ರಷ್ಯಾದಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳ ಮೇಲಿನ ಆರ್ಥಿಕ ಒತ್ತಡವನ್ನು ಅಮೆರಿಕ ಗಣನೀಯವಾಗಿ ಕಡಿಮೆ ಮಾಡಿದೆ. ರಷ್ಯಾ ಮೇಲಿನ ನಿರ್ಬಂಧಗಳ ಮಸೂದೆಯನ್ನು ಪರಿಷ್ಕರಿಸಿರುವ ಅಮೆರಿಕದ ಸೆನೆಟರ್ಗಳು, ತೈಲ ಆಮದಿನ ಮೇಲಿನ ಗರಿಷ್ಠ ಸುಂಕವನ್ನು ಈ ಹಿಂದೆ ಪ್ರಸ್ತಾವಿಸಲಾಗಿದ್ದ 500%ರಿಂದ 100%ಗೆ ಇಳಿಕೆ ಮಾಡಿದ್ದಾರೆ. ಅಮೆರಿಕದ ಈ ತೀರ್ಮಾನವು ರಷ್ಯಾದಿಂದ ಅತಿ ಹೆಚ್ಚು ತೈಲ ಖರೀದಿಸುವ ಭಾರತ ಮತ್ತು ಚೀನಾಗೆ ಭಾರೀ ನಿರಾಳತೆ ತರಲಿದೆ ಎನ್ನಲಾಗಿದೆ.
ರಾಯಿಟರ್ಸ್ ವರದಿಯ ಪ್ರಕಾರ, ದಿವಂಗತ ಸೆನೆಟರ್ ಲಿಂಡ್ಸೆ ಗ್ರಹಾಂ ಅವರು ಆರಂಭದಲ್ಲಿ ಈ ದ್ವಿಪಕ್ಷೀಯ ಮಸೂದೆಯನ್ನು ಮಂಡಿಸಿದ್ದರು. ರಷ್ಯಾದ ಮೇಲೆ ಕಠಿಣ ನಿರ್ಬಂಧ ಹೇರುವುದು ಮತ್ತು ರಷ್ಯಾ ಇಂಧನದ ಮೇಲೆ ಅತಿಯಾಗಿ ಅವಲಂಬಿತವಾಗಿರುವ ದೇಶಗಳು ತಮ್ಮ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ಭಾರಿ ಸುಂಕ ವಿಧಿಸುವುದು ಈ ಮಸೂದೆಯ ಮೂಲ ಉದ್ದೇಶವಾಗಿತ್ತು.
ಅದರಂತೆ, ಮೊದಲಿನ ಮಸೂದೆಯಲ್ಲಿ ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ 500%ರಷ್ಟು ಬ್ಲಾಂಕೆಟ್ ಸುಂಕ ವಿಧಿಸಲು ಪ್ರಸ್ತಾಪಿಸಲಾಗಿತ್ತು. ಆದರೆ, ಈಗ ಪರಿಷ್ಕೃತ ಮಸೂದೆಯಲ್ಲಿ ರಷ್ಯಾದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಅತಿ ಹೆಚ್ಚು ಖರೀದಿಸುವ ಪ್ರಮುಖ 5 ದೇಶಗಳಿಗೆ ಈ ಸುಂಕದ ಮಿತಿಯನ್ನು 100%ಗೆ ಸೀಮಿತಗೊಳಿಸಲಾಗಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಚೀನಾ, ಭಾರತ, ಸ್ಲೋವಾಕಿಯಾ, ಹಂಗೇರಿ ಹಾಗೂ ಅಜೆರ್ಬೈಜಾನ್ ದೇಶಗಳು ರಷ್ಯಾದ ಕಚ್ಚಾ ತೈಲದ ಐದು ಪ್ರಮುಖ ಗ್ರಾಹಕ ರಾಷ್ಟ್ರಗಳಾಗಿವೆ. ಹಾಗೆಯೇ ಚೀನಾ, ಫ್ರಾನ್ಸ್, ಜಪಾನ್, ಹಂಗೇರಿ ಹಾಗೂ ಬೆಲ್ಜಿಯಂ ದೇಶಗಳು ರಷ್ಯಾದ ನೈಸರ್ಗಿಕ ಅನಿಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶಗಳಾಗಿವೆ.



