ರಾಷ್ಟ್ರೀಯ ಹೆದ್ದಾರಿ(748 ಎ) ನಿರ್ಮಾಣದಿಂದ ರೈತರಿಗೆ ತಮ್ಮ ಹೊಲಗಳಿಗೆ ತೆರಳಲು ಸರ್ವಿಸ್ ರಸ್ತೆ ನಿರ್ಮಾಣ ಮಾಡದೇ ರೈತರಿಗೆ ಆಗಿರುವ ತೊಂದರೆಗಳನ್ನು ಈ ತಿಂಗಳು ಅಂತ್ಯದೊಳಗೆ ಸರಿಪಡಿಸದಿದ್ದರೆ ಕಾಮಗಾರಿ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ತಿಳಿಸಿದ್ದಾರೆ.
ಲಿಂಗಸುಗೂರು ಪಟ್ಟಣದ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತಮಾಲಾ ಯೋಜನೆಯಡಿಯಲ್ಲಿ ಹೆದ್ದಾರಿ ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ. ಈ ಕಾಮಗಾರಿಗೆ ರೈತರು, ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ಈ ಹಿಂದೆ ನಿರ್ಮಾಣ ಮಾಡಿದ ಎಲ್ಲಾ ಹೆದ್ದಾರಿಗಳಲ್ಲಿ ರೈತರ ಜಮೀನುಗಳಿಗೆ ತಿರುಗಾಡಲು ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗಿದೆ, ಆದರೆ ಈ ಹೆದ್ದಾರಿ ನಿರ್ಮಾಣ ವೇಳೆ ರೈತರ ತಮ್ಮ ಜಮೀನುಗಳಿಗೆ ಹೋಗುವುದಕ್ಕೆ ಪರ್ಯಾಯ ರಸ್ತೆ ನಿರ್ಮಾಣ ಮಾಡದೇ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಮಾಡಲಾಗುತ್ತಿದೆ ಎಂದರು.
ಈ ಬಗ್ಗೆ ರೈತರು, ಹೋರಾಟ, ಟ್ರ್ಯಾಕ್ಟರ್ ರ್ಯಾಲಿ ಮಾಡಿ ಎಲ್ಲಾ ಹಂತದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ರೈತರ ಸಮಸ್ಯೆ ಪರಿಹರಿಸದೇ ಪೊಲೀಸ್ ರನ್ನು ಕಾಮಗಾರಿ ಸ್ಥಳಕ್ಕೆ ಕಳುಹಿಸಿ ರೈತರಿಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳು ಗುತ್ತಿಗೆದಾರರ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಈ ತಿಂಗಳ ಅಂತ್ಯದೊಳಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಅಭಿಯಂತರು, ತಾಂತ್ರಿಕ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ರೈತರನ್ನು, ಹೋರಾಟಗಾರರ ಸಮಸ್ಯೆ ಸ್ಪಷ್ಟವಾಗಿ ಆಲಿಸಿ ಸಮಸ್ಯೆ ಪರಿಹರಿಸಬೇಕು. ಇಲ್ಲವಾದಲ್ಲಿ ಹೆದ್ದಾರಿ ನಿರ್ಮಾಣದ ಕಾಮಗಾರಿ ಬಂದ್ ಮಾಡಿ ಶಾಂತಿಯುತ ಹೋರಾಟ ನಡೆಸಲಾಗುವುದು ಎಂದರು.
ರೈತರ ಹೋರಾಟ ಸಮಿತಿ ಮುಖಂಡ ಶರಣಪ್ಪ ಉದ್ಘಾಳ ಮಾತನಾಡಿ, ‘ಕೃಷಿ ವಾಹನಗಳ ಸಂಚಾರ ಇರುವ ಕಡೆಗಳಲ್ಲಿ ಕನಿಷ್ಠ 5.5 ಮೀಟರ್ ಲಂಬ ಕ್ಲಿಯರೆನ್ಸ್ ಇರಬೇಕು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾನೂನು ಐಆರ್‌ಸಿಎಸ್ಪಿ 84,87ರ ಪ್ರಕಾರ ಕೂಡ ರೈತರ ಜಮೀನಿಗೆ ತೆರಳುವುದಕ್ಕೆ ಯಾವುದೇ ತೊಂದರೆ ಆಗದಂತೆ ರಸ್ತೆ ನಿರ್ಮಿಸಬೇಕೆಂದು ನಿಯಮ ಇದೆ. ಆದರೆ ಈ ನಿಯಮವನ್ನು ಇಲ್ಲಿನ ಅಧಿಕಾರಿಗಳು, ಗುತ್ತಿಗೆದಾರರು ಉಲ್ಲಂಘಿಸಿ ರೈತರ ಜಮೀನಿಗಳಿಗೆ ಪರ್ಯಾಯ ರಸ್ತೆ ನಿರ್ಮಾಣ ಮಾಡದೇ ರೈತರು ತೊಂದರೆ ಪಡುವಂತಾಗಿದೆ. ಈ ಬಗ್ಗೆ ಪ್ರಶ್ನಿಸಿದ ರೈತರ ಮೇಲೆ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ಗೂಂಡಾಗಿರಿ ಹಾಗೂ ದೌರ್ಜನ್ಯ ಹೆಚ್ಚಾಗುತ್ತಿದೆ. ರೈತರಿಗೆ ತೊಂದರೆಯಾಗದಂತೆ ಪರ್ಯಾಯ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹೊನ್ನಕುಣಿ ಕ್ರಾಸ್‌ನಿಂದ ಸಿರಿವಾರದವರೆಗೆ 8 ಸೇತುವೆಗಳ ಕಾಮಗಾರಿ ತಕ್ಷಣ ಆರಂಭಿಸಲು ಒತ್ತಾಯ
ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಪಾಮಯ್ಯ ಮುರಾರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಜಗದೀಶಗೌಡ, ಮಲ್ಲನಗೌಡ ಇದ್ದರು.




