ಬಕ್ರೀದ್ ಹಬ್ಬದ ಅಂಗವಾಗಿ ವಿಜಯಪುರ ಜಿಲ್ಲೆಯ ಸಿಂದಗಿ ಸಂಗಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಅಂತರ್ಧರ್ಮೀಯ ಸ್ನೇಹ ಕೂಟ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು ಭಾಗವಹಿಸಿ ಸೌಹಾರ್ದತೆ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳ ಮಹತ್ವವನ್ನು ಸಾರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ ಮಾತನಾಡಿ, ಎಲ್ಲ ಧರ್ಮಗಳ ಮೂಲ ಸಂದೇಶ ಮಾನವ ಪ್ರೀತಿ, ಸಹೋದರತ್ವ ಹಾಗೂ ಶಾಂತಿಯೇ ಆಗಿದೆ. ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಿಸಲು ಇಂತಹ ಕಾರ್ಯಕ್ರಮಗಳು ಅಗತ್ಯವೆಂದು ಹೇಳಿದರು.
ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, “ಧರ್ಮಗಳು ಮಾನವನಲ್ಲಿ ಉತ್ತಮ ಗುಣಗಳನ್ನು ಬೆಳೆಸುವ ಮಾರ್ಗಗಳಾಗಿವೆ. ಪರಸ್ಪರ ಗೌರವ, ಸಹಕಾರ ಮತ್ತು ಮಾನವೀಯತೆ ಬೆಳೆಸಿಕೊಂಡಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಇಸ್ಲಾಂ ಧರ್ಮದ ಮೌಲವಿ ಕುಮಾರ್ ಜುಮಾಯಿಲ್ ಯಂಬತ್ನಾಳ, ಇಸ್ಲಾಂ ಧರ್ಮದ ತತ್ವಗಳು, ಬಕ್ರೀದ್ ಹಬ್ಬದ ಮಹತ್ವ ಹಾಗೂ ಸಮಾಜದಲ್ಲಿ ಸೌಹಾರ್ದತೆ ಕಾಪಾಡುವ ಅಗತ್ಯತೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ವಿಶೇಷ ಅಂಗವಾಗಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ಗಳನ್ನು ವಿತರಿಸಿ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಯಿತು.
ವಿಜಯಪುರ ಲೋಯೋಲ ಐಟಿಐ ಕಾಲೇಜಿನ ಪ್ರಾಂಶುಪಾಲ ಫಾದರ್ ಜಾನ್, ವಿವಿಧ ಹಳ್ಳಿಗಳ ಸಮುದಾಯದ ಮುಖಂಡರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಂತರ್ಧರ್ಮೀಯ ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶ ಸಾರಿದ ಈ ಕಾರ್ಯಕ್ರಮವು ಸ್ನೇಹಪರ ಹಾಗೂ ಶಾಂತಿಯುತ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.





