ಕುಡಿಯುವ ನೀರು ಗ್ರಾಮಸ್ಥರ ಹಕ್ಕು. ಇದು ಯಾವುದೇ ಚುನಾವಣಾ ಭರವಸೆಗೆ ಕಾದಿರುವ ವಿಷಯವಲ್ಲ. ಹಾಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಜಾಪುರ ಸೇರಿದಂತೆ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮದಲ್ಲಿ ಕಳೆದ 50 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಯಥಾವತ್ತಾಗಿ ಮುಂದುವರೆದಿದ್ದು, ಅರ್ಧ ಶತಮಾನ ಕಳೆದರೂ ಕುಡಿಯುವ ನೀರಿನ ಹಾಹಾಕಾರ ಬಗೆಹರಿದಿಲ್ಲ. ರಾಜಕಾರಣಿಗಳು ಚುನಾವಣೆ ವೇಳೆ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡುತ್ತಾರೆಯೇ ಹೊರತು ಇಂದಿಗೂ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಸ್ಯೆ ಪರಿಹಾರವಾಗದಿದ್ದಾಗ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪಂಚಾಯಿತಿಗೆ ಬೀಗ ಹಾಕಿ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಿಡಿಒ ನೀಡಿದ ದೂರಿನ ಅನ್ವಯ ಗ್ರಾಮದ ಸುಮಾರು 70ರಿಂದ 80 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
“ಗ್ರಾಮದಲ್ಲಿ ತಿಂಗಳಿಗೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದ್ದು, ನೀರಿನ ಸಮರ್ಪಕ ಪೂರೈಕೆಯಾಗುತ್ತಿಲ್ಲ. ಇದರಿಂದ ನಿತ್ಯದ ಬದುಕು ಕಷ್ಟಕರವಾಗಿದ್ದು, ನೀರು ತರಲು ಹೋಗುವುದಕ್ಕಾಗಿಯೇ ಮಕ್ಕಳು ಶಾಲೆಗೆ ರಜೆ ಹಾಕುವ ಅನಿವಾರ್ಯತೆ ಎದುರಾಗಿದೆ. ಹಲವೊಮ್ಮೆ ಶಾಲೆಗೆ ತೆರಳುವ ಮಕ್ಕಳು ಸ್ನಾನ ಮಾಡಲೂ ನೀರು ಇರುವುದಿಲ್ಲ” ಎಂದು ಗ್ರಾಮಸ್ಥರು ಸಂಕಷ್ಟ ತೋಡಿಕೊಂಡಿದ್ದಾರೆ.

ಗ್ರಾಮದ ಕೆಲ ಮನೆಗಳಲ್ಲಿ ನೀರು ತರಲು ಕೆಲಸಗಾರರನ್ನು ನೇಮಿಸುವ ಪರಿಸ್ಥಿತಿ ಒದಗಿದ್ದು, ವೃದ್ಧರು ದೂರದಿಂದ ನೀರು ಹೊತ್ತು ತರಲು ಸಾಧ್ಯವಾಗದೆ ಕಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಕೆರೆಯ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಬೇಸಿಗೆಯಲ್ಲಿ ಕೆರೆ ಬತ್ತುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ.
ಸ್ಥಳೀಯ ನಿವಾಸಿ ಬಾಬುಧಾಮ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಳೆದ ಸುಮಾರು 50 ವರ್ಷಗಳಿಂದ ಬಹುತೇಕ ಅಧಿಕಾರಿಗಳು, ಶಾಸಕರು ಹಾಗೂ ಸಂಸದರು ಗ್ರಾಮಕ್ಕೆ ಭೇಟಿ ನೀಡಿದರೂ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಲ್ಲ. ವರ್ಷದಿಂದ ವರ್ಷಕ್ಕೆ ವಿವಿಧ ಯೋಜನೆಗಳು ಹಾಗೂ ಅನುದಾನಗಳು ಬರುತ್ತಿದ್ದರೂ, ಈ ಅನುದಾನದಿಂದ ಗ್ರಾಮಸ್ಥರಿಗೆ ಯಾವುದೇ ಉಪಕಾರವಾಗಿಲ್ಲ. ಹೀಗಿರುವಾಗ ಈ ಅನುದಾನಗಳು ಯಾರ ಕೈಗೆ ಸೇರುತ್ತಿವೆ ಎಂಬುದು ಅಸ್ಪಷ್ಟವಾಗಿದೆ” ಎಂದು ಗ್ರಾಮಸ್ಥರು ಆರೋಪಿಸಿದರು.
“ಮಳೆಗಾಲದಲ್ಲಿ ಗ್ರಾಮದ ಹೊರವಲಯದಲ್ಲಿರುವ ಕೆರೆ ತುಂಬಿದಾಗ ಗ್ರಾಮಸ್ಥರ ಅಗತ್ಯಗಳಿಗೆ ನೆರವಾಗುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ಕೆರೆ ಸಂಪೂರ್ಣ ಬತ್ತುವುದರಿಂದ ನೀರಿನ ಸಮಸ್ಯೆ ತೀವ್ರಗೊಳ್ಳುತ್ತದೆ. ಗ್ರಾಮದ ಹೆಸರನ್ನು ಹೇಳಿ ಅನುದಾನ ಬಿಡುಗಡೆ ಮಾಡಿಕೊಂಡು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಬಗೆಹರಿಸದಿದ್ದರೂ ಅನುದಾನಗಳನ್ನು ತಮ್ಮ ವೈಯಕ್ತಿಕ ಅನುಕೂಲಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕರ ಹಣ ಇವರಿಗೆ ವರದಾನವಾಗಿದೆ” ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

“ಅಶುದ್ಧ ನೀರನ್ನು ಕುಡಿಯುವುದರಿಂದ ಗ್ರಾಮದಲ್ಲಿ ಅನಾರೋಗ್ಯ ತಾಂಡವವಾಡುತ್ತಿದೆ. ಜನರು ದಿನೇದಿನೆ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಗ್ರಾಮಸ್ಥರಿಗೆ ಇದು ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ” ಎಂದಿದ್ದಾರೆ.
ಗ್ರಾಮದ ನಿವಾಸಿ ನೀಲಮ್ಮ ಮಾತನಾಡಿ, “ಕುಡಿಯಲು ಹಾಗೂ ದಿನ ಬಳಕೆಗೆ ನೀರು ಪೂರೈಸದಿದ್ದರೆ ಅಧಿಕಾರಿಗಳು ಮತ್ತು ರಾಜಕಾರಣಿಗಳು ಏಕೆ ಬೇಕು?” ಎಂದು ಆಕ್ರೋಶ ಹೊರಹಾಕಿದ ಅವರು, ಕಳೆದ ಸುಮಾರು 9 ವರ್ಷಗಳಿಂದ ಪಿಡಿಒ ಇದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ” ಎಂದು ಆರೋಪಿಸಿದರು.
ಇದನ್ನೂ ಓದಿ>ರಾಯಚೂರು | ಕುಡಿಯುವ ನೀರಿಗಾಗಿ ಹೋರಾಟ; 70-80 ಗ್ರಾಮಸ್ಥರ ಮೇಲೆ ಪ್ರಕರಣ, ಪಿಡಿಓ ವಿರುದ್ಧ ಜನರ ಆಕ್ರೋಶ
“ಚುನಾವಣೆ ಸಂದರ್ಭಗಳಲ್ಲಿ ಶಾಸಕರು ಹಾಗೂ ಸಂಸದರು ಗ್ರಾಮಕ್ಕೆ ಬಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾರೆ. ಆದರೆ ಗೆದ್ದ ನಂತರ ಐದು ವರ್ಷಗಳವರೆಗೆ ಗ್ರಾಮದ ಕಡೆ ಮುಖ ಮಾಡುವುದಿಲ್ಲ” ಎಂದು ಆಕ್ರೋಶ ಹೊರಹಾಕಿದರು.
ಗ್ರಾಮದ ಮತ್ತೊಬ್ಬ ನಿವಾಸಿ ಯಮುನಮ್ಮ ಮಾತನಾಡಿ, “ಒಂದು ಮನೆಯಲ್ಲೇ ನಾಲ್ಕು ಜನ ನೀರು ತರಲು ನಿಲ್ಲಬೇಕಾಗುತ್ತದೆ. ಕೆಲಸ ಬಿಟ್ಟು ನೀರು ತರಬೇಕು. ನೀರು ತರಲು ಹೋದರೆ ಹೊಟ್ಟೆಗೆ ಅನ್ನ ಇಲ್ಲ, ಕೆಲಸಕ್ಕೆ ಹೋದರೆ ನೀರಿಲ್ಲ. ಇದು ನಮ್ಮ ದೈನಂದಿನ ಬದುಕಿನ ನರಳಾಟವಾಗಿದೆ. ನಾವು ಅಧಿಕಾರಿಗಳಲ್ಲಿ, ರಾಜಕಾರಣಿಗಳಲ್ಲಿ ಆಸ್ತಿ-ಪಾಸ್ತಿ ಕೇಳಿಲ್ಲ. ಕನಿಷ್ಠ ಮೂಲಸೌಕರ್ಯಗಳನ್ನಾದರೂ ನೀಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿರೆಂದು ಕೇಳಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್ ಪಾಟೀಲ್ ಅವರು ಕೆಡಿಪಿ ಸಭೆಯಲ್ಲಿ ಮಾತನಾಡಿ, “ಕುಡಿಯುವ ನೀರು ಸೇರಿದಂತೆ ಯಾವುದೇ ಸಮಸ್ಯೆ ಇದ್ದಲ್ಲಿ, ದೂರಿಗೆ ಅನುಗುಣವಾಗಿ ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು. ಅನೇಕ ಕಡೆ ಕುಡಿಯುವ ನೀರಿನ ಅಭಾವ ಕಂಡುಬರುವ ಲಕ್ಷಣ ಎದುರಾದಾಗ ಸಭೆ ಕರೆದು ಪ್ರತಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಶಾಸಕರ ಸಲಹೆ ಹಾಗೂ ಜನರ ಸಮಸ್ಯೆಗಳನ್ನು ಅರಿತು ಕಾರ್ಯ ನಿರ್ವಹಿಸಬೇಕು” ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
“ಸಮರ್ಪಕ ಕುಡಿಯುವ ನೀರು ಒದಗಿಸಲು ಅಧಿಕಾರಿಗಳು ಖುದ್ದು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಸಮರ್ಪಕ ನೀರು ಪೂರೈಕೆಯತ್ತ ಪ್ರತಿಯೊಬ್ಬ ಅಧಿಕಾರಿಯೂ ನಿಗಾ ವಹಿಸಬೇಕು” ಎಂದು ಎಚ್ಚರಿಕೆ ನೀಡಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದೀರ್ಘಕಾಲದಿಂದ ಮುಂದುವರೆದಿದ್ದು, ಬೇಸಿಗೆ ಕಾಲದಲ್ಲಿ ಇದು ಮತ್ತಷ್ಟು ಉಲ್ಬಣವಾಗುತ್ತದೆ. ಸಮಸ್ಯೆ ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಮಹಿಳೆಯರು ಮತ್ತು ಮಕ್ಕಳು ದೂರದಿಂದ ನೀರು ಹೊರುವುದು, ಶಾಲಾ ಮಕ್ಕಳು ಪಾಠಕ್ಕಿಂತ ನೀರಿನ ಹುಡುಕಾಟಕ್ಕೆ ಹೆಚ್ಚು ಸಮಯ ವ್ಯಯಿಸುವುದು, ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುದು ಕುಡಿಯುವ ನೀರಿನ ಕೊರತೆಯ ಗಂಭೀರ ಪರಿಣಾಮಗಳಾಗಿವೆ.
ರಾಯಚೂರು ಜಿಲ್ಲೆಗೆ ವಿಶೇಷ ನೀರಿನ ಯೋಜನೆ(Tunga-Bhadra, Krishna river based pipelines)ಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವುದು, ಅಂತರ್ಜಲ ಮಟ್ಟ ಹೆಚ್ಚಿಸಿ, ವರ್ಷಪೂರ್ತಿ ನೀರು ತುಂಬಿರುವಂತೆ ಕೆರೆ-ಕಟ್ಟೆಗಳ ಜೀರ್ಣೋದ್ಧಾರ ಮತ್ತು ಮಳೆ ನೀರು ಸಂಗ್ರಹಣೆಯನ್ನು ತೀವ್ರಗೊಳಿಸುವುದು ಅಗತ್ಯವಾಗಿದೆ. ಅಲ್ಲದೆ ಪ್ರತಿ ಗ್ರಾಮಕ್ಕೂ ಶಾಶ್ವತ ನೀರಿನ ಸರಬರಾಜು ವ್ಯವಸ್ಥೆ(Overhead tanks + pipelines) ಒದಗಿಸಬೇಕು. ಯೋಜನೆಗಳ ಅನುಷ್ಠಾನದ ಮೇಲೆ ಸ್ಥಳೀಯ ಜನರ ಮೇಲ್ವಿಚಾರಣೆ ಮತ್ತು ಜವಾಬ್ದಾರಿ ನಿಗದಿಪಡಿಸಿ, ಈ ಸಮಸ್ಯೆಯನ್ನು ರಾಜಕೀಯ ಆಡಂಬರಕ್ಕೆ ಬಿಡದೆ, ತುರ್ತು ಆದ್ಯತೆಯಾಗಿ ಪರಿಹರಿಸಬೇಕಾದ ಅಗತ್ಯವಿದೆ. ಕುಡಿಯುವ ನೀರು ಗ್ರಾಮಸ್ಥರ ಹಕ್ಕು. ಇದು ಯಾವುದೇ ಚುನಾವಣಾ ಭರವಸೆಗೆ ಕಾದಿರುವ ವಿಷಯವಲ್ಲ. ಹಾಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಜಾಪುರ ಸೇರಿದಂತೆ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್



