ರಾಜ್ಯದಲ್ಲಿ ಬರಗಾಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಅದ್ದೂರಿಯಾಗಿ ಮೈಸೂರು ದಸರಾ ಆಚರಿಸುವುದು ಹಾಗೂ ದಸರಾ ಅಂಗವಾಗಿ ಕಂಬಳ ಆಯೋಜಿಸಲು ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ರೈತಸಂಘ ತೀವ್ರವಾಗಿ ವಿರೋಧಿಸಿದೆ.
ಮೈಸೂರು ಜಿಲ್ಲೆಯ ಹುಣಸೂರು ಎಪಿಎಂಸಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಸರ್ಕಾರದ ನಿರ್ಧಾರ ಖಂಡಿಸಿ ಜುಲೈ 18ರಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಹೊಸೂರು ಕುಮಾರ್, ರಾಜ್ಯದಲ್ಲಿ ಮಳೆಯ ಕೊರತೆಯಿಂದ ಜಲಾಶಯಗಳು, ಕೆರೆ-ಕಟ್ಟೆಗಳು ಬರಿದಾಗಿದ್ದು, ಬೆಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ದುಂದುವೆಚ್ಚಕ್ಕೆ ಮುಂದಾಗುವ ಬದಲು ರೈತರ ಬದುಕು ಉಳಿಸುವತ್ತ ಗಮನಹರಿಸಬೇಕಿದೆ ಎಂದು ಒತ್ತಾಯಿಸಿದರು.

ದಸರಾ ಆಚರಣೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಬದಲು, ಆ ಹಣವನ್ನು ಬರ ನಿರ್ವಹಣೆ, ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗಳು, ಜಾನುವಾರುಗಳಿಗೆ ಮೇವು ಒದಗಿಸುವುದು ಹಾಗೂ ರೈತರ ನೆರವಿನ ಕಾರ್ಯಕ್ರಮಗಳಿಗೆ ಬಳಸಬೇಕು. ಈ ವರ್ಷ ದಸರಾವನ್ನು ಸರಳ ಮತ್ತು ಮಿತವ್ಯಯದ ರೀತಿಯಲ್ಲಿ ಆಚರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಕಂಬಳ ಕ್ರೀಡೆಗೆ ತಮ್ಮ ವಿರೋಧವಿಲ್ಲ. ಆದರೆ ಬರಗಾಲದ ಸಂದರ್ಭದಲ್ಲಿ ದಸರಾ ಅಂಗವಾಗಿ ಅದನ್ನು ಆಯೋಜಿಸುವುದು ಸೂಕ್ತವಲ್ಲ. ಕಂಬಳಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಜಮೀನು ಖರೀದಿಸುವುದು, ಕೆಸರು ಗದ್ದೆ ನಿರ್ಮಿಸುವುದು ಸಾರ್ವಜನಿಕ ಹಣದ ದುರುಪಯೋಗವಾಗಲಿದೆ. ದಸರಾ ಮುಗಿದ ಬಳಿಕ ಆ ಜಾಗ ವರ್ಷಪೂರ್ತಿ ಪಾಳು ಬೀಳುವ ಬದಲು ರೈತರಿಗೆ ಉಪಯುಕ್ತವಾಗುವ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಬಳಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ರೈತರು ಸಂಕಷ್ಟದಲ್ಲಿರುವಾಗ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸಬೇಕು. ಇದನ್ನೆಲ್ಲ ಮೀರಿ ಅದ್ದೂರಿ ದಸರಾ ಆಚರಣೆಗೆ ಮುಂದಾದರೆ ರೈತ ಸಮುದಾಯದ ಆಕ್ರೋಶ ಹಾಗೂ ವಿವಿಧ ರೈತ ಸಂಘಟನೆಗಳ ತೀವ್ರ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?“ಮಳೆಯಿದೆ… ಆದರೆ ಅದು ಕೊಡಗಿನ ಮಳೆಯಲ್ಲ!”
ಸಭೆಯಲ್ಲಿ ತಾಲ್ಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಚಂದ್ರೇಗೌಡ, ತಟ್ಟೆಕೆರೆ ರಾಮಕೃಷ್ಣೇಗೌಡ, ಕಲ್ಲಹಳ್ಳಿ ಜಯಣ್ಣ, ಮೋದೂರು ಶಿವಣ್ಣ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಇದ್ದರು.




