ಜಿಲ್ಲೆಯಲ್ಲಿ ನಡೆದ ದಲಿತರ ಸರಣಿ ಮೂರು ಕೊಲೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸುವಂತೆ ಆಗ್ರಹಿಸಿ ಜಿಲ್ಲೆಯ ದಲಿತ ಮುಖಂಡರು ಬೆಂಗಳೂರಿನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಮೂರು ಕೊಲೆ ಪ್ರಕರಣಗಳು ನಡೆದಿದ್ದರೂ ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡದಿರುವುದಕ್ಕೆ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಜಯ್ ಸಿಂಗ್ ಹಾಗೂ ಮಾಜಿ ಸಚಿವ ಎನ್.ಎಸ್. ಬೋಸರಾಜು ಅವರ ನೇತೃತ್ವದಲ್ಲಿ ಗೃಹ ಸಚಿವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಯಿತು.
ನಿಯೋಗದ ಸದಸ್ಯರು ಭೂಮಾನಂದ ಕೊಲೆ ಪ್ರಕರಣ ಹಾಗೂ ಅಶ್ವಿನಿ ಛಲವಾದಿ ಮತ್ತು ರಾಣೆಮ್ಮ ಪ್ರಕರಣಗಳ ತನಿಖೆಯನ್ನು ಗಂಭೀರವಾಗಿ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಪ್ರಕರಣಗಳ ತನಿಖೆಯಲ್ಲಿ ವಿಳಂಬವಾದರೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ನಿಯೋಗದ ಸದಸ್ಯರು ತಿಳಿಸಿದರು.
ಭೇಟಿ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಪ್ರಕರಣಗಳ ಗಂಭೀರತೆ ತಮ್ಮ ಗಮನದಲ್ಲಿದ್ದು ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸುವ ಪ್ರಶ್ನೆಯೇ ಇಲ್ಲ ಎಂದು ನಿಯೋಗಕ್ಕೆ ತಿಳಿಸಿರುವುದಾಗಿ ಮುಖಂಡರು ಹೇಳಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿಯೂ ಅವರು ತಿಳಿಸಿದ್ದಾರೆ ಎಂದು ನಿಯೋಗ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಭೂರಹಿತರಿಗೆ ಭೂಮಿ ಮಂಜೂರು ಮಾಡಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ
ನಿಯೋಗದಲ್ಲಿ ಎಸ್. ಮಾರೆಪ್ಪ (ವಕೀಲ), ರವೀಂದ್ರನಾಥ್ ಪಟ್ಟಿ, ಅಂಬಣ್ಣ ಅರೋಲಿಕರ್, ಶಿವರಾಯ ಅಕ್ಕರಕಿ, ಹೇಮರಾಜ್ ಅಸ್ಕಿಹಾಳ್, ಶರಣಪ್ಪ ದಿನ್ನಿ, ಬೂದೆಪ್ಪ ಕ್ಯಾದಿಗಿ, ಬಸವರಾಜ್ ಮಿಯಾಪುರ, ಬಸವರಾಜ್ ಹದ್ದಿನಾಳ್, ಅರ್ಜುನ್ ಜಗಲಿ, ನರಸಿಂಹಲು ನೆಲಹಾಳ್, ನರಸಿಂಹಲು ಮರ್ಚಟಾಳ್, ಬಸವರಾಜ್ ಭಂಡಾರಿ, ವಸಂತ್ ಅಸ್ಕಿಹಾಳ್ ಹಾಗೂ ತಾಯಪ್ಪ ಗದಾರ್ ಉಪಸ್ಥಿತರಿದ್ದರು.




