ಇತ್ತೀಚೆಗೆ ನಡೆದ ಭಾರಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಅವರ ಮುಖ ವಿಕೃತಗೊಂಡಿದ್ದು, ಕಾಲುಗಳಿಗೆ ತೀವ್ರ ಪೆಟ್ಟಾಗಿದೆ. ಆದರೂ ಅವರು ಮಾನಸಿಕವಾಗಿ ಸ್ಥಿರವಾಗಿದ್ದು, ಆಡಳಿತದಲ್ಲಿ ಸಕ್ರಿಯರಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕಳೆದ ಫೆಬ್ರವರಿ 28ರಂದು ಮಧ್ಯ ತೆಹ್ರಾನ್‌ನಲ್ಲಿರುವ ಸರ್ವೋಚ್ಚ ನಾಯಕರ ನಿವಾಸದ ಮೇಲೆ ಈ ದಾಳಿ ನಡೆದಿತ್ತು. ಇದರಲ್ಲಿ ಮೊಜ್ತಬಾ ಅವರ ತಂದೆ ಹಾಗೂ ಇರಾನ್‌ನ ಹಿಂದಿನ ನಾಯಕ ಅಲಿ ಖಮೇನಿ ಸೇರಿದಂತೆ ಹಲವು ಕುಟುಂಬಸ್ಥರು ಸಾವನ್ನಪ್ಪಿದ್ದರು. ಈ ಭೀಕರ ದಾಳಿಯಿಂದ ಪಾರಾಗಿರುವ 56 ವರ್ಷದ ಮೊಜ್ತಬಾ, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗಳ ತೀವ್ರತೆಯ ಹೊರತಾಗಿಯೂ ಅವರು ಸಂಪೂರ್ಣ ಎಚ್ಚರದಿಂದಿದ್ದಾರೆ. ಆಡಿಯೋ ಕಾನ್ಫರೆನ್ಸ್ ಮೂಲಕವೇ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆಗಳನ್ನು ನಡೆಸುತ್ತಿದ್ದಾರೆ. ಯುದ್ಧದ ಮುಂದಿನ ನಡೆ ಹಾಗೂ ಅಮೆರಿಕದ ಜೊತೆಗಿನ ಸೂಕ್ಷ್ಮ ಮಾತುಕತೆಗಳ ಬಗ್ಗೆ ಅವರೇ ಖುದ್ದಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ತಿಳಿಸಿವೆ.
ಇದನ್ನು ಓದಿದ್ದೀರಾ? ಸಾಮ್ರಾಜ್ಯಶಾಹಿಯ ಅಟ್ಟಹಾಸಕ್ಕೆ ಪ್ರತಿರೋಧದ ಕಿಚ್ಚು: ಅಮೆರಿಕ-ಇಸ್ರೇಲ್ ದಬ್ಬಾಳಿಕೆಯ ವಿರುದ್ಧ ಸಿಡಿದೆದ್ದ ಲೆಬನಾನ್
ಮಾರ್ಚ್ 8ರಂದು ಅವರು ಅಧಿಕೃತವಾಗಿ ಇರಾನ್‌ನ ಸರ್ವೋಚ್ಚ ನಾಯಕರಾಗಿ ನೇಮಕಗೊಂಡರು. ಆದರೆ, ದಾಳಿಯಾದ ದಿನದಿಂದ ಇಲ್ಲಿಯವರೆಗೆ ಅವರ ಯಾವುದೇ ಫೋಟೋ ಅಥವಾ ವಿಡಿಯೋ ಬಿಡುಗಡೆಯಾಗಿಲ್ಲ. ಈ ಬೆಳವಣಿಗೆಯು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಅವರು ಕೋಮಾ ಸ್ಥಿತಿಗೆ ತಲುಪಿದ್ದಾರೆ ಅಥವಾ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ಪಾಶ್ಚಿಮಾತ್ಯ ದೇಶಗಳು ಹಾಗೂ ಇಸ್ರೇಲ್ ಗುಪ್ತಚರ ವರದಿಗಳು ಅಂದಾಜಿಸಿವೆ. ಆದರೆ, ಈ ವರದಿಗಳು ಇನ್ನೂ ದೃಢಪಟ್ಟಿಲ್ಲ.
ಒಂದೆಡೆ ನಾಯಕನ ಆರೋಗ್ಯದ ಬಗ್ಗೆ ಗೊಂದಲಗಳಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮದ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಯುತ್ತಿದೆ. ಅಮೆರಿಕದ ಕಡೆಯಿಂದ ಡೊನಾಲ್ಡ್ ಟ್ರಂಪ್ ನೇತೃತ್ವ ವಹಿಸಿದ್ದು, ಅವರು ಖಮೇನಿ ಬದಲಿಗೆ ಇರಾನ್‌ನ ಇತರ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಇದು ಪ್ರಸ್ತುತ ಇರಾನ್‌ನಲ್ಲಿ ಯಾರ ಆದೇಶ ನಡೆಯುತ್ತಿದೆ ಎಂಬ ಪ್ರಶ್ನೆಯನ್ನು ಮತ್ತಷ್ಟು ಬಲಪಡಿಸಿದೆ.




