾಧ್ಯಾಪಕ ಶಿವಕುಮಾರ್ ಕಾರೆಪುರ, ಡಾ. ಬಿ ಕೆ ರಾಮು, ಪ್ರಾಧ್ಯಾಪಕ ಬ್ಯಾಡರಹಳ್ಳಿ ಧನಂಜಯ್, ಸಾಹಿತಿ ಕ್ಯಾತನಹಳ್ಳಿ ಚಂದ್ರಣ್ಣ, ಪತ್ರಕರ್ತರಾದ ಗಣಂಗೂರು ನಂಜೇಗೌಡ, ವಕೀಲ ಎಸ್ ಆರ್ ಸಿದ್ದೇಶ್, ಚಿಕ್ಕತಮ್ಮೆಗೌಡ, ಸದಾನಂದ, ಸುರೇಶ್ ಇದ್ದರು.





