ಮೈಸೂರು: Karur Vysya Bank (KVB)ನ CSR ಉಪಕ್ರಮದ ಅಂಗವಾಗಿ, ಕ್ಯಾನ್ಸರ್ ಅವೇರ್ನೆಸ್, ಪ್ರಿವೆನ್ಷನ್ ಅಂಡ್ ಅರ್ಲಿ ಡೆಟೆಕ್ಟಿವ್(CAPED) ಇಂಡಿಯಾ ವತಿಯಿಂದ ಸೆಪ್ಟೆಂಬರ್ 21ರಂದು ಸಾಗರಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸೆಪ್ಟೆಂಬರ್ 22ರಂದು ಇಲವಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡು ದಿನಗಳ ಸ್ತನ ಕ್ಯಾನ್ಸರ್ ಜಾಗೃತಿ, ಆಶಾ ಕಾರ್ಯಕರ್ತೆಯರ ತರಬೇತಿ ಹಾಗೂ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವು CAPED ಇಂಡಿಯಾದ ಎರಡು ವರ್ಷಗಳ ಸ್ತನ ಕ್ಯಾನ್ಸರ್ ತಪಾಸಣಾ ಯೋಜನೆಯ ಭಾಗವಾಗಿದ್ದು, ಮೈಸೂರು ಜಿಲ್ಲೆಯಲ್ಲಿ 15,000 ಮಹಿಳೆಯರನ್ನು ಸ್ತನ ಕ್ಯಾನ್ಸರ್‌ಗಾಗಿ ತಪಾಸಣೆ ಮಾಡುವ ಗುರಿಯನ್ನು ಹೊಂದಿದೆ. ಸಮುದಾಯ ಮಟ್ಟದಲ್ಲಿ ಸ್ತನ ಕ್ಯಾನ್ಸರ್‌ನ ಆರಂಭಿಕ ಪತ್ತೆಯನ್ನು ಬಲಪಡಿಸುವುದು ಮತ್ತು ತಪಾಸಣಾ ಸೇವೆಗಳಿಗೆ ಸುಲಭ ಪ್ರವೇಶ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಆಶಾ ಕಾರ್ಯಕರ್ತೆಯರು ಹಾಗೂ ಪಿಎಚ್‌ಸಿ ಸಿಬ್ಬಂದಿಗೆ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ, ಆರಂಭಿಕ ಲಕ್ಷಣಗಳು, ತಪಾಸಣೆ ಹಾಗೂ ಸೂಕ್ತ ಸಮಯದಲ್ಲಿ ರೆಫರಲ್ ಕುರಿತು ತರಬೇತಿ ನೀಡಲಾಯಿತು. ಅರ್ಹ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಪಾಸಣೆಯನ್ನೂ ನಡೆಸಲಾಯಿತು.
CAPED ಇಂಡಿಯಾದ ರಾಷ್ಟ್ರೀಯ ಕಾರ್ಯಾಚರಣೆ ಮುಖ್ಯಸ್ಥ ರವಿ ಸಿಸೋಡಿಯಾ ಅವರು ದೆಹಲಿಯಿಂದ ಆಗಮಿಸಿ ತರಬೇತಿ ನೀಡುವುದರ ಜತೆಗೆ ತಂಡಕ್ಕೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮವನ್ನು CAPED ಪ್ರಾಜೆಕ್ಟ್ ಮ್ಯಾನೇಜರ್ ಡಾ. ನಯನಾ ಮೂರ್ತಿ ಅವರು ಮೈಸೂರು ತಂಡದೊಂದಿಗೆ ಸಮನ್ವಯಗೊಳಿಸಿದರು.
ಮೊದಲ ದಿನ ಸಾಗರಕಟ್ಟೆ PHCಯ ವೈದ್ಯಾಧಿಕಾರಿ ಡಾ. ಯಮುನಾ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರ ನೀಡಿದರು. ಎರಡನೇ ದಿನ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಡಾ. ಅರ್ಚನಾ ಹಾಗೂ ಇಲವಾಲ PHCಯ ವೈದ್ಯಾಧಿಕಾರಿ ಡಾ. ದರ್ಶನ್ ಅವರು ತರಬೇತಿ ಮತ್ತು ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬರಗಾಲ ಪ್ಯಾಕೇಜ್ 1000 ಕೋಟಿ ರೂ. ಘೋಷಣೆ ಸೇರಿ ಇತರೆ ಬೇಡಿಕೆ ಈಡೇರಿಕೆಗೆ ಕೆಪಿಆರ್‌ಎಸ್ ಆಗ್ರಹ
ಈ ಯೋಜನೆಯ ಮೂಲಕ ಆಶಾ ಕಾರ್ಯಕರ್ತೆಯರು ಹಾಗೂ ಮುಂಚೂಣಿ ಆರೋಗ್ಯ ಸಿಬ್ಬಂದಿಯನ್ನು ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು, ಮಹಿಳೆಯರನ್ನು ಸಮಯೋಚಿತ ತಪಾಸಣೆಗೆ ಪ್ರೋತ್ಸಾಹಿಸಲು ಹಾಗೂ ಅಗತ್ಯವಿದ್ದಲ್ಲಿ ಸೂಕ್ತ ಮುಂದಿನ ಚಿಕಿತ್ಸಾ ಕ್ರಮಗಳಿಗೆ ಮಾರ್ಗದರ್ಶನ ನೀಡಲು ಸಜ್ಜುಗೊಳಿಸುವ ಉದ್ದೇಶ ಹೊಂದಲಾಗಿದೆ.




