“ಧರ್ಮಸ್ಥಳ ವ್ಯಾಪ್ತಿಯಲ್ಲಿ ನಡೆದಿರುವ ಹಲವು ಅಸಹಜ ಸಾವು, ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಒಂದು ರೀತಿಯಲ್ಲಿ ಎಪ್‌ಸ್ಟೀನ್ ಫೈಲ್ಸ್‌ನಂತೆಯೇ. ಇದನ್ನು ಧರ್ಮಸ್ಥಳ ಫೈಲ್ಸ್, ಅಥವಾ ಕರ್ನಾಟಕ ಫೈಲ್ಸ್ ಎಂದು ಕರೆಯಬಹುದು. ಎಪ್‌ಸ್ಟೀನ್ ಫೈಲ್ಸ್‌ನಲ್ಲಿಯೂ ಪುಟ್ಟಮಕ್ಕಳನ್ನು ವಿಕೃತವಾಗಿ ಬಳಸುವ ಪೀಡೋಫಿಲ್ಸ್ ಇದ್ದಾರೆ. ಇಲ್ಲಿಯೂ ನಡೆದಿರುವುದು ಅಂತಹುದ್ದೇ” ಎಂದು ಹಿರಿಯ ವಕೀಲ ಎಸ್ ಬಾಲನ್ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಮಹಿಳೆಯರನ್ನು ಕೊಂದವರು ಯಾರು? ಅಭಿಯಾನದ ಅಡಿಯಲ್ಲಿ ಮಹಿಳಾ ಸಂಘಟನೆಗಳು ಮತ್ತು ಕಾಳಜಿಯುಳ್ಳ ನಾಗರಿಕರು ಸೌಜನ್ಯ ತಾಯಿ ಕುಸುಮಾವತಿ ಅವರಿಗೆ ಪತ್ರ ಬರೆದಿದ್ದು, ಈ ಪತ್ರವನ್ನು ಇಂದು ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಕೀಲ ಬಾಲನ್, “ಧರ್ಮಸ್ಥಳದಲ್ಲಿ ನಡೆದಿರುವ ದೌರ್ಜನ್ಯ ಪ್ರಕರಣಗಳಲ್ಲಿ ವ್ಯವಸ್ಥೆಯ ಸುದೀರ್ಘವಾದ ವೈಫಲ್ಯಗಳಿವೆ. ಸ್ಥಳೀಯ ಪೊಲೀಸ್, ಸಿಓಡಿ, ಸಿಬಿಐ ಎಲ್ಲರೂ ತನಿಖೆ ಮಾಡಿದ್ದಾರೆ. ಆದರೆ ಎಲ್ಲವೂ ವಿಫಲವಾಗಿವೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಹೋರಾಟಕ್ಕೆ ಗೌರವ, ಬೆಂಬಲ: ಸೌಜನ್ಯ ತಾಯಿ ಕುಸುಮಾವತಿಗೆ ಪತ್ರ ಬರೆದ ‘ಕೊಂದವರು ಯಾರು’ ತಂಡ
“ಕೊಂದುವರು ಯಾರು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ರಾಮಕೃಷ್ಣ ಹೆಗಡೆ ಸರ್ಕಾರದಿಂದ ಹಿಡಿದು ಸಿದ್ಧರಾಮಯ್ಯ ಸರ್ಕಾರದವರೆಗೆ ಎಲ್ಲ ಸರ್ಕಾರಗಳೂ ಈ ಪ್ರಶ್ನೆಗೆ ಉತ್ತರ ನೀಡಲು ವಿಫಲವಾಗಿವೆ. ಈಗ ಎಸ್‌ಐಟಿ ರಚನೆಯಾಗಿದೆ. ಅದಕ್ಕೆ ಪೊಲೀಸ್ ಠಾಣೆಯ ಅಧಿಕಾರ ನೀಡಲಾಗಿದೆ. ಆದರೆ ಇದುವರೆಗೆ ಒಂದೂ ಪ್ರಕರಣ ದಾಖಲಿಸಿಲ್ಲ ಯಾಕೆ? ಎಸ್‌ಐಟಿ ಪ್ರಗತಿಯ ವರದಿ ಈವರೆಗೆ ಸಾರ್ವಜನಿಕರಿಗೆ ಯಾಕೆ ಬಿಡುಗಡೆ ಮಾಡಿಲ್ಲ” ಎಂದು ಪ್ರಶ್ನಿಸಿದರು.

“ಈಗ 74 ಅಸಹಜ ಸಾವುಗಳ ವಿಚಾರದಲ್ಲಿ ಸೌಜನ್ಯ ತಾಯಿ ಕುಸುಮಾವತಿಯವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸಲ್ಲಿಸಿದ್ದಾರೆ. ಈ ಅಸಹಜ ಸಾವುಗಳಲ್ಲಿ ಮರಣೋತ್ತರ ಪರೀಕ್ಷೆ ಮಾಡಿಲ್ಲ. ಮಹಜರು ಮಾಡಿಲ್ಲ. ಕೆಲವು ಪ್ರಕರಣಗಳಲ್ಲಿ ಎಫ್‌ಐಆರ್ ಕೂಡಾ ದಾಖಲಾಗಿಲ್ಲ. ತನಿಖೆ ಮುಂದುವರೆದಿಲ್ಲ, ಯಾಕೆ? ಈಗ ಹೈಕೋರ್ಟ್ ಈ ಪ್ರಕರಣಗಳಲ್ಲಿ ಏನು ನಡೆದಿದೆ ಎಂದು ಮಾಹಿತಿ ನೀಡುವಂತೆ ಕೇಳಿದೆ” ಎಂದರು.
ಹಾಗೆಯೇ, “ಈ ಹೋರಾಟ ಮುಂದುವರೆಯುತ್ತದೆ. ಆದರೆ ಸೌಜನ್ಯ ಪ್ರಕರಣದಲ್ಲಿ ಮರುತನಿಖೆ ಮಾಡಲು ಸರ್ಕಾರಗಳಿಗೆ ಅಧಿಕಾರ ಇದೆಯಲ್ಲವೇ? ಆದರೂ ಯಾಕೆ ತನಿಖೆ ಮಾಡುತ್ತಿಲ್ಲ? ಸಿದ್ದರಾಮಯ್ಯ ಅವರು, ಪರಮೇಶ್ವರ್ ಅವರು ಯಾಕೆ ಮರುತನಿಖೆಯ ಆದೇಶ ನೀಡಬಾರದು? ಅದಕ್ಕೇಕೆ ಕುಸುಮಾವತಿಯವರು ಸುಪ್ರೀಂ ಕೋರ್ಟ್‌ಗೆ ಹೋಗಬೇಕು? ಯಡಿಯೂರಪ್ಪ ಸರ್ಕಾರ ಇದ್ದಾಗ ಯಾಕೆ ಮರುತನಿಖೆ ಮಾಡಿಸಲಿಲ್ಲ? ಬೇರೆ ಸರ್ಕಾರಗಳು ಯಾಕೆ ಮಾಡಲಿಲ್ಲ? ಇದು ವ್ಯವಸ್ಥೆಯ ವೈಫಲ್ಯ ಅಂತ ನಾವು ಹೇಳುತ್ತಿದ್ದೇವೆ. ಇದನ್ನು ಪ್ರಶ್ನಿಸುತ್ತಿದ್ದೇವೆ” ಎಂದು ಹೇಳಿದರು.




