ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯ ಪ್ರಯತ್ನಗಳು ಅವರ ವ್ಯಕ್ತಿತ್ವವನ್ನು ಕುಗ್ಗಿಸುವ ಬದಲು, ಅವರ ಆದರ್ಶಗಳ ಪ್ರಸ್ತುತತೆಯನ್ನು ಮತ್ತಷ್ಟು ಮುನ್ನೆಲೆಗೆ ತರುತ್ತಿವೆ. ಸತ್ಯ, ಅಹಿಂಸೆ, ಮಾನವೀಯತೆ, ಸಾಮಾಜಿಕ ಸಮಾನತೆ ಮತ್ತು ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳು ಇಂದಿಗೂ ಪ್ರಸ್ತುತವಾಗಿವೆ. ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ವೈಯಕ್ತಿಕ ವಿರೋಧವೆಂದು ಬಿಂಬಿಸುವ ಪ್ರಯತ್ನಗಳೂ ಇತಿಹಾಸದ ಸಮಗ್ರ ತಿಳಿವಳಿಕೆಗೆ ವಿರುದ್ಧವಾಗಿವೆ.
ಮಹಾತ್ಮ ಗಾಂಧೀಜಿಯವರ ಹೆಸರು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಾತ್ರವಲ್ಲ, ಜಗತ್ತಿನ ರಾಜಕೀಯ ಮತ್ತು ಸಾಮಾಜಿಕ ಚಿಂತನೆಯಲ್ಲಿಯೂ ಮಹತ್ವದ ಸ್ಥಾನ ಪಡೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಗಾಂಧೀಜಿಯವರ ವ್ಯಕ್ತಿತ್ವ, ಹೋರಾಟ ಮತ್ತು ಕೊಡುಗೆಗಳನ್ನು ಪ್ರಶ್ನಿಸುವ, ಅವರ ಇತಿಹಾಸವನ್ನು ತಿರುಚಿ ಹೇಳುವ ಹಾಗೂ ಅವರ ಆದರ್ಶಗಳನ್ನು ಅಪಹಾಸ್ಯ ಮಾಡುವ ಪ್ರಯತ್ನಗಳು ಹೆಚ್ಚಾಗಿವೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ಅರ್ಧಸತ್ಯಗಳು, ಸುಳ್ಳು ಮಾಹಿತಿಗಳು ಮತ್ತು ಆಯ್ದ ಇತಿಹಾಸದ ತುಣುಕುಗಳನ್ನು ಬಳಸಿಕೊಂಡು ಗಾಂಧೀಜಿಯವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ.
ಇತಿಹಾಸದಲ್ಲಿ ತಮ್ಮದೇ ಆದ ಮಹತ್ವದ ಸಾಮಾಜಿಕ ಪರಿವರ್ತನೆಯ ಮಾದರಿಯನ್ನು ರೂಪಿಸಲಾಗದವರು, ಇತಿಹಾಸ ನಿರ್ಮಿಸಿದ ವ್ಯಕ್ತಿಗಳ ಸಾಧನೆಗಳನ್ನು ಪ್ರಶ್ನಿಸುವ ಮೂಲಕ ತಮ್ಮ ರಾಜಕೀಯ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ವ್ಯಕ್ತಿಯ ಸಾಧನೆಗೆ ಉತ್ತರ ನೀಡಲು ಸಾಧ್ಯವಾಗದಾಗ ವ್ಯಕ್ತಿತ್ವ ಹರಣಕ್ಕೆ ಮುಂದಾಗುವುದು ಇಂತಹ ರಾಜಕೀಯದ ಒಂದು ವಿಧಾನ. ಗಾಂಧೀಜಿಯವರ ವಿಚಾರದಲ್ಲಿಯೂ ಇದೇ ರೀತಿಯ ಪ್ರಯತ್ನಗಳು ನಡೆಯುತ್ತಿವೆ.
ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯ ಶಕ್ತಿಗಳಿಗೆ ಅವರ ವ್ಯಕ್ತಿತ್ವಕ್ಕಿಂತಲೂ ಮುಖ್ಯವಾಗಿ ಅವರ ತಾತ್ವಿಕತೆಯೇ ಸವಾಲಾಗಿದೆ. ಏಕೆಂದರೆ ಗಾಂಧೀಜಿಯವರ ಚಿಂತನೆಗಳು ಅಧಿಕಾರ, ದ್ವೇಷ, ಹಿಂಸೆ ಮತ್ತು ಧಾರ್ಮಿಕ ಧ್ರುವೀಕರಣದ ರಾಜಕಾರಣಕ್ಕೆ ವಿರುದ್ಧವಾದ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಗಾಂಧೀಯ ‘ರಾಮ’ ಅಮೂರ್ತ, ಆದರ್ಶ ಸಮಾಜದ ಕನಸು.
ಗಾಂಧಿ ಮತ್ತು ಅಂಬೇಡ್ಕರ್: ಭಿನ್ನಾಭಿಪ್ರಾಯದಾಚೆಗಿನ ಸಾಮಾಜಿಕ ಕಾಳಜಿ
ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಇಬ್ಬರ ನಡುವಿನ ರಾಜಕೀಯ ಹಾಗೂ ಸಾಮಾಜಿಕ ಭಿನ್ನಾಭಿಪ್ರಾಯಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕಿದೆ. ಇಬ್ಬರೂ ಒಂದೇ ರೀತಿಯಲ್ಲಿ ಯೋಚಿಸುತ್ತಿರಲಿಲ್ಲ. ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ದಲಿತರ ರಾಜಕೀಯ ಪ್ರಾತಿನಿಧ್ಯ, ಪ್ರತ್ಯೇಕ ಮತಕ್ಷೇತ್ರ ಹಾಗೂ ಸಾಮಾಜಿಕ ಬದಲಾವಣೆಯ ವಿಧಾನಗಳ ಕುರಿತು ಇಬ್ಬರ ನಡುವೆ ತೀವ್ರವಾದ ಭಿನ್ನಾಭಿಪ್ರಾಯಗಳಿದ್ದವು. ಆದರೆ, ಆ ಭಿನ್ನಾಭಿಪ್ರಾಯಗಳನ್ನು ವೈಯಕ್ತಿಕ ದ್ವೇಷವೆಂದು ಬಿಂಬಿಸುವುದು ಸರಿಯಲ್ಲ.

ಈ ವಿಚಾರವಾಗಿ ಹಿರಿಯ ಪತ್ರಕರ್ತರಾದ ಶಶಿಧರ್ ಭಟ್ ಅವರು ಈದಿನ.ಕಾಮ್ ಜೊತೆ ಮಾತನಾಡಿ, “ಸಮಾಜದಲ್ಲಿ ಶೋಷಣೆ ಅನುಭವಿಸಿದ್ದು, ಕಂಡಿದ್ದು ಬಾಬಾ ಸಾಹೇಬ್ ಅಂಬೇಡ್ಕರ್. ಅವರಿಗೆ ಅನುಭವ. ಗಾಂಧೀಜಿಯವರಿಗೆ ಅನುಭವವಲ್ಲ. ಸಮಾಜದಲ್ಲಿ ಶೋಷಿತರನ್ನ ಕಂಡ ಬಗೆ, ಸಮಾನತೆಗಾಗಿ ಅಂಬೇಡ್ಕರ್ ಅವರ ಹೋರಾಟ.” ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯ ಅಮಾನವೀಯತೆಯನ್ನು ಸ್ವತಃ ಅನುಭವಿಸಿದವರು. ಹೀಗಾಗಿ, ಅವರ ಹೋರಾಟ ಕೇವಲ ಸುಧಾರಣೆಯ ಹೋರಾಟವಾಗಿರಲಿಲ್ಲ; ಶೋಷಣೆಯ ಮೂಲವಾಗಿದ್ದ ಜಾತಿ ವ್ಯವಸ್ಥೆಯನ್ನೇ ಪ್ರಶ್ನಿಸುವ ಕ್ರಾಂತಿಕಾರಿ ಹೋರಾಟವಾಗಿತ್ತು. ಅಸ್ಪೃಶ್ಯತೆ ನಿವಾರಣೆಗೆ ಮನಪರಿವರ್ತನೆ ಮಾತ್ರ ಸಾಕಾಗುವುದಿಲ್ಲ, ಕಾನೂನುಬದ್ಧ ಹಕ್ಕುಗಳು, ರಾಜಕೀಯ ಅಧಿಕಾರ, ಶಿಕ್ಷಣ ಮತ್ತು ಸಮಾನ ಅವಕಾಶಗಳು ಅಗತ್ಯ ಎಂಬುದು ಅವರ ನಿಲುವಾಗಿತ್ತು.
ಗಾಂಧೀಜಿ ಅಸ್ಪೃಶ್ಯತೆಯನ್ನು ಹಿಂದೂ ಸಮಾಜದ ನೈತಿಕ ಕಳಂಕವೆಂದು ಪರಿಗಣಿಸಿ, ಅದನ್ನು ತೊಡೆದುಹಾಕಲು ಸಮಾಜದ ಮನಪರಿವರ್ತನೆಗೆ ಒತ್ತು ನೀಡಿದರು. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಜಾತಿ ವ್ಯವಸ್ಥೆಯೇ ಅಸಮಾನತೆಯ ಬುನಾದಿಯಾಗಿತ್ತು. ಇದೇ ಇಬ್ಬರ ನಡುವಿನ ಪ್ರಮುಖ ತಾತ್ವಿಕ ವ್ಯತ್ಯಾಸ. 1932ರ ಪೂನಾ ಒಪ್ಪಂದದ ಸಂದರ್ಭದಲ್ಲಿ ಪ್ರತ್ಯೇಕ ಮತಕ್ಷೇತ್ರದ ಪ್ರಶ್ನೆಯ ಕುರಿತು ಇಬ್ಬರ ನಡುವೆ ಸಂಘರ್ಷ ಉಂಟಾಗಿತ್ತು. ಗಾಂಧೀಜಿ ಉಪವಾಸ ಸತ್ಯಾಗ್ರಹ ಆರಂಭಿಸಿದರೆ, ಅಂಬೇಡ್ಕರ್ ದಲಿತರ ಸ್ವತಂತ್ರ ರಾಜಕೀಯ ಪ್ರಾತಿನಿಧ್ಯದ ಹಕ್ಕಿಗಾಗಿ ತಮ್ಮ ನಿಲುವಿನಲ್ಲಿ ದೃಢವಾಗಿದ್ದರು. ಅಂತಿಮವಾಗಿ ಒಪ್ಪಂದದ ಮೂಲಕ ಮೀಸಲು ಸ್ಥಾನಗಳ ವ್ಯವಸ್ಥೆಗೆ ಒಪ್ಪಿಗೆ ದೊರೆಯಿತು.
ಆದರೆ, ಈ ಭಿನ್ನಾಭಿಪ್ರಾಯಗಳ ನಡುವೆಯೂ ಅಸ್ಪೃಶ್ಯತೆ ನಿರ್ಮೂಲನೆಯ ಅಗತ್ಯವನ್ನು ಇಬ್ಬರೂ ಒಪ್ಪಿಕೊಂಡಿದ್ದರು. ಅಂಬೇಡ್ಕರ್ ಅವರು ಗಾಂಧೀಜಿಯವರ ಕೆಲವು ಪ್ರಯತ್ನಗಳನ್ನು ಗುರುತಿಸಿದ್ದರು. ಹಾಗೆಯೇ ಗಾಂಧೀಜಿ ಕೂಡ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಹೋರಾಟದ ಮಹತ್ವವನ್ನು ನಿರ್ಲಕ್ಷಿಸಿರಲಿಲ್ಲ. ಆದ್ದರಿಂದ, ಗಾಂಧಿ-ಅಂಬೇಡ್ಕರ್ ಸಂಬಂಧವನ್ನು ಕೇವಲ ವಿರೋಧದ ಚೌಕಟ್ಟಿನಲ್ಲಿ ನೋಡುವುದು ಇತಿಹಾಸಕ್ಕೆ ಮಾಡುವ ಅನ್ಯಾಯವಾಗುತ್ತದೆ.
ಸತ್ಯ, ಅಹಿಂಸೆ ಮತ್ತು ಮಾನವೀಯತೆಯೇ ಗಾಂಧಿ ತಾತ್ವಿಕತೆಯ ಅಡಿಪಾಯ
ಮಹಾತ್ಮ ಗಾಂಧೀಜಿಯವರ ತಾತ್ವಿಕತೆಯ ಮೂಲದಲ್ಲಿ ಸತ್ಯ, ಅಹಿಂಸೆ ಮತ್ತು ಮಾನವೀಯತೆ ಇವೆ. ಅವರ ಪಾಲಿಗೆ ರಾಜಕೀಯವೆಂದರೆ ಅಧಿಕಾರ ಪಡೆಯುವ ಸಾಧನವಲ್ಲ; ಮನುಷ್ಯನ ಬದುಕನ್ನು ಸುಧಾರಿಸುವ, ಸಮಾಜವನ್ನು ನ್ಯಾಯಯುತವಾಗಿ ರೂಪಿಸುವ ಮಾರ್ಗವಾಗಿತ್ತು.
ಗಾಂಧೀಜಿಯವರ ಪ್ರಸಿದ್ಧ ನಂಬಿಕೆ ‘ಸತ್ಯವೇ ದೇವರು’. ಸತ್ಯಕ್ಕಾಗಿ ನಿಲ್ಲುವುದು, ಅನ್ಯಾಯವನ್ನು ಒಪ್ಪಿಕೊಳ್ಳದೆ ಅದನ್ನು ಶಾಂತಿಯುತವಾಗಿ ಎದುರಿಸುವುದೇ ಸತ್ಯಾಗ್ರಹ. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧದ ಜನಾಂಗೀಯ ತಾರತಮ್ಯವನ್ನು ವಿರೋಧಿಸುವ ಸಂದರ್ಭದಲ್ಲಿ ಅವರು ಸತ್ಯಾಗ್ರಹದ ವಿಧಾನವನ್ನು ರೂಪಿಸಿದರು. ನಂತರ ಭಾರತದಲ್ಲಿ ಚಂಪಾರಣ್ ಸತ್ಯಾಗ್ರಹ, ಖೇಡಾ ಹೋರಾಟ, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಗಳ ಮೂಲಕ ಬ್ರಿಟಿಷ್ ವಸಾಹತುಶಾಹಿ ಆಡಳಿತಕ್ಕೆ ಸವಾಲು ಹಾಕಿದರು.
ಅಹಿಂಸೆ ಎಂದರೆ ಕೇವಲ ದೈಹಿಕ ಹಿಂಸೆಯನ್ನು ಮಾಡದಿರುವುದಲ್ಲ. ಮಾತು, ಮನಸ್ಸು ಮತ್ತು ನಡವಳಿಕೆಯಲ್ಲಿಯೂ ದ್ವೇಷವನ್ನು ತ್ಯಜಿಸುವುದು. ಅನ್ಯಾಯದ ವಿರುದ್ಧ ಹೋರಾಡುವಾಗಲೂ ಎದುರಾಳಿಯನ್ನು ದ್ವೇಷಿಸದೆ, ಅವರ ಮನಸ್ಸನ್ನು ಬದಲಾಯಿಸುವ ಪ್ರಯತ್ನ ಮಾಡುವುದು ಗಾಂಧೀಜಿಯವರ ಮಾರ್ಗವಾಗಿತ್ತು. ಅವರ ಪ್ರಕಾರ ಅಹಿಂಸೆ ಹೇಡಿತನವಲ್ಲ; ಹಿಂಸೆಗೆ ಪ್ರತಿಹಿಂಸೆ ನೀಡದೆ ಅನ್ಯಾಯದ ಎದುರು ಧೈರ್ಯದಿಂದ ನಿಲ್ಲುವ ಶಕ್ತಿಯಾಗಿದೆ.
ಗಾಂಧೀಜಿಯವರ ಮತ್ತೊಂದು ಪ್ರಮುಖ ಪರಿಕಲ್ಪನೆ ಸರ್ವೋದಯ. ಅಂದರೆ ಎಲ್ಲರ ಉದ್ಧಾರ, ಎಲ್ಲರ ಕಲ್ಯಾಣ. ಸಮಾಜದ ಅಭಿವೃದ್ಧಿ ಎಂದರೆ ಕೇವಲ ಶ್ರೀಮಂತರು ಮತ್ತು ಅಧಿಕಾರಸ್ಥರ ಅಭಿವೃದ್ಧಿಯಲ್ಲ. ಕಟ್ಟಕಡೆಯ ವ್ಯಕ್ತಿಗೂ ಆಹಾರ, ಶಿಕ್ಷಣ, ಆರೋಗ್ಯ, ಗೌರವ ಮತ್ತು ಬದುಕುವ ಅವಕಾಶ ದೊರೆಯಬೇಕು. ಅಭಿವೃದ್ಧಿಯ ಯಾವುದೇ ಯೋಜನೆಯನ್ನು ರೂಪಿಸುವಾಗ ಸಮಾಜದ ಅತ್ಯಂತ ದುರ್ಬಲ ವ್ಯಕ್ತಿಯ ಬದುಕಿಗೆ ಅದರಿಂದ ಏನು ಪ್ರಯೋಜನವಾಗುತ್ತದೆ ಎಂಬುದನ್ನು ಮೊದಲು ಪ್ರಶ್ನಿಸಬೇಕು ಎಂಬುದು ಅವರ ಚಿಂತನೆಯ ಸಾರ.
ಸ್ವದೇಶಿ ಮತ್ತು ಸ್ವಾವಲಂಬನೆಯೂ ಗಾಂಧೀಜಿಯವರ ಚಿಂತನೆಯ ಪ್ರಮುಖ ಭಾಗ. ವಿದೇಶಿ ವಸ್ತುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ಥಳೀಯ ಉತ್ಪಾದನೆ ಮತ್ತು ಗ್ರಾಮೀಣ ಉದ್ಯೋಗಕ್ಕೆ ಆದ್ಯತೆ ನೀಡಬೇಕೆಂದು ಅವರು ಪ್ರತಿಪಾದಿಸಿದರು. ಚರಕ ಮತ್ತು ಖಾದಿ ಕೇವಲ ಬಟ್ಟೆ ತಯಾರಿಸುವ ಸಾಧನಗಳಾಗಿರಲಿಲ್ಲ; ಅವು ಆರ್ಥಿಕ ಸ್ವಾತಂತ್ರ್ಯ, ಶ್ರಮದ ಗೌರವ ಮತ್ತು ಸ್ವಾವಲಂಬನೆಯ ಸಂಕೇತಗಳಾಗಿದ್ದವು.
ಶ್ರೀಮಂತರು ತಮ್ಮ ಸಂಪತ್ತನ್ನು ಕೇವಲ ವೈಯಕ್ತಿಕ ಆಸ್ತಿಯೆಂದು ಪರಿಗಣಿಸದೆ, ಸಮಾಜದ ಹಿತಕ್ಕಾಗಿ ಬಳಸಬೇಕೆಂಬ ಧರ್ಮದರ್ಶಿತ್ವದ (Trusteeship) ಪರಿಕಲ್ಪನೆಯನ್ನು ಮುಂದಿಟ್ಟರು. ಸಂಪತ್ತಿನ ಅಸಮಾನ ಹಂಚಿಕೆಯನ್ನು ಹಿಂಸಾತ್ಮಕ ಸಂಘರ್ಷವಿಲ್ಲದೆ ಸಾಮಾಜಿಕ ಹೊಣೆಗಾರಿಕೆಯ ಮೂಲಕ ಬದಲಾಯಿಸುವುದು ಇದರ ಉದ್ದೇಶವಾಗಿತ್ತು.
ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯೂ ಇಂದಿಗೂ ಪ್ರಸ್ತುತವಾಗಿದೆ. ಪ್ರತಿಯೊಂದು ಗ್ರಾಮವೂ ತನ್ನ ಅಗತ್ಯಗಳನ್ನು ಸಾಧ್ಯವಾದಷ್ಟು ತಾನೇ ಪೂರೈಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಸ್ಥಳೀಯ ಆಡಳಿತ, ಕೃಷಿ, ಗುಡಿ ಕೈಗಾರಿಕೆ, ಶಿಕ್ಷಣ, ಆರೋಗ್ಯ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಗೆ ಆದ್ಯತೆ ಇರಬೇಕು. ಇಂದಿನ ವಿಕೇಂದ್ರೀಕರಣ, ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿಯ ಚರ್ಚೆಗಳಲ್ಲಿ ಈ ಚಿಂತನೆಗಳ ಪ್ರಸ್ತುತತೆಯನ್ನು ಗುರುತಿಸಬಹುದು.
ಅಸ್ಪೃಶ್ಯತೆ ವಿರುದ್ಧದ ಹೋರಾಟ
ಗಾಂಧೀಜಿಯವರ ಸಾಮಾಜಿಕ ಹೋರಾಟದಲ್ಲಿ ಅಸ್ಪೃಶ್ಯತೆ ನಿರ್ಮೂಲನೆಗೆ ವಿಶೇಷ ಸ್ಥಾನವಿತ್ತು. ಹಿಂದೂ ಸಮಾಜದಲ್ಲಿ ಶತಮಾನಗಳಿಂದ ಬೇರೂರಿದ್ದ ಅಸ್ಪೃಶ್ಯತೆಯನ್ನು ಅವರು ತೀವ್ರವಾಗಿ ವಿರೋಧಿಸಿದರು. ದೇವಸ್ಥಾನ ಪ್ರವೇಶ, ಸಾರ್ವಜನಿಕ ಬಾವಿಗಳ ಬಳಕೆ, ಶಿಕ್ಷಣ ಮತ್ತು ಸಾಮಾಜಿಕ ಗೌರವದ ಹಕ್ಕುಗಳಿಗಾಗಿ ಜನಜಾಗೃತಿ ಮೂಡಿಸಿದರು.
1932ರ ಪೂನಾ ಒಪ್ಪಂದದ ನಂತರ ಅಸ್ಪೃಶ್ಯತೆ ನಿವಾರಣೆಯ ಚಟುವಟಿಕೆಗಳಿಗೆ ಮತ್ತಷ್ಟು ಒತ್ತು ನೀಡಿದರು. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘಟನೆಯಾಗಿ ಆರಂಭವಾದ ಸಂಸ್ಥೆ ಮುಂದೆ ಹರಿಜನ ಸೇವಕ ಸಂಘವೆಂದು ಗುರುತಿಸಿಕೊಂಡಿತು. 1933ರ ಫೆಬ್ರವರಿ 11ರಂದು ‘ಹರಿಜನ’ ಎಂಬ ಆಂಗ್ಲ ವಾರಪತ್ರಿಕೆಯ ಮೊದಲ ಸಂಚಿಕೆ ಪ್ರಕಟವಾಯಿತು. ನಂತರ ಹಿಂದಿಯಲ್ಲಿ ‘ಹರಿಜನ ಸೇವಕ್’ ಮತ್ತು ಗುಜರಾತಿಯಲ್ಲಿ ‘ಹರಿಜನಬಂಧು’ ಪತ್ರಿಕೆಗಳೂ ಪ್ರಕಟವಾದವು.
‘ಹರಿಜನ’ ಎಂದರೆ ದೇವರ ಮಕ್ಕಳು ಎಂಬ ಅರ್ಥದಲ್ಲಿ ಗಾಂಧೀಜಿ ಈ ಪದವನ್ನು ಬಳಸಿದರು. ಶೋಷಿತ ಸಮುದಾಯಗಳಿಗೆ ಸಮಾಜದಲ್ಲಿ ಗೌರವದ ಸ್ಥಾನ ಕಲ್ಪಿಸುವುದು ಅವರ ಉದ್ದೇಶವಾಗಿತ್ತು. ಆದರೆ, ಈ ಪದವನ್ನು ಅಂಬೇಡ್ಕರ್ ಸೇರಿದಂತೆ ದಲಿತ ಚಿಂತಕರು ವಿರೋಧಿಸಿದರು. ಶೋಷಿತ ಸಮುದಾಯದ ಜನರನ್ನು ದೇವರ ಮಕ್ಕಳು ಎಂದು ಕರೆಯುವುದರಿಂದ ಅವರ ಸಾಮಾಜಿಕ ಸ್ಥಾನಮಾನ ಬದಲಾಗುವುದಿಲ್ಲ; ಅವರಿಗೆ ಸಮಾನ ಹಕ್ಕು, ಸ್ವಾಭಿಮಾನ ಮತ್ತು ಸ್ವತಂತ್ರ ಗುರುತು ಬೇಕು ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು. ಇಂದು ಕೂಡ ‘ಹರಿಜನ’ ಪದವನ್ನು ಅನೇಕ ದಲಿತ ಸಂಘಟನೆಗಳು ಮತ್ತು ಚಿಂತಕರು ತಿರಸ್ಕರಿಸುತ್ತಾರೆ. ಈ ವಿಚಾರದಲ್ಲಿ ಗಾಂಧೀಜಿಯವರ ಉದ್ದೇಶ ಮತ್ತು ಅಂಬೇಡ್ಕರ್ ಅವರ ಆಕ್ಷೇಪ ಎರಡನ್ನೂ ಐತಿಹಾಸಿಕ ಹಿನ್ನೆಲೆಯೊಂದಿಗೆ ಅರ್ಥಮಾಡಿಕೊಳ್ಳಬೇಕಿದೆ.
ಅಂದರೆ, ಗಾಂಧೀಜಿಯವರ ಸಾಮಾಜಿಕ ಸುಧಾರಣೆಯ ಪ್ರಯತ್ನಗಳನ್ನು ಗುರುತಿಸುವುದರ ಜೊತೆಗೆ, ಅಂಬೇಡ್ಕರ್ ಅವರ ವಿಮರ್ಶಾತ್ಮಕ ನಿಲುವನ್ನೂ ಗೌರವಿಸಬೇಕು. ಇತಿಹಾಸವನ್ನು ಸಮಗ್ರವಾಗಿ ನೋಡುವುದೆಂದರೆ ಸಾಧಕರನ್ನು ದೋಷರಹಿತರನ್ನಾಗಿ ಚಿತ್ರಿಸುವುದಲ್ಲ; ಅವರ ಸಾಧನೆ, ಮಿತಿಗಳು ಮತ್ತು ಕಾಲಘಟ್ಟದ ಸಾಮಾಜಿಕ ವಾಸ್ತವಗಳನ್ನು ವಿಮರ್ಶಾತ್ಮಕವಾಗಿ ಅರ್ಥಮಾಡಿಕೊಳ್ಳುವುದಾಗಿದೆ.
ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯದ ಹಿಂದಿನ ಆತಂಕ
ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯದ ಹಿಂದೆ ಅವರ ಚಿಂತನೆಗಳ ಬಗ್ಗೆ ಇರುವ ಅಸಹನೆಯೂ ಒಂದು ಕಾರಣವಾಗಿದೆ. ಏಕೆಂದರೆ ಗಾಂಧೀಜಿಯವರ ಬದುಕು ಮತ್ತು ಹೋರಾಟಗಳು ಧಾರ್ಮಿಕ ದ್ವೇಷ, ಬಹುಸಂಖ್ಯಾತರ ಪ್ರಾಬಲ್ಯ, ಹಿಂಸೆ ಹಾಗೂ ಸಾಮಾಜಿಕ ವಿಭಜನೆಯ ರಾಜಕಾರಣಕ್ಕೆ ವಿರುದ್ಧವಾದ ಸಂದೇಶವನ್ನು ನೀಡುತ್ತವೆ.
ಗಾಂಧೀಜಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಕೇವಲ ಬ್ರಿಟಿಷರ ವಿರುದ್ಧದ ರಾಜಕೀಯ ಹೋರಾಟವನ್ನಾಗಿ ನೋಡಲಿಲ್ಲ. ಭಾರತದ ಸಮಾಜದಲ್ಲಿದ್ದ ಧಾರ್ಮಿಕ, ಜಾತಿ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧದ ಹೋರಾಟವಾಗಿಯೂ ರೂಪಿಸಿದರು. ಹಿಂದೂ-ಮುಸ್ಲಿಂ ಐಕ್ಯತೆಗೆ ಅವರು ನೀಡಿದ ಮಹತ್ವ, ಕೋಮು ಸಂಘರ್ಷಗಳ ಸಂದರ್ಭದಲ್ಲಿ ಶಾಂತಿಗಾಗಿ ನಡೆಸಿದ ಉಪವಾಸಗಳು ಮತ್ತು ವಿಭಜನೆಯ ಸಂದರ್ಭದಲ್ಲಿಯೂ ಮಾನವೀಯತೆಯ ಪರವಾಗಿ ನಿಂತದ್ದು ಅವರ ರಾಜಕೀಯ ಬದ್ಧತೆಯನ್ನು ತೋರಿಸುತ್ತದೆ.
1947ರ ದೇಶ ವಿಭಜನೆಯ ಸಂದರ್ಭದಲ್ಲಿ ಉಭಯ ಸಮುದಾಯಗಳ ನಡುವೆ ಭಾರೀ ಹಿಂಸಾಚಾರ ನಡೆಯುತ್ತಿದ್ದಾಗ ಗಾಂಧೀಜಿ ಶಾಂತಿ ಸ್ಥಾಪನೆಗಾಗಿ ಬಂಗಾಳ ಮತ್ತು ದೆಹಲಿಯಲ್ಲಿ ಶ್ರಮಿಸಿದರು. ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವುದನ್ನು ಅವರು ಒಪ್ಪಲಿಲ್ಲ. ಬಹುಸಂಖ್ಯಾತರಾಗಿರುವುದರಿಂದ ಯಾರಿಗೂ ಮತ್ತೊಬ್ಬರ ಮೇಲೆ ದೌರ್ಜನ್ಯ ನಡೆಸುವ ಹಕ್ಕು ಬರುವುದಿಲ್ಲ ಎಂಬ ನಿಲುವು ಅವರದ್ದಾಗಿತ್ತು.
ಇಂತಹ ಚಿಂತನೆಗಳು ಧರ್ಮವನ್ನು ರಾಜಕೀಯ ಧ್ರುವೀಕರಣದ ಸಾಧನವಾಗಿ ಬಳಸುವವರಿಗೆ ಸಹಜವಾಗಿಯೇ ಸವಾಲಾಗುತ್ತವೆ. ಗಾಂಧೀಜಿ ಹಿಂದೂ ಧರ್ಮದ ಆಚರಣೆಗಳನ್ನು ಅನುಸರಿಸುತ್ತಿದ್ದರೂ, ಅವರ ಧಾರ್ಮಿಕತೆ ಇತರ ಧರ್ಮಗಳ ವಿರುದ್ಧ ದ್ವೇಷವನ್ನು ಬೆಳೆಸುವ ರೀತಿಯದ್ದಾಗಿರಲಿಲ್ಲ. ಎಲ್ಲ ಧರ್ಮಗಳಲ್ಲಿಯೂ ಮಾನವೀಯ ಮೌಲ್ಯಗಳನ್ನು ಗುರುತಿಸುವ ಪ್ರಯತ್ನ ಅವರಲ್ಲಿತ್ತು.
ಇದೇ ಸಂದರ್ಭದಲ್ಲಿ ರಾಮನ ಕುರಿತ ಗಾಂಧೀಜಿಯವರ ಪರಿಕಲ್ಪನೆಯನ್ನೂ ಅರ್ಥಮಾಡಿಕೊಳ್ಳಬೇಕು. ಗಾಂಧೀಜಿಯವರಿಗೆ ರಾಮ ಎಂದರೆ ಕೇವಲ ಒಂದು ಧಾರ್ಮಿಕ ಅಥವಾ ರಾಜಕೀಯ ಸಂಕೇತವಾಗಿರಲಿಲ್ಲ. ಸತ್ಯ, ನ್ಯಾಯ, ನೈತಿಕತೆ ಮತ್ತು ಮಾನವೀಯತೆಯ ಆದರ್ಶವಾಗಿದ್ದ. ಅವರ ‘ರಾಮರಾಜ್ಯ’ದ ಕಲ್ಪನೆಯೂ ಧಾರ್ಮಿಕ ಪ್ರಭುತ್ವದ ಆಡಳಿತವಾಗಿರಲಿಲ್ಲ. ಪ್ರತಿಯೊಬ್ಬರಿಗೂ ನ್ಯಾಯ, ಸಮಾನತೆ ಮತ್ತು ಗೌರವ ದೊರೆಯುವ ಆದರ್ಶ ಸಮಾಜದ ಪರಿಕಲ್ಪನೆಯಾಗಿತ್ತು.
ಇಂದು ರಾಮನ ಹೆಸರಿನಲ್ಲಿ ರಾಜಕೀಯ ನಡೆಯುತ್ತಿರುವಾಗ ಗಾಂಧೀಜಿಯವರ ರಾಮರಾಜ್ಯದ ಆಶಯವನ್ನು ನೆನಪಿಸಿಕೊಳ್ಳುವುದು ಅಗತ್ಯ. ರಾಮನ ಹೆಸರಿನಲ್ಲಿ ದ್ವೇಷ, ಹಿಂಸೆ ಮತ್ತು ಧಾರ್ಮಿಕ ವಿಭಜನೆಯನ್ನು ಪ್ರೋತ್ಸಾಹಿಸುವುದು ಗಾಂಧೀಜಿಯವರು ಪ್ರತಿಪಾದಿಸಿದ ರಾಮನ ಮೌಲ್ಯಗಳಿಗೆ ವಿರುದ್ಧವಾದದ್ದು. ಧಾರ್ಮಿಕ ನಂಬಿಕೆ ವೈಯಕ್ತಿಕ ಬದುಕಿನಲ್ಲಿ ನೈತಿಕತೆಯನ್ನು ಬೆಳೆಸಬೇಕೇ ಹೊರತು, ಮತ್ತೊಬ್ಬರ ಮೇಲೆ ಪ್ರಾಬಲ್ಯ ಸಾಧಿಸುವ ಸಾಧನವಾಗಬಾರದು ಎಂಬುದು ಅವರ ಚಿಂತನೆಯ ಸಾರವಾಗಿತ್ತು.
ಆರ್ಎಸ್ಎಸ್, ಗೋಡ್ಸೆ ಮತ್ತು ಗಾಂಧಿ ಹತ್ಯೆಯ ಇತಿಹಾಸ
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಗಮನಿಸಿದಾಗ ರಾಷ್ಟ್ರೀಯ ಚಳವಳಿಯಲ್ಲಿ ವಿವಿಧ ಸಂಘಟನೆಗಳು ಮತ್ತು ನಾಯಕರ ಪಾತ್ರಗಳ ಕುರಿತು ಸಾಕಷ್ಟು ದಾಖಲೆಗಳಿವೆ. 1925ರಲ್ಲಿ ಕೇಶವ ಬಲಿರಾಮ್ ಹೆಡಗೇವಾರ್ ಸ್ಥಾಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್), ಹಿಂದೂ ಮಹಾಸಭಾ ಮತ್ತು ಸಾವರ್ಕರ್ ಅವರ ರಾಜಕೀಯ ಚಿಂತನೆಗಳು ಗಾಂಧೀಜಿಯವರ ಬಹುತ್ವವಾದಿ ರಾಷ್ಟ್ರೀಯತೆಯಿಂದ ಭಿನ್ನವಾಗಿದ್ದವು.
ಆರ್ಎಸ್ಎಸ್ನ ಆರಂಭಿಕ ಸಂಘಟನಾ ಮಾದರಿ, ಸಮವಸ್ತ್ರ, ಶಾಖಾ ವ್ಯವಸ್ಥೆ ಮತ್ತು ಶಿಸ್ತಿನ ಕುರಿತು ಚರ್ಚಿಸುವಾಗ ಯುರೋಪಿನ ಆ ಕಾಲಘಟ್ಟದ ಸರ್ವಾಧಿಕಾರಿ ಸಂಘಟನೆಗಳ ಪ್ರಭಾವದ ಪ್ರಶ್ನೆಯೂ ಇತಿಹಾಸಕಾರರ ಚರ್ಚೆಯಲ್ಲಿ ಕಾಣಿಸಿಕೊಳ್ಳುತ್ತದೆ. ಹಿಟ್ಲರ್ ಅಥವಾ ಮುಸಲೋನಿಯ ಅನುಕರಣೆ ಎದ್ದು ಕಾಣುತ್ತದೆ.
ಇಲ್ಲಿ ಅತ್ಯಂತ ಮಹತ್ವದ ಸಂಗತಿಯೆಂದರೆ 1948ರ ಜನವರಿ 30ರಂದು ನವದೆಹಲಿಯ ಬಿರ್ಲಾ ಭವನದಲ್ಲಿ ನಡೆದ ಗಾಂಧೀಜಿ ಹತ್ಯೆ. ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಗುಂಡಿಕ್ಕಿ ಹತ್ಯೆ ಮಾಡಿದ. ಈ ಪ್ರಕರಣದಲ್ಲಿ ಗೋಡ್ಸೆ ಮತ್ತು ನಾರಾಯಣ ಆಪ್ಟೆಗೆ ಮರಣದಂಡನೆ ವಿಧಿಸಲಾಯಿತು. ಸಾವರ್ಕರ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತು. ಆದರೆ, ಗಾಂಧೀಜಿಯವರ ವಿರುದ್ಧ ಗೋಡ್ಸೆ ಮತ್ತು ಅವರ ಸಹಚರರು ಹೊಂದಿದ್ದ ರಾಜಕೀಯ ಹಾಗೂ ಸೈದ್ಧಾಂತಿಕ ದ್ವೇಷ ಇತಿಹಾಸದಲ್ಲಿ ದಾಖಲಾಗಿದೆ.
ದೇಶದ ಇತಿಹಾಸದಲ್ಲಿ ಆರ್ಎಸ್ಎಸ್, ಬಿಜೆಪಿ ಹೆಜ್ಜೆ ಗುರುತುಗಳಿಲ್ಲ. ಇತಿಹಾಸದ ಭಾಗವಾಗಿಯೂ ಉಳಿದಿಲ್ಲ. ಗಾಂಧೀಜಿ ಹತ್ಯೆಯ ನಂತರ 1948ರಲ್ಲಿ ಆರ್ಎಸ್ಎಸ್ ಮೇಲೆ ಸರ್ಕಾರ ನಿಷೇಧ ಹೇರಿತ್ತು. ಸಂಘಟನೆಯ ಚಟುವಟಿಕೆಗಳು ಮತ್ತು ಅದರ ಸೈದ್ಧಾಂತಿಕ ವಾತಾವರಣದ ಕುರಿತು ಆಗಿನ ಸರ್ಕಾರ ಗಂಭೀರ ಆತಂಕ ವ್ಯಕ್ತಪಡಿಸಿತ್ತು.
ಗಾಂಧೀಜಿ ಹತ್ಯೆಗೆ ಮುನ್ನವೂ ಅವರ ಮೇಲೆ ಹಲವು ಬಾರಿ ಹತ್ಯೆಯ ಪ್ರಯತ್ನಗಳು ನಡೆದಿದ್ದವು. ಧಾರ್ಮಿಕ ಸಾಮರಸ್ಯ ಮತ್ತು ಕೋಮು ಸೌಹಾರ್ದಕ್ಕಾಗಿ ಅವರು ನಿರಂತರವಾಗಿ ನಿಂತಿದ್ದ ಕಾರಣ ಅವರ ವಿರುದ್ಧ ತೀವ್ರ ದ್ವೇಷದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ, ಗಾಂಧೀಜಿ ಹತ್ಯೆಯನ್ನು ಕೇವಲ ಒಬ್ಬ ವ್ಯಕ್ತಿಯ ಕೃತ್ಯವೆಂದು ಮಾತ್ರ ನೋಡುವುದಕ್ಕಿಂತ, ಆ ಹತ್ಯೆಗೆ ಕಾರಣವಾದ ದ್ವೇಷದ ರಾಜಕೀಯ ಮತ್ತು ಸೈದ್ಧಾಂತಿಕ ವಾತಾವರಣವನ್ನೂ ಅಧ್ಯಯನ ಮಾಡಬೇಕಿದೆ.
ಗಾಂಧೀಜಿಯವರ ಆದರ್ಶಗಳೇ ಇಂದಿನ ಭಾರತದ ಅಗತ್ಯ
ಇಂದು ಭಾರತದ ರಾಜಕೀಯ ಮತ್ತು ಸಾಮಾಜಿಕ ಬದುಕಿನಲ್ಲಿ ಧಾರ್ಮಿಕ ಧ್ರುವೀಕರಣ, ಜಾತಿ ಸಂಘರ್ಷ, ಆರ್ಥಿಕ ಅಸಮಾನತೆ, ನಿರುದ್ಯೋಗ, ರೈತರ ಸಂಕಷ್ಟ ಮತ್ತು ಸಾಮಾಜಿಕ ಅಭದ್ರತೆಯ ಪ್ರಶ್ನೆಗಳು ಪ್ರಮುಖವಾಗಿವೆ. ಇಂತಹ ಸಂದರ್ಭದಲ್ಲಿ ಗಾಂಧೀಜಿಯವರ ಚಿಂತನೆಗಳನ್ನು ಮತ್ತೆ ಓದಬೇಕಾದ ಅಗತ್ಯವಿದೆ.
ಗಾಂಧೀಜಿ ಸಮಾಜ ವಿಜ್ಞಾನಿಯೂ ಆಗಿದ್ದರು. ಗ್ರಾಮೀಣ ಭಾರತದ ಆರ್ಥಿಕತೆ, ಕೃಷಿ, ಶ್ರಮ, ಉತ್ಪಾದನೆ ಮತ್ತು ಸ್ಥಳೀಯ ಆಡಳಿತದ ಮಹತ್ವವನ್ನು ಅವರು ಬಹಳ ಹಿಂದೆಯೇ ಗುರುತಿಸಿದ್ದರು. ಗ್ರಾಮೀಣ ಜನರ ಬದುಕು ಸುಧಾರಿಸದೆ ದೇಶದ ನಿಜವಾದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಅವರ ನಂಬಿಕೆಯಾಗಿತ್ತು. ಇಂದು ಗ್ರಾಮೀಣ ಉದ್ಯೋಗ ಖಾತರಿ, ಪಂಚಾಯತ್ ರಾಜ್ ವ್ಯವಸ್ಥೆ, ಸ್ಥಳೀಯ ಸ್ವಾವಲಂಬನೆ ಮತ್ತು ವಿಕೇಂದ್ರೀಕರಣದ ಕುರಿತು ನಡೆಯುತ್ತಿರುವ ಚರ್ಚೆಗಳಲ್ಲಿ ಅವರ ಚಿಂತನೆಗಳ ಪ್ರಸ್ತುತತೆಯನ್ನು ಕಾಣಬಹುದು.
ಬಸವಣ್ಣ, ಬುದ್ಧ, ಅಂಬೇಡ್ಕರ್ ಮತ್ತು ಗಾಂಧೀಜಿ ವಿಭಿನ್ನ ಕಾಲಘಟ್ಟಗಳಲ್ಲಿ ಸಮಾಜಕ್ಕೆ ವಿಭಿನ್ನ ಮಾದರಿಗಳನ್ನು ನೀಡಿದ್ದಾರೆ. ಬಸವಣ್ಣ ಸಮಾನತೆ ಮತ್ತು ಕಾಯಕದ ಮಹತ್ವವನ್ನು ಸಾರಿದರು. ಬುದ್ಧ ಕರುಣೆ ಮತ್ತು ಅಹಿಂಸೆಯ ಮಾರ್ಗವನ್ನು ತೋರಿಸಿದರು. ಅಂಬೇಡ್ಕರ್ ಸಾಮಾಜಿಕ ನ್ಯಾಯ, ಸಂವಿಧಾನಬದ್ಧ ಹಕ್ಕು ಮತ್ತು ಜಾತಿ ವಿನಾಶದ ಹೋರಾಟಕ್ಕೆ ದಿಕ್ಕು ನೀಡಿದರು. ಗಾಂಧೀಜಿ ಸತ್ಯಾಗ್ರಹ, ಅಹಿಂಸೆ ಮತ್ತು ಸಾಮರಸ್ಯದ ಮೂಲಕ ಸಾಮೂಹಿಕ ಹೋರಾಟದ ಮಾದರಿಯನ್ನು ನಿರ್ಮಿಸಿದರು. ಈ ಎಲ್ಲ ಮಹನೀಯರ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಅವರ ಕೊಡುಗೆಗಳನ್ನು ಪರಸ್ಪರ ವಿರೋಧಿಗಳನ್ನಾಗಿ ನೋಡುವ ಅಗತ್ಯವಿಲ್ಲ. ಸಮಾಜಕ್ಕೆ ಅಗತ್ಯವಿರುವ ಮೌಲ್ಯಗಳನ್ನು ಅವರ ಬದುಕು ಮತ್ತು ಹೋರಾಟಗಳಿಂದ ಪಡೆದುಕೊಳ್ಳಬೇಕು.
ಆರ್ಎಸ್ಎಸ್ ಯಾವುದೇ ಮಾದರಿ ರೂಪಿಸಿಲ್ಲ. ಮಾದರಿಯೂ ಅಲ್ಲ. ಮಾದರಿ ವ್ಯಕ್ತಿತ್ವಗಳು ರೂಪಿತವಾಗಿಲ್ಲ. ಇತಿಹಾಸದಲ್ಲಿ ಅಂತಹ ವ್ಯಕ್ತಿತ್ವ ಕಾಣಲು ಸಾಧ್ಯವಿಲ್ಲ. ಗಾಂಧೀಜಿಯವರನ್ನು ವಿರೋಧಿಸುವುದಕ್ಕೆ ಯಾರಿಗಾದರೂ ಸ್ವಾತಂತ್ರ್ಯವಿದೆ. ಅವರ ನಿರ್ಧಾರಗಳು, ರಾಜಕೀಯ ನಿಲುವುಗಳು, ಜಾತಿ ವ್ಯವಸ್ಥೆ ಕುರಿತ ದೃಷ್ಟಿಕೋನ ಮತ್ತು ಸಾಮಾಜಿಕ ಸುಧಾರಣೆಯ ವಿಧಾನಗಳನ್ನು ವಿಮರ್ಶಿಸಬಹುದು. ಅಂಬೇಡ್ಕರ್ ಅವರ ವಿಮರ್ಶೆಯೂ ಅದಕ್ಕೊಂದು ಮಹತ್ವದ ಉದಾಹರಣೆ. ಆದರೆ, ವಿಮರ್ಶೆ ಮತ್ತು ವ್ಯಕ್ತಿತ್ವ ಹರಣದ ನಡುವೆ ವ್ಯತ್ಯಾಸವಿದೆ. ದಾಖಲೆಗಳ ಆಧಾರದಲ್ಲಿ ಪ್ರಶ್ನಿಸುವುದು ಪ್ರಜಾಪ್ರಭುತ್ವದ ಲಕ್ಷಣವಾದರೆ, ಸುಳ್ಳು ಮತ್ತು ಅರ್ಧಸತ್ಯಗಳನ್ನು ಹರಡುವುದು ಇತಿಹಾಸದೊಂದಿಗೆ ಮಾಡುವ ವಂಚನೆಯಾಗಿದೆ.
ರಾಜಕೀಯ ಅಧಿಕಾರಕ್ಕಾಗಿ ರಾಮನನ್ನು ಬಳಸಿಕೊಳ್ಳುವವರು ರಾಮನ ಮೌಲ್ಯಗಳನ್ನೂ ಅಳವಡಿಸಿಕೊಳ್ಳಬೇಕು. ಗಾಂಧೀಜಿಯವರ ಹೆಸರನ್ನು ತಿರಸ್ಕರಿಸುವವರು ಅವರ ಆದರ್ಶಗಳನ್ನು ಅಧ್ಯಯನ ಮಾಡಬೇಕು. ಅಂಬೇಡ್ಕರ್ ಅವರನ್ನು ಗೌರವಿಸುವವರು ಅವರು ಪ್ರತಿಪಾದಿಸಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಬದುಕಿನಲ್ಲಿ ಅನುಷ್ಠಾನಗೊಳಿಸಬೇಕು.
ಗಾಂಧೀಜಿಯವರನ್ನು ಗುಂಡಿಕ್ಕಿ ಕೊಲ್ಲಬಹುದು; ಆದರೆ, ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸಹಬಾಳ್ವೆ ಮತ್ತು ಮಾನವೀಯತೆಯನ್ನು ಗುಂಡಿಕ್ಕಿ ಕೊಲ್ಲಲು ಸಾಧ್ಯವಿಲ್ಲ. ಅವರ ವ್ಯಕ್ತಿತ್ವವನ್ನು ತಿರುಚುವ ಪ್ರಯತ್ನಗಳು ಎಷ್ಟೇ ನಡೆದರೂ ಇತಿಹಾಸದಲ್ಲಿ ಅವರ ಸ್ಥಾನವನ್ನು ಅಳಿಸಲು ಸಾಧ್ಯವಿಲ್ಲ.
ಗಾಂಧೀಜಿಯವರನ್ನು ಇಂದಿಗೂ ಜಗತ್ತು ಸ್ಮರಿಸುವುದಕ್ಕೆ ಕಾರಣ ಅವರು ಅಧಿಕಾರದ ಮೂಲಕ ಸಾಮ್ರಾಜ್ಯ ಕಟ್ಟಿದವರಲ್ಲ. ಬದಲಿಗೆ ಅಧಿಕಾರಕ್ಕೆ ಸವಾಲು ಹಾಕಲು ಸಾಮಾನ್ಯ ಜನರಿಗೂ ನೈತಿಕ ಶಕ್ತಿಯನ್ನು ನೀಡಿದವರು. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ ಸೇರಿದಂತೆ ಜಗತ್ತಿನ ಅನೇಕ ಹೋರಾಟಗಾರರ ಮೇಲೆ ಅವರ ಅಹಿಂಸಾತ್ಮಕ ಹೋರಾಟದ ಪ್ರಭಾವವಿದೆ.
ಈ ವಿಶೇಷ ವರದಿ ಓದಿದ್ದೀರಾ? ಮೆಕ್ಕೆಜೋಳಕ್ಕೆ ಉತ್ತಮ ಬೆಲೆ: ಬರದಿಂದ ಉತ್ಪಾದನೆ ಶೇ.33ರಷ್ಟು ಕುಸಿತ, ರಾಜ್ಯದ ಕೃಷಿ-ಮಾರುಕಟ್ಟೆ ಚಿತ್ರಣವೇನು?
ಹೀಗಾಗಿ, ಗಾಂಧೀಜಿಯವರನ್ನು ವಿರೋಧಿಸುವ ರಾಜಕೀಯಕ್ಕಿಂತ ಅವರ ಚಿಂತನೆಗಳನ್ನು ಎದುರಿಸುವ ರಾಜಕೀಯವೇ ಹೆಚ್ಚು ಸವಾಲಿನದ್ದು. ಸತ್ಯದ ಎದುರು ಸುಳ್ಳು, ಅಹಿಂಸೆಯ ಎದುರು ಹಿಂಸೆ ಮತ್ತು ಮಾನವೀಯತೆಯ ಎದುರು ದ್ವೇಷ ಹೆಚ್ಚು ಕಾಲ ನಿಲ್ಲಲಾರವು. ಗಾಂಧೀಜಿಯವರ ಆದರ್ಶಗಳು ಇಂದಿಗೂ ಜೀವಂತವಾಗಿರುವುದೇ ಅದಕ್ಕೆ ಸಾಕ್ಷಿ.
ಈ ವಿಶೇಷ ಲೇಖನ ಓದಿದ್ದೀರಾ? ಏಳು ಕೊಲೆಗಳು ಮತ್ತು ಮನುಷ್ಯ ಮೃಗ!: ಕ್ರೋಧ, ಕ್ರೌರ್ಯ, ವಿವೇಕದ ಕಾವಲು ಕಳಚಿದಾಗ…
ಹೊರಗೆ ರಾಮನ ಹೆಸರು, ಒಳಗೆ ನಾಥೂರಾಮನ ದ್ವೇಷದ ರಾಜಕಾರಣ ಎಂಬ ವೈರುಧ್ಯವನ್ನು ಸಮಾಜ ಗುರುತಿಸಬೇಕಿದೆ. ಏಕೆಂದರೆ ರಾಮನ ಮೌಲ್ಯವೂ ಗಾಂಧೀಜಿಯವರ ಆದರ್ಶವೂ ಮನುಷ್ಯರನ್ನು ಬೆಸೆಯುವುದೇ ಹೊರತು ವಿಭಜಿಸುವುದಲ್ಲ.




