ನಗರದ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವುದರ ಜತೆಗೆ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸಿಎ ನಿವೇಶನಗಳ ಅತಿಕ್ರಮಣ ತೆರವುಗೊಳಿಸಲು ಆದ್ಯತೆ ನೀಡಲಾಗುವುದು ಎಂದು ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ರುದ್ರಪ್ಪ ಅಂಗಡಿ ತಿಳಿಸಿದರು.
ನಗರದ ಆರ್‌ಡಿಎ ಕಚೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಹಿಂದಿನ ಆಡಳಿತ ಮಂಡಳಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಾಗುವುದು. ಕಾರ್ಯನಿರ್ವಹಣೆಯಲ್ಲಿ ಕಂಡುಬರುವ ನ್ಯೂನತೆಗಳನ್ನು ಹಿರಿಯರು ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಸರಿಪಡಿಸಿ, ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಅಜಯ ಸಿಂಗ್ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಹಿರಿಯ ನಾಯಕರ ಸಲಹೆ, ಸಹಕಾರ ಪಡೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸಿಎ ನಿವೇಶನಗಳು ಹಲವು ಕಡೆಗಳಲ್ಲಿ ಅತಿಕ್ರಮಣವಾಗಿದ್ದು, ಅವುಗಳನ್ನು ತೆರವುಗೊಳಿಸಲು ಮೊದಲ ಆದ್ಯತೆ ನೀಡಲಾಗುವುದು. ೨೦೧೫ ಮತ್ತು ೨೦೧೭ರಲ್ಲಿ ಅನುಮೋದನೆಗೊಂಡಿರುವ ಸಿಡಿಪಿ (ನಗರ ಸಮಗ್ರ ಅಭಿವೃದ್ಧಿ ಯೋಜನೆ)ಯನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು. ಸಿದ್ದರಾಮಪುರ ಬಡಾವಣೆಯಲ್ಲಿ ನಿವೇಶನಕ್ಕಾಗಿ ಈಗಾಗಲೇ ಹಣ ಪಾವತಿಸಿರುವ ನಾಗರಿಕರಿಗೆ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ ಡಿಮಾರ್ಕೇಶನ್ ಕಾರ್ಯ ಕೈಗೊಳ್ಳಲಾಗುವುದು. ಈ ಕುರಿತು ಜಿಲ್ಲೆಯ ಶಾಸಕರು ಹಾಗೂ ಪಕ್ಷದ ಜನಪ್ರತಿನಿಧಿಗಳು ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.
ನಗರದ ರಿಂಗ್ ರಸ್ತೆಗೆ ಸಂಬಂಧಿಸಿದ ಪ್ರಸ್ತಾವನೆ ಪ್ರಸ್ತುತ ಮಂಜೂರಾತಿ ಪ್ರಕ್ರಿಯೆಯಲ್ಲಿದೆ. ನಗರಸಭೆಯಿಂದ ವಿವಿಧ ಬಡಾವಣೆಗಳಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು. ಇತರೆ ಜಿಲ್ಲೆಗಳಲ್ಲಿ ಜಾರಿಯಲ್ಲಿರುವಂತೆ ರೈತರು ಮತ್ತು ನಾಗರಿಕರಿಗೆ ಅನುಕೂಲವಾಗುವ ೫೦:೫೦ ಯೋಜನೆ ಜಾರಿಗೊಳಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಿಂದಿನ ಆಡಳಿತ ಮಂಡಳಿಯಲ್ಲಿ ಈ ಮಾದರಿಯ ಪ್ರಸ್ತಾವನೆ ಕೈಗೆತ್ತಿಕೊಳ್ಳಲಾಗಿದೆ. ಅದರ ಸಂಪೂರ್ಣ ವಿವರಗಳನ್ನು ಅಧ್ಯಯನ ಮಾಡಿ, ಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ: ರವಿಹಂಜ ಬಂಧನಕ್ಕೆ ಲಿಂಗಾಯತ ಮಹಾಸಭಾ ಆಗ್ರಹ
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು, ಆರ್‌ಡಿಎ ಸದಸ್ಯರಾದ ಬಿ.ಗೋವಿಂದಪ್ಪ ನಾಯಕ, ಕೆ.ರಾಮು, ಮಿರ್ಜಾ ಮೊಹಮದ್ ಫಸಿಯುಲ್ಲಾ ಬೇಗ, ಗಾಯತ್ರಿ.ಜಿ ಪ್ರಮುಖರಾದ ಜಿ.ಶಿವಮೂರ್ತಿ, ಮಹ್ಮದ್ ಶಾಲಂ, ಸಾಜೀದ್ ಸಮೀರ್, ಜಿಂದಪ್ಪ, ನರಸಿಂಹಲು ಮಾಡಗಿರಿ, ಎನ್.ಶ್ರೀನಿವಾಸ ರೆಡ್ಡಿ, ನಿರ್ಮಲಾ ಬೆಣ್ಣೆ, ಯೂಸೂಫ್ ಖಾನ್, ಮಲ್ಲೇಶ ಕೊಲಿಮಿ ಸೇರಿದಂತೆ ಅನೇಕರಿದ್ದರು.



