ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಕನಿಷ್ಠ ಮೂರು ವರ್ಷಗಳ ಅಂತರ ಕಾಯ್ದುಕೊಳ್ಳುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದ್ದು, ಅರ್ಹ ಮಹಿಳೆಯರು ಆಧುನಿಕ ಕುಟುಂಬ ಕಲ್ಯಾಣ ವಿಧಾನಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಚಿತ್ರದುರ್ಗ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ತಿಳಿಸಿದರು.
ಚಿತ್ರದುರ್ಗ ನಗರದ ಬುದ್ಧನಗರ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕಾಮನಬಾವಿ ಬಡಾವಣೆ ಅಂಗನವಾಡಿ ‘ಬಿ’ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ವಿಶೇಷ ಅತ್ತೆ-ಸೊಸೆಯರ ಕಾರ್ಯಕ್ರಮ ಹಾಗೂ ಕುಟುಂಬ ಕಲ್ಯಾಣ ಯೋಜನೆ ಆಪ್ತ ಸಮಾಲೋಚನಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಕುಟುಂಬ ಕಲ್ಯಾಣದ ಆಧುನಿಕ ತಾತ್ಕಾಲಿಕ ವಿಧಾನವಾದ ಕಾಂಟ್ರಾಸೆಪ್ಟಿವ್ ಇಂಟ್ರಾ ಡರ್ಮಲ್ ಇಂಪ್ಲಾಂಟ್ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನವಾಗಿದ್ದು, ಬೆಂಕಿಕಡ್ಡಿಯ ಗಾತ್ರದ ಈ ಹಾರ್ಮೋನ್ಯುಕ್ತ ಇಂಪ್ಲಾಂಟ್ ಅನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರು ಅರ್ಹ ಫಲಾನುಭವಿಗಳಿಗೆ ಅಳವಡಿಸುತ್ತಾರೆ. ಒಮ್ಮೆ ಅಳವಡಿಸಿಕೊಂಡರೆ ಮೂರು ವರ್ಷಗಳವರೆಗೆ ಅನಗತ್ಯ ಗರ್ಭಧಾರಣೆಯನ್ನು ತಡೆಯಲು ಸಹಕಾರಿಯಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇತರೆ ಎಲ್ಲಾ ಆಧುನಿಕ ತಾತ್ಕಾಲಿಕ ಕುಟುಂಬ ಕಲ್ಯಾಣ ವಿಧಾನಗಳೂ ಉಚಿತವಾಗಿ ಲಭ್ಯವಿದ್ದು, ಸಾರ್ವಜನಿಕರು ಅವುಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅತ್ತೆ-ಸೊಸೆಯರ ಕಾರ್ಯಕ್ರಮವು ಕೇವಲ ಕುಟುಂಬ ಕಲ್ಯಾಣ ಯೋಜನೆಗಳ ಮಾಹಿತಿ ನೀಡುವುದಕ್ಕಷ್ಟೇ ಸೀಮಿತವಾಗಿಲ್ಲ. ಕುಟುಂಬದಲ್ಲಿ ಅತ್ತೆ ಮತ್ತು ಸೊಸೆಯರ ನಡುವೆ ಪರಸ್ಪರ ಪ್ರೀತಿ, ಗೌರವ, ವಿಶ್ವಾಸ ಹಾಗೂ ಜವಾಬ್ದಾರಿಯ ಮನೋಭಾವ ಬೆಳೆಸಿ ಆರೋಗ್ಯವಂತ ಕುಟುಂಬ ನಿರ್ಮಾಣಕ್ಕೆ ಪೂರಕ ವಾತಾವರಣ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಹೆಚ್ಚುತ್ತಿರುವ ಜನಸಂಖ್ಯೆಯಿಂದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಚಿಕ್ಕ ಕುಟುಂಬದ ಆದರ್ಶ ಪಾಲಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಜಾನಕಿ ಮಾತನಾಡಿ, ಗರ್ಭಿಣಿಯರು ಸಕಾಲದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು. ರಕ್ತಹೀನತೆ ತಡೆಯಲು ಪೌಷ್ಟಿಕ ಹಾಗೂ ಸಮತೋಲನ ಆಹಾರ ಸೇವಿಸುವುದರ ಜೊತೆಗೆ ಹಸಿ ತರಕಾರಿ, ಮೊಳಕೆ ಕಾಳು, ಹಾಲು, ಮೊಟ್ಟೆ ಮತ್ತು ಹಣ್ಣುಗಳನ್ನು ಆಹಾರದಲ್ಲಿ ಸೇರಿಸಬೇಕು. ದೇಹದಲ್ಲಿ ನೀರಿನಂಶ ಸಮರ್ಪಕವಾಗಿರುವಂತೆ ಆಗಾಗ್ಗೆ ನೀರು ಕುಡಿಯಬೇಕು ಹಾಗೂ ಸಣ್ಣಪುಟ್ಟ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಏಕಾಂತಮ್ಮ, ಸಿಬ್ಬಂದಿ ಶಬೀನಾ, ಆಶಾ ಕಾರ್ಯಕರ್ತೆಯರಾದ ಅನ್ನಪೂರ್ಣ, ಸುಜಾತ, ಶಿಲ್ಪ, ಅಂಗನವಾಡಿ ಕಾರ್ಯಕರ್ತೆಯರಾದ ರಾಧಮ್ಮ, ಶೈಲಜಾ, ರೂಪ, ಚಿತ್ರದುರ್ಗ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಅತ್ತೆ-ಸೊಸೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.




