ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ, ‘ನ್ಯಾಯಾಲಯದ ದಿಕ್ಕು ತಪ್ಪಿಸಲು ಯತ್ನಿಸಿದ’ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಮಯ್ ರೈನಾ ಅವರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ನಡೆಗೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
“ಸಮಾಜದ ಸದಸ್ಯರ ಭಾವನೆಗಳನ್ನು ಗೌರವಿಸುವುದು ಮತ್ತು ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು ಹೇಗೆಂದು ನಿಮಗೆ ತಿಳಿದಿಲ್ಲದಿದ್ದರೆ, ನೀವು ಪರಿಣಾಮಗಳನ್ನು ಎದುರಿಸಲೇಬೇಕು” ಎಂದು ಸುಪ್ರೀಂ ಕೋರ್ಟ್ ಕಟುವಾಗಿ ಹೇಳಿದೆ. ವಿಚಾರಣೆಯ ಆರಂಭದಲ್ಲಿ ರೈನಾಗೆ ₹10 ಲಕ್ಷ ದಂಡ ವಿಧಿಸಿದ ನ್ಯಾಯಾಲಯವು, ಅವರ ವಕೀಲರು ಕ್ಷಮಾದಾನ ಕೋರಿ ಮನವಿ ಮಾಡಿದ ನಂತರ ದಂಡದ ಮೊತ್ತವನ್ನು ₹3 ಲಕ್ಷಕ್ಕೆ ಇಳಿಸಿತು. ಆದರೆ, ಮುಂದಿನ ವಿಚಾರಣೆಯ ವೇಳೆಗೆ ನ್ಯಾಯಾಲಯಕ್ಕೆ ತೃಪ್ತಿಯಾಗುವ ರೀತಿಯಲ್ಲಿ ನಡೆದುಕೊಳ್ಳದಿದ್ದರೆ ₹30 ಲಕ್ಷ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
‘ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ’ (SMA) ಎಂಬ ಗಂಭೀರ ಕಾಯಿಲೆಯ ಚಿಕಿತ್ಸೆಯ ದುಬಾರಿ ವೆಚ್ಚದ ಕುರಿತು ಅಸೂಕ್ಷ್ಮ ಹೇಳಿಕೆಗಳನ್ನು ನೀಡಿದ್ದಲ್ಲದೆ, ಅಂತಹ ವಿಕಲಾಂಗತೆ ಹೊಂದಿರುವ ವ್ಯಕ್ತಿಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ ‘ಕ್ಯೂರ್ ಎಸ್ಎಂಎ ಇಂಡಿಯಾ ಫೌಂಡೇಶನ್’ (Cure SMA India Foundation) ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯಲ್ಲಿ, ‘ಇಂಡಿಯಾಸ್ ಗಾಟ್ ಲೇಟೆಂಟ್’ (India’s Got Latent) ಶೋ ನಿರೂಪಕ ಸಮಯ್ ರೈನಾ ಮತ್ತು ಇತರ ಸಾಮಾಜಿಕ ಜಾಲತಾಣದ ಪ್ರಭಾವಿಗಳಾದ ವಿಪುನ್ ಗೋಯಲ್, ಬಲರಾಜ್ ಪರಂಜೀತ್ ಸಿಂಗ್ ಘಾಯ್, ಸೋನಾಲಿ ಠಕ್ಕರ್ ಹಾಗೂ ನಿಶಾಂತ್ ಜಗದೀಶ್ ತನ್ವಾರ್ ಅವರು ಮಾಡಿದ್ದ ಹಾಸ್ಯಗಳನ್ನು ಉಲ್ಲೇಖಿಸಲಾಗಿತ್ತು.
ಕಳೆದ ವರ್ಷ ನಡೆದ ವಿಚಾರಣೆಯಲ್ಲಿ, ವಿಶೇಷ ಚೇತನರಿಗಾಗಿ ಪ್ರತಿ ತಿಂಗಳು ತಮ್ಮ ವೇದಿಕೆಗಳಲ್ಲಿ ದೇಣಿಗೆ ಸಂಗ್ರಹಣಾ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ನ್ಯಾಯಾಲಯವು ರೈನಾಗೆ ನಿರ್ದೇಶನ ನೀಡಿತ್ತು. “ಇದು ನಿಮ್ಮ ಮೇಲಿರುವ ಸಾಮಾಜಿಕ ಜವಾಬ್ದಾರಿಯೇ ಹೊರತು ದಂಡನೆಯಲ್ಲ. ನೀವು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದೀರಿ, ಹೆಚ್ಚು ಜನಪ್ರಿಯರಾಗಿದ್ದರೆ ಅದನ್ನು ಇತರರೊಂದಿಗೆ ಹಂಚಿಕೊಳ್ಳಿ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದರು.
ಆದರೆ, ಈ ಆದೇಶವನ್ನು ಪಾಲಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, “ನಿನ್ನೆ ಅಫಿಡವಿಟ್ ಸಲ್ಲಿಸಲಾಗಿದೆ ಎಂದು ಸುಳ್ಳು ಹೇಳಿ ನ್ಯಾಯಾಲಯವನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗಿದೆ, ಆದರೆ ಯಾವುದೇ ಅಫಿಡವಿಟ್ ಸಲ್ಲಿಕೆಯಾಗಿಲ್ಲ. ಅಲ್ಲದೆ, ದೇಶದ ಹೊರಗೆ ಕುಳಿತುಕೊಂಡರೆ ತಾವು ನ್ಯಾಯವ್ಯಾಪ್ತಿಯಿಂದ ಹೊರಗಿದ್ದೇವೆ ಎಂದು ಅವರು ಭಾವಿಸಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿಗಳು ಕಟುವಾಗಿ ನುಡಿದಿದ್ದಾರೆ.
ಕ್ಯೂರ್ ಎಸ್ಎಂಎ ಫೌಂಡೇಶನ್ ಪರ ವಾದ ಮಂಡಿಸಿದ ವಕೀಲೆ ಅಪರಾಜಿತಾ ಸಿಂಗ್ ಅವರು, “ಅವರು ಎಂತಹ ಯೂತ್ ಐಕಾನ್ ಎಂದು ನನಗೇ ಆಶ್ಚರ್ಯವಾಗುತ್ತದೆ. ಅವರಲ್ಲಿ ಕ್ಷಮೆಯಾಚಿಸುವ ಯಾವುದೇ ಪ್ರಾಮಾಣಿಕತೆಯಿಲ್ಲ,” ಎಂದು ಅಪರಾಜಿತಾ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಇಂತಹ ಅಹಂಕಾರಿ ವ್ಯಕ್ತಿಯೊಂದಿಗೆ ತಮ್ಮ ಸಂಸ್ಥೆ ಗುರುತಿಸಿಕೊಳ್ಳಲು ಬಯಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.




