ಗೋದಿ ಮೀಡಿಯಾವನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವ ಮೋದಿ ಸರ್ಕಾರಕ್ಕೆ ಡಿಜಿಟಲ್ ಮೀಡಿಯಾ ಸವಾಲಾಗಿ ಪರಿಣಮಿಸಿದೆ. ಹಿಂಬಾಗಿಲ ಮೂಲಕ ದಮನ ತಂತ್ರಗಳ ಹೇರಿದ್ದ ಕೇಂದ್ರ ಸರ್ಕಾರ ಇದೀಗ ಮುಂಬಾಗಿಲ ಮುಂದೆ ಪ್ರತ್ಯಕ್ಷವಾಗುವ ಧೈರ್ಯ ತೋರಿದೆ. ತುರ್ತುಪರಿಸ್ಥಿತಿಯನ್ನು ಆಡಿಕೊಳ್ಳುತ್ತಿದ್ದವರು, ಅದನ್ನು ಮೀರಿದ ಹೇಯ ದಾರಿಗಳನ್ನು ಹಿಡಿದಿದ್ದಾರೆ.
ವಿದೇಶಗಳ ರಾಷ್ಟ್ರಪತಿಗಳು- ಪ್ರಧಾನಿಗಳು-ಸುಲ್ತಾನರು-ದೊರೆಗಳೊಂದಿಗೆ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಗೆ ಬೆರೆಯುತ್ತಾರೆ, ವಿನಾಕಾರಣ ಹಲ್ಲು ಕಿರಿಯುತ್ತಾರೆ, ಕರಡಿಯಂತೆ ತಬ್ಬಿಕೊಂಡು ತಬ್ಬಿಬ್ಬುಗೊಳಿಸುತ್ತಾರೆ ಎಂಬುದು ಕಳೆದ 12 ವರ್ಷಗಳಲ್ಲಿ ಜನಜನಿತ. ಈ ಮಾತಿಗೆ ಜಾಲತಾಣಗಳಲ್ಲಿ ಲಭ್ಯವಿರುವ ನೂರಾರು ವಿಡಿಯೋಗಳೇ ಸಾಕ್ಷಿ. ಪ್ರಧಾನಿಯವರ ಈ ವರ್ತನೆಯು ಹತ್ತಾರು ಸಾವಿರ ಹಾಸ್ಯ-ವ್ಯಂಗ್ಯ-ಅಣಕ-ವಿಡಂಬನೆಯ ವಿಡಿಯೋಗಳು, ವ್ಯಂಗ್ಯಚಿತ್ರಗಳಿಗೆ ಸ್ಫೂರ್ತಿಯಾಗಿದೆ.
ವಿದೇಶೀ ಗಣ್ಯರನ್ನು ಕರಡಿಯಂತೆ ತಬ್ಬಿ ಹಿಡಿದು, ಅಸಂಬದ್ಧ ಇಂಗ್ಲಿಷ್ ಪದಗಳನ್ನು ಆಡಿ ಜೋರು ಜೋರಾಗಿ ನಗುವುದೇ ವಿದೇಶಾಂಗ ನೀತಿ ಎಂಬಂತೆ ಪ್ರತಿಬಿಂಬಿಸಿದ್ದಾರೆ ಮೋದಿ. ಅವರ ಈ ವರ್ತನೆಯನ್ನು ಅಣಕಿಸುವ ಒಂದು ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಗೆಬುಗ್ಗೆಗಳನ್ನು ಎಬ್ಬಿಸಿತ್ತು. ಈ ವೈರಲ್ ವಿಡಿಯೋವನ್ನು ಕೇವಲ ಇನ್‌ಸ್ಟಾಗ್ರಾಮ್ ಒಂದರಲ್ಲೇ ಒಂದೂವರೆ ಕೋಟಿಗೂ ಹೆಚ್ಚು ಜನ ನೋಡಿದ್ದರು. ಆದರೆ ಅಂಧ ಭಕ್ತ ಜಗತ್ತು ಉರಿದೆದ್ದಿತ್ತು. ಜೊತೆಗೆ ಪಕ್ಷ ಪರಿವಾರ ಸರ್ಕಾರಗಳು ಕೂಡ. ಮಾರ್ಚ್ ಮಧ್ಯಭಾಗದ ಹೊತ್ತಿಗೆ ಈ ವಿಡಿಯೋವನ್ನು ಸಂಬಂಧಪಟ್ಟ ಸಾಮಾಜಿಕ ಜಾಲತಾಣ ತೆಗೆದು ಹಾಕಿತು. ತೆಗೆದು ಹಾಕಿದ ಕ್ರಿಯೆ ಈ ವಿಡಿಯೋ ಮತ್ತಷ್ಟು ವೈರಲ್ ಆಗಲು ಕಾರಣವಾಯಿತು. ಪ್ರಧಾನಿಯನ್ನು ಅಣಕಿಸುವ ಈ ವಿಡಿಯೋ ಮಾಡಿದ್ದವರು ಸಾಮಾಜಿಕ ಜಾಲತಾಣ ಪ್ರಭಾವಿ ಯುವಕ ಪುಳಕಿತ್ ಮಣಿ.
ಕೋಟಿಗಟ್ಟಲೆ ನೋಡುಗ ಚಂದಾದಾರರನ್ನು ಹೊಂದಿರುವ ಪ್ರಸಿದ್ಧ ಸಾಮಾಜಿಕ ಜಾಲತಾಣ ಪ್ರಭಾವಿ ಧ್ರುವ್ ರಾಠೀ, ಮಣಿಯವರ ವಿಡಿಯೋವನ್ನು ಸಮರ್ಥಿಸಿ ಅದನ್ನು ಪುನಃ ಪೋಸ್ಟ್ ಮಾಡಿದರು. ಸರ್ಕಾರದ ಅಸಹನೆಯನ್ನು ಟೀಕಿಸಿದ್ದರು. ಮಣಿ ಅವರ ವಿಡಿಯೋವನ್ನು ಕಿತ್ತು ಹಾಕಿಸಿದ ಮೋದಿ ಸರ್ಕಾರದ ಕೃತ್ಯವನ್ನು ಖಂಡಿಸಲೆಂದೇ ತಮ್ಮ ಈ ವಿಡಿಯೋವನ್ನು ಭಾರೀ ವೈರಲ್ ಮಾಡುವಂತೆ ರಾಠೀ ಕರೆ ನೀಡಿದ್ದರು. ಈ ಕರೆಗೆ ನಾಲ್ಕು ಕೋಟಿಗೂ ಹೆಚ್ಚು ಮಂದಿ ಓಗೊಟ್ಟರು.
ಮೋದಿಯವರನ್ನು, ಅವರ ಆಡಳಿತವನ್ನು ಹೊಗಳುವ ಸಿನೆಮಾಗಳಿಗೆ ಸರ್ಕಾರ ಪ್ರೋತ್ಸಾಹದ ಮಳೆಗರೆಸುತ್ತದೆ. ಹಾಸ್ಯ ಮಾಡಿ ಅಣಕಿಸಿದರೆ ಸಾಮಾಜಿಕ ಜಾಲತಾಣಗಳಿಂದಲೂ ಎತ್ತಂಗಡಿ ಮಾಡಿಸಲಾಗುತ್ತದೆ ಎಂದು ಚುಚ್ಚಿದ್ದರು ರಾಠೀ.
ಪುಳಕಿತ್ ಮಣಿ ಅವರ ವಿಡಿಯೋವನ್ನು ಮಾಹಿತಿ ತಂತ್ರಜ್ಞಾನ ಕಾಯಿದೆಯ 79(3)(b) ಸೆಕ್ಷನ್ ಪ್ರಕಾರ ಬ್ಲಾಕ್ ಮಾಡಲಾಗಿದೆ ಎಂಬ ಸಂದೇಶವನ್ನು ಜಾಲತಾಣ ಕಳಿಸಿತ್ತು. ಈ ವಿಡಿಯೋ ಯಾವ ಕಾರಣಕ್ಕಾಗಿ ಅಕ್ರಮ ಅಥವಾ ಕಾನೂನುಬಾಹಿರ ಎಂದು ಕೇಂದ್ರ ಸರ್ಕಾರ ತಿಳಿಸಿಲ್ಲ. ಅವರಿಂದ ವಿವರಣೆಯನ್ನೂ ಕೇಳಿಲ್ಲ. ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಸರ್ಕಾರಿ ನಿರ್ದೇಶಿತ ಸೆನ್ಸಾರ್‌ಶಿಪ್ ವ್ಯಾಪಕವಾಗಿ ಜಾರಿಯಲ್ಲಿದೆ. ಮಣಿ ವಿಡಿಯೋ ಎತ್ತಂಗಡಿ ಈ ಮಾತಿಗೆ ಸಣ್ಣ ಪುರಾವೆ.
ಎತ್ತಂಗಡಿ ಅಲ್ಲದೆ ಇತರೆ ಸೆನ್ಸಾರ್‌ಶಿಪ್ ‘ಚಿಕಿತ್ಸೆ’ಯೂ ಮೋದಿ ಸರ್ಕಾರದ ಬಳಿ ಉಂಟು. ಅವುಗಳ ಪೈಕಿ ಮುಖ್ಯವಾದದ್ದು ‘ಲೋವರ್ ಫೀಡ್’ ಚಿಕಿತ್ಸೆ. ಸರ್ಕಾರದ ನೀತಿ ನಿರ್ಧಾರಗಳನ್ನು, ಕೋಮುವಾದ, ಬಹುಸಂಖ್ಯಾತವಾದಗಳನ್ನು ತಿವಿಯುವ ಪೋಸ್ಟ್ ಗಳೇ ಈ ‘ಚಿಕಿತ್ಸೆ’ ಪಡೆಯತ್ತವೆ. ಇಂತಹ ಪೋಸ್ಟ್ ಗಳು ತಾಸುಗಟ್ಟಲೆ ಒಂದೇ ಒಂದು ವೀಕ್ಷಣೆಯನ್ನೂ ಗಳಿಸುವುದಿಲ್ಲ. ಇನ್ನು ‘ಲೈಕ್’ ಗಳಿಕೆ ದೂರವೇ ಉಳಿಯಿತು. ಪೋಸ್ಟ್ ಮಾಡಿದವರಿಗೆ ಮಾತ್ರ ಗೋಚರಿಸಿ, ಉಳಿದವರ ಕಣ್ಣಿಗೆ ಕಾಣದಂತೆ ಅದನ್ನು ಅಡಗಿಸಿಡುವ ತಂತ್ರವಿದು. ಆಳುವವರ ಆಣತಿಯ ಮೇರೆಗೆ ಜಾಲತಾಣಗಳು ಇಂತಹ ಕೃತ್ಯಗಳಲ್ಲಿ ತೊಡಗುತ್ತವೆ. ಇಲ್ಲದೆ ಹೋದರೆ ನೆಲದ ಕಾನೂನನ್ನು ಪಾಲಿಸಿಲ್ಲವೆಂಬ ನೆಪದಲ್ಲಿ ಕೇಸು ಎದುರಿಸಬೇಕಾಗುತ್ತದೆ. ಈ ಕುತಂತ್ರಕ್ಕೆ ಸತ್ಯ ನ್ಯಾಯ ಪ್ರೀತಿಯ ಮಾನವೀಯ ಮೌಲ್ಯಗಳನ್ನು ಹೊಂದಿರುವ ಸಂಸ್ಥೆಗಳೂ ಬಲಿಯಾಗುತ್ತಿವೆ.
2021ರ ಐಟಿ ಕಾಯಿದೆ ನಿಯಮಗಳು ಸರ್ಕಾರಕ್ಕೆ ಈ ಎತ್ತಂಗಡಿ ಅಧಿಕಾರ ನೀಡುತ್ತವೆ. 2021ರ ಫೆಬ್ರವರಿಯಲ್ಲಿ ಆದೇಶವೊಂದರ ಮೂಲಕ ತನಗೆ ತಾನೇ ಕೊಟ್ಟುಕೊಂಡ ಅಧಿಕಾರವಿದು. ಅಂದಿನಿಂದ ಈ ಅಧಿಕಾರವನ್ನು ಸತತ ಆದೇಶಗಳ ಮೂಲಕವೇ ವಿಸ್ತರಿಸಲಾಗುತ್ತಿದೆ. ಪ್ರತಿಯೊಂದು ಆದೇಶವೂ ಸಾಮಾಜಿಕ ಜಾಲತಾಣ ಬಳಕೆದಾರರ ಅಭಿವ್ಯಕ್ತಿಯ ಹಕ್ಕುಗಳನ್ನು ಮೊಟಕು ಮಾಡುತ್ತಲೇ ನಡೆದಿದೆ. ಈ ಅಧಿಕಾರವನ್ನು ಪ್ರಶ್ನಿಸಿರುವ ಅನೇಕ ಕೇಸುಗಳು ದೇಶದ ಹಲವಾರು ಹೈಕೋರ್ಟುಗಳಲ್ಲಿ ಬಾಕಿ ಇವೆ. ಐಟಿ ಕಾಯಿದೆಯ ಅಧಿಕಾರವನ್ನು ವಿಸ್ತರಿಸುವ ಇತ್ತೀಚಿನ ಆದೇಶ ಹೊರಟದ್ದು ಇದೇ ಫೆಬ್ರವರಿ 10ರಂದು. ‘ಸಮಸ್ಯಾತ್ಮಕ’ ಪೋಸ್ಟನ್ನು ಜಾಲತಾಣದಿಂದ ತೆಗೆದು ಹಾಕಲು ನೀಡಲಾಗಿದ್ದ ಅವಧಿಯನ್ನು ಕೇವಲ ಮೂರು ತಾಸುಗಳಿಗೆ ಇಳಿಸಿದೆ ಈ ಆದೇಶ. ವ್ಯಂಗ್ಯ ವಿಡಂಬನೆಯ ಪೋಸ್ಟ್ ಗಳಿಗೂ ರಿಯಾಯಿತಿ ಇಲ್ಲ. 2025ರ ಅಕ್ಟೋಬರ್ ನಲ್ಲಿ ಈ ಕಾಯಿದೆಯಡಿ ಮತ್ತೊಂದು ಆದೇಶ ಹೊರಟಿತ್ತು. ಸಹಯೋಗ ಸೆನ್ಸಾರ್ಶಿಪ್ ಪೋರ್ಟಲ್ ಹೆಸರಿನಲ್ಲಿ 35 ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ ಪೊಲೀಸರು ಮತ್ತು ಕೇಂದ್ರ ಸರ್ಕಾರದ ಎಂಟು ಏಜೆನ್ಸಿಗಳು ತಮಗೆ ಸರಿಯಲ್ಲ ಎನಿಸಿದ ಯಾವುದೇ ಅಂತರ್ಜಾಲ ತಾಣ ಪೋಸ್ಟ್ ಗಳನ್ನು ತೆಗೆದು ಹಾಕುವಂತೆ ಆ ಜಾಲತಾಣಕ್ಕೆ ಆಣತಿ ಮಾಡಬಹುದು. ಇಷ್ಟು ಮಾತ್ರವಲ್ಲದೆ ಐಟಿ ಕಾಯಿದೆಯ 69(ಎ) ಸೆಕ್ಷನ್ ಅಡಿಯಲ್ಲಿ ವೆಬ್‌ಸೈಟ್‌ಗಳನ್ನೇ ಬ್ಲಾಕ್ ಮಾಡುವ ಅಧಿಕಾರವನ್ನೂ ಕೇಂದ್ರ ಸರ್ಕಾರ ತನಗೆ ತಾನು ಕೊಟ್ಟುಕೊಂಡಿದೆ. ತಮ್ಮ ಮೇಲೆ ಕ್ರಮ ತೆಗೆದುಕೊಂಡದ್ದು ಕೇಂದ್ರ ಸರ್ಕಾರವೋ, ರಾಜ್ಯ ಪೊಲೀಸರೋ, ಕೇಂದ್ರ ಸರ್ಕಾರದ ಏಜೆನ್ಸಿಗಳೋ ಎಂಬುದು ಬಳಕೆದಾರರಿಗೆ ತಿಳಿಯುವುದೇ ಇಲ್ಲ.
ಇತ್ತೀಚೆಗೆ ಕೇಂದ್ರ ಸರ್ಕಾರ ಮಸೆದಿರುವ ಐಟಿ ಕಾಯಿದೆಗೆ ಹೊಸ ತಿದ್ದುಪಡಿಯ ಕತ್ತಿ ಡಿಜಿಟಲ್ ನ್ಯೂಸ್ ಮೀಡಿಯಾ ಕತ್ತುಗಳ ಮೇಲೆ ತೂಗುತೊಡಗಿದೆ. ಸಮಕಾಲೀನ ವ್ಯವಹಾರಗಳು ಮತ್ತು ರಾಜಕಾರಣದ ಮೇಲೆ ಟೀಕೆ ಟಿಪ್ಪಣಿ ಮಾಡುವ ಡಿಜಿಟಲ್ ಸುದ್ದಿ ಮಾಧ್ಯಮಗಳು ಅಪಾಯಕ್ಕೆ ಸಿಗಲಿವೆ. ಇವುಗಳನ್ನು ಬೇಕಾಬಿಟ್ಟಿ ಸೆನ್ಸಾರ್‌ಶಿಪ್‌ಗೆ ಗುರಿಪಡಿಸುವುದು ಮೋದಿ ಸರ್ಕಾರದ ಹೊಸ ಇರಾದೆ. 2024ರ ಬ್ರಾಡ್‌ಕಾಸ್ಟಿಂಗ್ ಬಿಲ್ (ಪ್ರಸಾರ ಮಸೂದೆ) ಜಾರಿಗೆ ಭಾರೀ ವಿರೋಧ ವ್ಯಕ್ತವಾದ ಕಾರಣ ಹಿಂದಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೆ ಈ ಮಸೂದೆಯ ದಮನಕಾರಿ ನಿರ್ಬಂಧಗಳನ್ನು ಮಾರುವೇಷದಲ್ಲಿ ಜಾರಿಗೆ ತರಲು ಹೊರಟಿದೆ ಮೋದಿ ಸರ್ಕಾರ. ಡೀಪ್ ಫೇಕ್ ಮತ್ತು ಎಐ ಮೂಲಕ ಸೃಷ್ಟಿಸಿದ ತಪ್ಪು ಮಾಹಿತಿಗಳ ಹಾವಳಿ ಅಂತರ್ಜಾಲ ತಾಣದಲ್ಲಿ ಹೆಚ್ಚಿರುವುದು ನಿಜ. ಈ ಕುರಿತು ಸುಪ್ರೀಮ್ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದ್ದು, ಸರ್ಕಾರ ನೀತಿ ನಿರ್ಬಂಧಗಳನ್ನು ರಚಿಸುವಂತೆ ಹೇಳಿರುವುದೂ ಹೌದು. ಆದರೆ ಈ ಡೀಪ್ ಫೇಕ್ ಮತ್ತು ಎಐ ನಿರ್ಮಿತ ತಪ್ಪು ಮಾಹಿತಿಗಳ ನಿಯಂತ್ರಣದ ಹೆಸರಿನಲ್ಲಿ ಇಡೀ ಸಾಮಾಜಿಕ ಜಾಲತಾಣ ಅಭಿವ್ಯಕ್ತಿ ಮತ್ತು ಡಿಜಿಟಲ್ ನ್ಯೂಸ್ ಮಾಧ್ಯಮಗಳಿಗೆ ಸೆನ್ಸಾರ್‌ಶಿಪ್ ಕಡಿವಾಣ ತೊಡಿಸುವ ದಮನಕಾರಿ ಕ್ರಮಕ್ಕೆ ಮುಂದಾಗಿದೆ ಮೋದಿ ಸರ್ಕಾರ.
ವಿಶ್ವಗುರುವಿನ ಕಥಾನಕದ ನೀರುಗುಳ್ಳೆ ಒಡೆಯತೊಡಗಿದೆ, ಪ್ರಶ್ನೆಗೆ ಗುರಿಯಾಗತೊಡಗಿದೆ. ಪರಿಣಾಮವಾಗಿ ವಿದೇಶಾಂಗ ನೀತಿಯ ವಿಡಂಬನೆ-ವ್ಯಂಗ್ಯ-ಅಣಕಗಳು ಮೋದಿ ಸರ್ಕಾರಕ್ಕೆ ಘಾಸಿ ಉಂಟು ಮಾಡತೊಡಗಿವೆ. ದೇಶದ ಬಹುದೊಡ್ಡ ಅಮಾಯಕ ಅಂಧಭಕ್ತ ವರ್ಗವೊಂದು ವಿಶ್ವಗುರುವಿನ ಕಥಾನಕವನ್ನು ಕಣ್ಣು ಮುಚ್ಚಿ ಒಪ್ಪಿಕೊಂಡಿದೆ. ಅದೇ ವರ್ಗ ಮೈಮರೆವನ್ನು ಕೊಡವಿ ಕಣ್ಣು ತೆರೆದು ನಿಂತು ನಿರುದ್ಯೋಗ, ಬೆಲೆ ಏರಿಕೆಗಳಂತಹ ಜ್ವಲಂತ ಪ್ರಶ್ನೆಗಳನ್ನು ಎತ್ತತೊಡಗಿದರೆ ಮೋದಿ ಸರ್ಕಾರದ ಬುಡ ಅಲ್ಲಾಡುವುದು ನಿಶ್ಚಿತ. ಈ ಪ್ರಶ್ನೆಗಳು ಏಳದಂತೆ ಮೊಳಕೆಯಲ್ಲೇ ಚಿವುಟಿ ಹಾಕುವುದು ಡಿಜಿಟಲ್ ಸೆನ್ಸಾರ್‌ಶಿಪ್‌ನ ಅಸಲು ಉದ್ದೇಶ.
ದೇಶದ ಸ್ಥಿರತೆ, ಭದ್ರತೆಯ ಹೆಸರಿನಲ್ಲಿ ಇಂದಿರಾಗಾಂಧಿಯವರು 1975ರಲ್ಲಿ ಆಂತರಿಕ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದರು. ಅವರ ಅಸಲು ಉದ್ದೇಶ ತಮ್ಮ ಕೈಯಿಂದ ಅಧಿಕಾರ ಜಾರಿ ಹೋಗದಂತೆ ತಡೆಯುವುದೇ ಆಗಿತ್ತು. ತುರ್ತುಪರಿಸ್ಥಿತಿಯ 18 ತಿಂಗಳುಗಳ ಕಾಲ ದೇಶದ ಪತ್ರಿಕೆಗಳು ತೀವ್ರ ಸೆನ್ಸಾರ್‌ಶಿಪ್ ಗೆ ಗುರಿಯಾಗಿದ್ದವು. ದಮನಕಾರಿ ಕ್ರಮಗಳನ್ನು ಎದುರಿಸಿದ್ದವು. ಆದರೆ ಮೋದಿ ಸರ್ಕಾರದ ಸೆನ್ಸಾರ್‌ಶಿಪ್ ಹನ್ನೆರಡು ವರ್ಷಗಳ ಕಾಲ ಜಾರಿಯಲ್ಲಿದೆ. ಅದಕ್ಕೆ ತುರ್ತುಪರಿಸ್ಥಿತಿಯ ಹುಸಿನೆವವೂ ಬೇಕಿಲ್ಲ. ಹನ್ನೆರಡು ವರ್ಷಗಳ ಪರೋಕ್ಷ ಸೆನ್ಸಾರ್‌ಶಿಪ್ ನ ಬಿಸಿಗೆ ರೂಢಿಯಾಗಿ ಹೋಗಿದೆ ಗೋದಿ ಮೀಡಿಯಾ. ಗೋದಿ ಮೀಡಿಯಾವನ್ನು ಅಂಕೆಯಲ್ಲಿ ಇಟ್ಟುಕೊಂಡಿರುವ ಮೋದಿ ಸರ್ಕಾರ ಇದೀಗ ಡಿಜಿಟಲ್ ಮೀಡಿಯಾದೆಡೆಗೆ ಕೆಂಗಣ್ಣು ಬೀರಿದೆ. ನಿರಂತರ ಜನಜಾಗೃತಿಯೊಂದೇ ಜನತಂತ್ರ ಮತ್ತು ಅಭಿವಕ್ಯಿ ಸ್ವಾತಂತ್ರ್ಯಕ್ಕೆ ತೆರಬೇಕಾದ ಬೆಲೆ ಎಂಬ ವಿವೇಕದ ಮಾತನ್ನು ದೇಶದ ಜನಸಮೂಹಕ್ಕೆ ನೆನಪು ಮಾಡಿಕೊಡಬೇಕಿದೆ.




