ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ ರಾಜ್ಯದ ಪರಿಶಿಷ್ಟ ಜಾತಿಯ ಸೈಕಲ್ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಸ್ಪರ್ಧಾತ್ಮಕ ಸೈಕಲ್ಗಳನ್ನು ಹಾಗೂ ಸೈಕಲ್ ಬಿಡಿ ಭಾಗಗಳನ್ನು ಸರ್ಕಾರದಿಂದ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಮತ್ತು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಇಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಗರದ ಯವನಿಕ ಸಭಾಂಗಣದಲ್ಲಿ ನಡೆದ ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಈ ಸೈಕಲ್ ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ರಾಜ್ಯದ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಆಯ್ದ 36 ಜನ ಪ್ರತಿಭಾನ್ವಿತ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಅತ್ಯಾಧುನಿಕ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಸೈಕಲ್ಗಳನ್ನು ಹಾಗೂ ಸೈಕಲ್ ಬಿಡಿ ಭಾಗಗಳನ್ನು ಇಲಾಖೆ ವತಿಯಿಂದ ಉಚಿತವಾಗಿ ವಿತರಿಸಲಾಗಿದೆ.
ಇದನ್ನೂ ಓದಿ: ತುಮಕೂರು | ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ; ಕಾಲಮಿತಿಯೊಳಗೆ ಪೂರ್ಣಗೊಳಿಸಲು ಗೃಹ ಸಚಿವರ ಸೂಚನೆ
ರಾಜ್ಯದ ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯು ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಒಲಂಪಿಕ್ಸ್, ಏಷ್ಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ನಂತಹ ಜಾಗತಿಕ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿರುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದ ಸೈಕಲ್ಗಳನ್ನು ಒಟ್ಟು 36 ಕ್ರೀಡಾಪಟುಗಳ ವಿತರಿಸಲಾಗುತ್ತಿದ್ದು, ಈ ಪೈಕಿ 21 ಜನರಿಗೆ ಜಾಗತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಅನುವಾಗುವಂತಹ ಸೈಕಲ್ ಗಳು ಮತ್ತು 15 ಜನರಿಗೆ ತರಬೇತಿಗಾಗಿ ವಿವಿಧ ಮಾದರಿಯ ಹೈ-ಎಂಡ್ ಸೈಕಲ್ಗಳನ್ನು ನೀಡಲಾಗಿದೆ. ಕ್ರೀಡಾಪಟುಗಳ ಉನ್ನತ ಸಾಧನೆಗಾಗಿ ಅತ್ಯಂತ ದುಬಾರಿ ಸೈಕಲ್ ಗಳನ್ನು ಒದಗಿಸಲಾಗಿದ್ದು, ಅಂತರರಾಷ್ಟ್ರೀಯ ಸ್ಪರ್ಧೆಗೆ ಬಳಸುವ ಲುಕ್ ಕಂಪನಿಯ ಟ್ರ್ಯಾಕ್ ಸೈಕಲ್ ಒಂದರ ಬೆಲೆ ರೂ.14 ಲಕ್ಷ ಆಗಿದೆ. ಹಾಗೆಯೇ, ತರಬೇತಿಗಾಗಿ ಬಳಸುವ ರೋಡ್ ಸೈಕಲ್ನ ಬೆಲೆ ಸುಮಾರು ರೂ. 7 ಲಕ್ಷ ಆಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕದ ವೆಲೋಡ್ರೋಮ್ಗಳಿಗೆ ಆದ್ಯತೆ
ಪ್ರಸ್ತುತ ಸೈಕ್ಲಿಂಗ್ ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ವೆಲೋಡ್ರೋಮ್ ಗಳಲ್ಲಿ ಅಭ್ಯಾಸ ಮಾಡುತ್ತಿರುವ ಕ್ರೀಡಾಪಟುಗಳಿಗೆ ಹಾಗೂ ಅಲ್ಲಿನ ಮುಖ್ಯ ತರಬೇತುದಾರರಿಗೆ ಈ ಸೈಕಲ್ಗಳನ್ನು ಹಸ್ತಾಂತರಿಸಲಾಗಿದೆ.
ನಮ್ಮ ಇಲಾಖೆಯು ಗ್ರಾಮೀಣ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಮತ್ತು ಜಾಗತಿಕ ಮಟ್ಟದ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿದೆ. ಈ ಸೈಕಲ್ಗಳ ಸದ್ಬಳಕೆ ಮಾಡಿಕೊಂಡು ನಮ್ಮ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶ ಮತ್ತು ರಾಜ್ಯಕ್ಕೆ ಪದಕಗಳನ್ನು ತರಬೇಕು ಎಂದು ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಗಳು ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತರಾದ ಎಮ್.ಎನ್. ಅನುಚೇತ್ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸ್ಪರ್ಧಾತ್ಮಕ ಸೈಕಲ್ಗಳ ಹಂಚಿಕೆ ವಿವರ:
ಖರೀದಿಸಲಾದ ಒಟ್ಟು 21 ಸ್ಪರ್ಧಾತ್ಮಕ ಸೈಕಲ್ಗಳಲ್ಲಿ, ವಿಜಯಪುರ ಜಿಲ್ಲೆಗೆ 3 ರೋಡ್ ಸೈಕಲ್ಗಳು (Time Trial), 2 ಎಮ್.ಟಿ.ಬಿ (MTB) ಸೈಕಲ್ ಗಳು ಮತ್ತು 2 ಟ್ರ್ಯಾಕ್ ಸೈಕಲ್ಗಳು ಸೇರಿದಂತೆ ಒಟ್ಟು 7 ಸೈಕಲ್ಗಳನ್ನು ನೀಡಲಾಗಿದೆ.
ಬಾಗಲಕೋಟೆ ಜಿಲ್ಲೆಗೆ 3 ರೋಡ್ ಸೈಕಲ್ಗಳು, 1 ಮಾಸ್ ಸ್ಟಾರ್ಟ್ ಸೈಕಲ್, 3 ಎಮ್.ಟಿ.ಬಿ ಸೈಕಲ್ ಗಳು ಮತ್ತು 1 ಟ್ರ್ಯಾಕ್ ಸೈಕಲ್ ಒಳಗೊಂಡಂತೆ ಒಟ್ಟು 8 ಸೈಕಲ್ಗಳನ್ನು ಹಂಚಿಕೆ ಮಾಡಲಾಗಿದೆ.
ಗದಗ ಜಿಲ್ಲೆಗೆ 2 ರೋಡ್ ಸೈಕಲ್ಗಳು, 1 ಮಾಸ್ ಸ್ಟಾರ್ಟ್ ಸೈಕಲ್, 2 ಎಮ್.ಟಿ.ಬಿ ಸೈಕಲ್ಗಳು ಮತ್ತು 1 ಟ್ರ್ಯಾಕ್ ಸೈಕಲ್ ಸೇರಿದಂತೆ ಒಟ್ಟು 6 ಸೈಕಲ್ಗಳನ್ನು ವಿತರಿಸಲಾಗಿದೆ.
ಒಟ್ಟಾರೆಯಾಗಿ ಮೂರೂ ಜಿಲ್ಲೆಗಳಿಗೆ ಸೇರಿ 8 ರೋಡ್ ಸೈಕಲ್ಗಳು, 2 ಮಾಸ್ ಸ್ಟಾರ್ಟ್ ಸೈಕಲ್ಗಳು, 7 ಎಮ್.ಟಿ.ಬಿ ಸೈಕಲ್ಗಳು, ಮತ್ತು 4 ಟ್ರ್ಯಾಕ್ ಸೈಕಲ್ಗಳನ್ನು ಸರಬರಾಜು ಮಾಡಲಾಗಿದೆ.
ತರಬೇತಿ ಸೈಕಲ್ ಗಳು, ಮತ್ತು ಬಿಡಿಭಾಗಗಳ ಹಂಚಿಕೆ ವಿವರ
ತರಬೇತಿ ವಿಭಾಗಕ್ಕೆ ಸಂಬಂಧಿಸಿದಂತೆ, ವಿಜಯಪುರ ಜಿಲ್ಲೆಗೆ 4 ರೋಡ್ ಸೈಕಲ್ಗಳು, 1 ಎಮ್.ಟಿ.ಬಿ ಸೈಕಲ್, 3 ಸ್ಪರ್ಧಾತ್ಮಕ ಚಕ್ರಗಳು (Competition Wheel), 3 ಜೋಡಿ ಕೊರಿಮಾ ಹಾಫ್ ಡಿಸ್ಕ್ಗಳು, 3 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ಗಳು ಮತ್ತು 2 ಸ್ಮಾರ್ಟ್ ಟ್ರೈನರ್ಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಬೀದರ್ | ಸೈಕಲ್ ಬಳಸೋಣ ಪರಿಸರ ಉಳಿಸೋಣ
ಬಾಗಲಕೋಟೆ ಜಿಲ್ಲೆಗೆ 4 ರೋಡ್ ಸೈಕಲ್ಗಳು, 1 ಎಮ್.ಟಿ.ಬಿ ಸೈಕಲ್, 3 ಸ್ಪರ್ಧಾತ್ಮಕ ಚಕ್ರಗಳು, 3 ಜೋಡಿ ಕೊರಿಮಾ ಹಾಫ್ ಡಿಸ್ಕ್ಗಳು, 3 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ಗಳು ಹಾಗೂ 3 ಸ್ಮಾರ್ಟ್ ಟ್ರೈನರ್ಗಳನ್ನು ಹಂಚಿಕೆ ಮಾಡಲಾಗಿದೆ.
ಗದಗ ಜಿಲ್ಲೆಗೆ 2 ರೋಡ್ ಸೈಕಲ್ಗಳು, 3 ಎಮ್.ಟಿ.ಬಿ ಸೈಕಲ್ಗಳು, 2 ಸ್ಪರ್ಧಾತ್ಮಕ ಚಕ್ರಗಳು, 2 ಜೋಡಿ ಕೊರಿಮಾ ಹಾಫ್ ಡಿಸ್ಕ್ಗಳು, 2 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ಗಳು ಮತ್ತು 3 ಸ್ಮಾರ್ಟ್ ಟ್ರೈನರ್ಗಳನ್ನು ವಿತರಿಸಲಾಗಿದೆ.
ಇವೆಲ್ಲವುಗಳ ಒಟ್ಟು ಪ್ರಮಾಣವು 10 ರೋಡ್ ಸೈಕಲ್ಗಳು, 5 ಎಮ್.ಟಿ.ಬಿ ಸೈಕಲ್ಗಳು, 8 ಸ್ಪರ್ಧಾತ್ಮಕ ಚಕ್ರಗಳು, 8 ಜೋಡಿ ಕೊರಿಮಾ ಹಾಫ್ ಡಿಸ್ಕ್ಗಳು, 8 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ಗಳು ಮತ್ತು 8 ಸ್ಮಾರ್ಟ್ ಟ್ರೈನರ್ಗಳಾಗಿವೆ.
ವೆಚ್ಚ ಹಾಗೂ ದರಗಳ ವಿವರ
ಸ್ಪರ್ಧಾತ್ಮಕ ಸೈಕಲ್ಗಳ ವಿಭಾಗದಲ್ಲಿ ‘ಲುಕ್’ ಬ್ರ್ಯಾಂಡ್ನ 4 ಟ್ರ್ಯಾಕ್ ಸೈಕಲ್ಗಳನ್ನು ತಲಾ 14,00,000 ರೂಪಾಯಿಗಳಂತೆ ಒಟ್ಟು 56,00,000 ರೂಪಾಯಿಗಳಿಗೆ ಖರೀದಿಸಲಾಗಿದೆ.
‘ಮೆರಿಡಾ’ ಬ್ರ್ಯಾಂಡ್ನ 8 ರೋಡ್ ಸೈಕಲ್ಗಳನ್ನು ತಲಾ 7,66,666 ರೂಪಾಯಿಗಳಂತೆ ಒಟ್ಟು 61,33,333 ರೂಪಾಯಿಗಳಿಗೆ, 2 ಮಾಸ್ ಸ್ಟಾರ್ಟ್ ಸೈಕಲ್ಗಳನ್ನು ತಲಾ 3,94,104 ರೂಪಾಯಿಗಳಂತೆ ಒಟ್ಟು 7,88,209 ರೂಪಾಯಿಗಳಿಗೆ ಹಾಗೂ 7 ಎಮ್.ಟಿ.ಬಿ ಸೈಕಲ್ಗಳನ್ನು ತಲಾ 2,24,761 ರೂಪಾಯಿಗಳಂತೆ ಒಟ್ಟು 15,73,333 ರೂಪಾಯಿಗಳಿಗೆ ಕೊಳ್ಳಲಾಗಿದೆ. ಇದರ ಮೂಲ ಒಟ್ಟು ವೆಚ್ಚ 1,40,94,876 ರೂಪಾಯಿಗಳಾಗಿದ್ದು, ಇದಕ್ಕೆ 7,04,743 ರೂಪಾಯಿಗಳ ಜಿ.ಎಸ್.ಟಿ ಸೇರಿದಂತೆ ಸ್ಪರ್ಧಾತ್ಮಕ ಸೈಕಲ್ಗಳ ಒಟ್ಟು ವೆಚ್ಚ 1,47,99,620 ರೂಪಾಯಿಗಳಾಗಿದೆ.
ತರಬೇತಿ ಸೈಕಲ್ ಮತ್ತು ಬಿಡಿಭಾಗಗಳ ವಿಭಾಗದಲ್ಲಿ, ‘ಮೆರಿಡಾ’ ಬ್ರ್ಯಾಂಡ್ ನ 10 ರೋಡ್ ಸೈಕಲ್ಗಳನ್ನು ತಲಾ 3,00,000 ರೂಪಾಯಿಗಳಂತೆ ಒಟ್ಟು 30,00,000 ರೂಪಾಯಿಗಳಿಗೆ ಮತ್ತು 5 ಎಮ್.ಟಿ.ಬಿ ಸೈಕಲ್ಗಳನ್ನು ತಲಾ 2,79,047 ರೂಪಾಯಿಗಳಂತೆ ಒಟ್ಟು 13,95,238 ರೂಪಾಯಿಗಳಿಗೆ ಖರೀದಿಸಲಾಗಿದೆ.
‘ಕೊರಿಮಾ’ ಬ್ರ್ಯಾಂಡ್ ನ 8 ಸ್ಪರ್ಧಾತ್ಮಕ ಚಕ್ರಗಳನ್ನು ತಲಾ 3,52,380 ರೂಪಾಯಿಗಳಂತೆ ಒಟ್ಟು 28,19,047 ರೂಪಾಯಿಗಳಿಗೆ ಹಾಗೂ 8 ಜೋಡಿ ಕೊರಿಮಾ ಹಾಫ್ ಡಿಸ್ಕ್ಗಳನ್ನು ಪ್ರತಿ ಜೋಡಿಗೆ 2,57,142 ರೂಪಾಯಿಗಳಂತೆ ಒಟ್ಟು 20,57,142 ರೂಪಾಯಿಗಳಿಗೆ ಕೊಳ್ಳಲಾಗಿದೆ.
ಜೊತೆಗೆ, 8 ಇಂಡೋರ್ ಟ್ರೈನಿಂಗ್ ಹೋಮ್ ರೋಲರ್ಗಳನ್ನು ತಲಾ 29,750 ರೂಪಾಯಿಗಳಂತೆ ಒಟ್ಟು 2,38,006 ರೂಪಾಯಿಗಳಿಗೆ ಮತ್ತು 8 ಸ್ಮಾರ್ಟ್ ಟ್ರೈನರ್ಗಳನ್ನು ತಲಾ 46,610 ರೂಪಾಯಿಗಳಂತೆ ಒಟ್ಟು 3,72,881 ರೂಪಾಯಿಗಳಿಗೆ ಖರೀದಿಸಲಾಗಿದೆ. ಈ ವಿಭಾಗದ ಮೂಲ ಒಟ್ಟು ವೆಚ್ಚ 98,82,316 ರೂಪಾಯಿಗಳಾಗಿದ್ದು, ಇದಕ್ಕೆ 5,73,531 ರೂಪಾಯಿಗಳ ಜಿಎಸ್ಟಿ ಸೇರಿದಂತೆ ತರಬೇತಿ ಸಾಮಗ್ರಿಗಳ ಒಟ್ಟು ವೆಚ್ಚ 1,04,55,848 ರೂಪಾಯಿಗಳಾಗಿದೆ.
ಅಂತಿಮವಾಗಿ, ಸ್ಪರ್ಧಾತ್ಮಕ ಸೈಕಲ್ಗಳ ಒಟ್ಟು ಮೊತ್ತ 1,47,99,620 ರೂಪಾಯಿಗಳು ಮತ್ತು ತರಬೇತಿ ಸೈಕಲ್ ಹಾಗೂ ಬಿಡಿಭಾಗಗಳ ಒಟ್ಟು ಮೊತ್ತ 1,04,55,848 ರೂಪಾಯಿಗಳನ್ನು ಒಟ್ಟುಗೂಡಿಸಿ, ಇಲಾಖೆಯು ಈ ಯೋಜನೆಗಾಗಿ ಮಾಡಿರುವ ಒಟ್ಟಾರೆ ವೆಚ್ಚ 2,52,55,468-00 ರೂಪಾಯಿಗಳಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




