ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವಾಗ ಮೃತಪಟ್ಟ ವ್ಯಕ್ತಿಗೆ ನ್ಯಾಯಲಯದ ಆದೇಶದ ಪ್ರಕಾರ ಪರಿಹಾರ ನೀಡದ ಕಾರಣ ಕೆ.ಬಸಾಪುರ ಗ್ರಾಮ ಪಂಚಾಯಿತಿಯ ಸಾಮಾನುಗಳನ್ನು ನ್ಯಾಯಾಲಯದ ಸಿಬ್ಬಂದಿಗಳ ಸಮಕ್ಷಣದಲ್ಲಿ ಜಪ್ತಿ ಮಾಡಲಾಗಿದೆ.
ಸಿಂಧನೂರು ತಾಲ್ಲೂಕಿನ ಕೆ.ಬಸಾಪುರ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 2009ರ ಏ.25 ರಂದು ಗುಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗುಡಿಹಾಳ ಗ್ರಾಮದಲ್ಲಿ ಹೊಸ ಕೆರೆ ಕಾಮಗಾರಿಯಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ಕೂಲಿ ಕಾರ್ಮಿಕ ಶಶಿಧರ ಕೆರೆಯಲ್ಲಿ ಮಣ್ಣು ಆಗಿಯುವಾಗ ಮೇಲಿಂದ ಏಕಾಏಕಿ ಮಣ್ಣಿನ ರಾಶಿ ಬಿದ್ದು ಮಣ್ಣಿನಲ್ಲಿ ಸಿಲುಕಿದ್ದ. ಕೂಡಲೇ ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದರು.
ಮೃತ ಶಶಿಧರ ಅವರ ಪತ್ನಿ ರೇಖಾ ಅವರು ಹಿರಿಯ ಶ್ರೇಣಿ ನ್ಯಾಯಲಯದಲ್ಲಿ ಪರಿಹಾರ ಕೋರಿ ಎನ್. ರಾಮನಗೌಡ ವಕೀಲ ಅವರ ಮೂಲಕ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಲಯ ವಾದ-ವಿವಾದ ಆಲಿಸಿ ಅರ್ಜಿದಾರರ ಪರವಾಗಿ ಪರಿಹಾರ ಮೊತ್ತ ನೀಡುವಂತೆ ಪ್ರತಿವಾದಿಗಳಿಗೆ ಆಗಸ್ಟ್ 6, 2025 ರಂದು ಆದೇಶ ನೀಡಿತ್ತು. ಆದರೆ ನ್ಯಾಯಾಲಯದ ಆದೇಶದನ್ವಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಣ ಜಮಾ ಮಾಡಿಲ್ಲ.
ರೇಖಾ ಶಶಿಧರ್ ಅವರು ನ್ಯಾಯಾಲಯದ ಡಿಕ್ರಿ ಆದೇಶ ಜಾರಿಗೆ ಕೋರಿ ಒಟ್ಟು ಪರಿಹಾರದ ಮೊತ್ತ ರೂ.22,86,499 ಪಾವತಿಸುವಂತೆ (ಇ.ಪಿ.ಸಂಖ್ಯೆ ೧೭/೨೦೨೬) ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜುಲೈ 14 ರಂದು ಕೆ.ಬಸಾಪುರ ಗ್ರಾಮ ಪಂಚಾಯಿತಿ ಇವರ ವಿರುದ್ಧ ಜಪ್ತಿ ಆದೇಶ ಹೊರಡಿಸಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನೀಟ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲ; ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ: ಶರಣಕುಮಾರ
ಇದರನ್ವಯ ನ್ಯಾಯಾಲಯದ ಬೇಲಿಪ್ ಅಮರೇಗೌಡ, ವಕೀಲರಾದ ಎನ್.ರಾಮನ ಗೌಡ ಮತ್ತು ಹುಸೇನ್ಭಾಷಾ ಹಾಗೂ ಕೆ.ಬಸಾಪುರ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಸಮಕ್ಷಮದಲ್ಲಿ ಪಂಚಾಯಿತಿಯ ಕಚೇರಿಯಲ್ಲಿ ಕಂಪ್ಯೂಟರ್, ಸಿಪಿಯು. ಮಾನಿಟರ್, ಟೇಬಲ್ಗಳು, ಬ್ಯಾಟರಿ, ಟಿಜೋರಿ ಹಾಗೂ ಕುರ್ಚಿಗಳು ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಬರಲಾಯಿತು.




