ದೇವದುರ್ಗ ತಾಲ್ಲೂಕಿನ ಮನಗೂಳಿ–ಬಿಚ್ಚಾಲಿ–61 ರಾಜ್ಯ ಹೆದ್ದಾರಿಯ ಹೊನ್ನಕುಣಿ ಕ್ರಾಸ್‌ನಿಂದ ಸಿರಿವಾರದವರೆಗೆ ನಿರ್ಮಿಸಬೇಕಿರುವ ಸರಿಸುಮಾರು ಎಂಟು ಸೇತುವೆಗಳ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಒತ್ತಾಯಿಸಿ, ಜಯ ಕರ್ನಾಟಕ ಸಂಘಟನೆಯ ದೇವದುರ್ಗ ತಾಲೂಕು ಘಟಕದ ವತಿಯಿಂದ ಸೋಮವಾರ ತಹಸೀಲ್ದಾರ್ ನಾಗಮ್ಮ ಎಂ. ಕಟ್ಟಿಮನಿ ಅವರ ಮೂಲಕ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಕಲಬುರಗಿ ವಿಭಾಗದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಯೋಜನೆಯಡಿ ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ ಎನ್ನಲಾಗುತ್ತಿದ್ದರೂ, ಕಾಮಗಾರಿ ಸ್ಥಳದಲ್ಲಿ ಸಮರ್ಪಕವಾಗಿ ಆರಂಭವಾಗದೆ ವಿಳಂಬವಾಗುತ್ತಿದೆ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯವನ್ನು ಸಂಘಟನೆ ತೀವ್ರವಾಗಿ ಖಂಡಿಸಿದೆ.
ದೇವದುರ್ಗ ತಾಲೂಕಿನ ಹಲವು ಗ್ರಾಮಗಳ ಜನರು ಪ್ರತಿನಿತ್ಯ ಅವಲಂಬಿಸುವ ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದ್ದು, ಸೇತುವೆಗಳ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ರೈತರು, ರೋಗಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾರ್ವಜನಿಕರಿಗೆ ಸಂಚಾರದಲ್ಲಿ ತೊಂದರೆಯಾಗುತ್ತಿದೆ. ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದ್ದು, ಅಪಘಾತಗಳ ಆತಂಕವೂ ಎದುರಾಗಿದೆ ಎಂದು ಸಂಘಟನೆ ತಿಳಿಸಿದೆ.
ಸೇತುವೆ ಕಾಮಗಾರಿ ಆರಂಭಿಸಲು ಯಾವುದೇ ಆಡಳಿತಾತ್ಮಕ ಅಥವಾ ತಾಂತ್ರಿಕ ಅಡೆತಡೆಗಳಿದ್ದರೆ ಅವುಗಳನ್ನು ತಕ್ಷಣ ನಿವಾರಿಸಿ, ಗುತ್ತಿಗೆದಾರರಿಗೆ ನೀಡಿರುವ ಕಾರ್ಯಾದೇಶದಂತೆ ಕಾಮಗಾರಿ ಕೈಗೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಅಲ್ಲದೆ, ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣವಾಗಿದ್ದರೆ ಟೆಂಡರ್ ಷರತ್ತುಗಳನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಪತ್ರ ಸ್ವೀಕರಿಸಿದ 15 ದಿನಗಳೊಳಗಾಗಿ ಕಾಮಗಾರಿ ಸ್ಥಳದಲ್ಲಿ ವಾಸ್ತವಿಕವಾಗಿ ಆರಂಭಿಸಬೇಕು. ಕಾಮಗಾರಿ ಪ್ರಾರಂಭಿಸಿರುವ ಕುರಿತು ಲಿಖಿತ ಮಾಹಿತಿಯನ್ನು ಸಂಘಟನೆಗೆ ನೀಡಬೇಕು ಎಂದು ಜಯ ಕರ್ನಾಟಕ ಸಂಘಟನೆ ಅಂತಿಮ ಗಡುವು ನೀಡಿದೆ.
ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಿಸದಿದ್ದರೆ ದೇವದುರ್ಗ ತಾಲೂಕಿನ ಸಾರ್ವಜನಿಕರನ್ನು ಸಂಘಟಿಸಿ, ಕಾನೂನುಬದ್ಧ ಪ್ರತಿಭಟನೆ, ಧರಣಿ ಹಾಗೂ ರಸ್ತೆ ತಡೆ ಚಳವಳಿ ನಡೆಸಬೇಕಾಗುತ್ತದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಉಂಟಾಗುವ ಸಾರ್ವಜನಿಕ ಅಸಮಾಧಾನ ಮತ್ತು ಸಂಚಾರ ವ್ಯತ್ಯಯಕ್ಕೆ ಕಾಮಗಾರಿ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ಜವಾಬ್ದಾರರಾಗಬೇಕಾಗುತ್ತದೆ ಎಂದು ತಿಳಿಸಿದೆ.
ಅಗತ್ಯವಿದ್ದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದು, ಕಾಮಗಾರಿ ವಿಳಂಬಕ್ಕೆ ಕಾರಣರಾದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಪಂ, ತಾಪಂ ಸ್ಥಾನಗಳಿಗೆ ಮೀಸಲಾತಿ ನಿಗದಿ
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಗೌರವಾಧ್ಯಕ್ಷ ಸೋಫಿಸಾಬ್ ಉದ್ದಾರ್, ತಾಲೂಕು ಅಧ್ಯಕ್ಷ ಯಲ್ಲಗೌಡ.ಎಂ. ಕೆ. ಇರಬಗೇರಾ, ಆರೋಗ್ಯ ಘಟಕದ ಅಧ್ಯಕ್ಷ ವಿನೋದಕುಮಾರ, ನಗರ ಘಟಕದ ಅಧ್ಯಕ್ಷ ಅಮರೇಶ್ ಚವ್ಹಾಣ್, ಯೂತ್ ಅಧ್ಯಕ್ಷ ರಂಗಯ್ಯ ಸುಂಕೇಶ್ವರಹಾಳ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸುನಿಲ್ ಕುಮಾರ ಕೆ ( ಮೆಟ್ರೋ ) ಮಹಿಳಾ ಘಟಕದ ಅಧ್ಯಕ್ಷರು ಗಂಗಮ್ಮ ಭೀಮೋಜಿ ರಾವ್ ವಕೀಲರು,ಮಹಿಳಾ ಕಾರ್ಯದಕ್ಷರು ಪಾರ್ವತಿ, ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಬಸವರಾಜ ಗೋಸಲ್, ತಾಲೂಕು ಸಹ ಕಾರ್ಯದರ್ಶಿ ಮುಸ್ತಫಾ, ತಾಲೂಕು ಖಜಾಂಚಿ ಮನೋಹರ್ ಕಾಂಬ್ಳೆಕರ್, ಮಲ್ಲಪ್ಪ ಬೆಣಕಲ್, ಶಿವು ನೀಲಿ, ರಂಗು ನಾಯಕ ಚಿಕ್ಕಗುಡ್ಡ, ಮರಿಗೆಣ್ಣ ಇರಬಗೇರಾ , ಸಂಗಮೇಶ್ ಕಲ್ಲೂರು, ಯಲ್ಲಗೌಡ ಆಕಳಕುಂಪಿ, ಅಲ್ತಾಫ್, ಶಿವಣ್ಣ ಮ್ಯಾದರ್, ಶರಣಪ್ಪ ಮ್ಯಾದರ್, ಶರಣು ಸೇರಿದಂತೆ ಸಂಘಟನೆಯ ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.




