ಕನ್ನಡ ಭಾಷೆಯ ಪೋಷಣೆ, ಉಳಿವು ಹಾಗೂ ಬೆಳವಣಿಗೆಗೆ ಕನ್ನಡ ಅಧ್ಯಾಪಕರು ಸಂಘಟಿತರಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಅಧ್ಯಾಪಕರ ಸಂಘಗಳು ಆರ್ಥಿಕವಾಗಿ ಬಲಿಷ್ಠವಾಗಬೇಕಾದರೆ ಸದಸ್ಯರು ದೇಣಿಗೆ ಹಾಗೂ ವಂತಿಗೆ ನೀಡುವ ಮೂಲಕ ಸಂಘದ ಚಟುವಟಿಕೆಗಳಿಗೆ ಬೆಂಬಲ ನೀಡಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ ಹೇಳಿದರು.
ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಘವು ಬರಹಗಾರರು ಹಾಗೂ ಲೇಖಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ವಿವಿಧ ವಿಷಯಗಳ ಕುರಿತು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ಮಾತನಾಡಿ, ‘ಕನ್ನಡ ಅಧ್ಯಯನ ಸಂಸ್ಥೆ ಮಹತ್ವದ ಹಾಗೂ ಪವಿತ್ರ ಸ್ಥಳವಾಗಿದೆ. ಹಲವು ಸಂಘಗಳು ಆರಂಭಗೊಂಡು ಕೆಲವೇ ದಿನಗಳಲ್ಲಿ ನಿಷ್ಕ್ರಿಯವಾಗುತ್ತವೆ. ಆದರೆ ಕನ್ನಡ ಅಧ್ಯಾಪಕರ ಸಂಘವು ದೀರ್ಘಕಾಲ ಗಟ್ಟಿಯಾಗಿ ಬೆಳೆದು, ಶೈಕ್ಷಣಿಕ ಹಾಗೂ ಬೌದ್ಧಿಕ ಚಟುವಟಿಕೆಗಳಿಗೆ ವೇದಿಕೆಯಾಗಬೇಕು’ ಎಂದರು.

‘ಅಧ್ಯಾಪಕರು ಬೌದ್ಧಿಕ ವಿಕಾಸಕ್ಕೆ ಪೂರಕವಾದ ವಾತಾವರಣ ನಿರ್ಮಿಸುವತ್ತ ಗಮನಹರಿಸಬೇಕು. ಪ್ರಸ್ತುತ ಅಧ್ಯಯನದ ಆಸಕ್ತಿ ಕ್ಷೀಣಿಸುತ್ತಿದ್ದು, ಅಧ್ಯಾಪಕರು ತಮ್ಮ ಬೋಧನಾ ಕಾರ್ಯ ಹಾಗೂ ವಿದ್ಯಾರ್ಥಿಗಳ ಕಲಿಕೆಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪಾಲಕರು ಕೂಡ ಮಕ್ಕಳಿಗೆ ಕನ್ನಡ ಅಧ್ಯಯನದತ್ತ ಹೆಚ್ಚಿನ ಪ್ರೋತ್ಸಾಹ ನೀಡುತ್ತಿಲ್ಲ. ಅವಕಾಶಗಳು ಹೆಚ್ಚಾಗುತ್ತಿದ್ದರೂ ಗುಣಮಟ್ಟ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದು ಹೇಳಿದರು.
This video cannot be played in your browser. Open the video directly

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಹಾಗೂ ಕಲಾ ನಿಕಾಯದ ಡೀನ್ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ‘ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ಅಧ್ಯಾಪಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಅಧ್ಯಾಪಕರಲ್ಲಿ ಪರಸ್ಪರ ಸಹಕಾರ, ಸಹೃದಯತೆ, ಗೌರವ, ಪ್ರೀತಿ ಮತ್ತು ವಿಶ್ವಾಸ ಬೆಳೆಸಿಕೊಳ್ಳಬೇಕು’ ಎಂದರು.
‘ಅಧ್ಯಾಪಕರು ನಿರಂತರವಾಗಿ ಓದುವ ಹಾಗೂ ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸ್ಪಷ್ಟ ಗುರಿ ಹೊಂದಿ, ಹೊಸ ಕನಸುಗಳನ್ನು ಕಟ್ಟಿಕೊಂಡು ಕನ್ನಡ ಕಟ್ಟುವ ಜೊತೆಗೆ ಸಂಘವನ್ನು ಬಲಪಡಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಚಿತ್ಕಳಾ ಮಠಪತಿ, ಡಾ. ಅನ್ನಪೂರ್ಣ ಪಾಟೀಲ್, ಡಾ. ಶ್ರೀಶೈಲ್ ನಾಗರಾಳ, ಡಾ. ಸುರೇಂದ್ರ ಕೆರಮಗಿ, ಡಾ. ಅಮೃತಾ ಕಟಕೆ, ಕುವೆಂಪು ಭಾಷಾ ಭಾರತಿಯ ಅನುವಾದ ಪ್ರಶಸ್ತಿಗೆ ಭಾಜನರಾದ ಡಾ. ಸೂರ್ಯಕಾಂತ ಸುಜಾತ್ ಹಾಗೂ ಹೊಸದಾಗಿ ಪುಸ್ತಕ ಪ್ರಕಟಿಸಿದ ಡಾ. ಮಲ್ಲಿನಾಥ ತಳವಾರ, ಡಾ. ಮಿರಾಜ್ ಪಾಷಾ, ಡಾ. ಸಂಗಣ್ಣ ಸಿಂಗೆ ಮತ್ತು ಡಾ. ದತ್ತಾತ್ರೇಯ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕನ್ನಡ ಅಧ್ಯಾಪಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಸಂಘದ ಅಧ್ಯಕ್ಷ ಡಾ. ಖಾಜಾವಲಿ ಈಚನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಡಾ. ಪಂಡಿತ್ ಬಿ.ಕೆ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೊ. ಸೂರ್ಯಕಾಂತ ಅತನೂರ ಅವರು ಸಂಘದ ಬೇಡಿಕೆಗಳ ಪಟ್ಟಿಯನ್ನು ಮಂಡಿಸಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಿಗೆ ಸಲ್ಲಿಸಿದರು.
ಬಸವರಾಜ ಶೃಂಗೇರಿ ಪ್ರಾರ್ಥಿಸಿದರು. ಡಾ. ಕಪಿಲ್ ಚಕ್ರವರ್ತಿ ನಿರೂಪಿಸಿದರು. ಡಾ. ಶಿವಶರಣಪ್ಪ ಮೋತಕಪಳ್ಳಿ ವಂದಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ವರದಕ್ಷಿಣೆ ಕಿರುಕುಳ ಆರೋಪ; ಮಹಿಳೆ ಅನುಮಾನಾಸ್ಪದ ಸಾವು!
ಕಾರ್ಯಕ್ರಮದಲ್ಲಿ ಮಹಿಳಾ ಪ್ರತಿನಿಧಿ ಸುವರ್ಣ ವಜ್ಜೆ ಸೇರಿದಂತೆ ಸಂಘದ ಪದಾಧಿಕಾರಿಗಳಾದ ಡಾ. ಜಗಪ್ಪ ತಳವಾರ, ಡಾ. ಮಲ್ಲಪ್ಪ ಮಾನೇಗಾರ, ಡಾ. ರೇವಣಸಿದ್ಧ ನಿಂಗಾನಾಯ್ಕ, ಡಾ. ರವೀಂದ್ರ ಕುಂಬಾರ್, ಡಾ. ದಯಾನಂದ ಕಾಂಬಳೆ, ಡಾ. ಗುಲಾಮ್ ಮಹೆಬೂಬ್, ಡಾ. ಸಂಗೀತಾ ಹಿರೇಮಠ, ಡಾ. ಮರೆಪ್ಪ ಮೇತ್ರೆ, ಮಾರುತಿ ಮಾರ್ಪಳ್ಳಿ, ಡಾ. ರುಕ್ಮಿಣಿ, ಭೀಮಣ್ಣ ಬೆಡಕಪಳ್ಳಿ ಸೇರಿದಂತೆ ವಿವಿಧ ಕಾಲೇಜುಗಳ ಕನ್ನಡ ಅಧ್ಯಾಪಕರು ಉಪಸ್ಥಿತರಿದ್ದರು.





