ಕಲೆ ಅಜರಾಮರ, ಕಲಾವಿದ ಚಿರಂಜೀವಿ. ಪ್ರತಿವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ. ಇದು ರಂಗಕಲೆಯ ಅಗಾಧ ಮಹತ್ವ, ಸಮಾಜದಲ್ಲಿ ಜಾಗೃತಿ ಹಾಗೂ ರಂಗಭೂಮಿ ಕಲಾವಿದರನ್ನು ಗೌರವಿಸುವ ಅಂತಾರಾಷ್ಟ್ರೀಯ ದಿನವಾಗಿದೆ. ಈ ಶುಭ ಸಂದರ್ಭದಲ್ಲಿ ನಮ್ಮ ಶ್ರೀರಂಗಪಟ್ಟಣದ ಖ್ಯಾತ ಪೌರಾಣಿಕ ನಾಟಕಗಳ ಹೆಮ್ಮೆಯ ಕಲಾವಿದರಾದ ಗಣಂಗೂರು ನಂಜೇಗೌಡ ದಂಪತಿಗೆ ಪ್ರೀತಿಪೂರ್ವಕವಾದ ಗೌರವ ಸಮರ್ಪಣೆಯನ್ನು ಅರ್ಪಿಸಲು ನಮಗೆ ಅತೀವ ಸಂತೋಷವಾಗುತ್ತಿದೆ ಎಂದು ಶ್ರೀರಂಗಪಟ್ಟಣ ಐಕ್ಯ ಅಲಯನ್ಸ್ ಸಂಸ್ಥೆಯ ಅಧ್ಯಕ್ಕೆ ಎನ್. ಸರಸ್ವತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ಪ್ರಕಾಶನದಲ್ಲಿ, ಐಕ್ಯ ಅಲಯನ್ಸ್ ಹಾಗೂ ಶ್ರೀರಂಗನಾಯಕಿ ಸಮಾಜದ ಸಂಯುಕ್ತಾಶ್ರಯದಲ್ಲಿ ‘ವಿಶ್ವ ರಂಗಭೂಮಿ ದಿನ’ದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ರಂಗಭೂಮಿಯ ಮಹತ್ವವನ್ನು ಸಾರಿದರು.
ಶ್ರೀರಂಗನಾಯಕಿ ಸಮಾಜದ ಅಧ್ಯಕ್ಷೆ ವಿಶಾಲಾಕ್ಷಿ ಮಾತನಾಡಿ, ”ರಂಗಭೂಮಿ ಕೇವಲ ಮನರಂಜನೆಯ ಸಾಧನವಲ್ಲ; ಅದು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಅತ್ಯಂತ ಪ್ರಭಾವಶಾಲಿ ವೇದಿಕೆ. ನಮ್ಮ ವಿವಿಧ ಸಂಸ್ಕೃತಿಗಳು ಮತ್ತು ಪರಂಪರೆಗಳ ನಡುವೆ ಒಂದು ಜೀವಂತ ಸೇತುವೆಯಾಗಿ ಕಾರ್ಯನಿರ್ವಹಿಸುವ ಶಕ್ತಿಯುತ ಮಾಧ್ಯಮವೇ ರಂಗಭೂಮಿ” ಎಂದು ರಂಗಮಾಧ್ಯಮದ ಶಕ್ತಿಯ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಡಿಕೆ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕನ ಮೃತದೇಹ ಪತ್ತೆ
ಈ ಗೌರವ ಸಮರ್ಪಣಾ ಸಮಾರಂಭದಲ್ಲಿ ಕುವೆಂಪು ಆಚರಣಾ ಸಮಿತಿ ಅಧ್ಯಕ್ಷ ಸಿ. ಸ್ವಾಮಿಗೌಡ, ಅಧ್ಯಕ್ಷರು, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಶ್ರೀರಂಗನಾಯಕಿ ಸಮಾಜ ಮಾಜಿ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ಕಡತನಾಳು ಕೆ ಎಂ ಕೃಷ್ಣಕುಮಾರ್ ಬನಶಂಕರಿ ಹಾಗೂ ರಂಗಾಸಕ್ತರು ಮತ್ತು ಸ್ಥಳೀಯ ಕಲಾಭಿಮಾನಿಗಳು, ಹಲವು ಗಣ್ಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಪ್ರಮುಖರು ಪಾಲ್ಗೊಂಡಿದ್ದರು.





