ನಾಡೋಜ ಡಾ. ಜಿ. ಶಂಕರ್ ಅವರ ವ್ಯಕ್ತಿತ್ವ ವಿಭಿನ್ನವಾಗಿದ್ದು, ಸಮಾಜಕ್ಕಾಗಿ ತಮ್ಮ ಸರ್ವಸ್ವವನ್ನೂ ಧಾರೆ ಎರೆದ ಮಹಾನ್ ಶಕ್ತಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಣ್ಣಿಸಿದರು.
ಕೋಟದ ಮಾಂಗಲ್ಯ ಮಂದಿರದ ಸಮೀಪದ ಹಿರೇ ಮಹಾಲಿಂಗೇಶ್ವರ ರಥಬೀದಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ‘ಸದ್ಭಾವನಾ-2026’ ಶೀರ್ಷಿಕೆಯಡಿ ನಡೆದ ಪಂಚವರ್ಣ ಕನ್ನಡ ರಾಜ್ಯೋತ್ಸವ ಗೌರವ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿ. ಶಂಕರ್ ಅವರು ಕೇವಲ ಒಬ್ಬ ವ್ಯಕ್ತಿಯಾಗಿರದೆ, ಸಮಾಜದ ಕಣ್ಣು ತೆರೆಸುವ ಶಕ್ತಿಯಾಗಿದ್ದಾರೆ. ಯಾವುದೇ ಪ್ರಶಸ್ತಿಯ ನಿರೀಕ್ಷೆಯಿಲ್ಲದೆ ಜಗತ್ತಿಗೆ ಸಂತರಂತೆ ಸೇವೆ ಸಲ್ಲಿಸುತ್ತಿರುವ ಅವರ ಸಾಧನೆ ಅಪಾರ. ತಮ್ಮ ಹುಟ್ಟೂರಿನ ಸಮೀಪದ ಪಂಚವರ್ಣದಂತಹ ಸಮಾಜಮುಖಿ ಸಂಘಟನೆಯ ಗೌರವಕ್ಕೆ ಪಾತ್ರರಾಗಿರುವುದು ಶ್ಲಾಘನೀಯ ಎಂದರು.
ಪಂಚವರ್ಣ ರಾಜ್ಯೋತ್ಸವ ಗೌರವ ಸ್ವೀಕರಿಸಿ ಮಾತನಾಡಿದ ನಾಡೋಜ ಡಾ. ಜಿ. ಶಂಕರ್, ನೀಡಿದ ಗೌರವವನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ. ಆದರೆ ಸನ್ಮಾನ ಮತ್ತು ಪ್ರಶಸ್ತಿಗಳ ಬೆಳಕಿಗೆ ಬಾರದೆ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಪಂಚವರ್ಣ ಸಂಘಟನೆ ಮುಂದುವರಿಸಬೇಕು. ಪಂಚವರ್ಣದ ಸಮಾಜಮುಖಿ ಕಾರ್ಯಗಳಿಗೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ನಾಡೋಜ ಡಾ. ಜಿ. ಶಂಕರ್ ಅವರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ ಪ್ರದಾನ ಮಾಡಿದರು.

ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಂತೋಷ್ ಮೇಸ್ತ್ರು ವಿದ್ಯಾನಿಧಿಯನ್ನು ಸ್ಥಳೀಯ ಕನ್ನಡ ಮಾಧ್ಯಮ ಶಾಲೆಗಳ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಕನ್ನಡಪರ ಹೋರಾಟಗಾರ ಹಾಗೂ ಯುವ ಉದ್ಯಮಿ ಬೆಂಗಳೂರಿನ ಕೆ.ಎನ್. ಶ್ರೀನಿವಾಸ ಜೋಗಿ ಅವರಿಗೆ ಪಂಚವರ್ಣ ವಿಶೇಷ ಪುರಸ್ಕಾರ ಪ್ರದಾನ ಮಾಡಿದರು. ಅಂತರರಾಷ್ಟ್ರೀಯ ಕರಾಟೆಪಟು ಹತ್ತರಡು ವಿಜಯ ಪೂಜಾರಿ ಅವರಿಗೆ ಮುಂಬೈ ಸಮಾಜಸೇವಕ ಬಡಾಮನೆ ರತ್ನಾಕರ ಶೆಟ್ಟಿ ಗಿಳಿಯಾರು ವಿಶೇಷ ಅಭಿನಂದನೆ ಸಲ್ಲಿಸಿದರು.
ಸ್ಥಳೀಯ ಚೆಕ್ಕೇರೆಯ ಅಂಗನವಾಡಿಗೆ ಸೃಷ್ಟಿ ಎಂಜಿನಿಯರಿಂಗ್ ಮಣಿಪಾಲ ವತಿಯಿಂದ ಸಮವಸ್ತ್ರ ವಿತರಿಸಲಾಯಿತು. ಕಾರ್ಕಳದ ಹೊಸಬೆಳಕು ಅನಾಥಾಶ್ರಮದ ಮುಖ್ಯಸ್ಥೆ ತನಲ ಅವರಿಗೆ ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಡಾ. ಬೆಳೂರು ರಾಘವೇಂದ್ರ ಶೆಟ್ಟಿ ಅವರು ದಿನಸಿ ಕಿಟ್ ಹಸ್ತಾಂತರಿಸಿದರು.
ಬನ್ನಾಡಿ ಪದ್ಮು ಆಚಾರ್ ಸ್ಮರಣಾರ್ಥ ಆರೋಗ್ಯ ನಿಧಿಯನ್ನು ನಾರಾಯಣ ಆಚಾರ್ ಪರವಾಗಿ ಸಹೋದರ ಸೀತಾರಾಮ ಆಚಾರ್ ಅವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಿದರು. ಎರಡು ಲಕ್ಷ ರೂ. ವೆಚ್ಚದಲ್ಲಿ ನೀಡಲಾಗುವ ಶ್ರೀಕೃಷ್ಣಪ್ರಸಾದ್ ಫೌಂಡೇಶನ್ ಶೈಕ್ಷಣಿಕ ನಿಧಿಯನ್ನು ಫೌಂಡೇಶನ್ ಪ್ರವರ್ತಕ ಸಂಪತ್ ಕುಮಾರ್ ಶೆಟ್ಟಿ ಅವರು ಅರ್ಹ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.
ಈ ವರ್ಷದ ಹಸಿರು ಹೆಜ್ಜೆ ಅತ್ಯುತ್ತಮ ಗಿಡ ಪೋಷಣೆಗಾಗಿ ಮೂವರು ವಿದ್ಯಾರ್ಥಿಗಳಿಗೆ ಪಂಚವರ್ಣದ ಸ್ಥಾಪಕ ಶೇವಧಿ ಸುರೇಶ್ ಗಾಣಿಗ ಬೆಳ್ಳಿ ನಾಣ್ಯ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ ಪೂಜಾರಿ ವಹಿಸಿದ್ದರು. ನಾಡೋಜರ ಕುರಿತು ಗುತ್ತಿಗೆದಾರ ಸುರೇಶ್ ಕಾಂಚನ್ ಬಾರಿಕೆರೆ ಅಭಿನಂದನಾ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಗೆಳೆಯರ ಬಳಗ ಕರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರವೀಶ್ ಶ್ರೀಯಾನ್ ಕೊರವಡಿ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಎಚ್. ಕುಂದರ್, ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಗೌರವ ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಾಯೂರಿ ನೃತ್ಯ ತಂಡ ಕುಂಭಾಶಿ, ಹಂದಟ್ಟು ಮಹಿಳಾ ಬಳಗ, ಪಂಚವರ್ಣ ಮಹಿಳಾ ಮಂಡಲ ಹಾಗೂ ಕಲ್ಮಾಡಿ ಅಂಗನವಾಡಿ ವತಿಯಿಂದ ನೃತ್ಯ ಸಂಭ್ರಮ ನಡೆಯಿತು. ಬೈಲೂರಿನ ಚೈತನ್ಯ ಕಲಾವಿದರಿಂದ ಸಾಮಾಜಿಕ ನಗೆನಾಟಕ ರಘು ಮಾಸ್ಟರ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.






