ಜಾಗತಿಕವಾಗಿ ನಷ್ಟ ಮತ್ತು ಸವಾಲುಗಳನ್ನು ಎದುರಿಸುತ್ತಿರುವ ಪ್ರಮುಖ ಚಿಪ್ ತಯಾರಕ ಸಂಸ್ಥೆ ‘ಕ್ವಾಲ್‌ಕಾಮ್’, ತನ್ನ ಉದ್ಯೋಗಿಗಳಿಗೆ ಬಹುದೊಡ್ಡ ಶಾಕ್ ನೀಡಿದೆ. ಕಂಪನಿಯು ಜಾಗತಿಕವಾಗಿ ಬೃಹತ್ ಪ್ರಮಾಣದ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಆರಂಭಿಸಿದ್ದು, ಇದರ ನೇರ ಪರಿಣಾಮ ಭಾರತದಲ್ಲೂ ಗೋಚರಿಸಿದೆ. ದೇಶದ ವಿವಿಧೆಡೆಯಿರುವ ಕ್ವಾಲ್‌ಕಾಮ್ ಕಚೇರಿಗಳಲ್ಲಿ ಸುಮಾರು 1,000 ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ಕ್ರಿಸ್ಟಿಯಾನೋ ಅಮೊನ್ ಕಳೆದ ತಿಂಗಳು ಉದ್ಯೋಗಿಗಳಿಗೆ ಕಳುಹಿಸಿದ್ದ ಇಂಟರ್ನಲ್ ಮೆಮೊ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಕುರಿತು ಕಂಪನಿಯಿಂದ ಅಧಿಕೃತ ಹೇಳಿಕೆ ಹೊರಬಂದಿಲ್ಲವಾದರೂ, ಮಾಧ್ಯಮ ವರದಿಗಳು ಹಾಗೂ ಉದ್ಯೋಗಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಪುನರ್ರಚನಾ ಪ್ರಕ್ರಿಯೆ ತೀವ್ರಗೊಂಡಿದೆ.
‘ಫೈನಾನ್ಷಿಯಲ್ ಎಕ್ಸ್‌ಪ್ರೆಸ್’ ವರದಿಯ ಪ್ರಕಾರ, ಕ್ವಾಲ್‌ಕಾಮ್ ತನ್ನ ಒಟ್ಟು ಜಾಗತಿಕ ಕಾರ್ಯಪಡೆಯ ಶೇ. 7ರಷ್ಟನ್ನು ಕಡಿತಗೊಳಿಸಲು ನಿರ್ಧರಿಸಿದೆ. ಕಂಪನಿಯಲ್ಲಿ ಪ್ರಸ್ತುತ 52,000 ಮಂದಿ ಕೆಲಸ ಮಾಡುತ್ತಿದ್ದು, ಇದರಿಂದ ಅಂದಾಜು 3,600 ಉದ್ಯೋಗಿಗಳು ಬೀದಿಗೆ ಬೀಳಲಿದ್ದಾರೆ.
ಭಾರತದಲ್ಲೂ ಕ್ವಾಲ್‌ಕಾಮ್ ಬಲವಾಗಿ ಬೇರೂರಿದ್ದು, ಬೆಂಗಳೂರು, ಹೈದರಾಬಾದ್, ದೆಹಲಿ ಎನ್‌ಸಿಆರ್ ಮತ್ತು ಚೆನ್ನೈ ಕೇಂದ್ರಗಳಲ್ಲಿ ಒಟ್ಟು 20,000ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಮೊದಲ ಹಂತದಲ್ಲಿ ಸುಮಾರು 1,000 ಉದ್ಯೋಗಿಗಳ ಮೇಲೆ ಕಠಿಣ ನಿರ್ಧಾರ ಕೈಗೊಳ್ಳಲಾಗುತ್ತಿದ್ದು, ಮುಂಬರುವ ಜನವರಿಯಲ್ಲಿ ಮತ್ತೊಂದು ಸುತ್ತಿನ ಕಡಿತ ನಡೆಯುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಹಿರಿಯ ಎಂಜಿನಿಯರ್‌ಗಳು ಹಾಗೂ ಇತ್ತೀಚೆಗೆ ನೇಮಕಗೊಂಡ ನೌಕರರು ಮೊದಲ ಹಂತಕ್ಕೆ ಬಲಿಯಾಗುತ್ತಿದ್ದಾರೆ.
ಕೆಲಸ ಕಳೆದುಕೊಂಡ ಕೆಲವು ನೌಕರರು ‘ರೆಡ್ಡಿಟ್’ ವೇದಿಕೆಯಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ‘ಅನಾನಮಸ್ ಪ್ರಾಕ್ಟಿಕಲ್’ ಎಂಬ ಹೆಸರಿನ ಬಳಕೆದಾರರೊಬ್ಬರು, “ನನ್ನ ಮ್ಯಾನೇಜರ್‌ನಿಂದ 1:1 ಸಭೆಗೆ ಕರೆ ಬಂತು. ಸಭೆಯಲ್ಲಿ ನನ್ನನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಲಾಯಿತು” ಎಂದು ಬರೆದುಕೊಂಡಿದ್ದಾರೆ.
ಕಂಪನಿಯು ನೀಡಿದ ಪರಿಹಾರ ಪ್ಯಾಕೇಜ್ ಕುರಿತು ಮಾತನಾಡಿರುವ ಅವರು, “3 ತಿಂಗಳ ಮೂಲ ವೇತನ ಹಾಗೂ ಕಂಪನಿಯಲ್ಲಿ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ 1 ತಿಂಗಳ ಹೆಚ್ಚುವರಿ ವೇತನವನ್ನು ಪರಿಹಾರವಾಗಿ ನೀಡಲಾಗಿದೆ. ಒಂದು ವೇಳೆ ನಾನು 2-3 ದಿನಗಳ ಒಳಗೆ ವಜಾಗೊಳಿಸುವ ಪತ್ರಕ್ಕೆ ಸಹಿ ಹಾಕಿದರೆ, ಹೆಚ್ಚುವರಿಯಾಗಿ ಮತ್ತೊಂದು ತಿಂಗಳ ವೇತನ ನೀಡುವುದಾಗಿ ತಿಳಿಸಿದ್ದಾರೆ” ಎಂದು ವಿವರಿಸಿದ್ದಾರೆ. ಉದ್ಯೋಗ ಕಡಿತವು ವೈಯಕ್ತಿಕ ಕಾರ್ಯಕ್ಷಮತೆಯ ಆಧಾರದ ಮೇಲಲ್ಲ, ಬದಲಿಗೆ ಸಂಪೂರ್ಣವಾಗಿ ‘ವ್ಯಾಪಾರ ಅಗತ್ಯತೆಗಳ’ ಮೇರೆಗೆ ಕೈಗೊಂಡಿರುವ ನಿರ್ಧಾರ ಎಂದು ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಂಪನಿಯ ವಾರ್ಷಿಕ ವಿಮರ್ಶೆಯ ನಂತರ ಕಾರ್ಯಕ್ಷಮತೆ ಪ್ರಕ್ರಿಯೆ ನವೆಂಬರ್‌ನಿಂದಲೇ ಜಾರಿಗೆ ಬರಲಿದೆ ಎಂದು ಸಿಇಒ ಕ್ರಿಸ್ಟಿಯಾನೋ ಅಮೊನ್ ಹಿಂದೆಯೇ ಸುಳಿವು ನೀಡಿದ್ದರು. ಪ್ರಸ್ತುತ ಕ್ವಾಲ್‌ಕಾಮ್‌ನ ಸ್ಮಾರ್ಟ್‌ಫೋನ್ ಚಿಪ್ ವ್ಯವಹಾರ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಇತ್ತೀಚಿನ ತ್ರೈಮಾಸಿಕದಲ್ಲಿ ಹ್ಯಾಂಡ್‌ಸೆಟ್ ಆದಾಯ ಶೇ. 25ರಷ್ಟು ಕುಸಿದಿದೆ.
ಮತ್ತೊಂದೆಡೆ, ಕಂಪನಿಯು ಕೃತಕ ಬುದ್ಧಿಮತ್ತೆ (AI), ಡೇಟಾ ಸೆಂಟರ್‌ಗಳು ಮತ್ತು ಸಂಪರ್ಕಿತ ಸಾಧನಗಳ ವಲಯದತ್ತ ತನ್ನ ಗಮನ ಹರಿಸುತ್ತಿದೆ. ಮುಂಬರುವ ದಿನಗಳಲ್ಲಿ ಲಾಭ ಕುಸಿಯುವ ಮುನ್ಸೂಚನೆ ಹಾಗೂ ಆಪಲ್ ಉತ್ಪನ್ನಗಳಿಂದ ಬರುವ ಆದಾಯವು ನಿರೀಕ್ಷೆಗಿಂತ ವೇಗವಾಗಿ ಇಳಿಕೆಯಾಗುವ ಅಂಜಿಕೆಯಿಂದ ಈ ಕಠಿಣ ಹೆಜ್ಜೆಯನ್ನು ಇಡಲಾಗಿದೆ.
ಕೇವಲ ಕ್ವಾಲ್‌ಕಾಮ್ ಮಾತ್ರವಲ್ಲದೆ, ಇಡೀ ಜಾಗತಿಕ ಟೆಕ್ ವಲಯವೇ ಉದ್ಯೋಗ ಕಡಿತದ ಸಂಕಷ್ಟ ಎದುರಿಸುತ್ತಿದೆ. ಈ ತಿಂಗಳ ಆರಂಭದಲ್ಲಷ್ಟೇ ‘ಕ್ಯಾನ್ವಾ’ ಸಂಸ್ಥೆಯು ಆಂತರಿಕ ಪುನರ್ರಚನೆಯ ಭಾಗವಾಗಿ ಜಾಗತಿಕವಾಗಿ 1,271 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ವಜಾಗೊಂಡ ನೌಕರರಿಗೆ ಉಚಿತ ಮ್ಯಾಕ್‌ಬುಕ್ ಹಾಗೂ ಲಿಂಕ್ಡ್‌ಇನ್ ಪ್ರೀಮಿಯಂ ನೀಡಿ ಸುದ್ದಿಯಾಗಿತ್ತು. ಜ್ಯಾಕ್ ಡೋರ್ಸೆ ಅವರ ‘ಬ್ಲಾಕ್’ ಕಂಪನಿಯೂ ಉದ್ಯೋಗ ಕಡಿತ ಮಾಡಿದ್ದು, ತಲಾ $5,000 ನಗದು ಪರಿಹಾರ ನೀಡಿದೆ.
ಉದ್ಯೋಗ ಕಡಿತಗಳ ವಿವರ ನೀಡುವ ‘Layoffs.fyi’ ಜಾಲತಾಣದ ಪ್ರಕಾರ, ಈ ವರ್ಷ ಇದುವರೆಗೆ ಸುಮಾರು 350ಕ್ಕೂ ಹೆಚ್ಚು ಕಂಪನಿಗಳು ಒಟ್ಟು 1,42,000ಕ್ಕೂ ಅಧಿಕ ಟೆಕ್ ಉದ್ಯೋಗಗಳನ್ನು ಕಿತ್ತುಕೊಂಡಿವೆ. ಮತ್ತೊಂದೆಡೆ, ಮೈಕ್ರೋಸಾಫ್ಟ್, ಗೂಗಲ್ ಮತ್ತು ಮೆಟಾದಂತಹ ದೈತ್ಯ ಸಂಸ್ಥೆಗಳು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡುತ್ತಿರುವ ಪರಿಣಾಮ, ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಆಫರ್‌ಗಳನ್ನ ಸಹ ನೀಡುತ್ತಿರುವುದು ಗಮನಾರ್ಹ.




