ಈ ದೇಶವನ್ನು ಫ್ಯಾಸಿಸ್ಟ್ ಮತ್ತು ಪ್ರಜಾಪ್ರಭುತ್ವ ವಿರೋಧಿಗಳಿಂದ ರಕ್ಷಿಸಬೇಕಿದೆ. ಈಗಾಗಲೇ ಚುನಾವಣೆ ಅಬ್ಬರ ಜೋರಾಗಿದೆ. ಚುನಾವಣೆ ಗೆಲ್ಲಲು ಎನ್‌ಡಿಎ ಎಲ್ಲ ಕಸರತ್ತುಗಳನ್ನು ಮಾಡುತ್ತಲಿದೆ ಎಂದು ಕಾರ್ಮಿಕ ಮುಖಂಡ ಧರ್ಮೇಶ್ ಹೇಳಿದರು.
ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದಿಂದ ʼಸಂವಿಧಾನ ರಕ್ಷಿಸಿ ಭಾರತ ಉಳಿಸಿʼ ಘೋಷದೊಡನೆ ನಡೆದ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದರು.
“ಚುನಾವಣಾ ಪೂರ್ವ ರಾಮಮಂದಿರ ಉದ್ಘಾಟನೆಯಲ್ಲಿ ಸ್ವತಃ ದೇಶದ ಪ್ರಧಾನಿಗಳೇ ಪುರೋಹಿತರಾಗಿ ಹಿಂದೂ ಧರ್ಮದ ಪರವಾಗಿ ಹೋಗಿ ಪೂಜೆ ಸಲ್ಲಿಸುವುದು ಎಷ್ಟು ಸರಿ? ಈ ದೇಶದ ಪ್ರಜಾಪ್ರಭುತ್ವ ಸರ್ವಧರ್ಮಗಳನ್ನು ಸಮನಾಗಿ ನೋಡುವುದು ದೇಶದ ಸಂವಿಧಾನದ ಆಶಯವಾಗಿದೆ. ಜ್ಯಾತ್ಯತೀತತೆ ಧರ್ಮನಿರಪೇಕ್ಷತೆಗೆ ವಿರುದ್ಧವಾಗಿದೆ. ಹೀಗೆ ಬಿಜೆಪಿ ಸರ್ಕಾರ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಪ್ರಜಾಪ್ರಭುಹುತ್ವ ವಿರೋಧಿ ನಡೆಯಾಗಿದೆ. ಹಾಗಾಗಿ ಇಂತಹ ಜನವಿರೋಧಿ ಸರ್ಕಾರವನ್ನು ಈ ಚುನಾವಣೆಯಲ್ಲಿ ಸೋಲಿಸುವ ಮೂಲಕ ದೇಶವನ್ನು ಉಳಿಸೋಣ” ಎಂದು ಕರೆ ನೀಡಿದರು.
ನಸೀರ್ ಮುಲ್ಲಾ ಮಾತನಾಡಿ, “ನಮ್ಮ ದೇಶ ಎಲ್ಲ ಸಂಸ್ಕೃತಿಗಳ ತಾಣವಾಗಿದೆ. ನಾವೆಲ್ಲರೂ ಸಹೋದರರು, ನಾವು ಧರ್ಮಗಳಲ್ಲಿ ಬೇರೆಯಾದರೂ ಕೂಡಾ ನಾವೆಲ್ಲರೂ ಭಾರತೀಯರು. ನಮ್ಮನ್ನು ಧರ್ಮಗಳಲ್ಲಿ, ಜಾತಿಗಳಲ್ಲಿ, ಸಂಸ್ಕೃತಿಗಳಲ್ಲಿ ವಿಂಗಡಿಸಿ ನಮ್ಮನ್ನು ಒಡೆದು ಆಳುತ್ತಿದ್ದಾರೆ. ಇದನ್ನು ನಾವು ಗಮನಿಸಿ ಎಲ್ಲರೂ ಒಟ್ಟಾಗಬೇಕಿದೆ. ದೇಶದ ಬಹು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ” ಎಂದು ಹೇಳಿದರು.
“ಸತ್ಯ ಮೇವ ಜಯತೆ ಎಂಬುದು ನಮ್ಮ ದೇಶದಲ್ಲಿ ಸುಳ್ಳಾಗಿದೆ. ಈ ಸುಳ್ಳುಗಳು ರಾರಾಜಿಸುತ್ತಿರುವುದು ದೊಡ್ಡ ದುರಂತವಾಗಿದೆ. ಇಡೀ ವ್ಯವಸ್ಥೆ ದೊಡ್ಡ ಭ್ರಷ್ಟಾಚಾರದಿಂದ ಕೂಡಿದೆ” ಎಂದು ತನ್ವೀರ್ ಅಹಮದ್ ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗ್ಯಾರಂಟಿ ನೀಡಿದಂತೆ ಕೇಂದ್ರದಲ್ಲೂ ಗ್ಯಾರಂಟಿ ಅನುಷ್ಠಾನ: ಮುನಿರಾ ಎ ಮಕಾಂದಾರ್
ರೈತ ಮುಖಂಡ ನವೀನ್ ಕುಮಾರ್ ಮಾತನಾಡಿ, “ಒಂದು ಕಡೆ ದೇಶದ ಪ್ರಧಾನಿ ನಾವು ಜಗತ್ತಿನಲ್ಲಿ ದೊಡ್ಡಣ್ಣ ಎಂದು ಬೀಗುತ್ತಿದ್ದಾರೆ. ಇನ್ನೊಂದು ಕಡೆ ಅದೇ ಸಂವಿಧಾನದ ವಿರೋಧವಾಗಿ ನಡೆದುಕೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಈಗ ನಾವು ಅವರ ಸಾಂಸ್ಕೃತಿಕ ರಾಜಕರಣವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಆರ್‌ಎಸ್‌ಎಸ್‌ನ ಮನುವಾದಿ ರಾಜಕರಣ ಬ್ರಾಹ್ಮಣ್ಯವನ್ನು ದೇಶದ ಮೇಲೆ ಹೇರಿಕೆ ಮಾಡಲು ಹೊರಟಿದ್ದಾರೆ” ಎಂದರು.