“ಹೊಸ ನುಡಿಗಟ್ಟುಗಳನ್ನು ಕೊಟ್ಟ ಚಂಪಾ, ಮಹಾದೇವ ಬಣಕಾರ ಆದಿಯಾಗಿ ಕನ್ನಡ ಭಾಷೆಗೆ ಮೆರಗು ತಂದವರು. ಇವರ ಬಗ್ಗೆ ಚಿಂತನ ಮಂಥನ ನಡೆಯ ಬೇಕು” ಎಂದು ಡಾ.ಎಸ್.ಪಿ.ಗೌಡರ ಹೆಳಿದರು.
ಹಾವೇರಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಕರುನಾಡ ಕನ್ನಡ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ವತಿಯಿಂದ ಎರಡನೇ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದ ಮಧ್ಯಾಹ್ನ ‘ಕನ್ನಡ ಸಾಹಿತ್ಯಕ್ಕೆ ಹಾವೇರಿ ಜಿಲ್ಲೆ ಕೊಡುಗೆ’ ಎಂಬ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಗೋಷ್ಠಿಯ ಆಶಯ ನುಡಿಗಳನ್ನಾಡಾದ ಡಾ. ಕಾಂತೇಶ ಅಂಬಿಗೇರ ಅವರು “ಬೌಗೋಲಿಕ ಚೌಕಟ್ಟಿನಲ್ಲಿ ಇಲ್ಲಿಯ ಸಾಹಿತಿಗಳ ಮೌಲ್ಯಮಾಪನ ಮಾಡಬಾರದು. ಅನೇಕರು ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿದ್ದಾರೆ” ಎಂದರು.
ಡಾ. ಪುಷ್ಪಾವತಿ ಶಲವಡಿಮಠ, ಲಿಂಗರಾಜ ಸೊಟ್ಟಪ್ಪನವರ, ಡಾ, ಹನುಮಂತಪ್ಪ ಸಂಜೀವಣ್ಣನವರ, ನಾಗರಾಜ ಮುಂತಾದವರು ಜಿಲ್ಲೆಯ ಸಾಹಿತ್ಯದ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊAಡರು.
ಎರಡನೇ ಕವಿ ಗೋಷ್ಠಿಯಲ್ಲಿ ಹಿರಿಯ ಕವಿ ಸತೀಶ ಕುಲಕರ್ಣಿ ಅವರ ಸಾರಥ್ಯದಲ್ಲಿ ನಡೆದಿದ್ದು, ನಾಡಿನ ಬೇರೆ ಬೇರೆ ಭಾಗದ ೨೦ ಕವಿಗಳು ಕಾವ್ಯ ವಾಚನ ಮಾಡಿದರು.
ಆಶಯ ನುಡಿಗಳನ್ನಾಡಿದ ಪ್ರೊ. ಎಚ್.ಎ. ಭಿಕ್ಷಾವರ್ತಿಮಠ “ಶಾಯರಿ ಕಾವ್ಯದ ವಿಸ್ಮಯಕಾರಿ ಪ್ರಯೋಗ. ಹೊಸ ಕವಿಗಳು ಗಝಲ್ ಮತ್ತು ಶಾಯರಿಗಳನ್ನು ಬರೆಯಬೇಕು” ಎಂದರು.
ಧಾರವಾಡ, ಕಾರವಾರ, ರಾಯಚೂರ, ಬೆಂಗಳೂರು ಬೇರೆ ಬೇರೆ ಭಾಗದ ಕವಿಗಳು ಪಾಲ್ಗೊಂಡಿದ್ದು ವಿಶೇಷವಿತ್ತು. ಸರ್ವಶ್ರೀ ನಾಗರಾಜ ಹುಡೇದ, ಶೋಭಾ ತುಂಗಳದ, ಸಂಜೀವ ಈಶಾಪೂರ, ಭಾರತಿ ಮಲ್ಲಿಕಾರ್ಜುನಗೌಡ, ಬಾಲಚಂದ್ರ ಹೆಗಡೆ, ಪ್ರಶಾಂತ ದೈವಜ್ಞ, ರವಿ ಚಲವಾದಿ, ಗಿರೀಶ ಶಿರೋಳ್ಕರ್ ಮುಂತಾದ ೨೦ ಕವಿಗಳು ಕಾವ್ಯ ವಾಚಿಸಿದರು.
ಯುದ್ಧ, ಭ್ರೂಣ ಹತ್ಯೆ, ಅತ್ಯಾಚಾರ ಮುಂತಾದ ವಸ್ತುಗಳುಳ್ಳ ಕವಿತೆಗಳಿದ್ದವು. ತಡರಾತ್ರಿಯ ವರೆಗೆ ಅಂಬೇಡ್ಕರ್ ಸಭಾಭವನ ಸಾಹಿತ್ಯ ಪ್ರೇಮಿಗಳಿಂದ ತುಂಬಿದ್ದು ಸಮ್ಮೇಳನದ ಯಶಸ್ಸಿಗೆ ಸಾಕ್ಷಿಯಾಗಿತ್ತು.
ದೂರದ ಮುಂಡಗೋಡದಿಂದ ತುಸು ಅಳುಕಿನಿಂದಲೇ ಸಾಹಿತ್ಯ ಸಮ್ಮೇಳನಕ್ಕೆ ಬಂದ ನನಗೆ ಸಮಾಧಾನವಾಗಿದೆ. ಹಾವೇರಿ ಜನರ ಪ್ರೀತಿಯನ್ನು ಮರೆಯಲಾಗದು” ಎಂದು ಸಂಸ್ಥಾಪಕ ಅಧ್ಯಕ್ಷ ಎಸ್.ಡಿ. ಮುಡೆಣ್ಣವರ ಭಾವುಕರಾಗಿ ನುಡಿದ ಮಾತ ಅಕ್ಷರಶಃ ಸತ್ಯವಾಗಿತ್ತು.




