ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಕನಿಷ್ಠ ₹15 ಸಾವಿರ ಮಾಸಿಕ ಗೌರವಧನ ನಿಗದಿಗೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ವೇದಿಕೆ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ ರೈತ ಸಂಘಟನೆಯ ಮುಖಂಡ ಅರವಿಂದ ಕುಲಕರ್ಣಿ, “ಆಶಾ ಕಾರ್ಯಕರ್ತೆಯರು ಹಗಲಿರುಳು ಬಡಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದರೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕನಿಷ್ಠ ₹15 ಸಾವಿರ ಗೌರವಧನ ನೀಡಬೇಕು” ಎಂದು ಒತ್ತಾಯಿಸಿದರು.
ಪ್ರಗತಿಪರ ಸಂಘಟನೆಯ ಮುಖಂಡ ಬಿ. ಭಗವಾನರೆಡ್ಡಿ ಮಾತನಾಡಿ, “ಹಿಂದೆ ಸರ್ಕಾರ ₹10 ಸಾವಿರ ಗೌರವಧನ ನೀಡುವ ಭರವಸೆ ನೀಡಿದ್ದರೂ ಈಡೇರಿಸಿಲ್ಲ. ಕಳೆದ ಒಂಬತ್ತು ವರ್ಷಗಳಲ್ಲಿ ಕೇವಲ ₹1,500 ಮಾತ್ರ ಗೌರವಧನ ಹೆಚ್ಚಿಸಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿ. ಗೌರವಧನ ಹೆಚ್ಚಳದ ಅಧಿಕೃತ ಆದೇಶ ಹೊರಬೀಳುವವರೆಗೂ ಹೋರಾಟ ಮುಂದುವರಿಸಬೇಕು” ಎಂದರು.
ಇರ್ಫಾನ್ ಶೇಖ್ ಮಾತನಾಡಿ, “ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂದು ಎಚ್ಚರಿಸಿದರು. ಬ್ಯಾಂಕ್ ನೌಕರರ ಸಂಘಟನೆಯ ಮುಖಂಡ ಜಿ.ಜಿ. ಗಾಂಧಿ ಮಾತನಾಡಿ, ಹಲವು ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಗೌರವಧನ ನೀಡಲಾಗುತ್ತಿದೆ. ಕರ್ನಾಟಕದಲ್ಲಿಯೂ ಕನಿಷ್ಠ ₹15 ಸಾವಿರ ನೀಡಬೇಕು” ಎಂದು ಆಗ್ರಹಿಸಿದರು.
ನಿವೃತ್ತ ಉಪನ್ಯಾಸಕಿ ಲಲಿತಾ ಬಿಜ್ಜರಗಿ, ಸುರೇಶ ಜೆ.ಬಿ., ಪ್ರಭುಗೌಡ ಪಾಟೀಲ, ಅಕ್ರಮ ಮಾಶ್ಯಾಳಕರ, ಬಾಳು ಜೇವೂರ, ಗಿರೀಶ ಕಲಘಟಗಿ, ಸಿದ್ದಲಿಂಗ ಬಾಗೇವಾಡಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.
ಬಾಳು ಜೇವೂರ, ಗಿರೀಶ ಕಲಘಟಗಿ, ಭರತಕುಮಾರ ಎಚ್ ಟಿ,ಶ್ರೀಕಾಂತ ಕೊಂಡಗೂಳಿ, ಗೀತಾ ಎಚ್ ಟಿ, ಸಿದ್ದಲಿಂಗ ಬಾಗೇವಾಡಿ, ಆಶಾ ಕಾರ್ಯಕರ್ತೆಯರ ಮುಖಂಡರಾದ ಮಹಾದೇವಿ, ಶಿವಲೀಲಾ, ಸಿದ್ದರಾಮಯ್ಯ ಹಿರೇಮಠ, ಶಿವಬಾಳಮ್ಮ ಕೊಂಡಗೂಳಿ, ದಸ್ತಗೀರ ಉಕ್ಕಲಿ, ಲಾಯಪ್ಪ ಇಂಗಳೆ, ವಿನೋದ ಖೇಡ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಪ್ರಮುಖ ಬೇಡಿಕೆಗಳು: ಆಶಾ ಕಾರ್ಯಕರ್ತೆಯರಿಗೆ ₹15 ಸಾವಿರ ಮಾಸಿಕ ಗೌರವಧನ ನಿಗದಿ, ಸಮಸ್ತ ಆ್ಯಪ್‌ನ ಮೊಬೈಲ್ ಕೆಲಸಗಳಿಗೆ ಸೂಕ್ತ ಸೌಲಭ್ಯ ಮತ್ತು ಪ್ರೋತ್ಸಾಹಧನ, ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇಡಿಗಂಟು ಪಾವತಿ ಹಾಗೂ ಬಾಕಿ ಉಳಿದಿರುವ ಕೇಂದ್ರದ ಪ್ರೋತ್ಸಾಹಧನ ತಕ್ಷಣ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.



