ಉತ್ತರ ಕನ್ನಡ: ಬೇಡ್ತಿ ಹೋರಾಟ ಮತ್ತು ಸಂಸದ-ಶಾಸಕರ ಸೋಗಲಾಡಿತನ

Date:

ಬೇಡ್ತಿ ಸತ್ಯಾಗ್ರಹ ಎಷ್ಟು ಯೋಜನಾ ಬದ್ದವಾಗಿರುತ್ತದೆಂದರೆ, ಬೇಡ್ತಿ ನದಿ ಬಳಸುವ ಯಾವ ಯೋಜನೆಯೂ ಕಾರ್ಯಗತವಾಗದಂತೆ ಹಿಮ್ಮೆಟ್ಟಿಸಲಾಗುತ್ತಿದೆ. ಆದರೆ ಜಿಲ್ಲೆಯ ಹಿಂದುಳಿದವರು-ದುರ್ಬಲರು ಬಾಧಿತವಾಗುವ ಹಲವು ಯೋಜನೆಗಳನ್ನು ಪ್ರಭುತ್ವ ಹಠದಿಂದ ಅನುಷ್ಠಾನಗೊಳಿಸಿದೆ. ಸುಪಾ, ತಟ್ಟಿಹಳ್ಳ, ಕೊಡಸಳ್ಳಿ, ಬೊಮ್ಮನಳ್ಳಿ, ಕದ್ರಾ ಅಣೆಕಟ್ಟುಗಳ ನಿರ್ಮಾಣ, ನಾಗಝರಿ ಪವರ್ ಹೌಸ್, ಕೈಗಾ ಅಣು ಸ್ಥಾವರ, ಸೀ ಬರ್ಡ್ ನೌಕಾನೆಲೆ, ಶರಾವತಿ ಟೆಲರೇಸ್, ಟಿಬೇಟಿಯ್ ಕಾಲೋನಿ, ರೈಲು ಮಾರ್ಗ ಹೀಗೆ ಹಲವು ಯೋಜನೆಗಾಗಿ ಜಿಲ್ಲೆಯ 64 ಸಾವಿರ ಹೆಕ್ಟೇರ್‍‌ಗಿಂತ ಹೆಚ್ಚು ಅರಣ್ಯ ನಿರ್ನಾಮ ಮಾಡಲಾಗಿದೆ.

ಬೇಡ್ತಿ ಮತ್ತು ವರದಾ ನದಿ ತಿರುವು ಯೋಜನೆ ವಿರೋಧಿ ಹೋರಾಟ ಉತ್ತರ ಕನ್ನಡದಲ್ಲಿ ಹುರಿಗಟ್ಟುತ್ತಿದೆ. ಬೇಡ್ತಿ ಅಕ್ಷರಶಃ ಜಿಲ್ಲೆಯ ಮಲೆನಾಡು-ಕರಾವಳಿಯ ಜೀವ ನದಿ. ಅದರಲ್ಲೂ ಶಿರಸಿ-ಯಲ್ಲಾಪುರ ಸೀಮೆಯ ಅಡಿಕೆ ತೋಟಿಗರು, ಕೃಷಿಕರು ಬೇಡ್ತಿಯನ್ನೇ ನಂಬಿ ಬದುಕುತ್ತಿದ್ದಾರೆ. ಬೇಡ್ತಿ ಆಪೋಶನ ಪಡೆಯುವ ಈ ಪ್ರಳಯಾಂತಕ ಯೋಜನೆ ತಮ್ಮನ್ನು ಬೀದಿಪಾಲಾಗಿಸುತ್ತದೆಂಬ ಆತಂಕ ಘಟ್ಟದ ಮೇಲಿನ ತೋಟ ಪಟ್ಟಿಯ ಮಂದಿಯನ್ನು ಕಂಗಾಲಾಗಿಸಿದೆ. ಬೇಡ್ತಿ-ವರದಾ ನದಿ ಜೋಡಣೆ-ತಿರುವು ಯೋಜನೆ ಪ್ರಸ್ತಾಪ ಕೇಳಿದಾಕ್ಷಣದಿಂದ ಶಿರಸಿ-ಯಲ್ಲಾಪುರ ಸೀಮೆಯಲ್ಲಿ ಆತಂಕ-ಆಕ್ರೋಶದ ಸಭೆ-ಮೆರವಣಿಗೆ, ಸಾಧಕ-ಬಾಧಕಗಳ ಚರ್ಚೆ, ವಿವಿಧ ಸಮುದಾಯದ ಮಠಾಧೀಶರ-ಸರ್ವ ಪಕ್ಷದ ಸಂಸದ-ಶಾಸಕರು ಮತ್ತು ಸಾರ್ವಜನಿಕರ ಸಮಾವೇಶ, ಬೆಂಗಳೂರಿನ ಫ್ರೀಡಮ್ ಪಾರ್ಕಿನಲ್ಲಿ ಯೋಜನಾ ವಿರೋಧಿ ಪ್ರತಿಭಟನಾ ಸಭೆ, ಯಲ್ಲಾಪುರದಲ್ಲಿ ರಸ್ತೆ ತಡೆಯಂಥ ಸರಣಿ ಚಳವಳಿ ಒಂದರ ಹಿಂದೊಂದರಂತೆ ನಡೆಯುತ್ತಿದೆ.

- Advertisement -

ಬೇಡ್ತಿ ನದಿಗೆ ಕಳೆದ ಮೂರು ದಶಕದಿಂದ ಯಾವ ಸರಕಾರಿ ಯೋಜನೆ ಘೋಷಣೆಯಾದರೂ ಪ್ರಬಲ ಪ್ರತಿರೋಧ ವ್ಯಕ್ತವಾಗುತ್ತಿದೆ. ವ್ಯವಸ್ಥಿತ ಆಂದೋಲನ ನಡೆಯುತ್ತಿದೆ. ಬೇಡ್ತಿ ತಟದಲ್ಲಿ ಅಣೆಕಟ್ಟು ಕಟ್ಟಿದರೆ ಅಥವಾ ಕೊಳವೆ ಅಳವಡಿಸಿ ನದಿಯ ದಿಕ್ಕು ಬದಲಿಸಿದರೆ ಹೆಚ್ಚು ಹಾನಿಯಾಗುವುದು ನದಿ ಕೊಳ್ಳದ ಹವ್ಯಕ ಬ್ರಾಹ್ಮಣ ಸಮುದಾಯದವರಿಗೆ. ಸಹಜವಾಗೇ ಈ ಹೋರಾಟಕ್ಕೆಲ್ಲ ಶಿರಸಿ-ಯಲ್ಲಾಪುರ ಭಾಗದ ಹವ್ಯಕರ ಗುರು ಮಠ-ಸ್ವರ್ಣವಲ್ಲಿ ಸಂಸ್ಥಾನದ ಪೀಠಾಧಿಪತಿ ಗಂಗಾಧರೇಂದ್ರ ಸ್ವಾಮಿಯ ‘ದಿವ್ಯ’ ಸಾನಿಧ್ಯ ಇರುತ್ತದೆ. ತೋಟ-ಕೃಷಿ-ಕಸಬು ಕಾಪಾಡಿಕೊಳ್ಳುವ ಚಳವಳಿಯಲ್ಲಿ ಜಾಸ್ತಿ ಜಮೆಯಾಗುವವರೂ ಹವ್ಯಕ ಬ್ರಾಹ್ಮಣರೇ. ಶಿಷ್ಯ ಸಂಕುಲದ ಲೌಕಿಕ ಬದುಕಿನ ಸಂರಕ್ಷಣೆಯ ಸ್ವಾಮಿ ಮುಂದಾಳತ್ವದ ಸಂಘರ್ಷವನ್ನು ಪಾರಮಾರ್ಥಿಕ ಪರಿಸರ ಹೋರಾಟ ಎಂಬಂತೆ ಚಿತ್ರಿಸುತ್ತಿರುವುದು ಮಾತ್ರ ವಿಪರ್ಯಾಸ ಎಂಬ ತರ್ಕಗಳು ಜಿಲ್ಲೆಯಲ್ಲಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಗಲಕೋಟೆಗೆ ಬರದ ಛಾಯೆ: ಬರಿದಾದ ಹಿಪ್ಪರಗಿ ಬ್ಯಾರೇಜ್‌, ಕುಡಿವ...

ಒಂದು ಕಾಲದಲ್ಲಿ ಅತಿವೃಷ್ಟಿಯ ಆರ್ಭಟಕ್ಕೆ ತತ್ತರಿಸಿದ್ದ ಬಾಗಲಕೋಟೆ ಜಿಲ್ಲೆ, ಈಗ ಮಳೆಯ ಕೊರತೆಯಿಂದ ಬರದ ಬವಣೆಗೆ ಸಿಲುಕಿದೆ. ಮುಂಗಾರು ಕೈಕೊಟ್ಟಿದೆ, ಹಿಂಗಾರೂ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ. ಪರಿಣಾಮ ಬೆಳೆ ಒಣಗುವ ಆತಂಕ ಒಂದೆಡೆಯಾದರೆ,...

ಕರ್ನಾಟಕದ ಮತಪಟ್ಟಿಯಿಂದ ಒಬ್ಬ ಅರ್ಹ ಮತದಾರನನ್ನೂ ಕೈಬಿಟ್ಟಿಲ್ಲವೇ? ವಾಸ್ತವ...

ಕರ್ನಾಟಕದ ಅಂತಿಮ ಮತದಾರರ ಪಟ್ಟಿಯಲ್ಲಿ ಒಬ್ಬ ಅರ್ಹ ನಾಗರಿಕನನ್ನೂ ಕೈಬಿಟ್ಟಿಲ್ಲ, ಒಬ್ಬ ಅನರ್ಹ ವ್ಯಕ್ತಿಯನ್ನೂ ಸೇರಿಸಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತದೆ. ಆದರೆ, ಮತದಾರರ ಪಟ್ಟಿಯಲ್ಲಿರುವ ಅಂಕಿಅಂಶಗಳು ಮತ್ತು ದಾಖಲೆಗಳು ಬೇರೆಯದ್ದೇ ಕಥೆ...

ಮತ ಬದಲಾಗಿಲ್ಲ, ಮನಸ್ಸು ಬದಲಾಗಿದೆ: ಮತಾಂತರವೋ? ಮನಸಾಂತರವೋ?

ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಬಲವಂತ, ಬೆದರಿಕೆ, ವಂಚನೆ ಅಥವಾ ಆಮಿಷದ ಮೂಲಕ ಧಾರ್ಮಿಕ ನಂಬಿಕೆಯನ್ನು ಬದಲಾಯಿಸುವುದು ಕಾನೂನು ಮತ್ತು ನೈತಿಕತೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ....

ಬೇಡ್ತಿ ಸತ್ಯಾಗ್ರಹ ಎಷ್ಟು ಯೋಜನಾ ಬದ್ದವಾಗಿರುತ್ತದೆಂದರೆ, ಬೇಡ್ತಿ ನದಿ ಬಳಸುವ ಯಾವ ಯೋಜನೆಯೂ ಕಾರ್ಯಗತವಾಗದಂತೆ ಹಿಮ್ಮೆಟ್ಟಿಸಲಾಗುತ್ತಿದೆ. ಆದರೆ ಜಿಲ್ಲೆಯ ಹಿಂದುಳಿದವರು-ದುರ್ಬಲರು ಬಾಧಿತವಾಗುವ ಹಲವು ಯೋಜನೆಗಳನ್ನು ಪ್ರಭುತ್ವ ಹಠದಿಂದ ಅನುಷ್ಠಾನಗೊಳಿಸಿದೆ. ಸುಪಾ, ತಟ್ಟಿಹಳ್ಳ, ಕೊಡಸಳ್ಳಿ, ಬೊಮ್ಮನಳ್ಳಿ, ಕದ್ರಾ ಅಣೆಕಟ್ಟುಗಳ ನಿರ್ಮಾಣ, ನಾಗಝರಿ ಪವರ್ ಹೌಸ್, ಕೈಗಾ ಅಣು ಸ್ಥಾವರ, ಸೀ ಬರ್ಡ್ ನೌಕಾನೆಲೆ, ಶರಾವತಿ ಟೆಲರೇಸ್, ಟಿಬೇಟಿಯ್ ಕಾಲೋನಿ, ರೈಲು ಮಾರ್ಗ ಹೀಗೆ ಹಲವು ಯೋಜನೆಗಾಗಿ ಜಿಲ್ಲೆಯ 64 ಸಾವಿರ ಹೆಕ್ಟೇರ್‍‌ಗಿಂತ ಹೆಚ್ಚು ಅರಣ್ಯ ನಿರ್ನಾಮ ಮಾಡಲಾಗಿದೆ.

bedti project1
ಬೇಡ್ತಿ ನದಿ ತಟ

ಸ್ಥಳೀಯ ಪರಿಸರಕ್ಕೆ ಹೊಂದಿಕೊಂಡು ತಲತಲಾಂತರದಿಂದ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಕುಟುಂಬಗಳನ್ನು ದಿಕ್ಕಾಪಾಲಾಗಿಸಲಾಗಿದೆ. ಈ ದನಿಯಿಲ್ಲದ ಜನರದು ಅರಣ್ಯರೋದನವಾಗಿದೆ. ಸ್ವರ್ಣವಲ್ಲಿ ಸ್ವಾಮಿಯ ಆಸಕ್ತಿಯ ಬೇಡ್ತಿ ಬೊಬ್ಬೆ ಮಾತ್ರ ದಶದಿಕ್ಕಿಗೆ ಸದ್ದು ಮಾಡುತ್ತದೆ. ಅಧಿಕಾರಸ್ಥರನ್ನು ಗುದ್ದುತ್ತದೆ. ಪರಿಸರ-ಜೀವ ಸಂಕಲ-ಜನ ಜೀವನ ಆಹುತಿ ಪಡೆಯುವ ಯಾವ ಯೋಜನೆಗೂ ಸಿಗದ ತಡೆ ಬೇಡ್ತಿಗೆ ಬರುವ ಪ್ರಾಜೆಕ್ಟ್‌ಗಳಿಗೆ ಸಿಗುತ್ತದೆ. ಬೇಡ್ತಿ ಯೋಜನೆಗಳ ಬಗ್ಗೆ ಅಪಾರ ಕಾಳಜಿ-ಕಳಕಳಿ ತೋರಿಸುವ ಸ್ವರ್ಣವಲ್ಲಿ ಸ್ವಾಮಿ ಘಟ್ಟದ ಕೆಳಗಿನ ಪರಿಸರ ಮತ್ತು ಮನು ಕುಲಕ್ಕೆ ಮಾರಕವಾದ ಯೋಜನೆಗಳ ವಿರುದ್ಧದ ಹೋರಾಟಕ್ಕೆ ಕರೆದರೂ ಬರುವುದಿಲ್ಲ ಎಂಬ ಆರೋಪವೂ ಇದೆ.

ಇದನ್ನು ಓದಿದ್ದೀರಾ?: ಬಿಸ್ಲೇರಿಯಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ; ಅಂಬಾನಿಯ ‘ಕ್ಯಾಂಪಾ ಶ್ಯೂರ್‌’ ನೀರಿನ ಕತೆ ಏನು?

ಕಳೆದ 3 ನವೆಂಬರ್ 2026ರಂದು ಬೇಡ್ತಿ ನದಿ ತಟದ ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಸರಕಾರದ ಗಮನ ಸೆಳೆಯುವ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ರಸ್ತಾ ರೋಕೋಕ್ಕೆ ಸುಮಾರು ಹತ್ತು ಸಾವಿರ ಮಂದಿ ಸೇರಿದ್ದರೆಂದು ಅಂದಾಜಿಸಲಾಗಿದೆ. ಜಿಲ್ಲೆಯ ಸಕಲ ಪಕ್ಷದ ಶಾಸಕರು, ಸಂಸದರು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು. ರಸ್ತೆ ತಡೆಯಂಥ ನಿಷ್ಪಾಪಿ ಪ್ರಯಾಣಿಕರ ದಂಡಿಸುವ-ವಾಣಿಜ್ಯ ವಹಿವಾಟಿಗೆ ಹಾನಿಮಾಡುವ ಕಠೋರ ಹೋರಾಟ ಆಯೋಜಿಸಲಾಗಿತ್ತು. ಪ್ರತಿಭಟನೆಯ ಸಂಘಟಕರಾದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಮತ್ತು ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ವರ್ಯರು ಹೇಳಿದಂತೆ ರಸ್ತೆ ತಡೆ ಹೋರಾಟಕ್ಕೆ ಸ್ವರ್ಣವಲ್ಲಿ ಸ್ವಾಮೀಜಿ ಮಾರ್ಗದರ್ಶವಿತ್ತು. ಆದರೆ ‘ಹಸಿರು ಸ್ವಾಮಿ’ ಎನ್ನಲಾಗುವ ಸ್ವರ್ಣವಲ್ಲಿ ಗುರುಗಳು ಮಾತ್ರ ಹೆದ್ದಾರಿ ಬಂದ್ ಮಾಡುವ ಗಂಭೀರ ಹೋರಾಟದಲ್ಲಿ ಕಾಣಿಸಿಕೊಳ್ಳದಿರುವುದು ನಿಗೂಢವಾಗಿದೆ.

ಬೇಡ್ತಿ-ವರದಾ ನದಿ ಜೋಡಣೆ-ತಿರುವು ಪ್ರಾಜೆಕ್ಟ್‌ನ ಡಿಪಿಆರ್(ವಿಸ್ತ್ರತ ಯೋಜನಾ ವರದಿ) ತಯಾರಿಕೆಗೆ ತರಾತುರಿ ಆಗುತ್ತಿದೆ. ಸರಕಾರ ಡಿಪಿಆರ್ ಸಿದ್ಧಪಡಿಸುವಿಕೆಗೆ ಆಸ್ಪದ ಕೊಡಕೂಡದು. ಯೋಜನೆ ಕೈಬಿಡಬೇಕೆಂಬ ಪ್ರಮುಖ ಆಗ್ರಹದ ಸತ್ಯಾಗ್ರಹ ಇದಾಗಿತ್ತು. ಯಲ್ಲಾಪುರದ ಬಿಜೆಪಿ ಉಚ್ಚಾಟಿತ-ಕಾಂಗ್ರೆಸ್ ಸಹಚರ ಶಾಸಕ ಶಿವರಾಮ ಹೆಬ್ಬಾರ್, ಶಿರಸಿಯ ಕಾಂಗ್ರೆಸ್ ಎಮ್ಮೆಲ್ಲೆ ಭೀಮಣ್ಣ ನಾಯ್ಕ್, ಬಿಜೆಪಿ ಸಂಸದ ಕಾಗೇರಿ ಹೆಗಡೆಯಂಥ ಜನಪ್ರತಿನಿಧಿಗಳು ಮತ್ತು ಬಿಜೆಪಿ ಆಡಳಿತವಿದ್ದಾಗ ರಾಜ್ಯ ಜೀವ ವೈವಿದ್ಯ ಮಂಡಳಿ ಮತ್ತು ಪಶ್ಚಿಮ ಘಟ್ಟ ಕಾರ್ಯಪಡೆ ಎಂಬೆರಡು ಸರಕಾರಿ ಏಜೆನ್ಸಿಯ ಅಧ್ಯಕ್ಷರಾಗಿದ್ದ ಅನಂತ ಹೆಗಡೆ ಅಸೀಸರ ಪ್ರತಿಭಟನೆಯ ಮುಂಚೂಣಿಯಲ್ಲೇ ಮಿಂಚಿದ್ದರು.
ಯೋಜನೆಯಿಂದ ಬದುಕು ಬರ್ಬಾದಾಗುವ ಭಯದಲ್ಲಿದ್ದ ಮಂದಿ ಹಳ್ಳಿ-ಹಳ್ಳಿಗಳಿಂದ ಕಿತ್ತೆದ್ದು ಬಂದಿದ್ದರು. ಸಂಘ ಪರಿವಾರ ವ್ಯವಸ್ಥಿತವಾಗಿ ಹಸಿರಿನ ಹೆಸರಿನ ‘ಕೇಸರಿ ಪ್ರತಿಭಟನೆ’ ಆಯೋಜಿಸಿತ್ತು. ಪರಿಸರ ಹೋರಾಟಗಾರ ಎಂಬ ಮೆರಿಟ್‌ನಿಂದಲೇ ದೀರ್ಘ ಕಾಲ ನಿಗಮ-ಮಂಡಳಿಯ ಅಧಿಕಾರ ಅನುಭವಿಸಿ ಅನಂತ ಹೆಗಡೆ ಆಸೀಸರ ಮತ್ತು ಯಲ್ಲಾಪುರದ ಬಿಜೆಪಿ ಶಾಸಕನಾಗುವ ಕನಸು ಕಾಣುತ್ತಿರುವ ಪತ್ರಕರ್ತ ಹರಿಪ್ರಸಾದ್ ಕೋಣೆಮನೆಯಂತ ಕಟ್ಟರ್ ಆರೆಸೆಸ್ ಸಿದ್ಧಾಂತಿಗಳು ‘ಪರಿಸರಕಾರಣ’ದ ಕಾರ್ಯತಂತ್ರ ನಾಜೂಕಾಗಿ ಹೆಣೆದಿದ್ದರು. ಸಭೆ-ರಸ್ತೆ ತಡೆಯ ಸಮಾವೇಶಕ್ಕೆ ಬಂದಿದ್ದ ಗಂಡಸರು-ಹೆಂಗಸರು ಮತ್ತು ಸೆಲಿಬ್ರಿಟಿಗಳ ಕುತ್ತಿಗೆಯಲ್ಲಿ ತೂಗಾಡುತ್ತಿದ್ದ ಕೇಸರಿ ಶಾಲುಗಳು ಇದೊಂದು ರಹಸ್ಯ ಸಂಘೀ ಅಜೆಂಡಾ ಕಾರ್ಯಕ್ರಮವೆಂಬುದನ್ನು ನಿಸ್ಸಂಶಯವಾಗಿ ಸಾಬೀತುಪಡಿಸುವಂತಿತ್ತು.

ಯೋಜನೆಯಿಂದ ಅಪಾರ ಅರಣ್ಯ ನಾಶವಾಗುತ್ತದೆ, ಜೀವ ವೈವಿದ್ಯಕ್ಕೆ ಧಕ್ಕೆಯಾಗುತ್ತದೆ, ಕುಡಿಯುವ ಮತ್ತು ಕೃಷಿ ಜಲ ಮೂಲ ಬತ್ತುತ್ತದೆ ಎಂದು ಉದ್ದುದ್ದ ಪರಿಸರ ಕಳವಳದ ಭಾಷಣ ಬಿಗಿಯುವವರ ಕುತ್ತಿಗೆಯಲ್ಲಿರಬೇಕಾದ್ದು ಹಸಿರು ಶಾಲೇ ಹೊರತು ಕೇಸರಿ ಅಂಗ ವಸ್ತ್ರವಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರತಿಭಟನೆಯ ಅಸಲಿಯತ್ತಿನ ಬಗ್ಗೆಯೇ ಈಗ ನಾನಾ ನಮೂನೆಯ ಸಂಶಯ ಶುರುವಾಗಿದೆ. ಈ ರಸ್ತಾ ರೋಕೋ ಮತ್ತು ಸಭೆ ಸರಕಾರ ಮಣಿಸಲು ಮಾಡಿದ್ದಾ? ಅಥವಾ ಯೋಜನಾ ಧಾಳಿಯ ಭಯಕ್ಕೆ ಬಿದ್ದಿರು ಮಂದಿಯನ್ನು ಮರಳುಗೊಳಿಸಲು ಕೈಗೊಂಡಿದ್ದಾ? ಎಂಬ ಜಿಜ್ಞಾಸೆ ಬೇಡ್ತಿ ಕಣಿವೆಯಲ್ಲಿ ಅನುರಣಿಸುತ್ತಿದೆ. ಹತ್ತು ತಿಂಗಳ ಹಿಂದೆಯೇ ಕೇಂದ್ರ-ರಾಜ್ಯ ಸರಕಾರ ಒಪ್ಪಂದ ಮಾಡಿಕೊಂಡು ಡಿಪಿಆರ್‍‌ಗೆ ಹಸಿರು ನಿಶಾನೆ ತೋರಿಸಿರುವುದನ್ನು ಸಂಸದ-ಶಾಸಕ-ಸ್ವಾಮೀಜಿಯ ಪರಿಸರ ಪರಾಕ್ರಮಿಗಳ ತಂಡ ಬುದ್ಧಿಪೂರ್ವಕವಾಗೇ ಮುಚ್ಚಿಟ್ಟು ರಾಜಕೀಯ-ಧಾರ್ಮಿಕ ಮೈಲೇಜಿಗಾಗಿ ನಾಟಕವಾಡಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ.

ಇದನ್ನು ಓದಿದ್ದೀರಾ?: ದುಷ್ಟರ ದುರಾಸೆಯೂ; ಕಾಡು-ನಾಡು ನಡುವಿನ ಸಂಘರ್ಷವೂ

ಬೇಡ್ತಿ ನದಿ ತಿರುವು ಯೋಜನಾ ವಿರೋಧಿ ಸಭೆಯಲ್ಲಿ ಶಾಸಕ-ಸಂಸದರು ಮತ್ತು ಪರಿಸರ ಸಂಘಟನೆ ಶೂರರೆಲ್ಲ ಸ್ವರ್ಣವಲ್ಲಿ ಸ್ವಾಮಿಯೇ ತಮ್ಮ ಹೋರಾಟಕ್ಕೆ ಪ್ರೇರಣಾ ಶಕ್ತಿ. ಸ್ವಾಮಿಜೀ ಹೇಳಿದಂತೆ ಹೋರಾಟ-ಪ್ರತಿಭಟನೆ ನಡೆಸುತ್ತೇವೆ. ಸರಕಾರ ಡಿಪಿಆರ್ ತಯಾರಿಸದಂತೆ ಒತ್ತಡ ಹಾಕುತ್ತೇವೆ. ಸರಕಾರ ಮಣಿಯದಿದ್ದರೆ ಲಕ್ಷ ಜನರನ್ನು ಸೇರಿಸಿ ದೊಡ್ಡ ಆಂದೋಲನವೇ ಹಮ್ಮಿಕೊಳ್ಳುತ್ತೇವೆ. ಬೇಡ್ತಿ ಕೊಳ್ಳದ ಮಂದಿಯ ಜೊತೆಗೆಂದೆಂದಿಗೂ ಇರುತ್ತೇವೆ ಎಂದೆಲ್ಲ ವೀರಾವೇಶದ ಡೈಲಾಗ್ ಡಿಲೆವೆರಿ ಮಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಕಳೆದ ಜನವರಿಯಲ್ಲಿ ಶಿರಸಿಯಲ್ಲಿ ಸ್ವರ್ಣವಲ್ಲಿ ಸ್ವಾಮಿ ಅಧ್ವರ್ಯದಲ್ಲಿ ಜರುಗಿದ ವಿವಿಧ ಸಮುದಾಯದ ಸ್ವಾಮಿಗಳ-ಜನಪ್ರತಿನಿಧಿಗಳು ಸಮಾವೇಶದಲ್ಲೂ ವಿಸ್ತ್ರತ ಯೋಜನಾ ವರದಿ ತಯಾರಿ ಕೆಲಸ ಆರಂಭವಾಗದಂತೆ ತಡೆಹಾಕಿಯೇ ಸಿದ್ಧವೆಂದು ಶಾಸಕ-ಸಂಸದರು-ಕೊಳ್ಳ ಸಂರಕ್ಷಣಾ ಸಮೀತಿಯ ‘ತಜ್ಞರು’ ಮಾತುಗಾರಿಕೆಯ ಚಾಕಚಕ್ಯತೆ ಪ್ರದರ್ಶಿಸಿ ಜನರನ್ನು ಮೆಚ್ಚಿಸಿದ್ದರು.

bedti project2
ಯಲ್ಲಾಪುರದ ಪ್ರತಿಭಟನೆ… ಕೇಸರಿಮಯ

ವಸ್ತುಸ್ಥಿತಿ ಮಾತ್ರ ತಮಾಷೆಯಾಗಿದೆ. 2025ರ ಡಿಸೆಂಬರ್ 23ರಂದೇ ರಾಜ್ಯ ಮತ್ತು ಕೇಂದ್ರ ಸರಕಾರದ ನಡುವೆ ಡಿಪಿಆರ್ ತಯಾರಿಕೆ ಒಡಂಬಡಿಕೆ ಆಗಿಹೋಗಿದೆ! ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ(ಎನ್ಡಬ್ಯ್ಲುಡಿಎ) ಪರಿಷ್ಕೃತ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು 2025ರ ಅಗಸ್ಟ್ 12ರಂದು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು. ನಂತರ ಡಿಪಿಆರ್ ಸಿದ್ಧಪಡಿಸುವ ಅಧಿಕೃತ ತಿಳಿವಳಿಕಾ ಒಪ್ಪಂದ ರಾಜ್ಯದ ನೀರಾವರಿ ಇಲಾಖೆ ಮತ್ತು ಕೇಂದ್ರ ಸರಕಾರದ ಎನ್ಡಬ್ಯ್ಲುಡಿಎ ಮಾಡಿಕೊಂಡವೆ. ಈ ಕರಾರಿನಂತೆ ರಾಜ್ಯ ನೀರಾವರಿ ನಿಗಮ ಡಿಪಿಆರ್ ತಯಾರಿಕೆಗೆ ಅಧಿಕಾರಿಗಳು-ತಂತ್ರಜ್ಞರ ಸರಣಿ ಸಭೆಗಳನ್ನು ನಡೆಸಿದೆ.

ಕಳೆದ ಹತ್ತು ತಿಂಗಳಿಂದ ಡಿಪಿಆರ್ ಸಿದ್ಧತೆ ಪ್ರಕ್ರಿಯೆಯಲ್ಲಿದೆ. ಆರಂಭಿಕ ಹಂತದ ಫೋಟೋಗ್ರಾಫಿಕಲ್ ಡ್ರೋನ್ ಸರ್ವೆಗೆ ತೀರ್ಮಾನಿಸಲಾಗಿದೆ. ಮಾಜಿ ಮುಖಖ್ಯ ಮಂತ್ರಿ ಹಾಲಿ ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಬೇಡ್ತಿ-ವರದಾ ನದಿಗಳನ್ನು ಬಯಲು ಸೀಮೆಯತ್ತ ತಿರುಗಿಸುವ ಯೋಜನೆಗಾಗಿ ಪಟ್ಟು ಹಿಡಿದು ಪ್ರಯತ್ನಸಿತ್ತಿದ್ದಾರೆ. ಡಿಪಿಆರ್ ಶೀರ್ಘ ತಯಾರಿಕೆಗೆ ಬೆನ್ನು ಬಿದ್ದಿದ್ದಾರೆ. ಇತ್ತ ಉತ್ತರ ಕನ್ನಡದ ಸಂಸದ ಕಾಗೇರಿ ಹೆಗಡೆ ಯೋಜನೆಯ ವಿರುದ್ಧ ನಿಯೋಗವೊಂದನ್ನು ದಿಲ್ಲಿಗೆ ಕರೆದೊಯ್ದು ಐವರು ಸಚಿವರನ್ನು ಭೇಟಿ ಮಾಡಿಸಿದ್ದೇನೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಇದರಿಂದೇನೂ ಪರಿಣಾಮ ಆಗಿಲ್ಲ. ಕೇಂದ್ರ ಸರಕಾರ ಮತ್ತು ಬಿಜೆಪಿಯಲ್ಲಿ ಬಸು ಬೊಮ್ಮಾಯಿಯಿಗಿರುವ ವರ್ಚಸ್ಸು ಕಾಗೇರಿಗಿಲ್ಲ ಎಂದು ಬೇಡ್ತಿ ಕಣಿವೆಯ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

ಸಂಸದ ಕಾಗೇರಿ ಹಾಗೂ ಶಾಸಕರಾದ ಭೀಮಣ್ಣ ನಾಯ್ಕ್, ಶಿವರಾಮ ಹೆಬ್ಬಾರ್ ಸುಳ್ಳು ಹೇಳುತ್ತ ಓಡಾಡುತ್ತಿದ್ದಾರೆ. ಯೋಜನಾ ವಿರೋಧಿ ಸಭೆಗಳ ವೇದಿಕೆಗಳಲ್ಲಿ ಡಿಪಿಆರ್ ಆಗಲು ಬಿಡುವುದಿಲ್ಲ ಎಂದು ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. ಜನರು ತಮ್ಮ ವಿರುದ್ದ ತಿರುಗಿ ಬೀಳದಂತೆ ರಕ್ಷಣಾತ್ಮಕ ‘ಆಟ’ ಆಡುತ್ತಿದ್ದಾರೆ. ಬೇಡ್ತಿ ಕೊಳ್ಳದ ಮೇಲೆ ಹಾರಾಡುತ್ತ ಡಿಪಿಆರ್‍‌ಗೆ ಬೇಕಾದ ಮಾಹಿತಿ ಸಂಗ್ರಹಿತ್ತಿರುವ ಡ್ರೋನ್ ಸಂಸದ-ಶಾಸಕರ ಬೂಟಾಟಿಕೆ ಬಟಾಬಯಲಾಗಿಸುತ್ತಿದೆ. ಇಲ್ಲೊಂದಿಷ್ಟು ಪ್ರಶ್ನೆಗಳು ಎದುರಾಗುತ್ತವೆ. ಸರಕಾರದ ಡಿಪಿಆರ್ ತಯಾರಿಕೆ ನೀತಿ-ನಿರ್ಧಾರ ಯಾವ ಸ್ಥಿತಿ-ಗತಿಯಲ್ಲಿದೆ ಎಂಬ ಮಾಹಿತಿ ಪರಿಸರ ಹೋರಾಟ ಸುಪ್ರಸಿದ್ದ ನಾಯಕಾಗ್ರೇಸ-ಸ್ವಾಮೀಜಿಯ ನಂಬಿಗಸ್ಥ ಯೋಜನೆ ಮಾಹಿತಿದಾರ ಆಸೀಸರ ಹೆಗಡೆ, ಸಂಸದ ಕಾಗೇರಿ ಮತ್ತು ಎಮ್ಮೆಲ್ಲೆಗಳಾದ ಭೀಮಣ್ಣ ನಾಯ್ಕ್, ಶಿವಾಮ ಹಬ್ಬಾರ್ ತಿಳಿದುಕೊಳ್ಳಲಿಲ್ಲವೇ? ಡಿಪಿಆರ್‍‌ಗೆ ಸರಕಾರ ಒಪ್ಪಿಗೆ ಕೊಟ್ಟಿರುವುದು ಗೊತ್ತಿದ್ದೂ ಈ ರಾಜಕಾರಣಿಗಳು ಮತ್ತು ಪರಿಸರಕಾರಣಿಗಳು ಒಂದಾಗಿ ಮಾರ್ಗದರ್ಶನ ಮಾಡುವ ಸ್ವಾಮಿಗೇ ಮಾರ್ಗ ತಪ್ಪಿಸಿ ರಸ್ತಾ ರೋಕೋ ಮಾಡಿದರೇ? ಅಥವಾ ಸ್ವಾಮಿಜೀಯೂ ಡಿಪಿಆರ್ ಪ್ರಕ್ರಿಯೆ ಶುರುವಾಗಿರುವ ಅರಿವಿದ್ದರೂ ಹೋರಾಟದ ಪ್ರಹಸನಕ್ಕೆ ಸಹಕರಿಸದರೇ? ಎಂಬ ಶಂಕೆಗಳೀಗ ಜನರ ತಲೆ ತಿನ್ನುತ್ತಿವೆ.

ಈ ಎಂಪಿ-ಎಮ್ಮೆಲ್ಲೆಗಳ ಎಡಬಿಡಂಗಿತನ ಸಾವಿರಾರು ಜನರ ಎದುರೆ ಪರಿಸರವಾದಿ ಬಿ.ಎಂ.ಕುಮಾರಸ್ವಾಮಿ ಬಿಚ್ಚಿಟ್ಟರು. ಜಿಲ್ಲೆಯ ಜನಪ್ರತಿನಿಧಿಗಳು ಬೇಲಿ ಮೇಲೆ ಕುಳಿತು ಈ ಕಡೆ ಹಾರಬೇಕೋ ಆ ಕಡೆ ಹಾರಬೇಕೋ ಎಂಬ ತಳಮಳದಲ್ಲಿದ್ದಾರೆ. ಭಾಷಣ ಮಾಡುವ ಜನಪ್ರತಿನಿಧಿಗಳು ಬರಿ ಆಶ್ವಾಸನೆ ಕೊಡುತ್ತಿದ್ದಾರೆಯೇ ಹೊರತು ನಿಲುವು ಸ್ಪಷ್ಟಪಡಿಸುತ್ತಿಲ್ಲ ಎಂದು ಕುಮಾರಸ್ವಾಮಿ ಎಂಪಿ-ಎಮ್ಮೆಲ್ಲೆಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಇದರಿಂದ ಕೆರಳಿದ ಶಾಸಕ ಹೆಬ್ಬಾರ್ ಜಗಳಕ್ಕೆ ನಿಂತರು. ಶಿರಸಿ ಶಾಸಕ ಭೀಮಣ್ಣ ನಾಯ್ಕ್ ಹೆಬ್ಬರ್ಗೆ ಸಾತ್ ಕೊಟ್ಟರು. ಮಾತಿಗೆ ಮತು ಬೆಳೆಯಿತು. ಕುಮಾರಸ್ವಾಮಿ ಕೈಲಿದ್ದ ಮೈಕ್ ಕಸಿಯಲು ಹೆಬ್ಬಾರ್ ಮುನ್ನುಗ್ಗಿದರು. ಜನರು ಕಕ್ಕಾಬಿಕ್ಕಿಯಾದರು. ತಕ್ಷಣ ಮಧ್ಯ ಪ್ರವೇಶಿಸಿದ ಸಂಸದ ಕಾಗೇರಿ ಮೈಕ್ ತೆಗೆದುಕೊಂಡು ತಮ್ಮ ಮತ್ತು ಶಾಸಕರ ಪರ ವಕಾಲತ್ತಿಗಿಳಿದರು.

ನೀವು ಜನಪ್ರತಿನಿಧಿಗಳ ಕುರಿತು ಕೇವಲವಾಗಿ ಮಾತಾಡಬಾರದು, ನೀವು ಒಂದು ದಿನ ಬಂದು ಭಾಷಣ ಮಾಡಿಹೋಗುವವರು. ಜನರನ್ನು ಉಳಿಸಿಕೊಳ್ಳುವುದು ವಿಜ್ಞಾನಿಗಳಾದ ನಿಮಗಿಂತ ರಾಜಕಾರಣಿಗಳಾದ ನಮಗೆ ಮುಖ್ಯ. ನಿಮ್ಮಂಥ ವಿಜ್ಞಾನಿಗಳೇ ಇಂಥ ಅವೈಜ್ಞಾನಿಕ ಯೋಜನೆಗೆ ಶಿಫಾರಸು ಮಾಡೋರು. ಆಮೇಲೆ ಬೇಡವೆಂದು ಭಾಷಣ ಮಾಡೋರೂ ಅದೇ ವಿಜ್ಞಾನಿಗಳು. ಹೀಗಾಗಿ ಜನಪ್ರತಿನಿಧಿಗಳಿಗೆ ಗೊಂದಲವಾಗುತ್ತಿದೆ. ನಾವು ಜನಪ್ರತಿನಿಧಿಗಳು ಯೋಜನೆ ನಿಲ್ಲಿಸಲು ಪ್ರಯತ್ನ ಮಾಡುತಿದ್ದೇವೆ. ನಿಮ್ಮ ಪ್ರಭಾವ ಯೋಜನೆ ನಿಲ್ಲಿಸಲು ಎಲ್ಲೆಲ್ಲಿ ಬೀರಿದ್ದೀರಿ? ಎಂದೆಲ್ಲ ಕುಮಾರಸ್ವಾಮಿ ಬಾಯಿ ಮುಚ್ಚಿಸಿದ ಸಂಸದ ಕಾಗೇರಿ ಮಂದಿ ಮುಂದಾದ ಮುಖಭಂಗ-ಮುಜುಗರದ ಡ್ಯಾಮೇಜ್ ಕಂಟ್ರೋಲ್‌ಗೆ ತಿಣುಕಾಡಿದರು. ಕಾಗೇರಿ ಏರು ಸ್ವರದಲ್ಲಿ ರಾಜಕಾರಣಿಗಳ ಹೆಚ್ಚುಗಾರಿಕೆ ಹೇಳಿಕೊಂಡಿದ್ದು ಸಿಡಿಮಿಡಿಗೊಂಡಿದ್ದ ಶಾಸಕದ್ವಯರಾದ ಹೆಬ್ಬಾರ್-ನಾಯ್ಕ್‌ರನ್ನು ಸಮಾಧಾನವೇನೋ ಮಾಡಿತು. ಆದರೆ ಈ ಜಗಳ್ಬಂದಿ ಮತ್ತು ಸಮಾವೇಶದಲ್ಲಿ ಕಾಣಿಸಿದ ಕೇಸರಿ ಶಾಲುಗಳು ಬೇಡ್ತಿ ಹೋರಾಟದ ಹಿಂದೆ-ಮುಂದೆ ಇರುವ ಒಬ್ಬೊಬ್ಬ ಮುಂದಾಳಿನದು ಒಂದೊಂದು ಒಳಉದ್ದೇಶ ಎಂಬುದನ್ನು ಜನರಿಗೆ ಖಾತ್ರಿಪಡಿಸಿತು.

ಇದನ್ನು ಓದಿದ್ದೀರಾ?: ಅರುಣಾಚಲ ಗಡಿ ಸಮೀಪ ಚೀನಾದ ಬೃಹತ್ ಅಣೆಕಟ್ಟು ನಿರ್ಮಾಣ ಚುರುಕು: ಉಪಗ್ರಹ ದತ್ತಾಂಶದಿಂದ ಬಹಿರಂಗ

ಹಾಗೆ ನೋಡಿದರೆ ಪರಿಸರ ಗುತ್ತಿಗೆ ಪಡೆದಂತೆ ಮಾತಾಡುವ ಕಾಗೇರಿ-ಆಸೀಸರರಿಗಿಂತ ಹೆಚ್ಚು ಬದ್ಧತೆಯಿಂದ ಬೇಡ್ತಿ ಮತ್ತು ಸಿದ್ದಾಪುರದ ಅಘನಾಶಿನಿ ನದಿ ತಿರುವು ಯೋಜನೆಗಳನ್ನು ಅರಣ್ಯ ಅತಿಕ್ರಮಣದಾರರ ಹಕ್ಕು ಹೋರಾಟಗಾರರ ಸಮೀತಿಯ ಅಧ್ಯಕ್ಷ ರವೀಂದ್ರ ನಾಯ್ಕ್ ವಿರೋಧಿಸುತ್ತಿದ್ದಾರೆ. ಅರಣ್ಯ ಅತಿಕ್ರಮಿಸಿ ಉಳುಮೆ ಮಾಡುತ್ತಿರುವ ಕಾಡಿನ ವಾಸಿಗಳಿಗೆ ಭೂ ಒಡೆತನ ಕೊಡಿಸಲು ಕಳೆದ 35 ವರ್ಷಗಳಿಂದ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಹೋರಾಡುತ್ತಿರುವ ರವಿ ನಾಯ್ಕ್ ಈಗ ಬೇಡ್ತಿ ನದಿ, ಅಘನಾಶಿನಿ ನದಿ ತಿರುವು ಯೋಜನೆಗಳು ಮತ್ತು ಕಸ್ತೂರಿರಂಗನ್ ವರದಿ ಜಾರಿಯಿಂದ ಗಂಡಾಂತರಕ್ಕೀಡಾಗುವ ವನವಾಸಿಗಳನ್ನು ಕಟ್ಟಿಕೊಂಡು ಸಂಘರ್ಷಕ್ಕೆ ಇಳಿದಿದ್ದಾರೆ. ರವಿ ನಾಯ್ಕ್ ಸಭೆಗಳಿಗೆ ಸೇರುತ್ತಿರುವ ಜನಸ್ತೋಮ ಕಂಡು ಕಂಗಾಲಾಗಿರುವ ಸಂಘೀಗಳು ತಮ್ಮ ‘ಸಾಂಪ್ರದಾಯಿಕ’ ಪರಿಸರ ಹೋರಾಟ ಹೈಜಾಕ್ ಆಗುತ್ತಿದೆ ಎಂಬ ಭಯಕ್ಕೆ ಬಿದ್ದಿದ್ದಾರೆ.

bedti project3
ಶಿರಸಿ ಸಮಾವೇಶ… ಸ್ವರ್ಣವಲ್ಲಿ ಸ್ವಾಮೀಜಿ

ಮತ್ತೊಂದೆಡೆ ರವಿ ನಾಯ್ಕರನ್ನೇ ಎಮ್ಮೆಲ್ಲೆ ಮಾಡುವ ಆಮಿಷದಿಂದ ಅಪಹರಿಸಲು ಸಂಸದ ಕಾಗೇರಿ ಬಳಗ ಯೋಚಿಸುತ್ತಿದೆ ಎಂಬ ಸುದ್ದಿಯೂ ಹಬ್ಬಿದೆ. ಮೂರು ದಶಕದಿಂದ ಹಲವು ಚಳವಳಿಗಳನ್ನು ಕಟ್ಟಿರುವ ರವಿ ನಾಯ್ಕ್ ಹೆಚ್ಚುಕಮ್ಮಿ ಅಷ್ಟೇ ವರ್ಷಗಳಿಂದ ಎಮ್ಮೆಲ್ಲೆ, ಎಮ್ಮೆಲ್ಸಿ, ಎಂಪಿ ಕನಸು ಕಾಣುತ್ತಿದ್ದಾರೆ. ರವಿ ಹೋರಾಟಕ್ಕೆ ಜನರು ಸೇರುತ್ತಾರೆಯೇ ಹೊರತು ಅದು ಮತವಾಗಿ ಪರಿವರ್ತನೆ ಆಗುತ್ತಿಲ್ಲ. ಶಾಸಕನಾಗಲು ಕಾಂಗ್ರೆಸ್, ಪಕ್ಷೇತರ, ಜೆಡಿಎಸ್ ಎಂದೆಲ್ಲ ಓಡಾಡಿ ಮತ್ತೆ ಕಾಂಗ್ರೆಸ್ಸಿಗೆ ವಾಪಸಾಗಿರುವ ರವಿ ನಾಯ್ಕ್ ಕಳೆದ ಲೋಕಸಭಾ ಚುನಾವಣೆ ಸಂರ್ಭದಲ್ಲಿ ಕಾಂಗ್ರೆಸ್ ಟಿಕೆಟ್ ಕೇಳಿದ್ದರು. ಸ್ವಜಾತಿ ಸಚಿವ ಮಧು ಬಂಗಾರಪ್ಪ ಮತ್ತವರ ಸೋದರ ಮಾವ-ಶಿರಸಿ ಶಾಸಕ-ಭೀಮಣ್ಣ ನಾಯ್ಕ್ ಅಡ್ಡಗಾಲು ಹಾಕಿದರೆಂಬ ಸಿಟ್ಟು ರವಿಯಲ್ಲಿ ಮಡುಗಟ್ಟಿದೆ. ಕಾಂಗ್ರೆಸಲ್ಲುಳಿದರೆ ಉದ್ಧಾರವಾಗೋದಿಲ್ಲ ಎಂಬ ಆತಂಕ ರವಿ ನಾಯ್ಕರನ್ನು ಕಾಡುತ್ತಿದೆ.

ರವಿ ನಾಯ್ಕರ ಹತಾಶೆ ಬಳಸಿಕೊಂಡು ತನ್ನನ್ನು ಮಣಿಸಿದ ಕಾಂಗ್ರೆಸ್ಸಿನ ಭೀಮಣ್ಣ ನಾಯ್ಕ್ ಮತ್ತು ಸ್ವಪಕ್ಷದ ಹಿತಶತ್ರು ಸಿದ್ದಾಪುದ ಕೆ.ಜಿ.ನಾಯ್ಕರನ್ನು ಹಣಿಯಲು ಕಾಗೇರಿ ಯೋಜನೆ ಹಾಕಿದ್ದಾರೆನ್ನಲಾಗಿದೆ. ಶಿರಸಿಯಲ್ಲಿ ರವಿ ನಾಯ್ಕರನ್ನು ಬರಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಕಮಲದ ಕಲಿಯಾಗಿಸುವ ಯೋಚನೆ ಕಾಗೇರಿಯವರದೆಂಬ ಮಾತು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ರವಿ ನಾಯ್ಕ್ ಸಂಘೀಗಳ ಪರಿಸರ ರಾಜಕಾರಣಕ್ಕೆ ಸವಾಲಾಗುತ್ತಾರೋ? ಅಥವಾ ರವಿ ನಾಯ್ಕರೇ ಬಿಜೆಪಿ ಪಾಲಾಗುತ್ತಾರೋ? ಕಾದು ನೋಡಬೇಕಿದೆ.

-ವಲಲ

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕದ ಮತಪಟ್ಟಿಯಿಂದ ಒಬ್ಬ ಅರ್ಹ ಮತದಾರನನ್ನೂ ಕೈಬಿಟ್ಟಿಲ್ಲವೇ? ವಾಸ್ತವ ಬೇರೆಯೇ ಇದೆ- ಇಲ್ಲಿದೆ ಸಮಗ್ರ ಮಾಹಿತಿ

ಕರ್ನಾಟಕದ ಅಂತಿಮ ಮತದಾರರ ಪಟ್ಟಿಯಲ್ಲಿ ಒಬ್ಬ ಅರ್ಹ ನಾಗರಿಕನನ್ನೂ ಕೈಬಿಟ್ಟಿಲ್ಲ, ಒಬ್ಬ...

ಮಂಗಳೂರು | ಮಣ್ಣಿನ ಸವಕಳಿ ತಡೆಗೆ ನಂದಿನಿ ತೀರದಲಿ ಲಾವಂಚ ನಾಟಿ

ಮಳೆಗಾಲದಲ್ಲಿ ಉಂಟಾಗುವ ತೀವ್ರ ಮಣ್ಣಿನ ಸವಕಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನವಮಂಗಳೂರು ಬಂದರು...

ಪಕ್ಷಾತೀತವಾಗಿ 73ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್ ಯಶಸ್ವಿಗೊಳಿಸಿ: ಸಚಿವ ಎನ್. ಚಲುವರಾಯಸ್ವಾಮಿ ಕರೆ

"ನಾನು ಕ್ರೀಡಾಭಿಮಾನಿಯೇ ಹೊರತು ಕ್ರೀಡಾಪಟುವಲ್ಲ. ಆದರೆ, ನಮ್ಮ ಜಿಲ್ಲೆಯ ಕೀರ್ತಿಗಾಗಿ ಸಹಕಾರ...

ಮಧ್ಯಾಹ್ನವೇ ಮಳೆ ಅಬ್ಬರ: ಇನ್ನೂ 3 ದಿನ ರಾಜ್ಯದ 13 ಜಿಲ್ಲೆಗಳಿಗೆ ಭಾರೀ ಮಳೆ

ಕಳೆದ ಕೆಲವು ದಿನಗಳಿಂದ ಕಾಣೆಯಾಗಿದ್ದ ಮಳೆ, ಮತ್ತೆ ಆರ್ಭಟಿಸಲಾರಂಭಿಸಿದೆ. ಇಂದು (ಮಂಗಳವಾರ)...