ಕೋಲಾರ: ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ವೇದಿಕೆ ಕಾರ್ಯಕ್ರಮದ ವೇಳೆ ವಿನಾಕಾರಣ ಕೆಲ ಮುಖಂಡರು ಟಿ.ಚನ್ನಯ್ಯ ರಂಗಮಂದಿರ ಬಳಿ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಪ್ರತಿಭಟಿಸಿದ್ದು, ಅವರಿಗೆ ಶಾಸಕರನ್ನು ಪ್ರಶ್ನಿಸುವ ಯಾವ ನೈತಿಕತೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾದಿಗ ಸಮಾಜದ ಯುವ ಮುಖಂಡ ಹಾರೋಹಳ್ಳಿ ರಾಜೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಬೂಜಿ ಸ್ತಬ್ಧಚಿತ್ರ ಹಾಗೂ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದ್ದೇ ಶಾಸಕ ಕೊತ್ತೂರು ಮಂಜುನಾಥ್. ಬಹಳ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜೊತೆಗೆ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಕೂಡ ಇದ್ದರು. ಬಳಿಕ ಹೊಸಕೋಟೆಯಲ್ಲಿ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಕಾರ್ಯಕ್ರಮವಿದ್ದ ಕಾರಣ ಅಲ್ಲಿಗೆ ತೆರಳಿದರು ಎಂದಿದ್ದಾರೆ.
ಆದರೆ, ಕೆಲ ಮುಖಂಡರು ರಾಜಕೀಯ ಕಾರಣಕ್ಕಾಗಿ ಶಾಸಕರ ವಿರುದ್ಧ ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾರೆ. ಕೆಲ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿಯ ಯಾವೊಬ್ಬ ಜನಪ್ರತಿನಿಧಿಯೂ ಮೆರವಣಿಗೆ ಕಾರ್ಯಕ್ರಮದಲ್ಲಾಗಲಿ, ವೇದಿಕೆ ಕಾರ್ಯಕ್ರಮದಲ್ಲಾಗಲಿ ಪಾಲ್ಗೊಂಡಿಲ್ಲ. ಆದರೆ, ಈ ಮುಖಂಡರು ಈ ಬಗ್ಗೆ ಪ್ರಶ್ನೆಯೇ ಮಾಡುತ್ತಿಲ್ಲ. ಬದಲಾಗಿ ಕಾರ್ಯಕ್ರಮದಲ್ಲಿ ಭಾಗಿಯಾದವರ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಅಡಗಿದ್ದು, ಶಾಸಕರನ್ನು ಪ್ರಶ್ನಿಸುವ ಯಾವ ನೈತಿಕತೆಯನ್ನು ಈ ಮುಖಂಡರು ಉಳಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ..? ಕಸಬಾ ಸಹಕಾರ ಸಂಘಕ್ಕೆ ಮಂಜುನಾಥ ರೆಡ್ಡಿ ಅಧ್ಯಕ್ಷ, ಶಬ್ಬೀರ್ ಅಹ್ಮದ್ ಪಾಷಾ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
ಕೊತ್ತೂರು ಮಂಜುನಾಥ್ ಹಾಗೂ ಅನಿಲ್ ಕುಮಾರ್ ಬಹುತೇಕ ಜಯಂತಿಗಳಲ್ಲಿ, ಆ ಕಾರ್ಯಕ್ರಮದ ಮೆರವಣಿಗೆಗಳಲ್ಲಿ ಪಾಲ್ಗೊಳ್ಳುತ್ತಿರುತ್ತಾರೆ. ಇದು ಈ ಮುಖಂಡರ ಕಣ್ಣಿಗೆ ಕಾಣುತ್ತಿಲ್ಲ ಎಂದು ಹಾರೋಹಳ್ಳಿ ರಾಜೇಶ್ ಟೀಕಿಸಿದ್ದಾರೆ.




