ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಚುನಾವಣೆಗೆ 2025ರ ಮತದಾರರ ಪಟ್ಟಿಯನ್ನೇ ಬಳಸಲು ರಾಜ್ಯ ಚುನಾವಣಾ ಆಯೋಗ ಸಿದ್ಧವಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ನಿಂದ ನಿರ್ದೇಶನ ಬಂದ ಕೂಡಲೇ ರಾಜ್ಯದ ಮತದಾರರ ಪಟ್ಟಿಯನ್ನು ಬಳಸಿಕೊಂಡು ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್ ಸಂಗ್ರೇಶಿ ತಿಳಿಸಿದ್ದಾರೆ.
ಮಂಗಳವಾರ ಎಸ್‌ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟದ ನಿಯೋಗವು ಸಂಗ್ರೇಶಿ ಅವರನ್ನು ಭೇಟಿ ಮಾಡಿದೆ. “ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಮೂಲಕ ಸಿದ್ಧಪಡಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಬಳಸಬಾರದು. ಅದರ ಬದಲಿಗೆ 2025ರ ಮತದಾರರ ಪಟ್ಟಿಯನ್ನೇ ಬಳಸಬೇಕು” ಎಂದು ಆಗ್ರಹಿಸಿ ಮನವಿ ಸಲ್ಲಿಸಿದೆ.
ಒಕ್ಕೂಟದ ನಿಯೋಗದ ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಸಂಗ್ರೇಶಿ, “2025ರ ಮತದಾರರ ಪಟ್ಟಿಯನ್ನಿಟ್ಟುಕೊಂಡೇ ಜಿಬಿಎ ಚುನಾವಣೆ ನಡೆಸಲು ನಿರ್ದೇಶನ ನೀಡಬೇಕೆಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಸುಪ್ರೀಂಕೋರ್ಟ್‌ನಿಂದ ನಿರ್ದೇಶನ ಬಂದ ಕೂಡಲೇ ರಾಜ್ಯದ ಮತದಾರರ ಪಟ್ಟಿಯನ್ನೇ ಬಳಸಿಕೊಂಡು ಜಿಬಿಎ ಚುನಾವಣೆ ನಡೆಸುತ್ತೇವೆ” ಎಂದು ಹೇಳಿದ್ದಾರೆ.
ಜಿಬಿಎ ವ್ಯಾಪ್ತಿಯ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, “ರಾಜ್ಯ ಚುನಾವಣಾ ಆಯೋಗವು ಈಗಾಗಲೇ ಎಪ್ರಿಲ್ ವೇಳೆಗೆ ಸುಮಾರು 89 ಲಕ್ಷ ಮತದಾರರನ್ನು ಒಳಗೊಂಡ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ಹೊಸ ಮತದಾರರನ್ನು ಸೇರ್ಪಡೆಗೊಳಿಸಿಕೊಳ್ಳಲು ಸಿದ್ಧತೆ ನಡೆಸಲಾಗಿದ್ದು, ಈ ಮತಪಟ್ಟಿಯನ್ನು ಜಿಬಿಎ ಅಧಿಕಾರಿಗಳಿಗೂ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಕರ್ನಾಟಕದ ಮತಪಟ್ಟಿಯಿಂದ ಒಬ್ಬ ಅರ್ಹ ಮತದಾರನನ್ನೂ ಕೈಬಿಟ್ಟಿಲ್ಲವೇ? ವಾಸ್ತವ ಬೇರೆಯೇ ಇದೆ
“ಗ್ರಾಮಸಭೆ ಮತ್ತು ವಾರ್ಡ್ ಸಭೆಗಳಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ರಾಜ್ಯ ಸರಕಾರ ಅಗತ್ಯವಾದ ಡೇಟಾ ಸೆಂಟರ್ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿದರೆ ಮತದಾರರ ಪಟ್ಟಿ ಸಿದ್ಧಪಡಿಸಲು ಆಯೋಗ ಸಿದ್ಧವಿದೆ. ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮುಂಬರುವ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಯಾಗಿ ಅಂಗೀಕಾರಗೊAಡರೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಸಾಧ್ಯವಾಗಲಿದೆ” ಎಂದು ಸಂಗ್ರೇಶಿ ಮಾಹಿತಿ ನೀಡಿದ್ದಾರೆ.
ಈ ವೇಳೆಯಲ್ಲಿ ಎಸ್‌ಐಆರ್ ವಿರೋಧಿ ಒಕ್ಕೂಟದ ಜೆ.ಎಂ.ವೀರಸಂಗಯ್ಯ, ತಾರಾರಾವ್, ಸುನೀಲ್ ಸಿರಸಂಗಿ, ಅಮ್ಜದ್ ಪಾಷಾ, ಡಾ.ರಮೇಶ್ ಬೆಲ್ಲಮಕೊಂಡ, ನಾಗೇಶ್ ಅರಳಕುಪ್ಪೆ, ನೈನಾ, ಹೈದರ್ ಬೇಗ್, ರವಿ ಮೋಹನ್, ಪವನ್, ಬಸವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


