ರಾಯಚೂರು ಜಿಲ್ಲೆ ಕವಿತಾಳ ಪಟ್ಟಣದ ವಿವಿಧ ಸರ್ಕಾರಿ ಕಚೇರಿಗಳು ಲಕ್ಷಗಟ್ಟಲೇ ವಿದ್ಯುತ್ ಬಿಲ್ ಬಾಕಿ ಉಳಿದುಕೊಂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಜೆಸ್ಕಾಂ ನಗರದ ಜಲಸಂಪನ್ಮೂಲ ಕಚೇರಿಗೆ ಏಳು ತಿಂಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.
ಜಲಸಂಪನ್ಮೂಲ ಇಲಾಖೆ ಉಪ ವಿಭಾಗದಲ್ಲಿ ಒಬ್ಬ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಇಬ್ಬರು ಸಹಾಯಕ ಎಂಜಿನಿಯರ್ ಮತ್ತು ಒಬ್ಬ ಕಿರಿಯ ಎಂಜಿನಿಯರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಲ್ ಪಾವತಿಸುವಂತೆ ಜೆಸ್ಕಾಂ ಸಿಬ್ಬಂದಿ ಹಲವು ಬಾರಿ ಹೇಳಿದರೂ ಅಧಿಕಾರಿಗಳು ಈ ಬಗ್ಗೆ ಗಮನಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಸಂಪರ್ಕ ಕಡಿತ ಮಾಡಿದ್ದು, ಕಳೆದ ಏಳು ತಿಂಗಳಿಂದ ಕಚೇರಿ ಕತ್ತಲಲ್ಲಿ ಮುಳುಗಿದೆ. ಕಚೇರಿ ಸುತ್ತಮುತ್ತ ಮುಳ್ಳು ಗಿಡಗಳು ಬೆಳೆದಿವೆ. ವಿಷ ಜಂತುಗಳ ಹಾವಳಿ ಹೆಚ್ಚಿದೆ, ಅಲ್ಲಿನ ಮನೆಗಳಲ್ಲಿ ವಾಸಿಸುವ ಎಂಜಿನಿಯರ್ ಮತ್ತು ಸಿಬ್ಬಂದಿ ಭಯದ ವಾತಾವರಣದಲ್ಲಿ ಓಡಾಡುವಂತಾಗಿದೆ ಎನ್ನುತ್ತಾರೆ ಸುತ್ತ ಮುತ್ತಲಿನ ನಿವಾಸಿಗಳು.
ಮುಖ್ಯ ಕಾಲುವೆಯ ಶಾಶ್ವತ ದುರಸ್ತಿ ಬಳಿಕ ನೀರು ನಿರ್ವಹಣೆ ಹೊರತುಪಡಿಸಿ ಹೆಚ್ಚುವರಿ ಅನುದಾನ ಬಿಡುಗಡೆ ಆಗದಿರುವುದು ಮತ್ತು ಕಚೇರಿಯಲ್ಲಿಯೇ ಕುಳಿತು ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲದ ಕಾರಣ ವಿದ್ಯುತ್ ಬಿಲ್ ಪಾವತಿಗೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.
ಜಲಸಂಪನ್ಮೂಲ ಕಚೇರಿ 8 ಸಾವಿರ ರೂ, ಪ್ರವಾಸಿ ಮಂದಿರ 20 ಸಾವಿರ ರೂ, ಸಮುದಾಯ ಆರೋಗ್ಯ ಕೇಂದ್ರ 1.8 ಲಕ್ಷ ರೂ, ವಸತಿ ಸಹಿತ ಪದವಿ ಕಾಲೇಜು 1.8 ಲಕ್ಷ ರೂ, ನೆಮ್ಮದಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ಪಟ್ಟಣ ಪಂಚಾಯಿತಿ ಕಾರ್ಯಾಲಯ, ಬಾಲಕ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಕ್ರಮವಾಗಿ 12 ಸಾವಿರದಿಂದ 25 ಸಾವಿರ ರೂ.ವರೆಗೆ ಬಾಕಿ ಉಳಿಸಿಕೊಂಡಿವೆ.
ಸಾರ್ವಜನಿಕರು ವಿದ್ಯುತ್ ಬಿಲ್ ಪಾವತಿ ಮಾಡುವುದು ಒಂದು ದಿನ ತಡವಾದರೆ ಸಂಪರ್ಕ ಕಡಿತ ಮಾಡುತ್ತಾರೆ, ಸರ್ಕಾರಿ ಕಚೇರಿಗಳು ಲಕ್ಷಗಟ್ಟಲೇ ಬಾಕಿ ಉಳಿಸಿಕೊಂಡರೂ ಅವರ ಮೇಲೆ ಕ್ರಮ ಕೈಗೊಳ್ಳದೇ ಇರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಬೇಸರ ಹೊರ ಹಾಕುತ್ತಿದ್ದಾರೆ.