ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷವು ಮೂರು ವರ್ಷದ ಅವಧಿ ಪೂರ್ಣಗೊಳಿಸಿದ ಹಿನ್ನೆಲೆ ಹಲವು ಜಿಲ್ಲೆಗಳ ಉಸ್ತುವಾರಿ ಸಚಿವರ ಹಾಗೂ ಇನ್ನಿತರ ಬದಲಾವಣೆಯ ಚರ್ಚೆ ತೀವ್ರಗೊಂಡಿದೆ. ಈ ನಡುವೆ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಲ್ಲೂ ಬದಲಾವಣೆ ಆಗುತ್ತದೆಯೇ ಎಂಬ ಕುತೂಹಲ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ಒಂದು ವೇಳೆ ಬದಲಾವಣೆ ನಡೆದರೆ ಯಾರಿಗೆ ಹೊಣೆಗಾರಿಕೆ ನೀಡಲಾಗುತ್ತದೆ ಎಂಬುದರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ಚರ್ಚೆಗಳು ಜೋರಾಗಿವೆ.
“ರಾಯಚೂರು ಜಿಲ್ಲೆಯ ಉಸ್ತುವಾರಿ ಹುದ್ದೆಯನ್ನು ಜಿಲ್ಲೆಯವರಿಗೇ ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದರೂ, ಕಾಂಗ್ರೆಸ್ ಪಕ್ಷವು ಹೊರ ಜಿಲ್ಲೆಯ ನಾಯಕರಿಗೆ ಅವಕಾಶ ನೀಡುತ್ತಾ ಬಂದಿದೆ. ಪ್ರಸ್ತುತ ರಾಯಚೂರು ಜಿಲ್ಲಾ ಉಸ್ತುವಾರಿಯಾಗಿ ಸಚಿವ ಶರಣ ಪ್ರಕಾಶ ಪಾಟೀಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಕಲಬುರಗಿ ಭಾಗಕ್ಕೆ ಸೇರಿದವರಾಗಿದ್ದು, ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ಅಗತ್ಯ ಮಟ್ಟದ ಆದ್ಯತೆ ನೀಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಜಿಲ್ಲೆಗೆ ಮಂಜೂರಾಗುವ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳಲ್ಲೂ ಸಮರ್ಪಕ ಗಮನ ಹರಿಸಲಿಲ್ಲ ” ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.
ಕೆಲವು ಹೋರಾಟಗಾರರು ಹಾಗೂ ಸ್ಥಳೀಯ ಮುಖಂಡರ ಆರೋಪದಂತೆ, “ರಾಯಚೂರಿಗೆ ಬರಬೇಕಿದ್ದ ಅನುದಾನ ಮತ್ತು ಯೋಜನೆಗಳು ಕಲಬುರಗಿ ಭಾಗದತ್ತ ತಿರುಗಿವೆ ಎಂಬ ಅಸಮಾಧಾನವಿದ್ದು, ಇದರಿಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ರಾಯಚೂರು ಜಿಲ್ಲೆಯ ಸಮಸ್ಯೆಗಳು, ಜನರ ಅವಶ್ಯಕತೆಗಳು ಹಾಗೂ ಅಭಿವೃದ್ಧಿ ದೃಷ್ಟಿಕೋನವನ್ನು ಜಿಲ್ಲೆಯ ನಾಯಕರೇ ಸಮರ್ಪಕವಾಗಿ ಅರ್ಥಮಾಡಿಕೊಳ್ಳಬಲ್ಲರು. ಆದ್ದರಿಂದ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ಸ್ಥಳೀಯ ನಾಯಕರಿಗೇ ನೀಡಬೇಕು” ಎಂದು ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ವಿಶೇಷವಾಗಿ ಬರಪೀಡಿತ ತಾಲ್ಲೂಕುಗಳು, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಗಮನ ಅಗತ್ಯವಿದೆ. ಸ್ಥಳೀಯ ನಾಯಕತ್ವಕ್ಕೆ ಅವಕಾಶ ನೀಡಿದರೆ ಮಾತ್ರ ಜಿಲ್ಲೆಯ ಅಭಿವೃದ್ಧಿಗೆ ವೇಗ ಸಿಗಲಿದೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ. ಈಗ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತದೆ, ರಾಯಚೂರು ಜಿಲ್ಲಾ ಉಸ್ತುವಾರಿಯಲ್ಲಿ ಬದಲಾವಣೆಯಾಗಿ, ಜಿಲ್ಲೆಯ ನಾಯಕರಿಗೆ ಅವಕಾಶ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
“ಜಿಲ್ಲೆಯ ಹಿರಿಯ ರಾಜಕೀಯ ನಾಯಕ ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಉಸ್ತುವಾರಿ ಸ್ಥಾನಕ್ಕೆ ಸಮರ್ಪಕರಾಗಿದ್ದು. ಪಕ್ಷ ಸಂಘಟನೆಗಾಗಿ ಹಲವು ವರ್ಷಗಳಿಂದ ಹಗಲು-ರಾತ್ರಿ ಶ್ರಮಿಸಿರುವ ಅವರು, ರಾಯಚೂರು ಜಿಲ್ಲೆಯ ಜೊತೆಗೆ ಗಡಿ ಭಾಗದ ಆಂಧ್ರ ಪ್ರದೇಶದಲ್ಲಿಯೂ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡಿದ್ದಾರೆ” ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಕಾಂಗ್ರೆಸ್ ಮುಖಂಡ ನರಸಿಂಹ ಮಾಡಗಿರಿ ಮಾತನಾಡಿ, “ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಯವರೇ ಆಗಿರಬೇಕು. ಆಗ ಮಾತ್ರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗುತ್ತದೆ. ಪ್ರಸ್ತುತ ಇರುವ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ಹಾಗೂ ಕೆಡಿಪಿ ಸಭೆಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಮಹಾನಗರ ಪಾಲಿಕೆಯ ಕುಂದುಕೊರತೆ ಸಭೆಯನ್ನು ಒಂದನ್ನೂ ನಡೆಸಿಲ್ಲ,” ಎಂದು ಆರೋಪಿಸಿದರು.
ನಗರಸಭೆ ಉಪಾಧ್ಯಕ್ಷ ಸಾಜಿದ್ ಸಮೀರ್ ಮಾತನಾಡಿ, “ನಮ್ಮ ಜಿಲ್ಲೆಯವರೇ ಜಿಲ್ಲಾ ಉಸ್ತುವಾರಿಯಾಗಿದ್ದರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಇಚ್ಛಾಶಕ್ತಿ ಮೂಡುತ್ತದೆ. ಜಿಲ್ಲೆಗೆ ಉತ್ತಮ ಹೆಸರು ತರುವ ಉದ್ದೇಶದಿಂದ ಅನುದಾನ, ಪೋಸ್ಟಿಂಗ್ ಸೇರಿದಂತೆ ಹಲವು ಅನುಕೂಲಗಳು ದೊರೆಯುವ ಸಾಧ್ಯತೆಗೆ ಕೈ ಮೀರಿ ಕೆಲಸ ಮಾಡುತ್ತಾರೆ. ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿಯಾಗಿ ತನ್ವೀರ್ ಸೇಠ್ ಕಾರ್ಯನಿರ್ವಹಿಸಿದ್ದು, ಜಿಲ್ಲೆಗೆ ಅನುದಾನ, ಅಭಿವೃದ್ದಿ ಮಾಡುವಲ್ಲಿ ಸಾಧ್ಯವಾಗಲಿಲ್ಲ. ಜಿಲ್ಲೆಯವರೇ ಉಸ್ತುವಾರಿಯಾಗಿದ್ದರೆ ರಾಜಕೀಯ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿಗೆ ಮತ್ತಷ್ಟು ಉತ್ತೇಜನ ಸಿಗುತ್ತದೆ” ಎಂದು ತಿಳಿಸಿದರು.
ದಲಿತ ಮುಖಂಡ ಎಂ.ಆರ್. ಭೇರಿ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ನಮ್ಮ ಮೊದಲ ಬೇಡಿಕೆ ಜಿಲ್ಲೆಯ ಉಸ್ತುವಾರಿಯನ್ನು ನಮ್ಮ ಜಿಲ್ಲೆಯವರಿಗೇ ನೀಡಬೇಕು ಎಂಬುದಾಗಿತ್ತು. ಈ ಸಂಬಂಧ ಪತ್ರಿಕಾಗೋಷ್ಠಿಯನ್ನೂ ನಡೆಸಲಾಗಿತ್ತು. ಆದರೆ ನಮ್ಮ ಬೇಡಿಕೆ ಇನ್ನೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಕೆಆರ್‌ಡಿಬಿ ಅನುದಾನ ಬಹುತೇಕ ಕಲಬುರಗಿ ಜಿಲ್ಲೆಗೆ ಮಾತ್ರ ಸೀಮಿತವಾಗುತ್ತಿದೆ. ಇದರಿಂದ ರಾಯಚೂರು ಜಿಲ್ಲೆಗೆ ಅನ್ಯಾಯವಾಗುತ್ತಿದೆ. ಈ ವಿಷಯವಾಗಿ ಹಲವು ಬಾರಿ ಹೋರಾಟಗಳು ಹಾಗೂ ಪತ್ರಿಕಾಗೋಷ್ಠಿಗಳನ್ನು ನಡೆಸಲಾಗಿದೆ” ಎಂದು ಹೇಳಿದರು.
“ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಕೂಡ ಕಲಬುರಗಿ ಜಿಲ್ಲೆಯವರೇ. ರಾಯಚೂರು ಜಿಲ್ಲಾ ಉಸ್ತುವಾರಿಯೂ ಕಲಬುರಗಿ ಜಿಲ್ಲೆಯವರೇ ಆಗಿರುವ ಕಾರಣ, ಅನುದಾನದ ಹಂಚಿಕೆ ಕಲಬುರಗಿ ಜಿಲ್ಲೆಗೆ ಹೆಚ್ಚು ಒಲಿಯುತ್ತಿದೆ. ಆದ್ದರಿಂದ ನಮ್ಮ ಜಿಲ್ಲೆಗೆ ನಮ್ಮ ಜಿಲ್ಲೆಯವರನ್ನೇ ಉಸ್ತುವಾರಿಯಾಗಿ ನೇಮಕ ಮಾಡಬೇಕು” ಎಂದು ಅವರು ಆಗ್ರಹಿಸಿದರು.
ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯದಂತೆ, ಜಿಲ್ಲೆಯ ಸಮಸ್ಯೆಗಳು, ರೈತರ ಸಂಕಷ್ಟ, ನೀರಾವರಿ ಯೋಜನೆಗಳು ಹಾಗೂ ಅಭಿವೃದ್ಧಿ ವಿಚಾರಗಳನ್ನು ಸಮಗ್ರವಾಗಿ ಅರ್ಥಮಾಡಿಕೊಂಡಿರುವ ನಾಯಕನಿಗೆ ಜಿಲ್ಲಾ ಉಸ್ತುವಾರಿ ಹೊಣೆ ನೀಡಿದರೆ ಮಾತ್ರ ರಾಯಚೂರಿನ ಅಭಿವೃದ್ಧಿಗೆ ಹೊಸ ದಿಕ್ಕು ಸಿಗಬಹುದು ಎಂದು ಜನರು ಆಶಾಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಬದಲಾವಣೆ ವೇಳೆ ರಾಯಚೂರು ಜಿಲ್ಲಾ ಉಸ್ತುವಾರಿ ಸ್ಥಾನದಲ್ಲಿ ಬದಲಾವಣೆ ಆಗುತ್ತದೆಯೇ? ಒಂದು ವೇಳೆ ಬದಲಾವಣೆ ಆದರೆ ಸ್ಥಳೀಯ ನಾಯಕರಿಗೆ ಮಣೆ ಹಾಕಲಾಗುತ್ತದೆಯೇ? ಎಂಬ ಕುತೂಹಲ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ. ಇದೀಗ ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್



